ಧಾರವಾಡ: ಹೊಲಗಳಲ್ಲಿ ವಿವಿಧ ಜಾತಿಯ ಮರಗಳಿದ್ದರೆ ಅವುಗಳಿಂದ ಸಾಕಷ್ಟು ಅನುಕೂಲಗಳಿವೆ. ಬೈಫ್ ಸಂಸ್ಥೆಯು ಅನುಷ್ಠಾನಗೊಳಿಸುತ್ತಿರುವ ಮರ ಆಧಾರಿತ ಕೃಷಿ ಪದ್ಧತಿಯು ಉತ್ತಮ ಮಾದರಿಯಾಗಿ ರೂಪುಗೊಂಡಿದೆ. ರೈತ ಬಾಂಧವರು ಈ ಪದ್ಧತಿಯನ್ನು ಅಳವಡಿಸಿಕೊಂಡು, ಹೆಚ್ಚಿನ ಆದಾಯ ಪಡೆಯಬೇಕು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಜೆ. ಎಚ್. ಕುಲಕರ್ಣಿಯವರು ಹೇಳಿದರು.
ಅವರು ಬೈಫ್ ಸಂಸ್ಥೆಯ ಸುವರ್ಣ ಮಹೋತ್ಸವ ವರ್ಷಾಚರಣೆ ಅಂಗವಾಗಿ ಸೂರಶೆಟ್ಟಿಕೊಪ್ಪ ಗ್ರಾಮದ ಗ್ರಾಮಚೇತನ ತರಬೇತಿ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಮರ ಆಧಾರಿತ ಕೃಷಿ ಪದ್ಧತಿ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮಣ್ಣಿನ ಆರೋಗ್ಯ ಸರಿಯಾಗಿರಬೇಕು. ಇದಕ್ಕೆ ಮರಗಳು ಸಹಾಯಕ, ಮಣ್ಣಿನ ಆರೋಗ್ಯ ಸರಿಯಾಗಿದ್ದರೆ ಒಳ್ಳೆಯ ಆಹಾರ ದೊರೆಯುತ್ತದೆ, ಇದರಿಂದ ಜನರ ಆರೋಗ್ಯ ಸುಧಾರಿಸುತ್ತದೆ. ಮಹಿಳೆಯರು ಉತ್ತಮ ಆಹಾರ ಸೇವಿಸಿ ರಕ್ತಹೀನತೆಯನ್ನು ತಡೆಯಬೇಕು ಎಂದರು.
ಬೈಫ್, ಸಂಸ್ಥೆಯ ಕಾರ್ಯಕ್ರಮ ನಿರ್ದೇಶಕ ಬಿ. ಶಿವರುದ್ರಪ್ಪ ಸಂಸ್ಥೆಯ ಹಿನ್ನೆಲೆ, ವಿವಿಧ ಚಟುವಟಿಕೆಗಳು, 50 ವರ್ಷಗಳಲ್ಲಿ ಸಾಧಿಸಿದ ಪ್ರಗತಿ ವಿನೂತನ ಕಾರ್ಯಕ್ರಮಗಳು ರೈತರ ಸಹಭಾಗಿತ್ವ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಾನ್ವಿ ತಾಲೂಕು, ಕವಿತಾಳ ಗ್ರಾಮದ ಪ್ರಗತಿಪರ ರೈತಮಹಿಳೆ ಕವಿತಾ ಮಿಶ್ರಾ, ಎಂಟು ಎಕರೆಯಲ್ಲಿ ಕೈಗೊಂಡಿರುವ ಮರ ಆಧಾರಿತ ಕೃಷಿಯ ಅನುಭವವನ್ನು ರೈತರೊಂದಿಗೆ ಹಂಚಿಕೊಂಡರು. ನಬಾರ್ಡ್ ಸಂಸ್ಥೆಯ, ಜಿಲ್ಲಾ ಅಭಿವೃದ್ಧಿ ಅಧಿಕಾರಿ ಶೀಲಾ ಭಂಡಾರಕರ್ ಅವರು ಜಾಗತಿಕ ತಾಪಮಾನ, ಅದರ ಕಾರಣಗಳು ಹಾಗೂ ನಿರ್ವಹಣೆಯಲ್ಲಿ ಮರ ಆಧಾರಿತ ಕೃಷಿಯ ಪಾತ್ರದ ಕುರಿತು ರೈತರಿಗೆ ತಿಳಿವಳಿಕೆ ನೀಡಿದರು.
ದೇಶಪಾಂಡೆ ಪ್ರತಿಷ್ಠಾನದ ಸಂಜೀವ ಕುಲಕರ್ಣಿ ಮಾತನಾಡಿ, ಕಡಿಮೆ ಖರ್ಚಿನಲ್ಲಿ ಮರ ಆಧಾರಿತ ಕೃಷಿಯನ್ನು ಹೆಚ್ಚು ಸಂಖ್ಯೆಯ ರೈತರು ಅಳವಡಿಸಿಕೊಳ್ಳುವಂತಹ ಮಾದರಿ ರೂಪಿಸಲು ಸಲಹೆ ನೀಡಿದರು.
ಸೂರಶೆಟ್ಟಿಕೊಪ್ಪದ ಸರ್ವೋದಯ ಮಹಾಸಂಘ , ಕಲಘಟಗಿಯ ಸಮತಾ ಮಹಾಸಂಘ , ದುಂಡಸಿಯ ಕೃಷಿ ಸಮೃದ್ಧಿ ಸ್ವ-ಸಹಾಯ ಸಂಘ , ಮುಂಡರಗಿ ತಾಲ್ಲೂಕು ಕಲಕೇರಿಯ ಸಚೇತನ ನೈಸರ್ಗಿಕ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಹಾಗೂ ಬೈಫ್ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.