ಧಾರವಾಡ: ಟಿಬೆಟ್ ಜಗತ್ತಿನ ಮೇಲ್ಛಾವಣಿ. ಏಷ್ಯಾ ಖಂಡದ ಜಲ ಸ್ತಂಭ. ಭಾರತಕ್ಕೆ ಮೂರನೇ ಮೇಟಿ. ಹಾಗಾಗಿ, ಚೀನಾ ಆಕ್ರಮಿತ ಟಿಬೆಟ್ನ ಸ್ವಾತಂತ್ರ್ಯ, ಭಾರತದ ಸುರಕ್ಷತೆಯ ದೃಷ್ಟಿಯಿಂದ ಮಹತ್ವದ್ದು ಎಂದು ಭಾರತ್-ಟಿಬೆಟ್ ಸಹಯೋಗ ಮಂಚ್ನ ರಾಷ್ಟ್ರೀಯ ಕಾರ್ಯದರ್ಶಿ ಅಮೃತ ಜೋಶಿ ಅಭಿಪ್ರಾಯಪಟ್ಟರು.
ನಗರದ ಇನ್ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್ನ, ಸರ್ ಎಂ. ವಿಶ್ವೇಶ್ವರಾಯಾ ಸಭಾ ಭವನದಲ್ಲಿ ಇಂದು (25 ನೇ ಏಪ್ರಿಲ್, 2017 ಬುಧವಾರ), ಸೆಂಟರ್ ಫಾರ್ ಡೆವಲಪ್ಮೆಂಟಲ್ ಸ್ಟಡೀಸ್ ಆಯೋಜಿಸಿದ್ದ, ‘ಟಿಬೆಟ್ ಸ್ವಾತಂತ್ರ್ಯ; ಭಾರತದ ಸುರಕ್ಷೆ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು, ಮಾತನಾಡಿದರು.
ಪಾರಿಸಾರಿಕ ಮಹತ್ವದ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮ ಜೈವಿಕ ಉದ್ಯಾನವಾಗಿರುವ ಟಿಬೆಟ್, ಒಟ್ಟು 10 ದೇಶಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ನದಿಗಳ ಉಗಮ ಸ್ಥಾನ. ಒಂದು ಕಾಲದಲ್ಲಿ ಇಂಡೋ-ಟಿಬೆಟ್ ಗಡಿಯಾಗಿದ್ದ ಪ್ರದೇಶ, ಇಂದು ಇಂಡೋ-ಚೀನಾ ಗಡಿಯಾಗುವ ಮಟ್ಟಿಗೆ, ಸುಮಾರು 2 ಸಾವಿರ ಕಿಲೋ ಮೀಟರ್ಗಳಷ್ಟು ಟಿಬೆಟ್ ಅತಿಕ್ರಮಿಸಲ್ಪಟ್ಟಿದೆ. 4 ಸಾವಿರ ಕಿ.ಮೀ. ಗಡಿ ಸುರಕ್ಷತೆಗಾಗಿ ಭಾರತ ದಿನವೊಂದಕ್ಕೆ 7-8 ಕೋಟಿ ರೂಪಾಯಿ ವ್ಯಯಿಸುವಂತಾಗಿದೆ. ಟಿಬೆಟ್-ಭಾರತೀಯ ಸೈನಿಕರನ್ನು ಒಳಗೊಂಡ ಸ್ಪೆಷಲ್ ಆರ್ಮಡ್ ಫ್ರಾಂಟಿಯರ್ ಸೇರಿದಂತೆ, 8 ಕ್ಕೂ ಹೆಚ್ಚು ಪ್ಲಾಟೂನ್ಗಳು ಗಡಿ ರಕ್ಷಣೆಯಲ್ಲಿ ತೊಡಗಿವೆ ಎಂದು ಅಮೃತ ಜೋಶಿ ತಿಳಿಸಿದರು.
ಸದ್ಯ ಚೀನಾ ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳಲ್ಲಿ ನಿತ್ಯವೂ ಹಿಂಸೆಗೆ ಕುಮ್ಮಕ್ಕು ನೀಡುತ್ತಿದೆ. ಆಯಕಟ್ಟಿನ ಸ್ಥಳಗಳಲ್ಲಿ ಅಣೆಕಟ್ಟೆ ನಿರ್ಮಿಸಿ, ಕೃತಕ ನೆರೆ ಹಾವಳಿ ಸೃಷ್ಟಿಸಿ, ಉತ್ತರ ಭಾರತವನ್ನು ಮುಳುಗಡೆಯ ನಾಡಾಗಿಸಲು, ಪರ್ಯಾಯ ಯುದ್ಧ ತಂತ್ರ ಸೃಜಿಸಿದೆ. ಚೀನಾ ತನ್ನೆಲ್ಲ ಉತ್ಪನ್ನಗಳಿಗೆ ಭಾರತದ ಮಾರುಕಟ್ಟೆಯನ್ನೇ ಆಶ್ರಯಿಸಿ, ಸ್ವದೇಶಿ ಉತ್ಪನ್ನ ಮತ್ತು ಕೈಗಾರಿಕೆಗಳನ್ನು ಹೊಸಕಿಹಾಕಿ, ಭಾರತದ ಆರ್ಥಿಕತೆಯನ್ನೇ ಬುಡಮೇಲು ಮಾಡುವ ತಂತ್ರ ಹೂಡಿದೆ ಎಂದು ಅಮೃತ ಜೋಶಿ ವಿಶ್ಲೇಷಿಸಿದರು.
