‘ಸಂಸತ್ತು ಎನ್ನುವುದು ನಿಮ್ಮ ಮೂಲ ಜವಾಬ್ದಾರಿ. ನಿಮಗೆ ಬೇರೆ ಕೆಲಸಕ್ಕೆ ಸಮಯ ಇರುತ್ತದೆ. ಮೂಲ ಕೆಲಸವಾದ ಸಂಸತ್ತಿಗೆ ಬರಲು ಸಮಯ ಇರುವುದಿಲ್ಲವೆ? ನಿಮ್ಮ ಹೆಸರನ್ನು ಚೀಟಿಯಲ್ಲಿ ಬರೆದಿಟ್ಟುಕೊಂಡಿರುತ್ತೇನೆ. ಯಾವುದೇ ಸಮಯದಲ್ಲಿ ಸದನದಲ್ಲಿ ನಿಮ್ಮನ್ನು ನಾನು ಕರೆಯಬಹುದು. ಆ ಸಂದರ್ಭದಲ್ಲಿ ನೀವು ಇರದೇ ಹೋದರೆ ಭಗವಂತನೇ ನಿಮ್ಮನ್ನು ಕಾಪಾಡಬೇಕು’.
ಇದು ಇತ್ತೀಚೆಗೆ ಬಿಜೆಪಿ ಸಂಸದೀಯ ಪಕ್ಷದ ವಾರದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಸತ್ ಅಧಿವೇಶನಕ್ಕೆ ಪದೇ ಪದೇ ಗೈರು ಹಾಜರಾಗಿ, ಕೋರಂ ಅಭಾವ ಸೃಷ್ಟಿಸುತ್ತಿರುವ ಬಿಜೆಪಿ ಸಂಸದರಿಗೆ ನೀಡಿರುವ ಖಡಕ್ ಎಚ್ಚರಿಕೆ.
ಇಂತಹದೊಂದು ಖಡಕ್ ಎಚ್ಚರಿಕೆ ಅತ್ಯಂತ ಅಗತ್ಯವಾಗಿತ್ತು. ಜನಪ್ರತಿನಿಧಿಗಳಾಗಿ ಶಾಸನಗಳನ್ನು ರಚಿಸಿ, ಜನಪರ ಕೆಲಸಗಳಿಗೆ ಚಾಲನೆ ನೀಡಬೇಕಾದ ಸಂಸದರೇ ಸಂಸತ್ ಅಧಿವೇಶನ ಸಂದರ್ಭದಲ್ಲಿ, ಅದರಲ್ಲೂ ಶಾಸನಗಳ ಮಂಡನೆ ಹಾಗೂ ಸ್ವೀಕಾರ ಸಂದರ್ಭದಲ್ಲಿ ಗೈರು ಹಾಜರಾಗುವ ಕೆಟ್ಟಚಾಳಿ ಬೆಳೆಸಿಕೊಂಡರೆ ಅಂಥವರಿಗೆ ಹೀಗೆ ಮಾತಿನ ತಪರಾಕಿ ಕೊಡದೆ ಇನ್ನೇನು ಮಾಡಬೇಕು? ಸಂಸತ್ ಸದಸ್ಯರಾಗುವುದೇ ಸಂಸತ್ ಅಧಿವೇಶನದಲ್ಲಿ ಭಾಗವಹಿಸಿ ತಮ್ಮ ತಮ್ಮ ಕ್ಷೇತ್ರಗಳ ಸಮಸ್ಯೆಗಳ ಕುರಿತು ಚರ್ಚಿಸುವುದಕ್ಕಾಗಿ, ಸರ್ಕಾರದಿಂದ ಸೂಕ್ತ ಪರಿಹಾರ ಪಡೆಯುವುದಕ್ಕಾಗಿ. ಸಂಸತ್ತಿಗೆ ತಪ್ಪದೆ ಹಾಜರಾಗುವುದು ಸಂಸತ್ ಸದಸ್ಯರ ಮೂಲ ಕರ್ತವ್ಯ. ಅಂಥದ್ದರಲ್ಲಿ ಸಂಸತ್ ಅಧಿವೇಶನ ನಡೆಯುತ್ತಿರುವಾಗ ಗೈರು ಹಾಜರಾಗುತ್ತಾರೆಂದರೆ ಅದಕ್ಕೇನರ್ಥ? ಅಧಿವೇಶನದ ಸಂದರ್ಭದಲ್ಲಿ ಈ ಸಂಸದರಿಗೆ ಇರಬಹುದಾದ ಅಂತಹ ಘನಾಂದಾರಿ ಕೆಲಸವಾದರೂ ಏನು? ಅದನ್ನಾದರೂ ಅವರು ಬಹಿರಂಗ ಪಡಿಸಬೇಕಲ್ಲವೆ? ಏನೋ ಅನಾರೋಗ್ಯ, ಅಥವಾ ತುರ್ತುಕೆಲಸಗಳಿದ್ದಲ್ಲಿ ಅದಕ್ಕೊಂದು ವಿನಾಯ್ತಿ ನೀಡಬಹುದು. ಆದರೆ ಆರೋಗ್ಯವಂತರಾಗಿದ್ದು, ಯಾವುದೇ ತುರ್ತುಕೆಲಸ ಇಲ್ಲದಿದ್ದಾಗಲೂ ಸಂಸತ್ತಿಗೆ ಕಾಲಿಡದಿದ್ದರೆ ಅಂಥವರು ಸದಸ್ಯರಾಗಿರಲು ಅಯೋಗ್ಯರೆಂದು ಅರ್ಥವಲ್ಲವೆ?
ಪ್ರಧಾನಿ ಮೋದಿ ಇದನ್ನರಿತೇ ಸಂಸದರಿಗೆ ಖಡಕ್ ಎಚ್ಚರಿಕೆ ನೀಡಿದ್ದು. ’ಪ್ರಶ್ನೋತ್ತರ ಅವಯಲ್ಲಿ ಸಚಿವರೇ ಗೈರುಹಾಜರಾಗುತ್ತಿದ್ದಾರೆ. ಇನ್ನೊಂದೆಡೆ ಮಹತ್ವದ ಮಸೂದೆಗಳು ಪಾಸಾಗುವಾಗ ಹಾಗೂ ಪ್ರಶ್ನೋತ್ತರ-ಚರ್ಚೆಗಳು ನಡೆಯುವಾಗ ಸಂಬಂಧಿಸಿದ ಸಂಸದರೇ ಸದನದಲ್ಲಿರುವುದಿಲ್ಲ. ಇದು ಸರ್ವಥಾ ಸರಿಯಲ್ಲ’ ಎಂದು ಮೋದಿ ಪ್ರತಿಕ್ರಿಯಿಸಿರುವುದರಲ್ಲಿ ಯಾವ ತಪ್ಪೂ ಇಲ್ಲ.
ಸಂಸತ್ ಅಧಿವೇಶನಕ್ಕೆ ಆಡಳಿತ ಪಕ್ಷದ ಸದಸ್ಯರು, ಸಚಿವರು ಗೈರುಹಾಜರಾಗುವುದು ಇದೇ ಮೊದಲೇನಲ್ಲ. ಯುಪಿಎ ಸರ್ಕಾರ ಅಸ್ತಿತ್ವದಲ್ಲಿದ್ದಾಗಲೂ ಸಚಿವರು, ಸಂಸದರು ಗೈರಾಗುತ್ತಿದ್ದರು. ಸಂಸತ್ ಕಲಾಪ ನಡೆಯಲು ಕನಿಷ್ಠ ಇಂತಿಷ್ಟು ಸಂಸದರು ಸದನದಲ್ಲಿ ಇರಬೇಕೆಂಬ ನಿಯಮವಿದೆ. ಅದಕ್ಕೆ ಕೋರಂ ಎನ್ನುತ್ತಾರೆ. ಕೋರಂ ಇಲ್ಲದಿದ್ದರೆ ಯಾವ ಕಲಾಪವನ್ನೂ ನಡೆಸುವಂತಿಲ್ಲ. ಕಾಂಗ್ರೆಸ್ ಸರ್ಕಾರದ ಅವಯಲ್ಲಿ ಕೋರಂ ಕೊರತೆಯಿಂದಾಗಿ ಸದನವನ್ನು ಮುಂದೂಡಿದ ಸಂದರ್ಭಗಳು ಅದೆಷ್ಟೋ. ಆದರೂ ಆಗ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಸದನಕ್ಕೆ ಗೈರಾಗುತ್ತಿರುವ ಆಡಳಿತ ಪಕ್ಷದ ಸದಸ್ಯರಿಗೆ ಯಾವ ಎಚ್ಚರಿಕೆಯನ್ನೂ ನೀಡುವ ’ಸಾಹಸ’ಕ್ಕೆ ಕೈಹಾಕಿರಲಿಲ್ಲ. ಮೋದಿ ಮಾತ್ರ ಮುಲಾಜಿಲ್ಲದೆ ಅಂತಹ ಸಾಹಸಕ್ಕೆ ಕೈಹಾಕಿದ್ದಾರೆ. ಅವರು ಮುಲಾಜಿಲ್ಲದೆ ಸದಸ್ಯರಿಗೆ ಇಂತಹದೊಂದು ಎಚ್ಚರಿಕೆ ನೀಡಿದ್ದರಿಂದಲೇ ಬಿಜೆಪಿ ಸಂಸದರು ಮಧ್ಯಾಹ್ನದ ವೇಳೆ ಮನೆಗೆ ಊಟಕ್ಕೆ ಕೂಡ ಹೋಗಿರಲಿಲ್ಲ. ಎಲ್ಲಿ ಮೋದಿ ಕೆಂಗಣ್ಣಿಗೆ ತುತ್ತಾಗಿ ಟಿಕೆಟ್ ಕೈ ತಪ್ಪುತ್ತದೋ ಎಂಬ ಆತಂಕ ಅವರದಾಗಿತ್ತು!
ಕರ್ನಾಟಕದ ಬೀದರ್ ಸಂಸದರಾಗಿದ್ದ ರಾಮಚಂದ್ರ ವೀರಪ್ಪ ತಮ್ಮ ಇಳಿವಯಸ್ಸಿನಲ್ಲೂ ತಪ್ಪದೇ ಸದನವಿದ್ದಾಗಲೆಲ್ಲಾ ಹಾಜರಾಗುತ್ತಿದ್ದರು. ಸದನದ ಕಲಾಪಗಳಲ್ಲಿ ಭಾಗವಹಿಸಿ ಮಸೂದೆ ಪಾಸಾದ ನಂತರ ’ನನ್ನ ಕರ್ತವ್ಯ ಮಾಡಿದ್ದೇನೆ’ ಎಂದು ಆಗಿನ ಪ್ರಧಾನಿ ಅಟಲ್ಜೀ ಬಳಿ ಹೇಳಿಹೋಗುತ್ತಿದ್ದರು. ಇದು ರಾಮಚಂದ್ರ ವೀರಪ್ಪ ಅವರ ನಿಯತ್ತಾಗಿತ್ತು. ಅವರೇನೂ ಅಷ್ಟೊಂದು ವಿದ್ಯಾವಂತರಲ್ಲ. ಆದರೆ ಸಂಸದನಾಗಿ ತನ್ನ ಮೂಲ ಜವಾಬ್ದಾರಿಯೇನು ಎಂಬುದನ್ನು ಮಾತ್ರ ಚೆನ್ನಾಗಿ ಅರಿತಿದ್ದರು.
