‘ಡಾ.ಕಸ್ತೂರಿರಂಗನ್ ವರದಿ; ಪಶ್ಚಿಮ ಘಟ್ಟಗಳ ಉಳಿವು’ -ಡಾ.ಬಿ.ಎಂ.ಕುಮಾರಸ್ವಾಮಿ ಅವರ ವಿಶೇಷ ಉಪನ್ಯಾಸ
ಧಾರವಾಡ, ಮೇ 11 : ರಾಜ್ಯದ ಪಶ್ಚಿಮಘಟ್ಟ ವ್ಯಾಪ್ತಿಯ 1,553 ಗ್ರಾಮಗಳನ್ನು ಡಾ.ಮಾಧವ್ ಗಾಡ್ಗೀಳ್ ವರದಿಯಲ್ಲಿ ಪರಿಸರ ಸೂಕ್ಷ್ಮ ವಲಯ – ಇ.ಎಸ್.ಎ (ಇಕೋ ಸೆನ್ಸಿಟಿವ್ ಏರಿಯಾ) ಎಂದು ಗುರುತಿಸಲಾಗಿತ್ತು. ಆದರೆ, ಮದನ್ಗೋಪಾಲ್ ಎಂಬ ಅಧಿಕಾರಿ, ಆ ಪೈಕಿ ಕೇವಲ 153 ಹಳ್ಳಿಗಳು ಮಾತ್ರ ಇ.ಎಸ್.ಎ ಎಂದು, ಕೇಂದ್ರಕ್ಕೆ ವರದಿ ನೀಡಿದ್ದಾರೆ ಎಂದು, ಪಶ್ಚಿಮಘಟ್ಟ ಕಾರ್ಯಪಡೆಯ ಸದಸ್ಯ ಡಾ.ಬಿ.ಎಂ.ಕುಮಾರಸ್ವಾಮಿ ಆರೋಪಿಸಿದರು.
ನಗರದ ಇನ್ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್ನ ಸರ್. ಎಂ.ವಿಶ್ವೇಶ್ವರಾಯಾ ಸಭಾಂಗಣದಲ್ಲಿ, ಸೆಂಟರ್ ಫಾರ್ ಡೆವಲಪ್ಮೆಂಟಲ್ ಸ್ಟಡೀಸ್ -ಸಿಡಿಎಸ್, ಬುಧವಾರ (ಮೇ 10) ರಂದು ಆಯೋಜಿಸಿದ್ದ, ‘ಡಾ.ಕಸ್ತೂರಿರಂಗನ್ ವರದಿ; ಪಶ್ಚಿಮಘಟ್ಟಗಳ ಉಳಿವು’ ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ.ಗಾಡ್ಗೀಳ್ ವರದಿಯ ಪಟ್ಟಿಯಿಂದ ಯಾವುದೇ ಒಂದು ಹಳ್ಳಿಯನ್ನು ಕೈಬಿಡಲು, ಅತ್ಯಂತ ಕಟ್ಟುನಿಟ್ಟಾದ ನಿಯಮ ಮತ್ತು ಗಂಭೀರವಾದ ಕಾರಣ ಉಲ್ಲೇಖಿಸಬೇಕಿತ್ತು. ಸಂಬಂಧಿತ ಜಿಲ್ಲಾಡಳಿತಗಳು ತಜ್ಞರ ಸಮಿತಿ ನೇಮಿಸಿ, ಕೂಲಂಕಷ ಪರಿಶೀಲನೆ ಕೈಗೊಂಡು ವರದಿ ನೀಡಬೇಕಿತ್ತು. ಜಿಲ್ಲಾಡಳಿತದ ಶಿಫಾರಸಿನ ಆಧಾರದ ಮೇಲೆ ನಿರ್ಣಯವಾಗಬೇಕಿತ್ತು. ಶಿವಮೊಗ್ಗೆಯಲ್ಲಿ ಹೀಗಾಗಲಿಲ್ಲ; ಶೇ.95 ರಷ್ಟು ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯ ಹಳ್ಳಿಗಳನ್ನು ಕೈಬಿಡಲಾಯಿತು ಎಂದು ಡಾ.ಕುಮಾರಸ್ವಾಮಿ ವಿವರಿಸಿದರು.
