“ಆದಿಪೂಜ್ಯೋ ವಿನಾಯಕಃ”ಎಂಬುದು ನಿಯಮ. ಅಂದರೆ ಯಾವುದೇ ಕಾರ್ಯವನ್ನು ಪ್ರಾರಂಭಿಸುವಾಗ ಗಣೇಶನಿಗೆ ಅಗ್ರಪೂಜೆ ಸಲ್ಲಬೇಕು. ವಿಘ್ನನಿವಾರಕ ಗಣೇಶ. ಕಾರ್ಯದಲ್ಲಿ ಬಂದೊದಗುವ ಎಲ್ಲಾ ವಿಘ್ನಗಳನ್ನು ಆತ ನಿವಾರಿಸುತ್ತಾನೆ. ಆತನ ಅನುಗ್ರಹ ಸದಾ ನಮ್ಮ ಮೇಲಿರಲೆಂದು ಪ್ರಾರ್ಥಿಸೋಣ. ನನ್ನ ಇಷ್ಟದೈವವಾದ ಗಣೇಶನ ಪ್ರಾರ್ಥನೆಯೊಂದಿಗೆ ಸಂಸ್ಕೃತ ತರಗತಿಯನ್ನು ಪ್ರಾರಂಭಿಸುತ್ತಿದ್ದೇನೆ.
ಶ್ರೀ ಶಂಕರ ಭಗವತ್ಪಾದರಿಂದ ರಚಿಸಲ್ಪಟ್ಟ ಶ್ರೀ ಮಹಾಗಣೇಶಪಂಚರತ್ನ ಸ್ತೋತ್ರ ಬಹಳ ಪ್ರಸಿದ್ದವಾದದ್ದು ಹಾಗೂ ಸುಲಭವಾಗಿ ಕಲಿಯುವಂತದ್ದು. ಉಚ್ಚಾರಣೆಯನ್ನು ಅರಿಯಲು ಯೂಟ್ಯೂಬಿನಲ್ಲಿ ಏಕಾಗ್ರತೆಯಿಂದ ಈ ಸ್ತೋತ್ರವನ್ನು ಕೇಳಿ. ಆಮೇಲೆ ಈ ಎಲ್ಲಾ ಶ್ಲೋಕಗಳನ್ನು ಪಠಿಸಿ ಅಭ್ಯಾಸ ಮಾಡಿ. ಪ್ರತಿನಿತ್ಯ ಪಠಿಸಿದರೆ 15 ದಿನಗಳಲ್ಲಿ ಕಂಠಪಾಠವಾಗುತ್ತದೆ. ಈ ಸ್ತೋತ್ರದ ಅರ್ಥವನ್ನು ಕನ್ನಡದಲ್ಲಿ ತಿಳಿಸುವ ಪ್ರಯತ್ನ ಮಾಡಿದ್ದೇನೆ. ಅರ್ಥಸಹಿತವಾಗಿ ಸ್ತೋತ್ರವನ್ನು ಪಠಿಸಿದಾಗ ಅವ್ಯಕ್ತಾನಂದಭೂತಿ ಸಿಗುತ್ತದೆ.
