ಗದಗ ಜಿಲ್ಲೆ ನರಗುಂದ ತಾಲ್ಲೂಕಿನ ಶಿರೋಳ ಗ್ರಾಮದ ಬಸವರಾಜ ಅವರು ಈಗ ವಿಯೆಟ್ನಾಂನಲ್ಲಿ ಯೋಗ ಶಿಕ್ಷಕ
ಅಯ್ಯೋ ನಾನು ಜಾಗಿಂಗ್ ಹೋಗ್ಬೇಕು, ವಾಕಿಂಗ್ ಹೋಗ್ಬೇಕು ಎಂದು ಕೆಲವರು ಮುಂಜಾನೆದ್ದು ತಡಬಡಾಯಿಸಿದರೆ, ಇನ್ನು ಕೆಲವರು, ನಾನು ಯೋಗ, ಪ್ರಾಣಾಯಾಮ ಮಾಡ್ಬೇಕು ಎನ್ನುತ್ತಾರೆ. ಬೆಳಗಾಗುವುದರೊಳಗೆ ಚಪ್ಪಾಳೆ ಹೊಡೆಯುತ್ತ ಪಾರ್ಕ್ಗಳಲ್ಲಿ ನಗುವ ಹಿರಿಯರಿಗೇನೂ ಕೊರತೆ ಇಲ್ಲ. ಇವರೆಲ್ಲರ ಸಮಸ್ಯೆಗಳೂ ಬಹುಶಃ ಒಂದೆ.
ಬಿಪಿ, ಶುಗರ್, ಮಂಡಿ ನೋವು, ಬೆನ್ನು ನೋವು, ಮಾನಸಿಕ ಒತ್ತಡ ಹೀಗೆ ಅವುಗಳ ಸುತ್ತಲೇ ಗಿರಕಿ ಹೊಡೆಯುತ್ತವೆ. ಆದರೆ, ರೋಗಗಳಿಗೆ ಆಶ್ರಯವಿತ್ತ ಮೇಲೆ, ಜಾಗಿಂಗ್, ವಾಕಿಂಗ್, ಯೋಗಾ, ಪ್ರಾಣಾಯಾಮ, ಹಾಸ್ಯಕ್ಲಬ್ಗಳಿಗೆ ಸದಸ್ಯರಾಗುವುದು. ಹೀಗೇ ಮನುಷ್ಯ ಏನೆಲ್ಲ ಸರ್ಕಸ್ ಮಾಡುತ್ತಾನೆ. ಇಲ್ಲಿ ಗಂಭೀರವಾಗಿ ಗಮನಿಸಬೇಕಾದ ಸಂಗತಿ ಎಂದರೆ, ರೋಗ ಬಂದ ಮೇಲೆ ಯೋಗಕ್ಕೆ ಮೊರೆ ಹೋದರೆ ಪರಿಹಾರ ಅಷ್ಟಕಷ್ಟೆ ಎಂಬುದು.
ಇದು ನನ್ನ ಮಾತಲ್ಲ, ಯೋಗದಲ್ಲಿ ವಿಶಿಷ್ಟ ಸಾಧನೆಗೈದು, ಇದೀಗ ವಿದೇಶಿಯರಿಗೂ ಯೋಗಗುರು ಆಗಿರುವ ಬಸವರಾಜ ಕೊಣ್ಣೂರು ಅವರ ಅಭಿಪ್ರಾಯ. ಹೌದು. ಗದಗ ಜಿಲ್ಲೆ, ನರಗುಂದ ತಾಲ್ಲೂಕಿನ ಶಿರೋಳ ಗ್ರಾಮದ ಬಸವರಾಜ ಕೊಣ್ಣೂರು ಯೋಗ ಸಾಧಕರಲ್ಲಿ ಪ್ರಮುಖರು. ತಮ್ಮ 11ನೇ ವಯಸ್ಸಿನಲ್ಲಿಯೇ ಯೋಗದ ಗುಂಗು ಹಿಡಿಸಿಕೊಂಡ ಇವರು, ತಮ್ಮ ದೊಡ್ಡಪ್ಪನ ಮಗ ಅಣ್ಣನ ಜೊತೆ, ಯೋಗ ಕ್ಲಾಸ್ಗೂ ಹೋಗುವುದನ್ನು ರೂಢಿ ಮಾಡಿಕೊಂಡವರು.
ಕಳೆದೆರಡು ದಶಕಗಳಿಂದ ಯೋಗ ಅಭ್ಯಾಸದಲ್ಲಿ ತೊಡಗಿರುವ ಅವರು, ಗುರುಬಸವ ಜನಕಲ್ಯಾಣ ಸಂಸ್ಥೆಯ ಶ್ರೀ ಹಂಪಸಾಗರ ಪರ್ವತ ಮರಿದೇವರ ಮೆಮೋರಿಯಲ್ ಯೋಗಾ, ವ್ಯಾಯಾಮ ಮತ್ತು ಕ್ರೀಡಾ ಸಂಘದಲ್ಲಿ 6 ವರ್ಷ ಯೋಗ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಅನೇಕ ಯೋಗ ಕ್ಯಾಂಪ್ಸ್ಗಳನ್ನು ಉಚಿತವಾಗಿ ಸಂಘಟಿಸಿರುವ ಹಿರಿಮೆ ಅವರದು.