ಭಾರತದ ಸಂಸದರು ಸಂಸತ್ತಿನಲ್ಲಿ ಟಿಬೆಟ್ನ ಸ್ವಾತಂತ್ರ್ಯಕ್ಕಾಗಿ ಧ್ವನಿ ಎತ್ತಬೇಕು. ದೇಶದ ಜನತೆ ಟಿಬೆಟಿಯನ್ರ ಪುನರ್ವಸತಿ ಕೇಂದ್ರಗಳಿಗೆ, ಮಾನ್ಸ್ಟ್ರೀಗಳಿಗೆ ಭೇಟಿ ನೀಡಿ ಅಭಯ ನೀಡಬೇಕು. ಟಿಬೆಟ್, ಟಿಬೆಟಿಯನ್ನರ ಸಂಸ್ಕೃತಿ ಹಾಗೂ ಅವರ ಸದ್ಯದ ಸ್ಥಿತಿಗತಿಗಳ ಬಗ್ಗೆ ದೇಶಾದ್ಯಂತ ತಿಳಿವಳಿಕೆ ಮೂಡಿಸುವ ಕೆಲಸವಾಗಬೇಕು. ಕಾರಣ, ಟಿಬೆಟ್ ಸ್ವತಂತ್ರವಾದಲ್ಲಿ ಭಾರತ ಆಧ್ಯಾತ್ಮಿಕವಾಗಿ ಚೈತನ್ಯ ಮತ್ತು ಔನ್ನತ್ಯ ಸಾಧಿಸಲು ಸಹಕಾರಿಯಾಗುತ್ತದೆ ಎಂದು ಅಮೃತ ಜೋಶಿ ನುಡಿದರು.
ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಏರ್ ಕಮೋಡರ್ (ವಿಶ್ರಾಂತ) ಸಿ.ಎಸ್. ಹವಾಲ್ದಾರ್ ಅವರು, ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಟಿಬೆಟ್ಗೆ ಸ್ವಾತಂತ್ರ್ಯ ದೊರಕಿಸುವುದು ಸಮಸ್ಯೆಯಾಗಿ ಪರಿಣಮಿಸಿದೆ. ಇಂದು ಭಾರತ ರಾಷ್ಟ್ರದಲ್ಲಿಯೇ ಪ್ರಬಲ ಶಕ್ತಿಯಾಗಿ ಹೊಮ್ಮಿದ್ದು, ಚೀನಾ ಹಿಮ್ಮೆಟ್ಟಿಸಲು, ಟಿಬೆಟ್ ಸ್ವಾತಂತ್ರ್ಯ ಗಳಿಸಲು ಮತ್ತು ನಮ್ಮ ಗಡಿಗಳನ್ನು ಕಾಯ್ದುಕೊಳ್ಳಲು, ಅಂತಾರಾಷ್ಟ್ರೀಯ ಸ್ತರದಲ್ಲಿ ಸ್ಪಷ್ಟ ಸಂದೇಶ ರವಾನಿಸುವ ಅವಶ್ಯಕತೆ ಇದೆ. ನಮ್ಮ ಸೈನ್ಯ ಬಲ ಸರ್ವ ಸನ್ನದ್ಧವಾಗಿದೆ. 1962 ರ ಸೋಲು ಮತ್ತೆಂದೂ ಮರುಕಳಿದು. ಅಂದಿನ ಪರಿಸ್ಥಿತಿ ಮತ್ತು ಇಂದಿನ ಬೆಳವಣಿಗೆಗಳ ಮಧ್ಯೆ ಸಾಕಷ್ಟು ವ್ಯತ್ಯಾಸವಿದೆ ಎಂದರು.
ಶಿಕ್ಷಣ ಇಲಾಖೆಯ ನಿವೃತ್ತ ಆಯುಕ್ತ ವೆಂಕಟೇಶ ಮಾಚಕನೂರ ಅವರು ಮಾತನಾಡಿ, ಕೈಲಾಸ್ ಮಾನಸ ಸರೋವರ ಯಾತ್ರೆ ಪ್ರತಿಯೊಬ್ಬ ಭಾರತೀಯನ ಕನಸು. ರಾಮ್ ಮನೋಹರ್ ಲೋಹಿಯಾ 60 ರ ದಶಕದಲ್ಲಿಯೇ ಟಿಬೆಟ್ನ್ನು ಭಾರತದ ಮಕುಟ ಎಂದು ಕರೆದಿದ್ದಾಗಿ ಸ್ಮರಿಸಿದರು.
ಭಾರತ್-ಟಿಬೆಟ್ ಸಹಯೋಗ ಮಂಚ್ನ ರಾಜ್ಯ ಸಂಯೋಜಕ ಜಗದೀಶ ಹಿರೇಮಠ ವೇದಿಕೆಯ ಮೇಲಿದ್ದರು. ಸಿಡಿಎಸ್ ಸಂಚಾಲಕ ದಿವಾಕರ ಹೆಗಡೆ, ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋಪಾಲ್ ಕಡೇಕುಡಿ, ಮಾಲತಿ ಪಟ್ಟಣಶೆಟ್ಟಿ, ಡಾ.ಮಂದಾಕಿನಿ ಪುರೋಹಿತ, ಡಾ.ಹರೀಶ ರಾಮಸ್ವಾಮಿ, ಡಾ.ಗೋಪಾಲಕೃಷ್ಣ ಕಮಲಾಪೂರ, ಕ್ಯಾ.ಸಿ.ಎಸ್.ಆನಂದ, ಸಿ.ಯು.ಬೆಳ್ಳಕ್ಕಿ, ರಾಘವೇಂದ್ರ ಪಾಟೀಲ ಸೇರಿದಂತೆ ಅನೇಕ ಗಣ್ಯರು, ವಿಶೇಷ ಆಹ್ವಾನಿತರು ಪಾಲ್ಗೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.