ಶ್ರೀ ಮಹಾಗಣೇಶಪಂಚರತ್ನ ಸ್ತೋತ್ರಮ್
ಮುದಾಕರಾತ್ತ ಮೋದಕಂ ಸದಾ ವಿಮುಕ್ತಿ ಸಾಧಕಂ
ಕಲಾಧರಾವತಂಸಕಂ ವಿಲಾಸಿಲೋಕ ರಕ್ಷಕಂ |
ಅನಾಯಕೈಕ ನಾಯಕಂ ವಿನಾಶಿತೇಭದೈತ್ಯಕಂ
ನತಾಶುಭಾಶುನಾಶಕಂ ನಮಾಮಿ ತಂ ವಿನಾಯಕಂ || ೧ ||
(ಸಂತೋಷನಾಗಿರುವ ಗಣೇಶ , ಕೈಯಲ್ಲಿ ಮೋದಕವನ್ನು ಹಿಡಿದಿದ್ದಾನೆ..ಗಣೇಶನ ಸ್ಮರಣೆಯಿಂದ ಮನುಷ್ಯರಿಗೆ ಮುಕ್ತಿ ಸಿಗುತ್ತದೆ..ಚಂದ್ರನನ್ನು ಶಿರದಲ್ಲಿ ಧರಿಸಿರುವ ಗಣೇಶ ಈ ಲೋಕವನ್ನು ರಕ್ಷಿಸುವವನಾಗಿದ್ದಾನೆ..ನಾಯಕರಿಲ್ಲದೇ ಪರಿತಪಿಸುತ್ತಿರುವ ಜನರಿಗೆ ಗಣೇಶನೇ ನಾಯಕನಾಗಿದ್ದಾನೆ.ದುಷ್ಟಶಕ್ತಿಗಳನ್ನು ಸಂಹಾರ ಮಾಡುತ್ತಾನೆ ಹಾಗೂ ಭಕ್ತಿಯಿಂದ ಪ್ರಾರ್ಥಿಸುವವರಿಗೆ ಅವರ ಮನದಾಸೆಯನ್ನು ನೆರವೇರಿಸುತ್ತಾನೆ..ಅಂತಹ ಗಣೇಶನಿಗೆ ನಾನು ಭಕ್ತಿಯಿಂದ ನಮಸ್ಕರಿಸುತ್ತೇನೆ)
ನತೇತರಾತಿ ಭೀಕರಂ ನವೋದಿತಾರ್ಕ ಭಾಸ್ವರಂ
ನಮತ್ಸುರಾರಿನಿರ್ಜರಂ ನತಾಧಿಕಾಪದುದ್ಧರಮ್ |
ಸುರೇಶ್ವರಂ ನಿಧೀಶ್ವರಂ ಗಜೇಶ್ವರಂ ಗಣೇಶ್ವರಂ
ಮಹೇಶ್ವರಂ ತಮಾಶ್ರಯೇ ಪರಾತ್ಪರಂ ನಿರಂತರಂ || ೨ ||
(ಗಣೇಶ ಶತ್ರುಗಳಿಗೆ ಭಯಂಕರನಾಗಿದ್ದಾನೆ.. ಆಗಷ್ಟೇ ಉದಯಿಸಿದ ಸೂರ್ಯನಂತೇ ಪ್ರಕಾಶಿಸುತ್ತಿದ್ದಾನೆ. ಗಣೇಶನನ್ನು ಸದಾಕಾಲ ದೇವತೆಗಳು, ರಾಕ್ಷಸರು ಪೂಜಿಸುತ್ತಾರೆ. ಗಣೇಶ ತನ್ನ ಭಕ್ತರ ಕಷ್ಟಗಳನ್ನು ಸದಾ ದೂರ ಮಾಡುತ್ತಾನೆ. ಈತ ಎಲ್ಲಾ ದೇವರುಗಳಿಗೂ ದೇವ, ಎಲ್ಲಾ ಸಂಪತ್ತುಗಳಿಗೂ ಒಡೆಯ , ಎಲ್ಲಾ ಆನೆಗಳಿಗೂ ರಾಜ, ಶಿವನ ಗಣಗಳಿಗೆ ಈತನೇ ಯಜಮಾನ..ಗಣೇಶನನ್ನು ಯಾರು ನಿರಂತರವಾಗಿ ಆರಾಧಿಸುತ್ತಾರೋ ಅವರನ್ನು ಗಣೇಶ ಎಂದೆಂದಿಗೂ ಕಾಪಾಡುತ್ತಾನೆ.)
