ಧಾರವಾಡ : ಹೋಳಿ ಹಬ್ಬ ಎಂದರೆ ಎಲ್ಲಿಲ್ಲದ ಸಂಭ್ರಮ. ವೈವಿಧ್ಯಮಯ ಬಣ್ಣಗಳೊಂದಿಗೆ ಆಟವಾಡುವುದು ಖುಷಿಯೋ ಖುಷಿ. ಪುರುಷರ ಹಬ್ಬ ಎಂದೇ ಹೆಸರಾಗಿದ್ದ ಇದು, ತನ್ನ ವರಸೆ ಬದಲಾಯಿಸಿಕೊಂಡಿದೆ. ಮಹಿಳೆಯರೂ ಇದರಲ್ಲಿ ಪಾಲ್ಗೊಳ್ಳುತ್ತಿದ್ದು ರಂಗಿನಾಟದಲ್ಲಿ ಸಮಾನತೆ ಸೃಷ್ಟಿಯಾಗಿದೆ. ಆದರೆ ಬಣ್ಣದ ಸಂಭ್ರಮದಲ್ಲಿ ಬದುಕು ಮಾಸದಿರಲಿ ಎನ್ನುವ ಸ್ಥಿತಿ ಈಗಿದೆ.
ಬೇಸಿಗೆ ಆರಂಭವಾಗಿ ನಗರ ಹಾಗೂ ಗ್ರಾಮೀಣ ಪ್ರದೇಶ ಧೂಳಿನಿಂದ ಕೂಡಿವೆ. ಒಂದೆಡೆ ಬಿಸಿಲಿನ ಹೊಡೆತಕ್ಕೆ ತತ್ತರಿಸಿದ್ದಾರೆ ಜನ. ಇನ್ನೊಂದೆಡೆ ಸಾಂಕ್ರಾಮಿಕ ರೋಗಗಳ ಗೋಳು ಬೇರೆ. ಇಂಥ ಸಂದರ್ಭದಲ್ಲೇ ಮಾರುಕಟ್ಟೆ ರಾಸಾಯನಿಕ ಬಣ್ಣಗಳು ಲಗ್ಗೆ ಇಟ್ಟಿವೆ.
ಬಿಸಿಲಿನ ತಾಪಮಾನ 36 ಡಿಗ್ರಿಯಿಂದ 40 ಡಿಗ್ರಿ ಸೆಲ್ಸಿಯಸ್ಗೆ ತಲುಪಿದೆ. ಇದರಿಂದ ಜನರಲ್ಲಿ ಅನೇಕ ಚರ್ಮರೋಗ, ಕಣ್ಣುರಿ, ಧೂಳಿನಿಂದ ಅಸ್ತಮಾ, ಕೆಮ್ಮು ಇತ್ಯಾದಿ ಸಾಂಕ್ರಾಮಿಕ ಕಾಯಿಲೆಗಳು ಎಗ್ಗಿಲ್ಲದೇ ಬರುತ್ತಿವೆ. ಪರಿಣಾಮ ರಾಸಾಯನಿಕ ಬಣ್ಣಗಳ ಬಳಕೆಯಿಂದ ರೋಗಗಳಿಗೆ ನಾವೇ ಆಹ್ವಾನ ನೀಡಿದಂತೆ ಆಗುತ್ತದೆ.
ಹರಡುವ ರೋಗಗಳು
ಹಸಿರು ಬಣ್ಣದಲ್ಲಿ ಕಾಪರ್ ಸಲ್ಪೇಟ್ ಇರುವ ಕಾರಣ ಜನರಲ್ಲಿ ಕಣ್ಣಿನ ತುರಿಕೆ, ಕಣ್ಣು ಕೆಂಪಾಗುವ ಕಾಯಿಲೆ ಹರಡಲಿದೆ. ಕೆಂಪು ಬಣ್ಣದಲ್ಲಿ ಮೆರ್ಕುರಿ ಸಲ್ಪೇಟ್ನಿಂದ ಹಚ್ಚಿದ ವ್ಯಕ್ತಿಗೆ ಚರ್ಮದ ಕ್ಯಾನ್ಸರ್ಗೆ ಆಹ್ವಾನ ನೀಡಿದಂತೆಯೇ ಸರಿ.
