ಲಖ್ನೋ : ಉತ್ತರಪ್ರದೇಶದ ಮೂಲೆ ಮೂಲೆಗಳಿಗೂ ಉತ್ತಮ ವಿದ್ಯುತ್ ಮತ್ತು ರಸ್ತೆ ಸಂಪರ್ಕವನ್ನು ಒದಗಿಸಲು ಸಿಎಂ ಯೋಗಿ ಆದಿತ್ಯನಾಥ್ ಅವರು ಪಣ ತೊಟ್ಟಿದ್ದಾರೆ.
ಅಧಿಕಾರವೇರಿದ ಬಳಿಕ 2 ನೇ ಬಾರಿಗೆ ಸಂಪುಟ ಸಭೆ ನಡೆಸಿದ ಅವರು, ಪ್ರತಿ ಗ್ರಾಮಗಳಿಗೂ 18 ಗಂಟೆ ಮತ್ತು ತಹಶೀಲ್ ಮಟ್ಟಗಳಿಗೆ 20 ಗಂಟೆ ವಿದ್ಯುತ್ತನ್ನು ಒದಗಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಜಿಲ್ಲಾ ಕೇಂದ್ರಗಳಿಗೆ 24 ಗಂಟೆ ವಿದ್ಯುತ್ ಒದಗಿಸುವಂತೆ ಅವರು ಸೂಚಿಸಿದ್ದಾರೆ.
ಅಲ್ಲದೆ, ಕೆಟ್ಟು ಹೋಗಿರುವ ಅಥವಾ ಸುಟ್ಟಿರುವ ಟ್ರಾನ್ಸ್ಫಾರ್ಮರ್ಗಳನ್ನು ತಕ್ಷಣವೇ ಬದಲಿಸಿ, ಸರಿಪಡಿಸಬೇಕು. ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆ ಉಂಟಾಗಬಾರದು ಎಂದು ಅವರು ಆದೇಶಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಉತ್ತರಪ್ರದೇಶ ಇಂಧನ ಸಚಿವ ಶ್ರೀಕಾಂತ್ ಶರ್ಮಾ ಅವರು, ನವರಾತ್ರಿಯ ವೇಳೆಯಲ್ಲಿ ಎಲ್ಲಾ ಶಕ್ತಿಪೀಠಗಳಿಗೂ 24 ಗಂಟೆ ವಿದ್ಯುತ್ ಮತ್ತು ಪರೀಕ್ಷೆಗಳ ಸಂದರ್ಭದಲ್ಲಿ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಸಂಪೂರ್ಣ ವಿದ್ಯುತ್ತನ್ನು ಒದಗಿಸುವಂತೆ ಸಿಎಂ ಆದೇಶಿಸಿದ್ದಾರೆ ಎಂದಿದ್ದಾರೆ.
ಅಲ್ಲದೆ, ಏಪ್ರಿಲ್ 14 ರಂದು ಕೇಂದ್ರದೊಂದಿಗೆ ಸಭೆ ನಡೆಯಲಿದ್ದು, ಈ ವೇಳೆ ‘ಪವರ್ ಫಾರ್ ಆಲ್ (ಎಲ್ಲರಿಗೂ ವಿದ್ಯುತ್)’ ಒಪ್ಪಂದಕ್ಕೆ ಸಿಎಂ ಆದಿತ್ಯನಾಥ್ ಮತ್ತು ಕೇಂದ್ರ ಇಂಧನ ಸಚಿವ ಪಿಯುಶ್ ಗೋಯಲ್ ಅವರು ಸಹಿ ಹಾಕಲಿದ್ದಾರೆ ಎಂದರು.
2019 ರೊಳಗೆ ಉತ್ತರಪ್ರದೇಶದ ಎಲ್ಲಾ ಗ್ರಾಮಗಳಿಗೂ ವಿದ್ಯುತ್ ಒದಗಿಸಲು ಈ ಒಪ್ಪಂದ ಸಹಾಯಕವಾಗಲಿದೆ ಎಂದರು.
ಅಲ್ಲದೆ ಜೂನ್ 15 ರೊಳಗೆ ಗುಂಡಿ ಬಿದ್ದಿರುವ ಎಲ್ಲಾ ರಸ್ತೆಗಳನ್ನು ಮುಚ್ಚಿ, ಸರಿಪಡಿಸುವಂತೆ ಯೋಗಿ ಆದಿತ್ಯನಾಥ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.