ವಿಶಾಲವಾದ ಪ್ರಪಂಚದಲ್ಲಿ ನಮ್ಮ ಹೆಮ್ಮೆಯ ದೇಶ ಭಾರತ. ಅನೇಕತೆಯಲ್ಲಿ ಏಕತೆಯ ವಿಶಿಷ್ಟ ಪರಿಕಲ್ಪನೆ ಹೊಂದಿರುವ ಶ್ರೀಮಂತ ಸಂಸ್ಕೃತಿಯ ಮತ್ತು ಭವ್ಯ ಪರಂಪರೆಗಳ ರಾಷ್ಟ್ರ ನಮ್ಮದು. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವೆಂಬ ಹೆಗ್ಗಳಿಕೆ ಪಡೆದಿರುವ ಭಾರತಕ್ಕೆ ತನ್ನದೇ ಆದ ಅಪ್ರತಿಮ ಹೋರಾಟದ ಇತಿಹಾಸ, ರಕ್ತದಿ ಬರೆದಿಹ ವೀರ ಚರಿತೆಯ ಹಿನ್ನೆಲೆ ಇದೆ. ಆಂಗ್ಲರ ದಬ್ಬಾಳಿಕೆಯಿಂದ ಭಾರತ ಮಾತೆಯನ್ನು ವಿಮುಕ್ತಿಗೊಳಿಸಲು ನಮ್ಮ ಸ್ವಾತಂತ್ರ ಸಂಗ್ರಾಮದ ಕಲಿಗಳು ನಡೆಸಿದ ಹೋರಾಟ ಮೈನವಿರೇಳಿಸುವಂಥದ್ದು.
ಬ್ರಿಟಿಷರ ಮೇಲಣ ವಿಜಯದ ಸಂಕೇತವಾಗಿ 160 ವರ್ಷಗಳ ಹಿಂದಿನ ಸ್ವಾತಂತ್ರ್ಯ ಸಂಗ್ರಾಮದ ಅಮರ ನೆನಪನ್ನು ಸ್ಮರಿಸುವುದು ಹಾಗೂ ಹಿಂದುಸ್ತಾನವು ಎಂದೂ ಮರೆಯದ ಸ್ಮರಣೀಯರ, ಧೀಮಂತ ನಾಯಕರ ತ್ಯಾಗಬಲಿದಾನಗಳನ್ನು ಕೊಂಡಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವೂ ಆಗಿದೆ.
ಭಾರತದಲ್ಲಿ 18 ಶತಮಾನದಲ್ಲಿ ಬ್ರಿಟಿಷರ ವಿರುದ್ದ ನಡೆದ ಹೋರಾಟಗಳ ನಂತರ ಅನೇಕ ಸ್ವಾತಂತ್ರ ಚಳವಳಿಗಳು ನಡೆದವು. ನಮ್ಮ ಸ್ವಾತಂತ್ರ ಸಂಗ್ರಾಮಕ್ಕೆ ನೂರೈವತ್ತು ವರ್ಷಗಳ ಸುದೀರ್ಘ ಇತಿಹಾಸವಿದೆ. ಆಗಿನ ರಾಜ ಮಹಾರಾಜರುಗಳು, ವೀರರಾಣಿಯರು ವಿದೇಶಿ ಆಡಳಿತಗಾರರ ದಬ್ಬಾಳಿಕೆ ಮತ್ತು ಶೋಷಣೆಗಳ ವಿರುದ್ದ ದನಿಎತ್ತಿ ದಿಟ್ಟ ಹೋರಾಟ ನಡೆಸಿದ್ದಾರೆ. ಮೈಸೂರು ಹುಲಿ ಟಿಪ್ಪು ಸುಲ್ತಾನ್, ವೀರರಾಣಿ ಕಿತ್ತೂರು ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ವೀರ ಪಾಂಡ್ಯ ಕಟ್ಟಿ ಬೊಮ್ಮನ್ ಆನಂತರ ಸ್ವಾತಂತ್ರ ಸೇನಾನಿಗಳು ಮತ್ತು ಚಳವಳಿಗಾರರ ಹೋರಾಟದ ಕೆಚ್ಚು ನಮ್ಮಲ್ಲಿ ಒಡಮೂಡಿ ನಿಲ್ಲುತ್ತದೆ. ಈ ಎಲ್ಲ ಹೋರಾಟಗಳ ಚಿತ್ರಣವನ್ನು ಸಂಕ್ಷಿಪ್ತವಾಗಿ ಪ್ರತಿಬಿಂಬಿಸುವುದೇ ಈ ಲೇಖನದ ಆಶಯವಾಗಿದೆ.