ಡಾ.ಗಾಡ್ಗೀಳ್ ಅವರ ವರದಿಯನ್ನು ತುಸು ತೆಳುವಾಗಿಸಲು, ಡಾ.ಕಸ್ತೂರಿರಂಗನ್ ನೇತೃತ್ವದ ಸಮಿತಿ ರಚಿಸಿ, ವರದಿ ಪಡೆದ ಅಂದಿನ ಕೇಂದ್ರದ ಯೂಪಿಎ ಸರ್ಕಾರ, ಈಗಲೂ ವರದಿಯನ್ನು ಅನುಷ್ಠಾನಗೊಳಿಸಲು ಮುಂದಾದರೆ, ಪಶ್ಚಿಮಘಟ್ಟದ ಗರ್ಭಗುಡಿಯ ಅತೀಸೂಕ್ಷ್ಮ ಜೀವವೈವಿಧ್ಯ ತಾಣದ ಪೈಕಿ ಶೇ.30ರಷ್ಟನ್ನು ಕಾಪಾಡಿಕೊಳ್ಳಬಹುದು. ಸರ್ಕಾರಗಳ ಇಚ್ಛಾಶಕ್ತಿಯ ಕೊರತೆ, ಪರಿಸರ ಸಂಘಟನೆಗಳ ಬದ್ಧತೆಯಿಲ್ಲದ ಹೋರಾಟಗಳ ಪರಿಣಾಮ, ವರದಿಯನ್ನೇ ತಪ್ಪಾಗಿ ಅರ್ಥೈಸಿ, ಗೊಂದಲ ಸೃಷ್ಟಿಸುವ ಕೆಲಸ ಮುಂದುವರೆದಿದೆ ಎಂದು ಡಾ.ಸ್ವಾಮಿ ಆಪಾದಿಸಿದರು.
ನಮ್ಮ ದೇಶದ ಒಟ್ಟಾರೆ ಬದುಕು ಮತ್ತು ಕೃಷಿ ಮಾನ್ಸೂನ್ ಅವಲಂಬಿತ. ಕೇವಲ 4 ತಿಂಗಳು ಮಾತ್ರ ನಮಗೆ ಮಳೆ ಲಭ್ಯ. ವರ್ಷದ ಬಾಕಿ 8 ತಿಂಗಳು ಜೋಪಾನವಾಗಿ ಲಭ್ಯ ನೀರನ್ನು ಬಳಸಿಕೊಳ್ಳಬೇಕಾದ ಸ್ಥಿತಿ. ದಕ್ಷಿಣ ಭಾರತದ ಬಹುತೇಕ ನದಿಗಳ ಉಗಮಸ್ಥಾನ ಪಶ್ಚಿಮಘಟ್ಟ. ಘಟ್ಟದ ವ್ಯಾಪ್ತಿಯ 6 ರಾಜ್ಯಗಳ ಅರ್ಥಶಾಸ್ತ್ರವೂ ಈ ನದಿಗಳ ಹರಿಯುವಿಕೆಯ ಮೇಲೆಯೇ ಅವಲಂಬಿತ. ನಾಲ್ಕು ನದಿಗಳ ತಟದಲ್ಲಿ ಪಲ್ಲವಿಸಿರುವ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ವ್ಯಾಪ್ತಿಯ ಮೂಡಿಗೆರೆಯನ್ನು ಸರ್ಕಾರ ಈ ಬಾರಿ ಬರ ಪೀಡಿತ ಎಂದು ಘೋಷಿಸಿದೆ. ಹೀಗಾಗಿ, ಅಭಿವೃದ್ಧಿ ಪರ ಲಾಬಿ ವರ್ಸಸ್ ಪರಿಸರ ಸಂರಕ್ಷಣೆಯ ಗುದ್ದಾಟದಲ್ಲಿ ಕೊಂಡಿಗಳು ಕಳಚುತ್ತ ಸಾಗುತ್ತಿವೆ ಎಂದರು.