ಸಾಕಷ್ಟು ವಿದ್ಯಾವಂತರಾಗಿರುವ, ಪದವಿ, ಸ್ನಾತಕೋತ್ತರ ಪದವಿ ಪಡೆದಿರುವ ಸಂಸದರು ಪಾರ್ಲಿಮೆಂಟಿನಲ್ಲಿದ್ದಾರೆ. ಸಂಸದನ ಮೂಲಕರ್ತವ್ಯಗಳೇನು ಎಂಬುದು ಅವರಿಗೆಲ್ಲ ತಿಳಿಯದ ಸಂಗತಿಯಲ್ಲ. ಹಾಗಿದ್ದರೂ ಇಂತಹವರು ಆಗಾಗ ಸಂಸತ್ ಅಧಿವೇಶನಕ್ಕೆ ಚಕ್ಕರ್ ಹಾಕುತ್ತಲೇ ಇರುತ್ತಾರೆ. ಸಂಸತ್ ಅಧಿವೇಶನ ಆರಂಭವಾಗುವ ಹೊತ್ತಿಗೆ ಆಗಮಿಸಿ, ಹಾಜರಿ ಪುಸ್ತಕದಲ್ಲಿ ಸಹಿಹಾಕಿ, ಸ್ವಲ್ಪಹೊತ್ತು ಸದನದಲ್ಲಿ ಇದ್ದಂತೆ ಮಾಡಿ ಆಮೇಲೆ ಇದ್ದಕ್ಕಿದ್ದಂತೆ ಮಾಯವಾಗಿ ಬಿಡುತ್ತಾರೆ. ಅವೇಶನಕ್ಕೆ ಹೇಗೂ ಹಾಜರಿ ಹಾಕಿಯಾಗಿದೆ. ಇನ್ನು ಕಲಾಪದಲ್ಲಿ ಭಾಗವಹಿಸಿದರೆಷ್ಟು, ಬಿಟ್ಟರೆಷ್ಟು ಎಂಬ ನಿರ್ಲಕ್ಷ್ಯಭಾವ ಇಂಥವರದ್ದು. ಅಸಲಿಗೆ ಇಂಥವರಿಗೆ ವಿವಿಧ ವಿಷಯಗಳ ಕುರಿತು ನಡೆಯುವ ಚರ್ಚೆ, ಪ್ರಶ್ನೋತ್ತರದ ಬಗ್ಗೆ ಆಸಕ್ತಿಯೇ ಇರುವುದಿಲ್ಲ. ಅವರ ಆಸಕ್ತಿ ಏನಿದ್ದರೂ ಸ್ವಂತಕ್ಕೆ ಒಂದಿಷ್ಟು ಕಾಸುಮಾಡಿಕೊಳ್ಳುವ ಹುನ್ನಾರದತ್ತ. ಅದಕ್ಕಾಗಿ ವ್ಯಾಪಾರ, ವ್ಯವಹಾರ ಮುಂತಾದ ಡೀಲ್ಗಳನ್ನು ಕುದುರಿಸುವತ್ತಲೇ ವಿಶೇಷ ಗಮನ ! ಅಥವಾ ತಮ್ಮ ಪ್ರಭಾವ ಬಳಸಿ ಇನ್ನಾರಿಗೋ ಫೇವರ್ ಮಾಡಿ ತನ್ಮೂಲಕ ಧನಸಂಪಾದನೆಯ ಹಪಾಹಪಿ. ಅವರ ದೃಷ್ಟಿಯಲ್ಲಿ ಸಂಸತ್ ಕಲಾಪದಲ್ಲಿ ಭಾಗವಹಿಸುವುದೆಂದರೆ ಅದೊಂದು ವ್ಯರ್ಥ ಕಸರತ್ತು. ಸಂಸತ್ನಲ್ಲಿ ಏನಾಯಿತು, ಯಾವ ಮಸೂದೆ ಪಾಸಾಯಿತು ಎಂಬುದು ಮರುದಿನ ಅಥವಾ ಅದೇ ದಿನ ಮಾಧ್ಯಮಗಳ ಮೂಲಕ ಹೇಗೂ ತಿಳಿಯುತ್ತದೆ ಎಂಬ ಮನೋಭಾವ ಇಂಥವರದು. ರಾಜ್ಯಸಭೆಯ ಸದಸ್ಯರಾಗಿರುವ ಸಿನಿಮಾ ತಾರೆಗಳು, ಕ್ರಿಕೆಟ್ಲೋಕದ ದೇವರುಗಳು, ಇನ್ನಿತರ ಸೆಲೆಬ್ರಿಟಿಗಳು ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮತ್ತೆ ಸಂಸತ್ತಿಗೆ ಹಾಜರಾಗುವುದೇ ವಿರಳ. ಇಂಥವರನ್ನು ಯಾವ ಸೌಭಾಗ್ಯಕ್ಕಾಗಿ ರಾಜ್ಯಸಭಾ ಸದಸ್ಯರನ್ನಾಗಿ ಆರಿಸಬೇಕು ಎಂಬುದನ್ನು ಸಂಬಂಧಿಸಿದವರು ಆಲೋಚಿಸುವ ಅಗತ್ಯವಿದೆ.
