ಸತ್ಯ ದರ್ಶನ, ಶಾಂತಿಯ ಅನುಭವ ಬದುಕಿನ ಅತ್ಯಂತ ದೊಡ್ಡ ಸಾಧನಗಳು. ಜೀವನದಲ್ಲಿ ಸತ್ಯದ ದರ್ಶನ, ಶಾಂತಿ ಅನುಭವಿಸದಿದ್ದರೆ ಬದುಕು ಪೂರ್ಣ ಆಗಲ್ಲ. ಬದುಕು ಕಟ್ಟಿಕೊಳ್ಳಲು ಇವೆರಡನ್ನು ಸಾಧಿಸಲು ನಾವು ಈ ಭೂಮಿಗೆ ಬಂದಿದ್ದೇವೆ.
ನಮ್ಮ ಬದುಕಿಗೆ ಎಲ್ಲ ವಸ್ತುಗಳು ಬೇಕು. ಹಾಗಂತ ವಸ್ತುಗಳೇ ಬದುಕಲ್ಲ. ನಿಸರ್ಗ ನಮಗೆ ಗಾಳಿ, ಬೆಳಕು, ಅನ್ನ ಎಲ್ಲವನ್ನು ಕೊಟ್ಟಿದೆ. ಕರ್ಮಗಳಿಂದ, ಮಾತಿನಿಂದ ಬದುಕನ್ನ ಕಟ್ಟತೀವಿ. ಅದರ ಮೂಲಕ ಸತ್ಯ ದರ್ಶನ, ಶಾಂತಿಯ ಅನುಭವ ಪಡೆಯಬೇಕು.
ಅರಬ್ ದೇಶದಲ್ಲಿ ಒಂದು ಸಣ್ಣ ಬಳ್ಳಿ ಬೆಳೆಯುತ್ತಿತ್ತು. ಅದರ ಹೆಸರು ಕಾಕ್ಟಸ್. ಸುತ್ತಮುತ್ತ ಎಲ್ಲ ನೋಡಿದರೂ ಬರೀ ಉಸುಕು. ಅದರ ಮಧ್ಯೆ ಇದು ಬೆಳೆಯುತ್ತಿತ್ತು. ಅದರ ಮೈ ತುಂಬ ಮುಳ್ಳು ಇದ್ದವು, ಒರಟ ರೂಪ, ಅದಕ್ಕ ಯಾರು ನೀರು ಹಾಕಿಲ್ಲ, ಅದನ್ನು ರಕ್ಷಿಸಿಲ್ಲ. ಯಾಕ ಬೆಳೆಯೋದ, ಏನಾದ ನೀನಲ್ಲಿ ಅಂತ ಕೇಳಿದ್ರ ಅದು ಹೇಳಿತು. ಈ ಉಸುಕು ನಾಲ್ಕು ಹನಿ ಹಸಿ ಕೊಟ್ಟದ ಬದುಕುವುದಕ್ಕ. ಒಂದಲ್ಲ ಒಂದು ದಿವಸ ಒಂದ ಹೂವಾ, ಹಣ್ಣು ತಯಾರ ಮಾಡಬೇಕು ಅಂತು. ಅಲ್ಲಿ ಯಾವ ನದಿಯೂ ಹರಿಯಲ್ಲ, ಮಳೆ ಬಿಳಲ್ಲ, ವಿಪರೀತ ಬಿಸಿಲು, ವಿಪರೀತ ಚಳಿ. ಆದರೂ ಬದುಕನ್ನ ಕೊಡುವ ಕೆಲಸ ಮಾಡ್ತದ ಈ ನಿಸರ್ಗ. ಈ ಜಗತ್ತು ನಮಗ ಕಲಿಸುವ ಪಾಠ ಇದು.
ದೇವರು, ನಿಸರ್ಗ ದೇವತೆ ನಮಗ ಸುಂದರ ಕಾಲು, ಕಣ್ಣು, ಮಾತು ನೂರು ವರ್ಷದ ಭರವಸೆ, ಇನ್ನೇನು ಕೊಡೊದ ಅದಾ ಹೇಳಿ. ಬೆಳೆಯೋದು, ಬದುಕೋದು ಅದ. ಪರಮ ಸತ್ಯ, ಪರಮ ಶಾಂತಿ ಅನುಭವಿಸೋದ ಜೀವನ. ಕಾಕ್ಟ್ಸ್ನಿಂದ ನಾವೆಲ್ಲ ಕಲಿಯಬೇಕು. ಕವಿಗಳು, ಕಲಾವಿದರು ಹೂವು, ಬಳ್ಳಿ ಹಾಗೂ ಹಸಿರನ್ನ ವರ್ಣಿಸ್ತಾರ. ಆದರ ಅದರ ವರ್ಣನೆಯನ್ನು ಯಾರು ಮಾಡಲ್ಲ. ಅಂದ್ರು ಬೆಳಿತಾದ. ಹಂಗ ನಾವು ಬಡವರಲ್ಲ. ಏನೂ ಇಲ್ಲ ಅಂತ ಅನ್ಕೋಳ್ಳಿ. ಅಲ್ಲಿ ಎಲ್ಲ ಅದ. ನಗಲು ಅರಮನೆ ಆದರೂ ಏನು, ಗುಡಿಸಲು ಆದರೂ ಏನೂ. ಹಾಡುವುದಕ್ಕಾಗಿ ಏನೂ ಬೇಕಿಲ್ಲ. ಮನಸ್ಸು ನಲಿಯೋದ, ಮುಖದ ಮೇಲೆ ಪ್ರಸನ್ನತಾ, ಸಂತೋಷದ ಧ್ವನಿ, ಮಾಧುರ್ಯ. ಜೀವನದ ಸೌಂದರ್ಯ, ಸೊಬಗು ಹೆಚ್ಚಬೇಕಂದ್ರ ಮಾಧುರ್ಯ ಬೇಕು. ಒಂದು ಮೌನವಾದ ನಗು ಬೇಕು. ಜೀವನದಲ್ಲಿ ಇದು ಒಂದು ಸಾಕು.
ಜೀವನವನ್ನು ವಸ್ತುಗಳಿಂದ ಶೃಂಗರಿಸೋದ ಅಲ್ಲ. ಭಾವದಿಂದ ಶೃಂಗರಿಸೋದ. ಸಣ್ಣ ಮುಗುಳ್ನಗೆ ಬೇಕು. ನಗು ಇಲ್ಲದೆ ಇರಬಾರದು. ನಾವು ಹಾಡ್ತಾ ಇರಬೇಕು. ಅವನು ಕೇಳ್ತಾ ಇರಬೇಕು. ಜೀವನ ಸುಂದರ ಆಗಬೇಕಂದ್ರ ಇಲ್ಲದರ ಕಡೆ ಲಕ್ಷ್ಯ ಕೊಡಬಾರದು. ಆಗ ಸಂತ ಜೀವನ.
ವಿಜಯಪುರ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಪ್ರವಚನ 11-03-2017
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.