ಬೆಂಗಳೂರು: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಇವತ್ತಿಗೆ ಎರಡು ವರ್ಷ ಪೂರೈಸಿದೆ. ಈ ಅವಧಿಯಲ್ಲಿ ಜನರ ನಿರೀಕ್ಷೆಗೆ ಧಕ್ಕೆಯಾಗದಂತೆ ಆಡಳಿತ ನಡೆಸಿದ್ದೇವೆ. ನಮ್ಮ ಸಾಧನೆ ನಮಗೆ ತೃಪ್ತಿ ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಬುಧವಾರ ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಮಾಧ್ಯಮಗಳೊಂದಿಗೆ ಅವರು ಸಂವಾದ ನಡೆಸಿದರು.
ಚುನಾವಣಾ ಪ್ರಣಾಳಿಕೆಯಲ್ಲಿ 165 ಅಂಶಗಳನ್ನು ಪ್ರಸ್ತಾಪಿಸಿದ್ದೆವು, ಅದರಲ್ಲಿ ಈಗಾಗಲೇ 100 ಭರವಸೆಗಳನ್ನು ಪೂರೈಸಿದ್ದೇವೆ. ನಮ್ಮ ಅವಧಿಯಲ್ಲಿ ಯಾವುದೇ ಹಗರಣಗಳು ನಡೆದಿಲ್ಲ, ರಾಜ್ಯದ ಸರ್ವರನ್ನು ಗಮನದಲ್ಲಿಟ್ಟುಕೊಂಡು ಯೋಜನೆಯನ್ನು ರೂಪಿಸಿದ್ದೇವೆ ಎಂದರು.
ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ಬಿಜೆಪಿಯವರು ಎಲ್ಲವನ್ನೂ ವಿರೋಧಿಸಲು ತೀರ್ಮಾನಿಸಿದ್ದಾರೆ. ಸತ್ಯವನ್ನು ಸುಳ್ಳು ಮಾಡಲು ಹೊರಟಿದ್ದಾರೆ. ಸರ್ಕಾರಕ್ಕೆ ಮಸಿ ಬಳಿಯುವ ಪ್ರಯತ್ನ ಅವರದ್ದು, ವಿಪಕ್ಷಗಳು ಮಾಡಿದ ಯಾವ ಆರೋಪವೂ ಇದುವರೆಗೆ ಸಾಬೀತಾಗಿಲ್ಲ ಎಂದರು.
ಬೇರೆಯವರಂತೆ ನಮಗೆ ಪ್ರಚಾರದ ಹುಚ್ಚಿಲ್ಲ. ಎರಡು ವರ್ಷದಲ್ಲಿ 6 ಲಕ್ಷ 16 ಸಾವಿರ ಮನೆಗಳ ನಿರ್ಮಾಣ ಮಾಡಿದ್ದೇವೆ. ಅನ್ನಭಾಗ್ಯ ಯೋಜನೆಯಡಿ 1.8 ಕೋಟಿ ಜನರಿಗೆ ಅಕ್ಕಿ ನೀಡಿದ್ದೇವೆ. 1 ಕೋಟಿ ಕುಟುಂಬಕ್ಕೆ ಬಿಪಿಎಲ್ ಕಾರ್ಡ್ ವಿತರಿಸಿದ್ದೇವೆ. ಯಶಸ್ವಿನಿ ಯೋಜನೆಯನ್ನು ಪಟ್ಟಣಗಳಿಗೂ ವಿಸ್ತರಿಸಿದ್ದೇವೆ, ಕೃಷಿ ಭಾಗ್ಯ ಯೋಜನೆ ತಂದವರು ನಾವೇ, ಕೃಷಿಗೆ 3 ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡಿದ್ದೇವೆ, ಹನಿ ನೀರಾವರಿಗೆ ಶೇ.90ರಷ್ಟು ಸಬ್ಸಿಡಿ ನೀಡುತ್ತಿದ್ದೇವೆ, ಅಡಿಕೆ ಬೆಳೆಗಾರರಿಗೆ 83 ಕೋಟಿ ಪರಿಹಾರ ನೀಡಿದ್ದೇವೆ, 1 ಟನ್ ಕಬ್ಬಿಗೆ 250 ರೂಪಾಯಿ ಬೆಂಬಲ ಬೆಲೆ ನೀಡಿದ್ದೇವೆ. 21 ಲಕ್ಷ ಜನರಿಗೆ ಬಡ್ಡಿ ರಹಿತ ಸಾಲ ನೀಡಿದ್ದೇವೆ ಎಂದರು.
ನಾನು ಅಹಿಂದ ಪರವಾಗಿದ್ದೇನೆ, ಈ ಬಗ್ಗೆ ಹೇಳಲು ನಾಚಿಕೆ ಪಟ್ಟುಕೊಳ್ಳುವುದಿಲ್ಲ. ನಾವು ಯಾವುದೇ ಚುನಾವಣೆಗೆ ಹೆದರುವುದಿಲ್ಲ, ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಬಿಬಿಎಂಪಿ ವಿಭಜನೆ ಮಾಡುತ್ತಿದ್ದೇವೆ. ಕಠಾರಿಯಾ ವರದಿಯಂತೆ ಸೂಪರ್ಸೀಡ್ ಮಾಡಿದ್ದೇವೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.