ಮಂಗಳೂರು : ಕಣ್ಣಿಗೆ ಬಟ್ಟೆಕಟ್ಟಿ ತೆರಿಗೆ ವಸೂಲು ಮಾಡಲು ಹೊರಟಿರುವ ಮಂಗಳೂರು ಮಹಾನಗರ ಪಾಲಿಕೆ ಮಧ್ಯಮ ವರ್ಗದ ವ್ಯಾಪಾರಿಗಳಿಗೆ ಚಾಟಿ ಏಟುಕೊಡುವಂತೆ ಕಾಣಿಸುತ್ತಿದೆ. ಉದ್ದಿಮೆ ಪರವಾನಿಗೆ ನವೀಕರಣ ಮಾಡುವ ಸಂದರ್ಭದಲ್ಲಿ ಪ್ರತಿಯೊಂದು ವ್ಯಾಪಾರ, ವ್ಯವಹಾರ ಸಂಸ್ಥೆಗಳು, ಮಳಿಗೆಗಳು ಅದರೊಂದಿಗೆ ಘನತ್ಯಾಜ್ಯಕರವನ್ನು ಕೂಡಕಟ್ಟಬೇಕು ಎನ್ನುವ ನಿಯಮವನ್ನು ಪಾಲಿಕೆ ಜಾರಿ ಮಾಡಿದೆ. ಆದರೆ ಈ ಹೊಸ ತೆರಿಗೆ ಎಷ್ಟು ಅವೈಜ್ಞಾನಿಕವಾಗಿದೆ ಎಂದರೆ ಸಣ್ಣ, ಮಧ್ಯಮ ಮತ್ತು ಕೊನೆಗೆ ದೊಡ್ಡ ವರ್ಗದ ವ್ಯಾಪಾರಿಗಳು ಕೂಡ ತತ್ತರಿಸುವಂತೆ ಮಾಡಿದೆ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಯಾವುದೇ ಹೊಸ ತೆರಿಗೆಯನ್ನು ಹೇರುವುದಿಲ್ಲ ಎಂದು ಪ್ರಮಾಣ ಮಾಡಿದ ಪ್ರಕಾರ ಹಾಗೆ ನಡೆದುಕೊಂಡಿತ್ತು. ಆದರೆ ಕಾಂಗ್ರೆಸ್ ಅಧಿಕಾರದಲ್ಲಿರುವ ಈ ನಾಲ್ಕು ವರ್ಷ ಕೂಡ ಬೇರೆ ಬೇರೆ ರೀತಿಯಲ್ಲಿ ಹೊಸ ತೆರಿಗೆಯನ್ನು ಹೇರುವ ಮೂಲಕ ಜನರನ್ನು ವಂಚಿಸುತ್ತಿದೆ. ಈ ಘನತ್ಯಾಜ್ಯ ತೆರಿಗೆಯ ಪ್ರಕಾರ 180 ಚದರ ಅಡಿ ವಿಸ್ತ್ರೀರ್ಣದ ಅಂಗಡಿಯ ಮಾಲೀಕ ಪ್ರತಿ ವರ್ಷ 16 ಸಾವಿರ ರೂಪಾಯಿಯನ್ನು ತೆರಿಗೆಯನ್ನಾಗಿ ಕಟ್ಟಬೇಕಾಗುತ್ತದೆ.ಇಷ್ಟು ಚಿಕ್ಕಅಂಗಡಿಗೆ ಇದು ನಿಜಕ್ಕೂ ದೊಡ್ಡ ಹೊರೆ. ಇಂತಹ ಸಾವಿರಾರು ಅಂಗಡಿಗಳು ಮನಪಾ ವ್ಯಾಪ್ತಿಯಲ್ಲಿ ಇವೆ. ಟ್ರೇಡ್ ಲೈಸೆನ್ಸ್ 500 ರಿಂದ 600 ರೂಪಾಯಿಇದ್ದ ಅಂಗಡಿಗಳು ಘನತ್ಯಾಜ್ಯಕರ ಎಂದು 15-20 ಸಾವಿರ ಕಟ್ಟಬೇಕಾಗಿರುವುದರಿಂದ ಸಣ್ಣವ್ಯಾಪಾರಿಗಳು ತಲೆಯ ಮೇಲೆ ಕೈಹೊತ್ತು ಕುಳಿತುಕೊಂಡಿದ್ದಾರೆ. ತ್ಯಾಜ್ಯಅಲ್ಪ ಪ್ರಮಾಣದಲ್ಲಿ ಉತ್ಪತಿಯಾಗುವ ಮಳಿಗೆಗಳು ವರ್ಷಕ್ಕೆ ಸಾವಿರಾರು ರೂಪಾಯಿ ತೆರಿಗೆ ಕಟ್ಟಿ ಹೈರಾಣಾಗುತ್ತಿದ್ದರೆ ಅತ್ತ ಕಾಂಗ್ರೆಸ್ ತಾನು ಇನ್ನು ಯಾವ ಹೊಸ ತೆರಿಗೆ ಹಾಕಿ ಮಧ್ಯಮ ವರ್ಗದವರನ್ನು ಸುಲಿಯುವುದು ಎಂದು ಯೋಚನೆ ಮಾಡುತ್ತಾ ಇದೆ.