ಪ್ರಥಮ ಸ್ವಾತಂತ್ರ ಸಂಗ್ರಾಮ
1753ರ ಪ್ಲಾಸೀ ಕದನದಿಂದ ಸರಿಯಾಗಿ 104 ವರ್ಷಗಳ ನಂತರ ಅಂದರೆ 1857ರಲ್ಲಿ ಭಾರತದ ಪ್ರಥಮ ಸ್ವಾತಂತ್ರ ಸಂಗ್ರಾಮ ಸಿಪಾಯಿ ದಂಗೆ ಮೂಲಕ ಕಿಡಿಕಾರಿತು. ಭಾರತದ ಪ್ರಥಮ ಸ್ವಾತಂತ್ರ ಸಂಗ್ರಾಮ ಕಿಚ್ಚು ಸಿಪಾಯಿ ದಂಗೆ ಮೂಲಕ ಹೊರಹೊಮ್ಮಿತು. 1857-1858ರಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ದ ಉತ್ತರ ಮತ್ತು ಮಧ್ಯ ಭಾರತದಲ್ಲಿ ಭುಗಿಲೆದ್ದ ದಂಗೆ ಇದು. ಈ ದಂಗೆಯು ಭಾರತೀಯ ಸೈನಿಕರು ಮತ್ತು ಅವರ ಬ್ರಿಟಿಷ್ ಅಧಿಕಾರಿಗಳ ನಡುವಣ ಜನಾಂಗೀಯ ಮತ್ತು ಸಾಂಸ್ಕೃತಿಕ ತಾರತಮ್ಯಗಳ ಫಲವಾಗಿ ಉಲ್ಬಣಗೊಂಡಿತು. ಅದರೆ ಸಿಪಾಯಿ ದಂಗೆಗೆ ವಾಸ್ತವ ಕಾರಣವೆಂದರೆ ಬ್ರಿಟಿಷ್ ಸೈನ್ಯದಿಂದ ಭಾರತೀಯ ಸಿಪಾಯಿಗಳಿಗೆ ನೀಡಲ್ಪಟ್ಟ ಲೀ-ಎನ್ಫೀಲ್ಡ್ ಬಂದೂಕಿನ ತೋಟಾಗಳಿಗೆ ದನದ ಮತ್ತು ಹಂದಿಯ ಕೊಬ್ಬನ್ನು ಸವರಿದ್ದಾರೆಂಬ ಸುದ್ದಿ. ಸೈನಿಕರು ಕಾಡತೂಸುಗಳನ್ನು ತಮ್ಮ ಬಂದೂಕುಗಳಲ್ಲಿ ತುಂಬುವ ಮೊದಲು ಹಲ್ಲಿನಿಂದ ಕಚ್ಚಿ ಅವುಗಳನ್ನು ತೆರೆಯಬೇಕಾಗಿತ್ತು. ಗೋವು ಹಿಂದುಗಳಿಗೆ ತುಂಬಾ ಪವಿತ್ರವಾದ ಪ್ರಾಣಿಯಾದರೆ, ಇನ್ನೊಂದೆಡೆ ಹಂದಿ ಕಟ್ಟುನಿಟ್ಟಾಗಿ ಮುಸ್ಲಿಮರಿಗೆ ನಿಷೇಧಿತವಾಗಿತ್ತು. ಹೀಗಾಗಿ ದನ ಮತ್ತು ಹಂದಿಯ ಕೊಬ್ಬು ಇದ್ದರೆ ಹಿಂದು ಮತ್ತು ಮುಸ್ಲಿಂ ಸಿಪಾಯಿಗಳ ಮನಸ್ಸು ನೋಯುವಂತೆ ಮಾಡುವುದು ಇದರ ಉದ್ದೇಶವಾಗಿತ್ತು. ಈ ಧಾರ್ಮಿಕ ಸಂಗತಿ ಹಿನ್ನೆಲೆಯಲ್ಲಿ ಫೆಬ್ರವರಿ 1857ರಲ್ಲಿ ಸಿಪಾಯಿಗಳು ದಂಗೆ ಎದ್ದು ಹೊಸ ಕಾಡತೂಸುಗಳನ್ನು ಬಳಕೆ ಮಾಡಲು ನಿರಾಕರಿಸಿದರು.
