ಮಂಗಳೂರು : ರಾಜ್ಯ ಸರಕಾರ 4 ವರ್ಷ ಪೂರೈಸಿ ಮೈಸೂರಿನಲ್ಲಿ ನಡೆಸುತ್ತಿರುವ, ಕೊಟ್ಟ ಮಾತು-ದಿಟ್ಟ ಸಾಧನಾ ಸಮಾವೇಶ ವಾಸ್ತವಿಕವಾಗಿ ವ್ಯರ್ಥ ಸಾಧನೆಯಾಗಿದೆ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ವ್ಯಂಗ್ಯವಾಡಿದ್ದಾರೆ.
ಮೈಸೂರು ವಿಭಾಗ ಮಟ್ಟದಲ್ಲಿ, ನಡೆಯುವ ಸವಲತ್ತು ವಿತರಣೆಗಾಗಿ ಕಾಂಗ್ರೆಸ್ ಸರಕಾರ ಸರಕಾರಿ ಯಂತ್ರವನ್ನು ಪೂರ್ಣ ದುರಪಯೋಗ ಮಾಡಿದೆ. ಪ್ರತೀ ಜಿಲ್ಲಾ ಮಟ್ಟದ ಸರಕಾರಿ ಅಧಿಕಾರಿಗಳಿಗೆ ಕಡ್ಡಾಯವಾಗಿ ಜಿಲ್ಲೆಯಿಂದ ಜನರನ್ನು ತರಲು ಆದೇಶ ಮಾಡಿ ಇಲಾಖಾಡಳಿತವನ್ನು ಸ್ಥಬ್ದ ಮಾಡಿದೆ.
ನಾಲ್ಕು ವರ್ಷಗಳ ಅಧಿಕಾರ ಮುನ್ನಡೆಸಿ ಕಾಂಗ್ರೆಸ್ ಬಡವರ ವಸತಿ ಯೋಜನೆ ಅನುಷ್ಠಾನ ಮಾಡುವಲ್ಲಿ ಪೂರ್ಣ ವಿಫಲವಾಗಿದೆ. ಕುಡಿಯುವ ನೀರು ಯೋಜನೆ ಬಗ್ಗೆ ದೂರಗಾಮಿ ಯೋಜನೆ ರೂಪಿಸುವ ಬದಲು ಟ್ಯಾಂಕರ್ಗೆ ಫೋಟೋ ಲಗ್ತೀಕರಿಸಿ ಜನಪ್ರತಿನಿಧಿಗಳ ಫೋಟೋ ಪ್ರದರ್ಶನವೇ ಸಾಧನೆ ಎಂಬಂತೆ ಬಿಂಬಿಸುತ್ತದೆ. ಜಾತಿಗಣತಿಯ ಹೆಸರಲ್ಲಿ ಪ್ರಚಾರ ಪಡೆದು ವರದಿಯನ್ನೇ ಮುಚ್ಚಿಟ್ಟು ನಿದ್ದೆ ಮಾಡುತ್ತಿದೆ. ಭ್ರಷ್ಟಾಚಾರದಲ್ಲಂತೂ ಎ.ಸಿ.ಬಿ ಸರ್ಕಾರದ ಕೃಪಾಶಯದಲ್ಲಿದ್ದರೆ, ಲೋಕಾಯುಕ್ತದ ಹಲ್ಲನ್ನೇ ಸರಕಾರ ಕಿತ್ತೆಸೆದಿದ್ದು ಭ್ರಷ್ಟಾಚಾರವನ್ನು ಸರಕಾರೀಕರಣಗೊಳಿಸಿದ್ದನ್ನೇ ಸಾಧನೆಯ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದೆ.
ಕೇಂದ್ರ ಸರಕಾರ ಗ್ರಾಮ ಪಂಚಾಯತ್ಗಳಿಗೆ ಕೊಟ್ಟಿರುವ ಅನುದಾನವನ್ನು, ವಿದ್ಯುತ್ ಬಿಲ್ಲಿಗೆ ಕಟ್ಟಿಸಿಕೊಂಡು ಗ್ರಾಮ ಪಂಚಾಯತ್ಗಳು ಹಣವಿಲ್ಲದೆ ಸೊರಗಿ ಹೋಗಲು ಕಾರಣವಾಗಿದೆ.
ಪಡಿತರ ವ್ಯವಸ್ಥೆಗೆ ಕೇಂದ್ರ ಸರ್ಕಾರ ನೀಡಿರುವ ಸಾವಿರಾರು ಕೋಟಿ ಅನುದಾನವನ್ನು ಮರೆಮಾಚಿ, ಅನ್ನಭಾಗ್ಯ ತನ್ನ ಸಾಧನೆಯೆಂಬಂತೆ ಬಿಂಬಿಸಿದೆ ಎಂದು ಕೋಟ ಆರೋಪಿಸಿದ್ದಾರೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಎಷ್ಟು ಕೆಟ್ಟು ಹೋಗಿದೆ ಎಂದರೆ, ಇತ್ತೀಚೆಗೆ ಆರೋಪಿಗಳು ಪೋಲಿಸ್ ಅಧಿಕಾರಿಗಳಿಗೆ ಹಲ್ಲೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದ ದುರಂತ ಕರಾವಳಿ ಜಿಲ್ಲೆಯಲ್ಲಿ ನಡೆಯುತ್ತಿದೆ. ಮಂಗಳೂರು ಪೋಲಿಸ್ ಕಮೀಷನರ್ ಚಂದ್ರಶೇಖರ್ ಆರೋಪಿಗಳನ್ನು ಬಂಧಿಸಿದ ಕಾರಣಕ್ಕೆ ವರ್ಗಾಯಿಸಲಾಗಿದೆ. ಸರಕಾರದ ಸಾಧನೆ ಏನೆಂದರೆ ಬಿ.ಜೆ.ಪಿ. ಕಾರ್ಯಕರ್ತರನ್ನು ನಿತ್ಯ ಹತ್ಯೆ ಮಾಡುವ ದಾಖಲೆಗಳು ಬಿಟ್ಟರೆ ಮತ್ತೇನಿಲ್ಲವೆಂದು, ಕೋಟ ಶ್ರೀನಿವಾಸ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ರಾಜ್ಯ ಕಾಂಗ್ರೆಸ್ ಸರಕಾರದ 4 ವರ್ಷದ ಸಾಧನೆ ಏನೆಂದರೆ ದಲಿತರು, ದುರ್ಬಲರ ಹೆಸರಲ್ಲಿ ಪ್ರಚಾರದ ಸಾಧನೆ ಹೊರತು, ಬಡವರ ಕಲ್ಯಾಣವಾಗಿಲ್ಲವೆಂದು ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.