ಇನ್ನು ಮಧ್ಯಮ ಹಾಗೂ ದೊಡ್ಡ ಉದ್ದಿಮೆಗಳಿಗೂ ಅವೈಜ್ಞಾನಿಕವಾಗಿತೆರಿಗೆ ವಿಧಿಸಿ ಅವರ ಒತ್ತಡವನ್ನು ಹೆಚ್ಚಿಸಿದೆ. ಇದರಿಂದ ದುಡಿದ ಹಣವನ್ನು ಪಾಲಿಕೆಗೆ ಘನತ್ಯಾಜ್ಯ ತೆರಿಗೆ ಕಟ್ಟಲು ಇಡಬೇಕಾ ಎಂದು ವ್ಯಾಪಾರಿಗಳು ಪ್ರಶ್ನಿಸುತ್ತಿದ್ದಾರೆ.
ಸ್ವಯಂಘೋಷಿತ ಆಸ್ತಿ ತೆರಿಗೆ ಹೆಚ್ಚಳ ಮಾಡಲ್ಲ ಎಂದು ಚುನಾವಣೆಯ ಸಂದರ್ಭದಲ್ಲಿ ಜನರ ಎದುರು ಜನಾರ್ದನ ಪೂಜಾರಿಯವರ ಸಮ್ಮುಖದಲ್ಲಿ ಪ್ರಮಾಣ ಮಾಡಿ, ಜನರನ್ನು ನಂಬಿಸಿ ಅಧಿಕಾರಕ್ಕೆ ಬಂದ ಬಳಿಕ ಎರಡೆರಡು ಬಾರಿ 15% ತೆರಿಗೆ ಹೆಚ್ಚಿಸಿ ಇದು ಅನಿವಾರ್ಯ ಹೇಳಿರುವುದು ನಿಮಗೆ ಗೊತ್ತೆ ಇದೆ. ಇವರದ್ದೇ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದರೂ ಇಚ್ಚಾಶಕ್ತಿಯ ಕೊರತೆಯಿಂದಾಗಿ ಈ ಹೊರೆಯನ್ನು ಹಿಂದಕ್ಕೆ ಪಡೆಯಲಾಗದ ಕಾಂಗ್ರೆಸ್ ಇನ್ನು ಜನರಿಗೆ ಯಾವ ರೀತಿಯ ನೆಮ್ಮದಿಯನ್ನು ಕೊಡುತ್ತದೆ ಎಂದು ಹೇಳಲು ಆಗುವುದಿಲ್ಲ. ಜನರ ಮೇಲೆ ತೆರಿಗೆ ಭಾರ ಹೆಚ್ಚಿಸಲೆಂದೇ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ಪಾಲಿಕೆಯ ಆದಾಯ ಸೋರುವುದನ್ನು ತಡೆಯಲಾಗದೇ, ಅದನ್ನು ತುಂಬುವುದಕ್ಕಾಗಿ, ಜನರನ್ನು ಸುಲಿಗೆ ಮಾಡುತ್ತಿರುವುದನ್ನು ನಾಗರಿಕರ ಪರವಾಗಿ ಬಿಜೆಪಿ ಖಂಡಿಸುತ್ತದೆ. ಕಾಂಗ್ರೆಸ್ ಪಕ್ಷದ ಈ ದುರಾಡಳಿತದಿಂದ ಬೇಸತ್ತಿರುವ ನಾಗರಿಕರು ಮುಂದಿನ ಬಾರಿ ಕಾಂಗ್ರೆಸ್ಸಿಗೆ ತಕ್ಕ ಉತ್ತರ ಕೊಡಲಿದ್ದಾರೆ ಎಂದು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ. ವೇದವ್ಯಾಸ ಕಾಮತ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.