ಮೋದಿಗೆ ಮಾರುಹೋದ ಕನ್ನಡಿಗ ಸಾಫ್ಟ್ವೇರ್ ಎಂಜಿನಿಯರ್ !
ಜನಸೇವೆಗಾಗಿ ಅಮೆರಿಕ ತ್ಯಜಿಸಿ ಹಳ್ಳಿಗೆ ಮರಳಿದ ಚಂದ್ರಕಾಂತ್ ಯತ್ನಟ್ಟಿ
ಬೆಂಗಳೂರು: ಚಂದ್ರಕಾಂತ್ ಯತ್ನಟ್ಟಿ ! ಮೋದಿಗೆ ಮಾರುಹೋದ ಕನ್ನಡಿಗ ಸಾಫ್ಟ್ವೇರ್ ಎಂಜಿನಿಯರ್. ಕೈತುಂಬ ಸಂಬಳ, ತಾನೇ ಕಟ್ಟಿದ ಉದ್ಯಮವನ್ನು ಬಿಟ್ಟು, ಪ್ರಧಾನಿ ಮೋದೀಜಿಯವರಿಂದ ಪ್ರೇರೇಪಿತನಾಗಿ ಜನಸೇವೆಯ ಟೊಂಕಕಟ್ಟಿ ಹುಟ್ಟೂರಿಗೆ ಮರಳಿಬಂದ ಉದ್ಯಮಿಯ ಕಥೆಯಿದು. ದೇಶವನ್ನು ಪ್ರಧಾನಿ ಮೋದಿಯವರು ಎಲ್ಲರೂ ಅಚ್ಚರಿಪಡುವಂತೆ ಅಭಿವೃದ್ಧಿಪಡಿಸುತ್ತಿದ್ದರೆ ತಾನೇಕೆ ಕಟ್ಟಕಡೆಯ ತಾಲ್ಲೂಕನ್ನು ಮಾದರಿ ತಾಲ್ಲೂಕಾಗಿ ಅಭಿವೃದ್ಧಿ ಪಡಿಸಬಾರದು ಎಂಬ ದಿಟ್ಟ ನಿರ್ಧಾರ ತೆಗೆದುಕೊಂಡು ಬಂದ ’ಮಹಾ ಸಂಕಲ್ಪ’ದ ಕನಸುಗಾರ. ಅಮೆರಿಕದ ಲಾಸ್ ಎಂಜಲೀಸ್ನಲ್ಲಿ ಕಳೆದ 18 ವರ್ಷಗಳಿಂದ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದು, ಸ್ವಂತ ಉದ್ಯಮವನ್ನೂ ಸ್ಥಾಪಿಸಿ, ನೂರಾರು ಮಂದಿಗೆ ಉದ್ಯೋಗ ನೀಡಿದ ಉದ್ಯಮಿ ಚಂದ್ರಕಾಂತ ಯತ್ನಟ್ಟಿ ಕೆಲಸ ತ್ಯಜಿಸಿ ಭಾರತಕ್ಕೆ ಬಂದಿದ್ದು, ಜನಸೇವೆಯ ಮಹಾ ಸಂಕಲ್ಪದೊಂದಿಗೆ ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕನ್ನು ಕನಸಿನ ಅಭಿವೃದ್ಧಿಯ ಪಥದಲ್ಲಿ ತಂದು ನಿಲ್ಲಿಸುವ ಸಂಕಲ್ಪ ಮಾಡಿದ್ದಾರೆ.
’ಮಹಾ ಸಂಕಲ್ಪ’ ಏನಿದು ?
