ಧಾರವಾಡ: ಅವ್ಯಾಹತವಾಗಿ ನಡೆಯುತ್ತಿರುವ ಅರಣ್ಯ ನಾಶದಿಂದ ಜಗತ್ತಿನೆಲ್ಲೆಡೆ ನೀರಿನ ಅಭಾವ ಎದುರಾಗಿದೆ. ಮುಂಬರುವ ದಿನಗಳಲ್ಲಿ ಆಮ್ಲಜನಕದ ಕೊರತೆಯೂ ಎದುರಾಗಿ ಮನುಷ್ಯ ಸೇರಿದಂತೆ ಎಲ್ಲ ಪ್ರಾಣಿ ವರ್ಗಗಳು ಸಂಕಷ್ಟ ಎದುರಿಸುವ ಆತಂಕವಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ವಿ.ಶ್ರೀಶಾನಂದ ಕಳವಳ ವ್ಯಕ್ತಪಡಿಸಿದರು.
ಇಲ್ಲಿನ ಆಲೂರು ವೆಂಕಟರಾವ್ ಸಭಾಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಜಲದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದ ಕರಾವಳಿ ಪ್ರದೇಶದ ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಹಿಂದೆ ಶೇ.87 ರಷ್ಟು ಅರಣ್ಯಪ್ರದೇಶವಿತ್ತು. ಈಗ ಅದರ ಪ್ರಮಾಣದಲ್ಲಿ ಕುಸಿತವುಂಟಾಗಿದೆ. ಅರಣ್ಯ ಸಂಪತ್ತು ಕಾಪಾಡಿಕೊಳ್ಳುವದು ಪ್ರತಿಯೊಬ್ಬ ಪ್ರಜ್ಞಾವಂತರ ಕರ್ತವ್ಯವಾಗಿದೆ. ಕೇವಲ ಒಂದು ಬಿಂದಿಗೆ ನೀರಿಗಾಗಿ 1 ರಿಂದ 2 ಕಿ.ಮೀ.ದೂರ ಸಾಗಬೇಕಾದ ಪರಿಸ್ಥಿತಿ ಅನೇಕ ಕಡೆ ಉದ್ಭವವಾಗಿದೆ. ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ಐಷಾರಾಮಿ ಬದುಕಿನ ವ್ಯಾಮೋಹದಿಂದ ನೀರನ್ನು ವ್ಯರ್ಥವಾಗಿ ಖರ್ಚು ಮಾಡಬಾರದು, ನೀರಿನ ಮಿತ ಬಳಕೆ, ಮಳೆ ನೀರು ಕೊಯ್ಲು ರೂಢಿಸಿಕೊಳ್ಳಬೇಕು ಎಂದು ವಿ.ಶ್ರೀಶಾನಂದ ಹೇಳಿದರು.
ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಈಶ್ವರ ಅರಳಿ ವಿಶೇಷ ಉಪನ್ಯಾಸ ನೀಡಿದರು.
ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಮುಖ್ಯ ಅಭಿಯಂತರ ಎಸ್.ಬಿ.ಸಿದ್ದಾನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಸಿಇಒ ಸ್ನೇಹಲ್ ಆರ್,ಮಹಾನಗರ ಪಾಲಿಕೆ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ಹಿರಿಯ ಭೂವಿಜ್ಞಾನಿ ರಾಜಶೇಖರ ರೆಡ್ಡಿ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಬಿ.ಎಸ್.ಸಂಗಟಿ, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಎನ್.ಹೆಗಡೆ, ಹುಬ್ಬಳ್ಳಿ ಧಾರವಾಡ ನೀರು ಸರಬರಾಜು ಕಾರ್ಯಪಾಲಕ ಅಭಿಯಂತರರಾದ ವಿ.ಎಲ್.ಚಂದ್ರಪ್ಪ, ಎಸ್.ಕರಿಯಪ್ಪ ಇತರರು ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.