ಪಾಟ್ನಾ: ಮಾ.11ರಿಂದ ಬಿಹಾರದ ಮುಜಾಫರ್ಪುರದ ರಸ್ತೆಗಳಲ್ಲಿ ೪೦ ಮಹಿಳೆಯರು ಆಟೋ ರಿಕ್ಷಾಗಳನ್ನು ಓಡಿಸಲಿದ್ದಾರೆ. ಈ ಮೂಲಕ ಹೊಸ ಅಧ್ಯಾಯವೊಂದಕ್ಕೆ ಮುನ್ನುಡಿ ಬರೆಯಲಿದ್ದಾರೆ. ಇದಕ್ಕೆಲ್ಲಾ ಕಾರಣ ಒರ್ವ ಮಹಿಳೆ, ಆಕೆಯ ಪರಿಶ್ರಮದಿಂದ ಹಲವು ಮಹಿಳೆಯರ ಬದುಕಿಗೆ ಸಾಂತ್ವನ ಸಿಕ್ಕಿದೆ.
ಬಿಹಾರದ ಮುಜಾಫರ್ಪುರದ ಸಾಂತ್ವನ ಭಾರ್ತಿ ಮಹಿಳಾ ಸಮುದಾಯಕ್ಕೆ ಹೊಸ ಆಶಾಕಿರಣವನ್ನು ಮೂಡಿಸಿದ ಸಾಮಾಜಿಕ ಕಾರ್ಯಕರ್ತೆ. ರಜೆಯಲ್ಲಿ ಪಶ್ಚಿಮಬಂಗಾಳದ ಮುರ್ಶಿದಾಬಾದ್ಗೆ ತೆರಳಿದ್ದ ಸಂದರ್ಭ ಅಲ್ಲಿ ಮಹಿಳೆಯರಿಂದಲೇ ಚಲಾಯಿಸಲ್ಪಡುತ್ತಿದ್ದ 40 ಪಿಂಕ್ ಆಟೋಗಳನ್ನು ಕಂಡು ಹೆಮ್ಮೆಪಟ್ಟಿದ್ದರು. ಮಾತ್ರವಲ್ಲ ಇದೇ ರೀತಿ ತಮ್ಮ ಊರಾದ ಮುಜಾಫರ್ಪುರದಲ್ಲೂ ಮಹಿಳೆಯರಿಂದ ಆಟೋ ಓಡಿಸಬೇಕೆಂಬ ಪಣತೊಟ್ಟರು.
ನೂತನ ಕನಸು, ಗುರಿಯನ್ನು ಹೊತ್ತು ಊರಿಗೆ ಬಂದ ಅವರು ತನ್ನ ಡ್ರೈವಿಂಗ್ ಕ್ಲಾಸ್ಗೆ 40 ಮಹಿಳೆಯರನ್ನು ಸೇರಿಸಿಕೊಂಡರು, ಅವರಿಗೆ ಆಟೋ ಓಡಿಸಲು ತರಬೇತಿ ನೀಡಿದರು.
ಈ ಮಹಿಳೆಯರು ಇದೀಗ ಆಟೋ ಓಡಿಸಲು ಸಂಪೂರ್ಣ ಸಿದ್ಧರಾಗಿದ್ದು, ಮಾ.11ರಿಂದ ರಸ್ತೆಗಿಳಿದು ಕಾರ್ಯ ಆರಂಭಿಸಲಿದ್ದಾರೆ. ಮೊದಲ ಹಂತವಾಗಿ ಆರು ಮಹಿಳೆಯರು ರಸ್ತೆಗಿಳಿಯಲಿದ್ದಾರೆ, ಉಳಿದವರು ಮುಂದಿನ ಹಂತದಲ್ಲಿ ಆಟೋ ಓಡಿಸಲಿದ್ದಾರೆ.
ಈ ಎಲ್ಲಾ 40 ಮಹಿಳೆಯರು ಬಡ ಕುಟುಂಬಗಳಿಂದ ಬಂದಿದ್ದು, ಹೆಚ್ಚಿನವರು ಸ್ಲಂ ನಿವಾಸಿಗಳು. ಇದೀಗ ಅವರಿಗೆ ಬದಕನ್ನು ಬದಲಾಯಿಸಲು ಹೊಸ ಅವಕಾಶವೊಂದು ದೊರೆತಿದೆ. ಅದನ್ನು ಅವರು ಸರಿಯಾಗಿಯೇ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇವರಂತೆ ಇನ್ನೂ ಅನೇಕ ಮಹಿಳೆಯರು ನಮಗೂ ಆಟೋ ಓಡಿಸಲು ತರಬೇತಿ ನೀಡುವಂತೆ ಸಾಂತ್ವನ ಅವರನ್ನು ದುಂಬಾಲು ಬೀಳುತ್ತಿದ್ದಾರೆ.
‘ಪುರುಷ ಪ್ರಧಾನ ಕಾರ್ಯವಾದ ಆಟೋ ರಿಕ್ಷಾ ಚಾಲನೆಯನ್ನು ಮಹಿಳೆಯರು ಪ್ರಾರಂಭಿಸುವುದು ಅಷ್ಟು ಸುಲಭದ ಕಾರ್ಯವಾಗಿರಲಿಲ್ಲ, ಸಾಕಷ್ಟು ಸವಾಲುಗಳನ್ನು ನಾನು ಎದುರಿಸಬೇಕಾಯಿತು. ಡ್ರೈವಿಂಗ್ ಲೈಸೆನ್ಸ್, ಆಟೋ ಖರೀದಿಸಲು ಬ್ಯಾಂಕ್ ಲೋನ್ ಪಡೆಯುವುದು, ಪುರುಷರ ಕೆಂಗಣ್ಣನ್ನು ಸಹಿಸುವುದು ಹೀಗೆ ಎಲ್ಲವನ್ನೂ ಸವಾಲಿನಂತೆ ಸ್ವೀಕರಿಸಬೇಕಾಯಿತು’ ಎನ್ನುವ ಸಾಂತ್ವನ ಭವಿಷ್ಯ ಬದಲಾವಣೆಗೆ ಕಷ್ಟಗಳನ್ನು ಎದುರಿಸಲೇಬೇಕು. ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಗರ್ವದಿಂದ ನುಡಿಯುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.