ಸಿಪಾಯಿ ದಂಗೆ ದಿಟ್ಟ ಹೋರಾಟದ ಕಿಚ್ಚು ಪಡೆದಿದ್ದು ಭಾರತ ಪ್ರಥಮ ಸ್ವಾತಂತ್ರ ಸಂಗ್ರಾಮದ ಹುತಾತ್ಮ ಎಂದೇ ಖ್ಯಾತಿ ಪಡೆದಿರುವ ಮಂಗಲ್ ಪಾಂಡೆ ಮೂಲಕ. ಈಸ್ಟ್ ಇಂಡಿಯಾ ಕಂಪೆನಿಯ ಬ್ರಿಟಿಷರ ಸೈನ್ಯದಲ್ಲಿ ಸಿಪಾಯಿಯಾಗಿದ್ದ ಪಾಂಡೆ 1857 ರಲ್ಲಿ ಆಂಗ್ಲರ ಮೇಲೆ ಮಾಡಿದ ಆಕ್ರಮಣ ಭಾರತದ ಮೊದಲ ಸ್ವಾತಂತ್ರ ಸಂಗ್ರಾಮದ ರೂಪ ಪಡೆಯಿತು. 34ನೇ ದೇಶೀಯ ಪದಾತಿದಳದ ಸಿಪಾಯಿ ಮಂಗಲ್ ಪಾಂಡೆ 1857ರ ಮಾರ್ಚ್ನಲ್ಲಿ ಬ್ರಿಟಿಷ್ ಸಾರ್ಜೆಂಟ್ ಲೆಫ್ಟಿನೆಂಟ್ ಬಾಘ್ ಮೇಲೆ ದಾಳಿ ಮಾಡಿ ಮತ್ತೊಬ್ಬ ಯೋಧನನ್ನು ಗಾಯಗೊಳಿಸಿದನು.
