ರಾಯಚೂರು: ಮಳೆಯಿಲ್ಲದೆ ಜಿಲ್ಲೆಯಾದ್ಯಂತ ಭೀಕರ ಬರಗಾಲ ಆವರಿಸಿದ್ದು, ಸುಡುವ ಬಿಸಿಲಿಗೆ ಅಂತರ್ಜಲವೂ ಬತ್ತಿ ಹೋಗಿದೆ. ಹನಿ ನೀರಿಗಾಗಿ ಜನ, ಜಾನುವಾರುಗಳು ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ. 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ೬೫ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ.
ಈ ಕುರಿತು ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ಗುರುತಿಸಿದ್ದಾರೆ. ಆಯಾ ಗ್ರಾಮಗಳಲ್ಲಿ ಇರುವ ಕುಡಿಯುವ ನೀರಿನ ಕೊಳವೆ ಬಾವಿಗಳ (ಬೋರ್ವೆಲ್) ಅಂತರ್ಜಲವೂ ಬತ್ತಿಹೋಗಿದೆ. ಕೃಷಿಗಾಗಿ ಬಳಕೆ ಮಾಡುತ್ತಿರುವ ಖಾಸಗಿ ಬೋರ್ವೆಲ್ಗಳಿಂದ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡಲಾಗುತ್ತಿದೆ.
ಕಳೆದ 3-4 ವರ್ಷಗಳಿಂದ ಈ ಭಾಗದಲ್ಲಿ ಮಳೆಯೇ ಇಲ್ಲ. ಕೆಲವೆಡೆ ಅಲ್ಲಲ್ಲಿ ಸುರಿದ ಮುಂಗಾರು ಮಳೆಯಿಂದ ಕೆಲ ಭಾಗಗಳಲ್ಲಿ ರೈತರು ಬಿತ್ತನೆ ಮಾಡಿದ್ದರು. ಬೆಳೆಗಳು ಕೈಗೆ ಬರುವಷ್ಟರಲ್ಲಿ ಮಳೆ ಇಲ್ಲದೆ ಬೆಳೆಗಳು ಹಾಳಾಗಿ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಾನುವಾರುಗಳಿಗೆ ಮೇವಿನ ಕೊರತೆವುಂಟಾಗಿದೆ. ರೈತರು ಜಾನುವಾರುಗಳನ್ನು ಮಾರಾಟ ಮಾಡಿ, ತಮ್ಮ ಬದುಕನ್ನು ಸಾಗಿಸಲು, ಕುಟುಂಬ ನಿರ್ವಹಣೆಗಾಗಿ ಬೃಹತ್ ನಗರಗಳಿಗೆ ಗುಳೆ ಹೋಗುತ್ತಿದ್ದಾರೆ.
ಬೋರ್ವೆಲ್ಗಳನ್ನು ನಂಬಿಕೊಂಡು ಬಿತ್ತನೆ ಮಾಡುತ್ತಿದ್ದವರಿಗೂ ಈಗ ಸಂಕಷ್ಟ ಎದುರಾಗಿದೆ. ಕುಡಿಯುವ ನೀರಿನ ಸಮಸ್ಯೆ ಇದ್ದ ಗ್ರಾಮಗಳಲ್ಲಿ ಖಾಸಗಿ ಬೋರ್ವೆಲ್ಗಳ ಮೂಲಕ ನೀರು ಕೊಡಲಾಗುತ್ತಿದೆ. ಒಂದೆಡೆ ಖಾಸಗಿ ಬೋರ್ವೆಲ್ಗಳು ಇಲ್ಲದಿದ್ದಲ್ಲಿ ಅಂತಹ ಗ್ರಾಮಗಳಿಗೆ ಟ್ಯಾಂಕರ್ಗಳ ಮೂಲಕ ನೀರು ಒದಗಿಸಲಾಗುತ್ತದೆ. ಈಗಾಗಲೇ ಜಿಲ್ಲಾ ಪಂಚಾಯ್ತಿಯಲ್ಲಿ 4 ನೀರಿನ ಟ್ಯಾಂಕರ್ಗಳು ಇದ್ದು ಅಗತ್ಯವಿದಲ್ಲಿ ಟ್ಯಾಂಕರ್ಗಳ ಮೂಲಕ ನೀರು ಪೂರೈಸಲಾಗುತ್ತಿದೆ.
ಬೇಸಿಗೆ ಇದೀಗ ತಾನೆ ಆರಂಭವಾಗಿದೆ. ಅಂತರ್ಜಲ ಮಟ್ಟ ಕುಸಿತದ ಪರಿಣಾಮ ರೈತ ಚಿಂತಿತನಾಗಿದ್ದಾನೆ. ವರುಣದೇವ ಈ ಬಾರಿಯಾದರೂ ಕಣ್ತೆರೆದು ನೋಡಿದರೆ, ರೈತನ ಬದುಕು ತುಸು ಹಸನಾಗಬಹುದು.
-ಪ್ರಲ್ಹಾದ ಕುಲಕರ್ಣಿ
ಖಾಸಗಿ ಬೋರ್ವೆಲ್
ಜಿ.ಪಂ. ಗುರುತಿಸಿದ ಆಯಾ ಗ್ರಾಮಗಳಲ್ಲಿ ಇರುವ ಕುಡಿಯುವ ನೀರಿನ ಕೊಳವೆ ಬಾವಿಗಳ ಅಂತರ್ಜಲ ಬತ್ತಿಹೋಗಿದೆ. ಕೃಷಿಗಾಗಿ ಬಳಕೆ ಮಾಡುತ್ತಿರುವ ಖಾಸಗಿ ಬೋರ್ವೆಲ್ಗಳಿಂದ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡಲಾಗುತ್ತಿದೆ.
ಎಂ.ಕುರ್ಮಾರಾವ್, ಸಿಇಓ,
ಜಿ.ಪಂ., ರಾಯಚೂರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.