ಡಾ.ಗಾಡ್ಗೀಳ್ ಹಾಗೂ ಡಾ.ಕಸ್ತೂರಿರಂಗನ್ ವರದಿಯ ಪುಟ 13 ರಿಂದ 17 ರಲ್ಲಿನ ಸಮಾನ ಅಂಶ ಉಲ್ಲೇಖಿಸಿದ ಪ್ರೊ.ಸ್ವಾಮಿ, ಪಶ್ಚಿಮ ಘಟ್ಟ ವ್ಯಾಪ್ತಿಯ 6 ರಾಜ್ಯಗಳು ಘಟ್ಟದ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯ ದೃಷ್ಟಿಯಿಂದ ವೇದಿಕೆಯೊಂದನ್ನು ಸಂಘಟಿಸುವಂತೆ ಹೇಳಲಾಗಿದೆ. ಕೇಂದ್ರ ಸರ್ಕಾರದೊಂದಿಗೆ ಸಮಾಲೋಚಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಶ್ಚಿಮ ಘಟ್ಟದ ಉಳಿವಿಗಾಗಿ, ಅಲ್ಲಿನ ಜೀವಿ ವೈವಿಧ್ಯ ಮತ್ತು ಪರಿಸರದ ವೈಜ್ಞಾನಿಕ ರೀತ್ಯಾ ಪೋಷಣೆಗಾಗಿ ‘ಡೆಟ್ ಪಾರ್ ನೇಚರ್ಸ್ ಫ್ಯಾಬ್’, ವಂತಿಗೆ ಸಂಗ್ರಹಿಸಿ, ಕಾರ್ಯಯೋಜನೆ ಅನುಷ್ಠಾನಗೊಳಿಸಲು ಶಿಫಾರಸು ಮಾಡಲಾಗಿದೆ. ಈ ಬಗ್ಗೆ ಯಾವುದೇ ಅಧಿಕಾರಿ, ಜನಪ್ರತಿನಿಧಿ ಸೊಲ್ಲೆತ್ತುವುದಿಲ್ಲ. ಪರಿಸರ ಸಂಘಟನೆಗಳು ಈ ನಿಟ್ಟಿನಲ್ಲಿ ಚಳವಳಿಗೆ ಮುಂದಾಗಬೇಕು. ಸ್ಥಳೀಯ ಸಮುದಾಯಗಳ ಸಹಭಾಗಿತ್ವ ಮತ್ತು ವಾರಸುದಾರಿಕೆಗೆ ಒತ್ತು ಸಿಗುವಂತಾಗಬೇಕು ಎಂದು ಹೇಳಿದರು.
ಆದಿತಿ ಅಂಗಡಿ ಪ್ರಾರ್ಥಿಸಿದರು. ಸಿಡಿಎಸ್ ಸಂಚಾಲಕ ದಿವಾಕರ ಹೆಗಡೆ ಪ್ರಾಸ್ತಾವಿಕ ನುಡಿ, ನಿರೂಪಿಸಿ, ವಂದಿಸಿದರು. ಸಂಯೋಜಕ ಹರ್ಷವರ್ಧನ್ ಶೀಲವಂತ, ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು.