ಜನಪ್ರತಿನಿಧಿಗಳು ಶಾಸನಸಭೆಯ ಅಧಿವೇಶನಗಳಿಗೆ ಗೈರಾಗುತ್ತಿರುವುಕ್ಕೆ ಯಾವ ಪಕ್ಷದ ಸದಸ್ಯರೂ ಹೊರತಲ್ಲ. ಸಂಸತ್ ಅಥವಾ ಶಾಸನ ಸಭೆಗಳಿಗೆ ಒಂದು ದಿನವೂ ತಪ್ಪದೇ ಹಾಜರಾಗುವವರ ಸಂಖ್ಯೆ ಬೆರಳೆಣಿಕೆಯಷ್ಟಿರಬಹುದು. ಈಚೆಗೆ ಕರ್ನಾಟಕದ ಬಜೆಟ್ ಅಧಿವೇಶನ ಸಂದರ್ಭದಲ್ಲಿ ಲೋಕಪಯೋಗಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಸತತ ಗೈರುಹಾಜರಾಗುತ್ತಿರುವ ವಿಷಯದ ಕುರಿತು ವಿಧಾನಸಭೆಯಲ್ಲಿ ತೀವ್ರ ಚರ್ಚೆ ನಡೆದಿತ್ತು. ಲೋಕೋಪಯೋಗಿ ಇಲಾಖೆ ಕುರಿತ ಲಿಖಿತ ಪ್ರಶ್ನೆಯನ್ನು ಬಿಜೆಪಿ ಶಾಸಕ ಸಿ.ಟಿ. ರವಿ ಸದನದಲ್ಲಿ ಮಂಡಿಸಿದಾಗ ಉತ್ತರಿಸಲು ಮುಂದಾದವರು ಲೋಕೋಪಯೋಗಿ ಸಚಿವರಾದ ಮಹದೇವಪ್ಪ ಅವರಲ್ಲ, ಬದಲಿಗೆ ಕಾನೂನು ಸಚಿವ ಟಿ.ಬಿ. ಜಯಚಂದ್ರ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ರವಿ, ನಾನು ಸಚಿವರನ್ನು ಗುಂಡ್ಲುಪೇಟೆ, ನಂಜನಗೂಡಿನಲ್ಲೇ ಪ್ರಶ್ನೆ ಕೇಳುತ್ತೇನೆ. ಅವರು ಅಲ್ಲಿಯೇ ಸಿಗುತ್ತಾರೆ ಎಂದು ವ್ಯಂಗ್ಯವಾಡಿದ್ದರು. ಬಿಜೆಪಿ ಶಾಸಕರೆಲ್ಲ ಮುಗಿಬಿದ್ದು ’ಸಚಿವರಿಗೆ ಸದನ ಮುಖ್ಯವೋ, ಉಪಚುನಾವಣೆ ಮುಖ್ಯವೋ ಎಂಬುದನ್ನು ಸರ್ಕಾರ ತೀರ್ಮಾನಿಸಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಶಾಸಕ ಕಾಗೇರಿಯವರು ’ಪೊಲೀಸರನ್ನು ಕಳಿಸಿ, ಸಚಿವರನ್ನು ಹುಡುಕಿಸಿ’ ಎಂದು ಸರ್ಕಾರಕ್ಕೆ ಸಲಹೆ ನೀಡಿದರೆ, ಸುರೇಶ್ಕುಮಾರ್ ಮತ್ತೊಂದು ಹೆಜ್ಜೆ ಮುಂದೆಹೋಗಿ, ’ಸಚಿವರು ಬಾರದಿದ್ದರೆ ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಹಾಕಿ’ ಎಂದು ಸರ್ಕಾರವನ್ನು ಒತ್ತಾಯಿಸಿದ್ದರು. ಕೊನೆಗೆ ಲೋಕೋಪಯೋಗಿ ಸಚಿವರು ಮಾರ್ಚ್ 27 ಮತ್ತು 28ರಂದು ವಿಧಾನಸಭೆ ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಸ್ಪೀಕರ್ ಕೆ.ಬಿ. ಕೋಳಿವಾಡ ಆದೇಶ ನೀಡಿದ ಘಟನೆಯೂ ನಡೆದಿದೆ. ಸ್ಪೀಕರ್ ಅವರ ಆದೇಶಕ್ಕೆ ಸಚಿವ ಮಹಾದೇವಪ್ಪ ಅದೆಷ್ಟು ಬೆಲೆ ಕೊಡುತ್ತಾರೋ ಗೊತ್ತಿಲ್ಲ.