ಈ ಘಟನೆ ಹಿನ್ನೆಲೆಯಲ್ಲಿ ಜನರಲ್ ಹರ್ಸೇ, ಪಾಂಡೆಯನ್ನು ಬಂಧಿಸಲು ಜಮಾದಾರನಿಗೆ ಆದೇಶಿಸಿದನಾದರೂ, ಬಂಧಿಸಲು ಆತ ನಿರಾಕರಿಸಿದ. ಏಪ್ರಿಲ್ 7ರಂದು ಮಂಗಲ್ ಪಾಂಡೆಯನ್ನು ಜಮಾದಾರ ಈಶ್ವರಿ ಪ್ರಸಾದ್ ಜೊತೆ ನೇಣು ಹಾಕಲಾಯಿತು. ಸಾಮೂಹಿಕ ಶಿಕ್ಷೆಯಾಗಿ ಇಡೀ ತುಕಡಿಯನ್ನೇ ವಿಸರ್ಜಿಸಲಾಯಿತು. ಮೇ 10ರಂದು 11ನೇ ಮತ್ತು 20ನೇ ಅಶ್ವದಳಗಳು ಸೇರಿದಾಗ ಸವಾರರು ರೋಷದಿಂದ ಮೇಲಾಧಿಕಾರಿಗಳನ್ನು ಬಗ್ಗು ಬಡಿದರು. ಅನಂತರ ಮೂರನೇ ತುಕಡಿಯನ್ನು ಸ್ವತಂತ್ರಗೊಳಿಸಲಾಯಿತು. ಈ ಘಟನೆ ನಂತರ ದೆಹಲಿ ಸೇರಿದಂತೆ ಉತ್ತರ ಭಾರತದ ತುಂಬೆಲ್ಲಾ ಬಂಡಾಯ ಹಬ್ಬಿತು. ಅವಧ್ ಪ್ರಾಂತ್ಯದ ಮಾಜಿ ದೊರೆಯ ಸಲಹೆಗಾರ ಅಹ್ಮದ್ ಉಲ್ಲಾ, ನಾನಾ ಸಾಹೇಬ್, ಅವನ ಸೋದರಳಿಯ ರಾವ್ ಸಾಹೇಬ್ ಮತ್ತವನ ಅನುಯಾಯಿಗಳಾದ ತಾತ್ಯಾ ಟೋಪಿ ಮತ್ತು ಅಜೀಮುಲ್ಲಾ ಖಾನ್, ಝಾನ್ಸಿ ರಾಣಿ ಲಕ್ಷ್ಮೀಭಾಯಿ, ಕುಂವರ್ ಸಿಂಹ, ಬಿಹಾರದ ಜಗದೀಶ್ಪುರದ ರಜಪೂತ ನಾಯಕರು ಮತ್ತು ಮೊಘಲ್ ದೊರೆ ಬಹಾದುರ್ ಶಹಾನ ಸಂಬಂಧಿ ಪಿರೋಜ್ ಶಹಾ, ಎರಡನೇ ಬಹಾದುರ್ ಶಹಾ ಮೊದಲಾದವರು ಬ್ರಿಟಿಷರ ವಿರುದ್ದ ತಿರುಗಿಬಿದ್ದರು. ಭಾರತವೇ ಬ್ರಿಟೀಷರ ವಿರುದ್ಧ ಸಿಡಿದೆದ್ದಿತ್ತು. ಒಂದು ಲಕ್ಷಕ್ಕೂ ಹೆಚ್ಚು ಜನ ಈ ಸಂಗ್ರಾಮದಲ್ಲಿ ತಾಯಿ ಭಾರತೀಯನ್ನು ಬ್ರಿಟೀಷರ ಕಪಿ ಮುಷ್ಟಿಯಿಂದ ಬಿಡಿಸಲು ತಮ್ಮ ಪ್ರಾಣವನ್ನೇ ಆಕೆಗಾಗಿ ಸಮರ್ಪಿಸಿದರು.
ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ ನಾವು ಸ್ವತಂತ್ರ ಭಾರತವಾಗಿರಲು ಇವರ ತ್ಯಾಗ ಬಲಿದಾನ ಈ ವೀರ ಯೋಧರು ಹಚ್ಚಿ ಹೋದ ಸ್ವಾತಂತ್ರ್ಯ ಜ್ಯೋತಿಯೇ ಕಾರಣ. ಬನ್ನಿ ಈ ವೀರರನ್ನು ಸ್ಮರಿಸೋಣ. ಅವರು ಹೋರಾಡಿ ನಮಗೆ ತಂದುಕೊಟ್ಟ ಸ್ವಾತಂತ್ರ್ಯವನ್ನು ಗೌರವಿಸೋಣ. ಭಾರತಾಂಬೆಯನ್ನು ಮತ್ತೆ ವಿಶ್ವಮಾತೆ ಜಗದ್ಗುರುವನ್ನಾಗಿಸೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.