ಸಮಸ್ತ ಲೋಕ ಶಂಕರಂ ನಿರಸ್ತದೈತ್ಯ ಕುಂಜರಂ
ದರೇತರೋದರಂ ವರಂ ವರೇಭವಕ್ತ್ರಮಕ್ಷರಮ್ |
ಕೃಪಾಕರಂ ಕ್ಷಮಾಕರಂ ಮುದಾಕರಂ ಯಶಸ್ಕರಂ
ಮನಸ್ಕರಂ ನಮಸ್ಕೃತಾಂ ನಮಸ್ಕರೋಮಿ ಭಾಸ್ವರಂ || ೩ ||
(ನೀನು ಸಮಸ್ತ ಜಗತ್ತಿಗೆ ಒಳಿತನ್ನು ಮಾಡುತ್ತಿರುವೆ.ಗಜಮುಖಾಸುರನೆಂಬ ರಾಕ್ಷಸನನ್ನು ಸಂಹಾರ ಮಾಡಿರುವೆ. ದೊಡ್ಡದಾದ ದಂತವನ್ನು ಹೊಂದಿರುವೆ. ಆನೆಯ ಮುಖವನ್ನು ಹೊಂದಿರುವೆ. ದಯಾವಂತ , ಕ್ಷಮಾವಂತ , ಆನಂದವನ್ನು ಕರುಣಿಸುವವ , ಯಶಸ್ಸನ್ನು ನೀಡುವವ, ಮನಸ್ಸಿನ ಒಡೆಯ , ಸೂರ್ಯನಂತೇ ಪ್ರಕಾಶಿಸುತ್ತಿರುವ ವಿನಾಯಕ. ನಿನಗಿದೋ ನನ್ನ ನಮಸ್ಕಾರ)
ಅಕಿಂಚನಾರ್ತಿಮಾರ್ಜನಂ ಚಿರಂತನೋಕ್ತಿ ಭಾಜನಂ
ಪುರಾರಿಪೂರ್ವ ನಂದನಂ ಸುರಾರಿಗರ್ವ ಚರ್ವಣಂ |
ಪ್ರಪಂಚ ನಾಶ ಭೀಷಣಂ ಧನಂಜಯಾದಿ ಭೂಷಣಂ
ಕಪೋಲದಾನ ವಾರಣಂ ಭಜೇ ಪುರಾಣ ವಾರಣಂ || ೪ ||
(ದುರಾಸೆಗಳನ್ನು ನಾಶಪಡಿಸುವವನೇ, ಚಿರಕಾಲದಿಂದಲೂ ಭಕ್ತರಿಂದ ಪೂಜಿಸಲ್ಪಡುತ್ತಿರುವವನೇ, ನಗರಗಳನ್ನೇ ನಾಶಪಡಿಸುವ ದೇವನ(ಶಿವ) ಮೊದಲಸುತನೇ, ದೇವತೆಗಳ ದುರಹಂಕಾರವನ್ನು ನಾಶಪಡಿಸುವವನೇ, ಪ್ರಪಂಚವನ್ನೇ ನಾಶಪಡಿಸುವಷ್ಟು ಭಯಂಕರನಾಗಿರುವವನೇ, ಧನಂಜಯನೆಂಬ ಸರ್ಪವನ್ನು ಧರಿಸಿಕೊಂಡಿರುವವನೇ , ಆದಿದೇವ ಗಣೇಶನೇ ನಿನಗೆ ನಮಸ್ಕಾರಗಳು)
ನಿತಾಂತಕಾಂತ ದಂತಕಾಂತಿ ಮಂತಕಾಂತಕಾತ್ಮಜಂ
ಅಚಿಂತ್ಯ ರೂಪಮಂತಹೀನ ಮಂತರಾಯ ಕೃಂತನಮ್ |
ಹೃದಂತರೇ ನಿರಂತರಂ ವಸಂತಮೇವ ಯೋಗಿನಾಂ