ಒಂದೊಮ್ಮೆ ಸಚಿವರು ಕಲಾಪದಲ್ಲಿ ಪಾಲ್ಗೊಂಡಿದ್ದರೂ ಕಲಾಪದ ಬಗ್ಗೆ ಗಮನಹರಿಸದೆ ಮತ್ತೊಬ್ಬ ಸದಸ್ಯರೊಂದಿಗೆ ಕಾಡುಹರಟೆ ಹೊಡೆಯುವ ಪ್ರಸಂಗಗಳಿಗೂ ಕೊರತೆಯಿಲ್ಲ. ಸದಸ್ಯರು ಕೇಳಬಹುದಾದ ಪ್ರಶ್ನೆಗಳಿಗೆ ತಕ್ಕ ಉತ್ತರವನ್ನೂ ಸಿದ್ಧತೆಮಾಡಿಕೊಂಡಿರುವುದಿಲ್ಲ. ಸದಸ್ಯರ ಪ್ರಶ್ನೆಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಉತ್ತರಿಸುವುದೂ ಇಲ್ಲ. ಹೀಗಾಗಿ ಅನೇಕ ಬಾರಿ ಸಚಿವರು ನಗೆಪಾಟಲಿಗೆ ಈಡಾಗುವ ಪ್ರಸಂಗಗಳೇ ಹೆಚ್ಚು . ಇನ್ನು ಕೆಲವು ಶಾಸಕರು, ಸಚಿವರಂತೂ ಕಲಾಪದ ಸಂದರ್ಭದಲ್ಲಿ ಆಕಳಿಸುತ್ತಲೋ, ತೂಕಡಿಸುತ್ತಲೋ ಕಾಲಹರಣ ಮಾಡುತ್ತಿರುತ್ತಾರೆ. ಈ ಕುರಿತು ದೃಶ್ಯ ಮಾಧ್ಯಮಗಳು ಪ್ರಸಾರಮಾಡಿದರೆ ಮಾತ್ರ ಸಿಟ್ಟಿಗೇಳುತ್ತಾರೆ. ತಮಗೆ ಮಾಧ್ಯಮಗಳು ಅನಾವಶ್ಯಕವಾಗಿ ಅವಮಾನ ಎಸಗುತ್ತಿವೆ ಎಂದು ದೂರುತ್ತಾರೆ. ಪ್ರಜೆಗಳು ಇಂಥವರನ್ನು ಚುನಾವಣೆಯಲ್ಲಿ ಆಯ್ಕೆಮಾಡಿ ಕಳುಹಿಸುವುದು ಸದನದಲ್ಲಿ ಆಕಳಿಸಲೆಂದೇ? ಅಥವಾ ತೂಕಡಿಸಲೆಂದೇ? ಆಕಳಿಸುವುದಕ್ಕೆ, ತೂಕಡಿಸುವುದಕ್ಕೆ ಸದನವೆನ್ನುವುದು ಮಲಗುವ ಖಾಸಗಿಕೋಣೆಯೇ?
ಜನರಿಂದ ಆಯ್ಕೆಯಾದ ಎಲ್ಲ ಸದಸ್ಯರ ವರ್ತನೆ ಇದೇ ರೀತಿ ಇರುತ್ತದೆ ಎಂಬುದು ಈ ಲೇಖನದ ನಿಷ್ಕರ್ಷೆಯಲ್ಲ. ಆದರೆ ಕೆಲವು ಸದಸ್ಯರ ಇಂತಹ ಅಸಡ್ಡಾಳ ವರ್ತನೆಯಿಂದಾಗಿ ಎಲ್ಲ ಜನಪ್ರತಿನಿಧಿಗಳೂ ಇಂಥವರೇ ಎಂಬ ತಪ್ಪುಸಂದೇಶ ಜನರಿಗೆ ರವಾನೆಯಾಗುವುದುಂಟು.