ಪ್ರಧಾನಿ ನರೇಂದ್ರ ಮೋದಿ ಅವರ ಕಟ್ಟಾ ಅಭಿಮಾನಿ ಆಗಿರುವ ಚಂದ್ರಕಾಂತ್ ಅವರು ತಮ್ಮ ಮುಂದಿನ ಜೀವನವನ್ನು ಜನರ ಸೇವೆಗಾಗಿಯೇ ಮುಡಿಪಾಗಿಡಲು ನಿರ್ಧರಿಸಿದ್ದು ತಮ್ಮ ’ಮಹಾಸಂಕಲ್ಪ’ ಸಂಘಟನೆಯ ಮೂಲಕ ಜನಸೇವೆಯ ದೀಕ್ಷೆ ತೊಟ್ಟುಕೊಂಡಿದ್ದಾರೆ. ಹೆಸರೇ ಹೇಳುವಂತೆ ತಮ್ಮ ಸಂಘಟನೆಯ ಮೂಲಕ ಗ್ರಾಮ ಗ್ರಾಮಗಳ ಅಭಿವೃದ್ಧಿಯ ಚಿಂತನೆಯ ಪರಿಕಲ್ಪನೆಯ ಫಲವೇ ಈ ಮಹಾಸಂಕಲ್ಪ. ರಾಮದುರ್ಗವನ್ನು ತಮ್ಮ ಕನಸಿನ ಜನಸೇವೆಯ ಪಣವನ್ನಾಗಿ ಆಯ್ಕೆ ಮಾಡಿಕೊಂಡಿರುವ ಚಂದ್ರಕಾಂತ್ ಯತ್ನಟ್ಟಿ, ಮನೆ ಮನೆಗೆ ಆರೋಗ್ಯ, ಮನೆ ಮನೆಗೆ ಮಾಹಿತಿ ತಂತ್ರಜ್ಞಾನ, ಮನೆಮನೆಗೆ ಶುದ್ಧ ಕುಡಿಯುವ ನೀರು, ಮನೆಮನೆಗೆ ಶೌಚಾಲಯ, ಮನೆಗೊಂದು ಸ್ವಾವಲಂಬೀ ಉದ್ಯೋಗ, ಗ್ರಾಮಕ್ಕೊಂದು ಗೋಶಾಲೆ ಸ್ಥಾಪನೆ, ಮಾಡುವ ಸ್ಪಷ್ಟ ಗುರಿಯನ್ನು ಚಂದ್ರಕಾಂತ ಯತ್ನಟ್ಟಿ ಇಟ್ಟುಕೊಂಡಿದ್ದಾರೆ. ಅದಕ್ಕಾಗಿ ಈಗಾಗಲೇ ಯೋಜನೆಗಳನ್ನು ರೂಪಿಸಿ, ಅವುಗಳ ಅನುಷ್ಠಾನಕ್ಕೆ ತಮ್ಮದೇ ಆಗಿರುವ ಲೋಟಸ್ ಫೌಂಡೇಶನ್ ಮೂಲಕ ಮಹಾ ಸಂಕಲ್ಪಕ್ಕೆ ಕೈ ಹಾಕಿದ್ದಾರೆ. ಮುಂದಿನ ವಾರ ರಾಮದುರ್ಗ ಕ್ಷೇತ್ರದಾದ್ಯಂತ ಮಹಾಸಂಕಲ್ಪ ಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಉತ್ತರ ಕರ್ನಾಟಕ ತಮ್ಮದೇ ಹುಟ್ಟೂರು :
ಚಂದ್ರಕಾಂತ ಯತ್ನಟ್ಟಿ ಅವರು ಮೂಲತಃ ಬಾಗಲಕೋಟೆಯವರು. ಆಲಮಟ್ಟಿ ಅಣೆಕಟ್ಟೆ ನಿರ್ಮಾಣವಾದಾಗ ತಮ್ಮ ಎಲ್ಲ ಆಸ್ತಿಗಳು ಮುಳುಗಡೆಯಾದವು. ಬಳ್ಳಾರಿಯ ವಿಜಯನಗರ ಎಂಜಿನಿಯರಿಂಗ್ ಕಾಲೇಜ್ನಲ್ಲಿ ಪದವಿ ಗಳಿಸಿದ ಬಳಿಕ ಅವರು ಅಮೆರಿಕಕಕ್ಕೆ ತೆರಳಿದರು. ಅಮೆರಿಕದ ಐಷಾರಾಮಿ ಜೀವನಕ್ಕೆ ಮೊರೆಹೋಗಿ ಹುಟ್ಟಿದ ನೆಲವನ್ನು ಮರೆಯುವವರೇ ಅಧಿಕ ಮಂದಿ ಇರುವಾಗ ಯತ್ನಟ್ಟಿ ಅವರಿಗಿಂತ ಭಿನ್ನವಾಗಿ ನಿಂತವರು. ಅಮೆರಿಕದಲ್ಲಿನ ಸೌಲಭ್ಯ, ಭಾರತದಲ್ಲಿನ ಬಡತನಗಳನ್ನು ಕಂಡ ಅವರು ಭಾರತವನ್ನೂ ಅಮೆರಿಕದ ಮಟ್ಟಕ್ಕೆ ತರಬೇಕು ಎಂಬ ಕನಸು ಕಟ್ಟಿಕೊಂಡವರು. ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಇಂತಹ ಕನಸು ನನಸಾಗಲು ಹೆಚ್ಚು ವರ್ಷಗಳೇನೂ ಬೇಡ ಎಂದು ಬಲವಾಗಿ ನಂಬಿರುವ ಯತ್ನಟ್ಟಿ ಅವರು ಮೋದಿ ಅವರ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ತಮ್ಮದೂ ಒಂದು ಅಳಿಲ ಸೇವೆ ಎಂಬಂತೆ ಜನಸೇವೆಯಲ್ಲಿ ತೊಡಗಿಕೊಂಡಿದ್ದಾರೆ.
ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾಗಲೂ ಚಂದ್ರಕಾಂತ ಯತ್ನಟ್ಟಿ ಅವರು ಮಣ್ಣಿನ ಋಣವನ್ನು ಮರೆತವರಲ್ಲ. ತಾವು ಹುಟ್ಟಿದ ನೆಲದ ಕಷ್ಟಗಳನ್ನೆಲ್ಲ ಬಾಲ್ಯದಿಂದಲೇ ಕಂಡ ಅವರ ಮನಸ್ಸು ಸದಾ ತುಡಿಯುತ್ತಿರುವುದು ಭಾರತಕ್ಕಾಗಿ. ಹೀಗಾಗಿಯೇ ಕೈತುಂಬ ಸಂಬಳ, ಹೆಸರು, ವಿಲಾಸಿ ಜೀವನವನ್ನೆಲ್ಲ ಬದಿಗೊತ್ತಿ, ಭಾರತದಲ್ಲಿ ಒಂದು ತಾಲ್ಲೂಕಿನ ಅಭಿವೃದ್ಧಿಯ ಕನಸು ಹೊತ್ತು ದೇಶಕ್ಕೆ ಮರಳಿದ್ದಾರೆ. ರಾಮದುರ್ಗದ ಅಭಿವೃದ್ಧಿಗೆ ಆ ಮೂಲಕ ದೇಶದ ಪ್ರಗತಿಗೆ ಸ್ಪಷ್ಟ ನೀಲ ನಕಾಶೆ ರೂಪಿಸಿದ್ದಾರೆ.
ರಾಮದುರ್ಗವೇ ಏಕೆ?
ಚಂದ್ರಕಾಂತ ಯತ್ನಟ್ಟಿ ಅವರು ಅಯೋಧ್ಯಾ ಪುರುಷೋತ್ತಮ ಶ್ರೀರಾಮಚಂದ್ರನಿಂದ ಬಹಳ ಪ್ರಭಾವಿತರಾದವರು. ರಾಮರಾಜ್ಯ ಪರಿಕಲ್ಪನೆ ಇರುವವರಿಗೆ ಶ್ರೀರಾಮನೇ ಆದರ್ಶ. ಶ್ರೀರಾಮ ಹುಟ್ಟಿದ್ದು ಅಯೋಧ್ಯೆಯಲ್ಲಿ. ಆತನಿಗೆ ತಾಯಿಯ ರೂಪದಲ್ಲಿ ಶಬರಿ ಸಿಕ್ಕಿದ್ದು ರಾಮದುರ್ಗ ಪರಿಸರದಲ್ಲಿ. ಹೀಗಾಗಿ ದಕ್ಷಿಣ ಭಾರತದ ಶ್ರೀರಾಮನ ಪುಣ್ಯ ನೆಲ ರಾಮದುರ್ಗವನ್ನು ರಾಮರಾಜ್ಯವಾಗಿ, ನಂದನವನವನ್ನಾಗಿ ರೂಪಿಸಬೇಕು ಎಂಬ ವಿಚಾರ ಮೂಡಿದ್ದರಿಂದಲೇ ತಮ್ಮ ಸಮಾಜ ಸೇವೆಯ ನೆಲೆಯನ್ನಾಗಿ ಅವರು ರಾಮದುರ್ಗವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.
ಸಂಪರ್ಕ ವಿಳಾಸ : ‘ಮಹಾಸಂಕಲ್ಪ’, ಲೋಟಸ್ ಫೌಂಡೇಶನ್, ಆಶ್ರಯ ಪ್ಲೋಟ್, ಹಲಗಟ್ಟಿ ಬೈಪಾಸ್ ರಸ್ತೆ, ರಾಮದುರ್ಗ, ಬೆಳಗಾಂ ಜಿಲ್ಲೆ. ಮೊಬೈಲ್ : 7760785807
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.