ತಮೇಕದಂತಮೇವ ತಮ್ ವಿಚಿಂತಯಾಮಿ ಸಂತತಂ || ೫ ||
(ಏಕದಂತನನ್ನು ನಾನು ಯಾವಾಗಲೂ ಪ್ರಾರ್ಥಿಸುತ್ತೇನೆ. ಆತ ಮೃತ್ಯುದೇವತೆಯನ್ನೇ ಸೋಲಿಸಿದವನ ಸುತ, ರೂಪಾತೀತ, ಅನಂತ, ಎಲ್ಲಾ ಕಷ್ಟಗಳನ್ನು ಪರಿಹರಿಸುವವ, ಹೇಗೆ ಎಲ್ಲಾ ಋತುಗಳಲ್ಲಿ ವಸಂತ ಶ್ರೇಷ್ಟವೋ ಹಾಗೇ ಗಣೇಶ ಯಾವಾಗಲೂ ಯೋಗಿಗಳ ಹೃದಯದಲ್ಲಿ ನೆಲೆಸುವವ. ಅಂತಹ ಏಕದಂತನಿಗೆ ನನ್ನ ನಮಸ್ಕಾರಗಳು)
ಫಲಶ್ರುತಿ
ಮಹಾಗಣೇಶಪಂಚರತ್ನಮಾದರೇಣ ಯೋSನ್ವಹಂ
ಪ್ರಜಲ್ಪತಿ ಪ್ರಭಾತಕೇ ಹೃದಿಸ್ಮರನ್ ಗಣೇಶ್ವರಂ |
ಆರೋಗತಾಮದೋಷತಾಂ ಸುಸಾಹಿತೀಂ ಸುಪುತ್ರತಾಂ
ಸಮಾಹಿತಾಯುರಷ್ಟಭೂತಿಮಭ್ಯುಪೈತಿ ಸೋSಚಿರಾತ್ || ೬ ||
(ರತ್ನಸದೃಶವಾದ ಗಣೇಶನ ಈ ಐದು ಶ್ಲೋಕಗಳನ್ನು ಯಾರು ಪ್ರತಿನಿತ್ಯ ಬೆಳಿಗ್ಗೆ ಓದುತ್ತಾರೋ, ಯಾರು ಸದಾ ಮನಸ್ಸಿನಲ್ಲಿ ಗಣೇಶನನ್ನು ಸ್ಮರಿಸುತ್ತಾರೋ, ಅವರಿಗೆ ಗಣೇಶ ಆರೋಗ್ಯ, ಸಂತೋಷ, ಶಾಂತಿ, ಒಳ್ಳೆಯ ಸಂತತಿ, ದೀರ್ಘಾಯುಷ್ಯ, ಆಧ್ಯಾತ್ಮಿಕ ಹಾಗೂ ಐಹಿಕ ಸಂಪತ್ತನ್ನು ಕರುಣಿಸುತ್ತಾನೆ)
|| ಇತಿ ಶ್ರೀ ಶಂಕರ ಭಗವತ್ಪಾದ ವಿರಚಿತ ಶ್ರೀ ಮಹಾಗಣೇಶಪಂಚರತ್ನಸ್ತೋತ್ರಂ ಸಂಪೂರ್ಣಂ ||
ವಿಘ್ನನಿವಾರಕನ ಪ್ರಾರ್ಥನೆಯ ನಂತರ ವಿದ್ಯಾಧಿದೇವತೆ ಸರಸ್ವತಿಯಲ್ಲಿ ನಿವೇದನೆ..
“ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ |
ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ ||”
ಸರಸ್ವತಿ = ಹೇ ಸರಸ್ವತಿ ದೇವಿ !