ಶಾಸಕರು, ಸಚಿವರೆಂದರೆ ಉಳಿದವರಿಗೆ ಮೇಲ್ಪಂಕ್ತಿಯಾಗಿರಬೇಕು, ರೋಲ್ಮಾಡೆಲ್ ಆಗಿರಬೇಕು ಎಂಬುದು ನಿರೀಕ್ಷೆ. ಆದರೆ ಸದನಕ್ಕೆ ಗೈರಾಗುವ, ಸದನದಲ್ಲಿ ಆಕಳಿಸುವ, ತೂಕಡಿಸುವ ಸದಸ್ಯರು ಮೇಲ್ಪಂಕ್ತಿಯಾಗುವುದು ಹೇಗೆ? ಶಂಕುಸ್ಥಾಪನೆ, ಉದ್ಘಾಟನೆ ಮುಂತಾದ ಸರ್ಕಾರಿ ಕಾರ್ಯಕ್ರಮಗಳಿಗೆ ಶಾಸಕರು, ಸಚಿವರು ಸಕಾಲದಲ್ಲಿ ಹಾಜರಾಗುವ ಪರಿಪಾಠವೇ ಇಲ್ಲ. ತಾಸುಗಟ್ಟಲೆ ಉಳಿದವರನ್ನು ಕಾಯುವಂತೆ ಮಾಡುತ್ತಾರೆ. ಆ ಕಾರ್ಯಕ್ರಮಕ್ಕೆ ಮಠಾಧೀಶರು, ಗಣ್ಯರು ಮೊದಲೇ ಆಗಮಿಸಿ ಸಚಿವರಿಗಾಗಿ ಕಾಯಬೇಕಾದ ದಯನೀಯ ಸ್ಥಿತಿಗೆ ಇಂಥವರೇ ಕಾರಣ. ಯಾವುದೇ ಕಾರ್ಯಕ್ರಮಕ್ಕೆ ಸಮಯಮೀರಿ ಹೋಗುವುದು ಅಪರಾಧ ಎಂದೆನಿಸಬೇಕು. ಬದಲಿಗೆ ಈಗ ಸಮಯಮೀರಿ, ಸಾಧ್ಯವಾದಷ್ಟು ವಿಳಂಬವಾಗಿ ಹೋಗುವುದೇ ತಮ್ಮ ಘನತೆಗೌರವದ ಸಂಕೇತ ಎಂದು ಕೆಲವು ಜನಪ್ರತಿನಿಧಿಗಳು ಭಾವಿಸಿದಂತಿದೆ. ಕೇಂದ್ರದಲ್ಲಿ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದಬಳಿಕ ಕನಿಷ್ಠ ಬಿಜೆಪಿಯಲ್ಲಾದರೂ ಈ ವಿಳಂಬ ನೀತಿಗೆ ಕಡಿವಾಣ ಬಿದ್ದಿರುವುದು ಒಂದು ಸಮಾಧಾನಕರ ಅಂಶ.
ಸದನ ಕಲಾಪಕ್ಕೆ ಗೈರುಹಾಜರಾಗುವ ಶಾಸಕರು, ಸಂಸದರು, ಸಚಿವರು ತಮ್ಮ ವೇತನ ಭತ್ಯೆಯನ್ನು ತಪ್ಪದೇ ಜೇಬಿಗಿಳಿಸಿಕೊಳ್ಳಲು ಮಾತ್ರ ಮರೆಯುವುದೇ ಇಲ್ಲ. ಗೈರುಹಾಜರಾಗುವ ಸದಸ್ಯರ ವೇತನವನ್ನು ಕಡಿತಗೊಳಿಸುವ ಯಾವುದೇ ಪ್ರಕ್ರಿಯೆಯಂತೂ ಇಲ್ಲ. ಕಚೇರಿಗೆ ಒಂದು ದಿನ ಹಾಜರಾಗದಿದ್ದರೆ, ಕಾರ್ಖಾನೆಗೆ ಒಂದು ದಿನ ಚಕ್ಕರ್ ಹಾಕಿದರೆ ಅಂತಹ ಉದ್ಯೋಗಿಗಳ ವೇತನವನ್ನು ಮುಲಾಜಿಲ್ಲದೆ ಆಡಳಿತ ವರ್ಗ ಕಡಿತಗೊಳಿಸುತ್ತದೆ. ಜನಪ್ರತಿನಿಧಿಗಳಿಗೆ ಮಾತ್ರ ಇಂತಹ ಯಾವುದೇ ಭಯವಿಲ್ಲ. ಇದು ನಮ್ಮ ಪ್ರಜಾಪ್ರಭುತ್ವದ ವಿಪರ್ಯಾಸ !
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.