ನವದೆಹಲಿ: ಕಾಶ್ಮೀರ ಬಂಡಿಪೋರದಲ್ಲಿ ಮೂವರು ಉಗ್ರರ ವಿರುದ್ಧ ಎನ್ಕೌಂಟರ್ ನಡೆಸುತ್ತಿದ್ದ ವೇಳೆ ಗುಂಡೇಟು ತಗುಲಿ 2 ತಿಂಗಳು ಕೋಮಾಗೆ ಹೋಗಿದ್ದ ಸಿಆರ್ಪಿಎಫ್ ಯೋಧ ಚೇತನ್ ಚೀತಾ ಇದೀಗ ಸಹಜ ಸ್ಥಿತಿಗೆ ಮರಳಿದ್ದಾರೆ.
9 ಗುಂಡೇಟು ತಗುಲಿದರೂ ಇವರು ಬದುಕುಳಿದಿರುವುದು ಯಾವುದೇ ಪವಾಡಕ್ಕಿಂತಲೂ ಕಡಿಮೆಯಲ್ಲ. ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿ ಕೋಮಾದಲ್ಲಿದ್ದ ಇವರು ಬದುಕುಳಿಯುತ್ತಾರೆ ಎಂಬ ಭರವಸೆ ವೈದ್ಯರಿಗೂ ಇರಲಿಲ್ಲ.
ಬಂಡಿಪೋರ ಎನ್ಕೌಂಟರ್ ಹೀರೋ ಎಂದೇ ಕರೆಯಲ್ಪಡುವ ಚೇತನ್ ಅವರನ್ನು ಬುಧವಾರ ಕೇಂದ್ರ ಗೃಹಖಾತೆ ರಾಜ್ಯ ಸಚಿವ ಕಿರಣ್ ರಿಜ್ಜು ಅವರು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದ್ದಾರೆ.
ವೈದ್ಯರಿಗೆ ಧನ್ಯವಾದ ಸಮರ್ಪಿಸಿರುವ ರಿಜ್ಜು, ‘ಚೇತನ್ ಅವರ ನಗು ಮುಖ ನೋಡುವುದೇ ಒಂದು ಅದ್ಭುತ, ಬದುಕಿಗಾಗಿ ಅವರು ನಡೆಸಿದ ಹೋರಾಟ ಇತರ ಅಧಿಕಾರಿಗಳಿಗೂ ಪ್ರೇರಣೆ ಎಂದು ಬಣ್ಣಿಸಿದ್ದಾರೆ.
ಅಲ್ಲದೇ ‘ಶ್ರೀನಗರಕ್ಕೆ ಕರೆತಂದು ಅವರನ್ನು ಆಸ್ಪತ್ರೆಗೆ ಸೇರಿಸುವಾಗ ನಾನಿದ್ದೆ, ಆ ಕ್ಷಣ ಜ್ಞಾಪಿಸಿಕೊಂಡರೆ ಅವರೀಗ ನನ್ನೊಂದಿಗೆ ಮಾತನಾಡುತ್ತಿದ್ದಾರೆ ಎಂಬುದನ್ನು ಕಲ್ಪಿಸುವುದೇ ಕಷ್ಟ. ಅವರ ಬಗ್ಗೆ ನನಗೆ ತುಂಬಾ ಹೆಮ್ಮೆ ಎನಿಸುತ್ತದೆ’ ಎಂದಿದ್ದಾರೆ.
ಫೆ.14ರಂದು ಚೇತನ್ ಅವರ ಮೇಲೆ ಉಗ್ರರು ಗುಂಡು ಹಾರಿಸಿದ್ದರು, ಕನಿಷ್ಠ ಅಂದರೆ 9 ಗುಂಡುಗಳು ಅವರ ದೇಹವನ್ನು ಹೊಕ್ಕಿದ್ದವು. ಈ ಘಟನೆಯಲ್ಲಿ ಇತರ 3 ಯೋಧರು ಮೃತರಾಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.