ಕಪ್ಪು ಬಣ್ಣಕ್ಕೆ ಸೀಸ್ (ಲೆಡ್ಆಕ್ಸೈಡ್) ಮಿಶ್ರಣ ಕಾರಣದಿಂದ ವ್ಯಕ್ತಿಗಳ ಮೂತ್ರ ಜನಕಾಂಗಕ್ಕೆ (ಕಿಡ್ನಿ) ತೊಂದರೆ, ನೇರಳೆ ಬಣ್ಣಕ್ಕೆ-ಕ್ರೋಮಿಯಮ್ ಅಯೋಡೈಡ್ ಬಳಸುವುದರಿಂದ ವ್ಯಕ್ತಿಗಳಲ್ಲಿ ಅಸ್ತಮಾ, ಸುನೇರಿ ಬಣ್ಣಕ್ಕೆ ಅಲ್ಯುನಿಯಂ ಬ್ರೋಮೈಡ್ ಮಿಕ್ಸ್ ಮಾಡುವುದರಿಂದ ಕಣ್ಣು-ಕಿವಿ, ಚರ್ಮದ ತುರಿಕೆ, ಅಪಾಯಕಾರಿ ಕಾಯಿಲೆ ಹರಡಲಿವೆ ಎನ್ನುತ್ತವೆ ವೈದ್ಯಕೀಯ ಮೂಲ.
ನೈಸರ್ಗಿಕ ಬಣ್ಣ ಬಳಸಿ
ಆರೋಗ್ಯಕ್ಕೆ ಮಾರಕವಾಗದಂತೆ ಹೋಳಿ ರಂಗಿನಾಟಕ್ಕೆ ಮನೆಯಲ್ಲಿ ಪರಿಸರಸ್ನೇಹಿ ಬಣ್ಣಗಳು ತಯಾರಿಸಬಹುದು. ಪಾಲಕ್ ಸೊಪ್ಪಿನ ರಸ ಹಾಗೂ ಪುದೀನಾ ಸೊಪ್ಪಿನ ರಸ ಬೆರೆಸಿದಾಗ ಹಸಿರು ಬಣ್ಣ ಉತ್ಪತ್ತಿ. ಇದರ ಬಳಕೆಯಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ. ಬದಲಿಗೆ ಮುಖಕ್ಕೆ ಹಚ್ಚಿದಾಗ ಮುಖದಲ್ಲಿನ ಮೊಡವೆ, ಕಪ್ಪು ಕಲೆಗಳು ಮಾಯ.
ಕೆಮ್ಮಣ್ಣು(ಕೆಂಪು-ಮಣ್ಣು), ನೀರಿನಲ್ಲಿ ಕರಗಿಸಿ ಅದಕ್ಕೆ ಬೀಟ್ರೂಟ್ ರಸವನ್ನು ಸೇರಿಸಿದಾಗ ನೈಸರ್ಗಿಕ ಕೆಂಪು ಬಣ್ಣ ಬರಲಿದೆ. ಇದ್ದಿಲು ನೀರಿನಲ್ಲಿ ತೇಯ್ದು ಪೈನಾಪಲ್ ಹಣ್ಣಿನ ರಸದ ಸೇರಿಸಿದಾಗ ಕಪ್ಪು ಬಣ್ಣ, ಅರಿಶಿಣ ಪುಡಿ ಅಥವಾ ಅಷ್ಠಗಂಧದ ಪುಡಿಗೆ ನೀರು ಬರೆಸಿದಾಗ ಹಳದಿ ಬಣ್ಣ ಉತ್ಪತ್ತಿ. ಇದರ ಬಳಕೆಯಿಂದಲೂ ಸಹ ಹೋಳಿ ಆಚರಿಸಬಹುದು.
ವರುಷಕೊಮ್ಮೆ ಬರುವ ಕಾಮಣ್ಣನ ಹಬ್ಬ ಎಲ್ಲರ ಬದುಕಲ್ಲಿ ಸಂಭ್ರಮದ ಬಣ್ಣ ತುಂಬಲಿ. ರಾಸಾಯನಿಕ ಮುಕ್ತ ಓಕುಳಿ ನಮ್ಮ ಧ್ಯೇಯವಾಗಲಿ. ಬಣ್ಣ ಬಳಸುವಾಗ ಮಕ್ಕಳು ಹೆಚ್ಚು ಜಾಗೃತಿ ಯಿಂದ ಇರುವಂತಾಗಲಿ.
-ಮಹಾಂತೇಶ ಕೆ.
ಆರೋಗ್ಯ ಇಲಾಖೆ, ಪರಿಸರ ಇಲಾಖೆ, ಖಾಸಗಿ ಸಂಘ-ಸಂಸ್ಥೆಗಳು, ವೈದ್ಯರು ನೈಸರ್ಗಿಕ ಬಣ್ಣ ಬಳಸುವ ಕುರಿತಂತೆ ಜನಜಾಗೃತಿ ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಆರೋಗ್ಯದ ಹಿತ ದೃಷ್ಟಿಯಿಂದ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದೆ.
-ಡಾ. ದೊಡ್ಡಮನಿ, ಜಿಲ್ಲಾ ಆರೋಗ್ಯಾಧಿಕಾರಿ
ಧಾರವಾಡ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.