News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬೀಜದುಂಡೆ ರೂಪಿಸಿ, ಬಿತ್ತರಿಸುವ ಆಂದೋಲನ..!

ಧಾರವಾಡ, (ಹಳ್ಳಿಗೇರಿ) : ಬೀಜಗಳ ನೈಸರ್ಗಿಕ ಪ್ರಸಾರದಲ್ಲಿ ಪ್ರಾಣಿ ಮತ್ತು ಪಕ್ಷಿಗಳ ಕೊಡುಗೆ ಅನನ್ಯವಾಗಿದ್ದು, ಪರಾಗಸ್ಪರ್ಷಕ್ಕೆ ಜೇನ್ನೊಣ ಮತ್ತು ದುಂಬಿಗಳ ಸೇವೆ ಮನನೀಯ. ಆದರೆ, ಎಲ್ಲವೂ ತನಗೇ ‘ಮೀಸಲಿದೆ’ ಎಂಬಂತೆ ವರ್ತಿಸುವ ಮನುಷ್ಯ ಪಾತ್ರ ಬೀಜ ಪ್ರಸಾರದಲ್ಲಿ ಮಾತ್ರ ಏನೂ ಇಲ್ಲ! ಹಾಗಾಗಿ, ಬೀಜದುಂಡೆ ರೂಪಿಸಿ, ಬಿತ್ತರಿಸುವ ಆಂದೋಲನ..!

ಹಳಿಯಾಳ ರಸ್ತೆಯ ಮೇಲೆ, ಧಾರವಾಡದಿಂದ ಸುಮಾರು 15 ಕಿ.ಮೀ. ದೂರದಲ್ಲಿರುವ ’ನೇಚರ್ ಫಸ್ಟ್ ಇಕೋ ವಿಲೇಜ್’ನಲ್ಲಿ, ಶುಕ್ರವಾರ, ಮೇ 19ರಂದು, ನೇಚರ್ ರಿಸರ್ಚ್ ಸೆಂಟರ್ ವತಿಯಿಂದ ವಿವಿಧ ಬೀಜಗಳನ್ನು ಬಳಸಿಕೊಂಡು, ಬೀಜದುಂಡೆ (ಸೀಡ್ ಬಾಲ್) ತಯಾರಿಸುವ ಕಾರ್ಯಾಗಾರ ನಡೆಯಿತು.

ಹುಣಸಿ, ಕಕ್ಕಿ, ಔಡಲ, ಕಾಶಿ ಸೋರೆಕಾಯಿ, ಹಾಲುಗುಂಬಳ, ಕುಂಬಳ, ಸವತಿ, ಮುಳ್ಳ ಸವತಿ, ಹೀರೇಕಾಯಿ ಹೀಗೆ ಒಟ್ಟು 8 ಪ್ರಜಾತಿಯ ಬೀಜಗಳನ್ನು, ಪ್ರಗತಿಪರ, ಸಾವಯವ ಕೃಷಿಕ ಮಂಡ್ಯಾಳದ ಕುಮಾರ ಭಾಗವತ್ ಅವರು ಸಂಗ್ರಹಿಸಿ ನೀಡಿದ ದೇಸಿ ತಳಿಯ ಸಂಸ್ಕರಿತ ಬೀಜಗಳನ್ನು ಬಳಸಿಕೊಂಡು ಸಾವಿರದ ನೂರ ಐವತ್ತೈದು ಬೀಜದುಂಡೆಗಳನ್ನು ವಿದ್ಯಾರ್ಥಿಗಳು ತಯಾರಿಸಿದರು.

ಸಗಣಿ ಮತ್ತು ಎರೆಹುಳು ಗೊಬ್ಬರ, ಪಂಚಗವ್ಯ, ಮಣ್ಣು ಮತ್ತು ಉಸುಕು ಹದವಾಗಿ ಮಿಶ್ರಣ ಮಾಡಿಕೊಂಡು, 20 ಕ್ಕೂ ಹೆಚ್ಚು ಸೃಷ್ಟಿ ಪಿ.ಯು.ಸಿ. ವಿಜ್ಞಾನ ವಿಷಯದ ದ್ವಿತೀಯ ವರ್ಷದ ವಿದ್ಯಾರ್ಥಿಗಳು, ಕೆಸರಿನಲ್ಲಿ ಮಿಂದೆದ್ದು ಬೀಜದುಂಡೆಗಳನ್ನು ನಿರ್ಮಿಸಿದ್ದು ವಿಶೇಷ.

ಬೀಜದುಂಡೆಗಳನ್ನು ವಾರಕಾಲ ನೆರಳಿನಲ್ಲಿ ಒಣಗಿಸಿದ ಬಳಿಕ, ಬಿತ್ತರಣೆಯ ಯಶಸ್ಸಿನ ಅಂದಾಜು ದರ ದಾಖಲಿಸಲು ತಲಾ ಹತ್ತು ಬೀಜದುಂಡೆಗಳನ್ನು ನೇಚರ್ ಫಸ್ಟ್ ಇಕೋ ವಿಲೇಜ್ ಆವರಣದಲ್ಲಿ ಪ್ರಯೋಗಾರ್ಥ ಹಾಗೂ ಬಾಕಿ ಬೀಜಗಳನ್ನು ಹಳ್ಳಿಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನೀಡಿ, ಗ್ರಾಮದ ರಸ್ತೆಗಳ ಇಕ್ಕೆಲದಲ್ಲಿ ಬಿತ್ತರಿಸಲು ನೀಡುವ ಯೋಜನೆ ಇದೆ ಎಂದು ನೇಚರ್ ರಿಸರ್ಚ್ ಸೆಂಟರ್‌ನ ಯೋಜನಾ ವಿಭಾಗದ ಮುಖ್ಯಸ್ಥ ಹರ್ಷವರ್ಧನ್ ಶೀಲವಂತ ತಿಳಿಸಿದರು.

ಎನ್‌ಆರ್‌ಸಿ ಉಪಾಧ್ಯಕ್ಷ ಚಂದ್ರಶೇಖರ ಭೈರಪ್ಪನವರ, ವಿಶ್ವಸ್ಥರಾದ ಡಾ.ಧೀರಜ್ ವೀರನಗೌಡರ, ಹರ್ಷವರ್ಧನ ಶೀಲವಂತ, ಬಿ.ಎಂ.ಕೇದಾರನಾಥ ಹಾಗೂ ಪ್ರಕಾಶ ಗೌಡರ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top