ಹುಬ್ಬಳ್ಳಿ: ಸಮರ್ಥ ಭಾರತ ನಡೆಸುತ್ತಿರುವ ’ಕೋಟಿ ವೃಕ್ಷ’ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸುವ ಸಲುವಾಗಿ ಹುಬ್ಬಳ್ಳಿಯ ಪವನ್ ಕುಮಾರ್ ತಮ್ಮ ಗೃಹ ಪ್ರವೇಶದಂದು ಬಂದ ಅತಿಥಿಗಳಿಗೆ ಸಸಿಗಳನ್ನು ಹಂಚಿ ಪರಿಸರ ಪ್ರೇಮವನ್ನು ಪಸರಿಸಿದ್ದಾರೆ.
ಹುಬ್ಬಳ್ಳಿಯ ನವನಗರದ ಕೆಎಚ್ಡಿ ಕಾಲೋನಿಯ ಪ್ರಜಾನಗರದಲ್ಲಿ ‘ಸಂಜೀವ ಧಾಮ’ ಮನೆಯನ್ನು ನಿರ್ಮಿಸಿರುವ ಪವನ್ ಬಂದ ಅತಿಥಿಗಳಿಗೆ ಒಟ್ಟು 300 ಗಿಡಗಳನ್ನು ಹಂಚಿದ್ದಾರೆ. ತುಳಸಿ, ದಾಸವಾಳ, ಮಲ್ಲಿಗೆ, ಕರಿಬೇವು ಸೇರಿದಂತೆ ವಿವಿಧ ಗಿಡಗಳನ್ನು ಇವರು ಹಂಚಿದ್ದು, ಅತಿಥಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ರಾಜ್ಯಾದ್ಯಂತ ಕೋಟಿ ವೃಕ್ಷ ಅಭಿಯಾನವನ್ನು ಪ್ರಾರಂಭಿಸಿರುವ ‘ಸಮರ್ಥ ಭಾರತ’ದ ಟ್ರಸ್ಟಿಯೂ ಆಗಿದ್ದಾರೆ ಪವನ್.
ಮಾತ್ರವಲ್ಲದೇ ಗೃಹಪ್ರವೇಶದಂದು ‘ಕೋಟಿ ವೃಕ್ಷ ಅಭಿಯಾನಕ್ಕೆ ಬೆಂಬಲಿಸಿ’ ಎಂದು ಬರೆಯಲಾಗಿದ್ದ ಬಟ್ಟೆಚೀಲವನ್ನೂ ಇವರು ಅತಿಥಿಗಳಿಗೆ ವಿತರಿಸಿದ್ದಾರೆ. ಮನೆ ನಿರ್ಮಿಸಲು ಶ್ರಮಿಸಿದ ಎಲ್ಲಾ ಕಾರ್ಮಿಕರಿಗೂ ಅಭಿನಂದನಾ ಕಾರ್ಯಕ್ರಮವನ್ನು ಇವರು ಏರ್ಪಡಿಸಿದ್ದರು.
ಸಮೀಪದ ಗಾರ್ಡನ್ನಲ್ಲಿ ದಿನಕ್ಕೆ ಒಂದು ಗಂಟೆ ಶ್ರಮದಾನ ಮಾಡುವ, ಪರಿಸರದ ಬಗ್ಗೆ ಅತೀವ ಕಾಳಜಿಯನ್ನು ಹೊಂದಿರುವ ಡಿ.ವೈ. ಪಾಟೀಲ್ ಎಂಬುವವರನ್ನು ಎಲ್ಲರಿಗೂ ಪರಿಚಯಿಸಿ ಅವರಿಂದ ಇತರರೂ ಪ್ರೇರಣೆ ಪಡೆಯಬೇಕು ಎಂಬ ಆಶಯದೊಂದಿಗೆ ಸನ್ಮಾನ ಮಾಡಿದ್ದಾರೆ. ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಆರ್.ಎಂ. ಪಾಗೆ ಅವರಿಗೂ ಸನ್ಮಾನ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಸಮಾಜಮುಖಿ ಕಾರ್ಯಗಳಿಗಾಗಿ ‘ಮಂಗಳನಿಧಿ’ಯನ್ನು ಸಂಘಕ್ಕೆ ಮತ್ತು ನಿವೇದಿತಾ ಪ್ರತಿಷ್ಠಾನಕ್ಕೆ ಸಮರ್ಪಿಸಲಾಯಿತು.
ಗೃಹಪ್ರವೇಶವನ್ನು ಅರ್ಥವತ್ತಾಗಿ ನೆರವೇರಿಸಿದ ಹಿರಿಮೆ ಪವನ್ ಮತ್ತು ಅವರ ಕುಟುಂಬದವರಿಗೆ ಸಲ್ಲುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.