ತುಭ್ಯಂ = ನಿನಗೆ
ನಮಃ = ನಮಸ್ಕಾರಗಳು
ವರದೇ = ನೀನು ವರವನ್ನು ಕೊಡುವವಳು
ಕಾಮರೂಪಿಣಿ = ಬೇಡಿದ್ದನ್ನು ನೀಡುವವಳು
ವಿದ್ಯಾರಂಭಂ = ವಿದ್ಯೆಯ ಆರಂಭವನ್ನು
ಕರಿಷ್ಯಾಮಿ = ಮಾಡುವವನಿದ್ದೇನೆ
ಮೇ = ನನಗೆ
ಸದಾ = ಯಾವಾಗಲೂ
ಸಿದ್ಧಿಃ = ಸಿದ್ಧಿ (ಕಾರ್ಯದಲ್ಲಿ ಗೆಲುವು)
ಭವತು = ಆಗಲಿ
ಇಂದಿನ ಸುಭಾಷಿತ
“अतिरूपाद् हृता सीताऽतिगर्वाद्रावणो हतः ।
अतिदानाद् बलिर्बद्धः अति सर्वत्र वर्जयेत् ॥”
“ಅತಿರೂಪಾತ್ ಹೃತಾ ಸೀತಾ ಅತಿಗರ್ವಾತ್ ರಾವಣೋ ಹತಃ |
ಅತಿದಾನಾತ್ ಬಲಿರ್ಬದ್ಧಃ ಅತಿ ಸರ್ವತ್ರ ವರ್ಜಯೇತ್ ||”
ಭಾವಾರ್ಥ : ಸೀತೆಯ ಅತಿಯಾದ ಸೌಂದರ್ಯ,ಆಕೆಯನ್ನು ಅಪಹರಿಸಿತು. ಅತಿಯಾದ ಗರ್ವದಿಂದ ರಾವಣ ಹತನಾದ. ಅತಿಯಾದ ದಾನದಿಂದ ಬಲಿರಾಜ ಪತನ ಹೊಂದಿದ. ಹಾಗಾಗಿ “ಅತಿ” ಅಂದರೆ ಹೆಚ್ಚು ಅಥವಾ ಅಧಿಕ. ನಾವು ಯಾವುದೇ ವಿಷಯ ಅಥವಾ ವಸ್ತುವಿನಲ್ಲಿ ಅಧಿಕ ಮೋಹ ಹಾಗೂ ಆಸೆಯನ್ನು ತ್ಯಜಿಸಬೇಕೆಂದು ಈ ಸುಭಾಷಿತ ತಿಳಿಸುತ್ತದೆ.
“ಅತಿಯಾದರೆ ಅಮೃತವೂ ವಿಷ” ಎಂಬ ಗಾದೆಮಾತನ್ನು ನಾವು ಸ್ಮರಿಸಿಕೊಳ್ಳಬಹುದು.
ಪುನಃ ಮಿಲಾಮಃ
“ಶುಭಂ ಭೂಯಾತ್”
ಲೇಖಕರ ಪರಿಚಯ :
ಸಂಸ್ಕೃತದಲ್ಲಿ ಪಡೆದದ್ದು ಸ್ನಾತಕೋತ್ತರ ಪದವಿ. ಬೆಂಗಳೂರಿನ ಒಂದು ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕ. ಬಿಡುವಿನ ವೇಳೆಯಲ್ಲಿ ಸಂಸ್ಕೃತ ಹಾಗೂ ಸಂಸ್ಕೃತಿಯ ಪ್ರಸಾರದ ಕಾಯಕ. ಹಲವಾರು ದೇಶಿ ಹಾಗೂ ವಿದೇಶಿ ವಿದ್ಯಾರ್ಥಿಗಳಿಗೆ ಸಂಸ್ಕೃತವನ್ನು ಕಲಿಸಿದ್ದೇನೆ. ಸಂಸ್ಕೃತ ಆನ್ಲೈನ್ ಕ್ಲಾಸುಗಳನ್ನು ನಡೆಸುತ್ತಿದ್ದೇನೆ. ಆಸಕ್ತರಿಗೆ ಸಂಸ್ಕೃತಸ್ತೋತ್ರ-ಭಗವದ್ಗೀತೆ, ಪೂಜಾಮಂತ್ರ, ಸಂಧ್ಯಾವಂದನೆ ಮುಂತಾದವುಗಳನ್ನು ಕಲಿಸುತ್ತಿದ್ದೇನೆ. ಸಂಸ್ಕೃತಭಾಷೆಯಲ್ಲಿರುವ ವಿಷಯಗಳನ್ನು ಜನಸಾಮಾನ್ಯರಿಗೆ ಸರಳವಾಗಿ ತಿಳಿಸಲು ಹಲವಾರು ಲೇಖನಗಳನ್ನು ಬರೆದಿದ್ದೇನೆ. ಸುರಭಾರತಿ ಪುನಃ ಸುಪ್ರತಿಷ್ಠಳಾಗಬೇಕೆಂಬುದೇ ನನ್ನ ಬಯಕೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :pradeepkasage@gmail.com
ಮೊಬೈಲ್ ನಂಬರ್ : 8050664384
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.