ಲೆ.ಜ. ಎಸ್.ಸಿ. ಸರದೇಶಪಾಂಡೆ, ಏರ್ ಕಮೋಡೋರ್ ಸಿ.ಎಸ್. ಹವಾಲ್ದಾರ, ಏರ್ವಾರಿಯರ್ ವಸಂತ ವಾಯಿ, ಎನ್ಆರ್ಸಿಯ ಚಂದ್ರಶೇಖರ ಭೈರಪ್ಪನವರ, ಡಾ.ಧೀರಜ್ ವೀರನಗೌಡರ, ಅನಿಲ್ ಅಳ್ಳೊಳ್ಳಿ, ಅಸ್ಲಂಜಾನ್ ಅಬ್ಬೀಹಾಳ, ಅರವಿಂದ ಕುಲಕರ್ಣಿ, ಮಾ.ನಾಗರಾಜ್, ಡಾ. ಪ್ರಕಾಶ್ ಭಟ್, ಅನಿಲ್ ದೇಸಾಯಿ, ಡಾ.ಗೋಪಾಲಕೃಷ್ಣ ಕಮಲಾಪೂರ, ಎಸ್.ಎಂ.ಪಾಟೀಲ, ಬಿ.ಆರ್.ಮರೋಳಿ ಸೇರಿದಂತೆ, ಪರಿಸರ ಆಸಕ್ತ ವಿಶೇಷ ತಜ್ಞರು, ಆಹ್ವಾನಿತರು ಪಾಲ್ಗೊಂಡಿದ್ದರು.
ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಬಗೈರ್ ಹುಕುಂ, ಅಕ್ರಮ-ಅಕ್ರಮ ಸಾಗುವಳಿ ಬಗ್ಗೆ ಡಾ.ಗಾಡ್ಗೀಳ್ ಹಾಗೂ ಡಾ.ಕಸ್ತೂರಿ ರಂಗನ್ ತಮ್ಮ ವರದಿಗಳಲ್ಲಿ ಏನನ್ನೂ ಹೇಳಿಲ್ಲ ಅಥವಾ ಉಲ್ಲೇಖಿಸಿಲ್ಲ. ಅರಣ್ಯವೇ ಎಲ್ಲದಕ್ಕೂ ಮೂಲ. ಆದರೆ, ಅದರ ಸಂರಕ್ಷಣೆ ಮಾತ್ರ ಘೋರ ಅವಜ್ಞೆಗೆ ಒಳಗಾಗಿದೆ ಎಂಬುದನ್ನು ಸ್ಪಷ್ಟ ಶಬ್ದಗಳಲ್ಲಿ ಹೇಳಿದ್ದಾರೆ. ರಾಜಕಾರಣಿಗಳು ಮನುಷ್ಯನಿಗೇ ಎಲ್ಲವೂ ಮೀಸಲಿದೆ ಎಂಬಂತೆ ವರ್ತಿಸುತ್ತಿದ್ದಾರೆ. ಪರಿಸರ ಸೂಕ್ಷ್ಮ ವಲಯ ಪಟ್ಟಿಯಿಂದಲೇ ಹಳ್ಳಿಗಳನ್ನು ಹೊರಗಿಡುವ ಹುನ್ನಾರ ‘ರೆಡ್ ಕೆಟಗರಿ ಇಂಡಸ್ಟ್ರೀಜ್’ಗಳನ್ನೂ ಸಹ ಇಲ್ಲಿ ಸ್ಥಾಪಿಸುವ ಹುನ್ನಾರದ ಭಾಗವಾಗಿ ನಾವು ಗ್ರಹಿಸಬೇಕು.
– ಪ್ರೊ.ಬಿ.ಎಂ.ಕುಮಾರಸ್ವಾಮಿ, ಪಶ್ಚಿಮಘಟ್ಟ ಕಾರ್ಯಪಡೆ ಸದಸ್ಯ.
ಹೆಚ್ಚಿನ ಮಾಹಿತಿಗೆ –
ಮಿಂಚಂಚೆ: bmkumaraswamy@yahoo.com
ವಿಳಾಸ: ‘ಪಲ್ಲವಿ’, 4 ನೇ ಅಡ್ಡ ರಸ್ತೆ, ರಾಜೇಂದ್ರನಗರ, ಶಿವಮೊಗ್ಗ -577204.
ಸಂಪರ್ಕ: 08182-278187, 9845378873
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.