ಬೆಳ್ತಂಗಡಿ : ಸಾಕ್ಷ್ಯಚಿತ್ರಗಳು ಇತಿಹಾಸವನ್ನು ಪುನರ್ವ್ಯಾಖ್ಯಾನಿಸಿ ಈಗಾಗಲೇ ಆಗಿಹೋದದ್ದರ ಕುರಿತಾದ ಸ್ಪಷ್ಟಚಿತ್ರಣವನ್ನು ನೀಡುತ್ತವೆ ಎಂದು ಉಜಿರೆಯ ಎಸ್ಡಿಎಂ ಸ್ನಾತಕೋತ್ತರ ಕೇಂದ್ರದ ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ, ಬರಹಗಾರ ಡಾ.ಮನೋಜ ಗೋಡಬೋಲೆ ಹೇಳಿದರು.
ಕೇಂದ್ರದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ರೂಪಿಸಿದ 14 ಸಾಕ್ಷ್ಯಚಿತ್ರಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪ್ರಾಥಮಿಕ ಶಿಕ್ಷಣ ಹಂತದಿಂದಲೂ ನಿರ್ದಿಷ್ಟ ಚೌಕಟ್ಟಿಗೊಳಪಟ್ಟ ಇತಿಹಾಸದ ವಿವರಗಳೇ ಪುನರಾವರ್ತಿತವಾಗುತ್ತವೆ. ಪದವಿ, ಸ್ನಾತಕೋತ್ತರ ಮತ್ತು ವೃತ್ತಿಪರ ನಿರ್ವಹಣೆಯ ಹಂತಗಳವರೆಗೂ ಅದೇ ಇತಿಹಾಸದ ವಿವರಗಳೇ ಮುನ್ನೆಲೆಗೆ ಬರುತ್ತಿರುತ್ತವೆ. ಈ ಬಗೆಯ ಇತಿಹಾಸದ ಏಕಮುಖೀ ಸ್ವರೂಪವನ್ನು ಒಡೆದು ಸಮಗ್ರ ದೃಷ್ಟಿಕೋನದ ಆಧಾರದ ನಿಖರ ವಿವರಗಳೊಂದಿಗಿನ ಇತಿಹಾಸವನ್ನು ಮುಂಚೂಣಿಗೆ ತರುವಲ್ಲಿ ಸಾಕ್ಷ್ಯಚಿತ್ರಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಅಭಿಪ್ರಾಯಟ್ಟರು.
ಇತಿಹಾಸದೆಡೆಗೆ ಹೀಗೂ ನೋಡಬಹುದು ಎಂಬ ದೃಷ್ಟಿಕೋನದ ಕಲಿಕೆ ಸಾಕ್ಷ್ಯಚಿತ್ರಗಳಿಂದಾಗುತ್ತದೆ. ಇವುಗಳು ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಇತಿಹಾಸವನ್ನು ನಿಖರವಾಗಿ ತಿಳಿದುಕೊಳ್ಳಲು ಪುರಾವೆ ಸಮೇತ ದಾಖಲೆಗಳನ್ನು ಒದಗಿಸುತ್ತವೆ. ಒಂದೇ ದೃಷ್ಟಿಕೋನದ ವ್ಯಾಖ್ಯಾನಗಳ ಜೊತೆಗೇ ಮುಖ್ಯವಾಹಿನಿ ಮಾಧ್ಯಮಗಳು ಗುರುತಿಸಿಕೊಂಡಾಗ ನಿಖರತೆಯೊಂದಿಗಿನ ಸಾಕ್ಷ್ಯಚಿತ್ರಗಳು ಮಹತ್ವದ ಪರ್ಯಾಯ ಅಭಿವ್ಯಕ್ತಿ ಮಾಧ್ಯಮಗಳಾಗುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ. ಭಾಸ್ಕರ ಹೆಗಡೆ ಅವರು ಮಾತನಾಡಿ ಸಾಕ್ಷ್ಯಚಿತ್ರಗಳ ಮೂಲಕ ಸಾಮಾಜಿಕ ಪ್ರಜ್ಞೆ ಮೂಡಿಸುವ ವಿದ್ಯಾರ್ಥಿಗಳ ಪ್ರಯತ್ನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶೈಕ್ಷಣಿಕ ಅಧ್ಯಯನದ ಜೊತೆಗೇ ಬರವಣಿಗೆ, ಕಿರುಚಿತ್ರ, ಸಾಕ್ಷ್ಯಚಿತ್ರಗಳ ನಿರ್ಮಾಣ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಪತ್ರಿಕೋದ್ಯಮ ವಿದ್ಯಾರ್ಥಿಗಳು ಮಾದರಿ ಕೊಡುಗೆಗಳನ್ನು ನೀಡಿದ್ದಾರೆ ಎಂದರು.
’ಇದು ಬರೀ ಬೆಳಗಲ್ಲೋ ಅಣ್ಣಾ’, ’ನಾವಿಕ’, ’ಕಾಂಪೋಸ್ಟ್ ಪೈಪ್’, ’ಶಿಲ್ಪ ಶಿಕ್ಷಣ’, ’ಸೇವಾ ಭಾರತಿ’, ’ಕಾನನ ಸಿರಿ’, ’ಆಯುರ್ವೇದ ವೈದ್ಯರು ಮತ್ತು ಕೃಷಿಕರು’, ’ಮಣ್ಣಿನ ಹರಕೆ’, ’ಮುಂಜಾನೆದ್ದು ಕುಂಬಾರಣ್ಣ’, ’ಗಂಟೆಪ್ರಿಯ’, ’ಕ್ಷೀರಾಂಬುಧಿ’, ’ಕೃಷಿಯೋಗಿ’, ’ಹಾವು ಮತ್ತು ನಾವು’ ಮತ್ತು ’ಲಾಲ ಗೋಲ್ಡ್’ ಶೀರ್ಷಿಕೆಯ ಸಾಕ್ಷ್ಯಚಿತ್ರಗಳು ಬಿಡುಗಡೆಯಾದವು. ಸಾಕ್ಷ್ಯಚಿತ್ರಗಳ ನಿರ್ಮಾಣ ಪ್ರಕ್ರಿಯೆಯ ಕುರಿತು ಮಾತನಾಡಿದ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಸುನಿಲ್ ಹೆಗ್ಡೆ ವಿದ್ಯಾರ್ಥಿಗಳ ಕ್ರಿಯಾಶೀಲ ತೊಡಗಿಸಿಕೊಳ್ಳುವಿಕೆಯಿಂದಾಗಿ ವಿವಿಧ ಬಗೆಯ ಸಾಕ್ಷ್ಯಚಿತ್ರಗಳನ್ನು ರೂಪಿಸಲು ಸಾಧ್ಯವಾಯಿತು ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.