ಶೈಕ್ಷಣಿಕವಾಗಿಯೂ ಅವರು ಯೋಗದ ಹಾದಿಯನ್ನೇ ಹಿಡಿದಿದ್ದು ವಿಶೇಷ. ಕರ್ನಾಟಕ ವಿಶ್ವವಿದ್ಯಾಲಯದ, ಎಸ್.ಕೆ.ವಿ.ಪಿ ಮಹಾವಿದ್ಯಾಲಯ, ಹೊಳೆ ಆಲೂರಿನಲ್ಲಿ ಬಿಎ (ಇತಿಹಾಸ) ಪದವಿ. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಯೋಗ ಸರ್ಟಿಫಿಕೆಟ್ ಕೋರ್ಸ್, ಚೆನ್ನೈನ ಇಂಡಿಯನ್ ಸ್ಕೂಲ್ ಆಫ್ ಯೋಗದಲ್ಲಿ ಡಿಪ್ಲೊಮಾ ಇನ್ ಯೋಗ ಥೆರಪಿ ಅಧ್ಯಯನ ಮಾಡಿದ್ದು ವಿಶೇಷ. ಯೋಗದಲ್ಲಿ ಮಾತ್ರವಲ್ಲದೇ, ಅಥ್ಲೆಟಿಕ್ಸ್ ಮತ್ತು ಕಬಡ್ಡಿಯಲ್ಲಿಯೂ ಅನೇಕ ಬಹುಮಾನ ಪಡೆದಿರುವುದು ಇವರ ಕ್ರೀಡಾ ಪ್ರತಿಭೆಗೆ ಸಾಕ್ಷಿ.
ಪ್ರಶಸ್ತಿ ಪುರಸ್ಕಾರ
ಯೋಗ ಕಿಶೋರ, ಯೋಗ ಅರ್ಜುನ, ಯೋಗ ಚಾಂಪಿಯನ್, ಯೋಗ ಆಚಾರ್ಯ ಪುರಸ್ಕಾರಗಳು ಇವರ ಸಾಧನೆಗೆ ಕಿರೀಟ ತೊಡಿಸಿವೆ. ಜಿಲ್ಲಾ ಮತ್ತು ರಾಜ್ಯ ಮಟ್ಟವಲ್ಲದೇ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗಳಲ್ಲಿಯೂ ಪ್ರಥಮ ಸ್ಥಾನ ಗಳಿಸಿದ್ದು ನಾಡಿನ ಹಿರಿಮೆಯನ್ನು ಹೆಚ್ಚಿಸುವಲ್ಲಿ ಕಾರಣರಾಗಿದ್ದಾರೆ.
ಮೈಸೂರು, ಥೈಲ್ಯಾಂಡ್, ಪಾಂಡಿಚೇರಿಯಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ದ್ವಿತೀಯ ಸ್ಥಾನ, ಹಾಗೂ ಹರ್ಯಾಣ, ಜಾರ್ಖಂಡ್, ಗೋವಾ, ಚೆನ್ನೈ, ಕರ್ನಾಟಕದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಸಾಧನೆ. ಹಾಗೆಯೇ ಗದಗ, ಬೆಳಗಾವಿ, ಹುಬ್ಬಳ್ಳಿ, ಮೈಸೂರು, ಹೊಳೆ ಆಲೂರು, ಮುನವಳ್ಳಿ, ಬೆಂಗಳೂರು, ಬಳ್ಳಾರಿ, ನರಗುಂದ, ರೋಣ, ಶಿರೋಳ ಹಾಗೂ ಗದಗಿನಲ್ಲಿ ಜರುಗಿದ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿಯೂ ಉತ್ತಮ ಸ್ಥಾನ ಪಡೆದಿರುವುದು ಅವರ ಸತತ ಪರಿಶ್ರಮಕ್ಕೆ ಸಾಕ್ಷಿ.
ಹೀಗೆ ತಮ್ಮ ಸಾಧನೆಯ ದಾರಿಯನ್ನು ಮೆಲಕು ಹಾಕಿದ ಬಸವರಾಜ ತಿಪ್ಪಣ್ಣ ಕೊಣ್ಣೂರು ನನಗೆ ಮಾತಿಗೆ ಸಿಕ್ಕಿದ್ದು ದೂರವಾಣಿಯಲ್ಲಿ. ಯೋಗದ ಲಾಭವನ್ನು ತಿಳಿಸಿದ ಅವರು, ನಮ್ಮ ನಡೆ, ನುಡಿ, ಹಾವ ಭಾವ, ಪರರೊಂದಿಗೆ ವರ್ತಿಸಬೇಕಾದ ರೀತಿ, ನೀತಿಗಳನ್ನು ಸದ್ದಿಲ್ಲದೇ ತಿದ್ದುವುದು ಯೋಗ. ಮಾಂಸಾಹಾರ, ದುಶ್ಚಟಗಳಿಂದ ವ್ಯಕ್ತಿಯನ್ನು ದೂರವಿರಿಸುವಲ್ಲಿಯೂ ಇದು ಬಹುಮುಖ್ಯ ಪಾತ್ರವಹಿಸುತ್ತದೆ ಎನ್ನುತ್ತಾರೆ.
ಯೋಗದಿಂದ ರೋಗ ದೂರ ಎಂಬ ಮಾತು ನೂರಕ್ಕೆ ನೂರು ಸತ್ಯ. ಆದರೆ ರೋಗ ಬಂದ ಮೇಲೆ ಯೋಗ ಮಾಡುವುದಕ್ಕಿಂತ, ಯೋಗವನ್ನು ನಮ್ಮ ದಿನಚರಿಯನ್ನಾಗಿ ಮಾಡಿಕೊಂಡರೆ, ರೋಗದಿಂದ ದೂರವಿರಬಹುದು ಎಂದು ಮಾರ್ಮಿಕವಾಗಿ ಹೇಳುತ್ತಾರೆ ಬಸವರಾಜ. ಯೋಗವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಬೇಕು, ಅದು ತಪಸ್ಸಿಗೆ ಸಮ. ಶ್ರದ್ಧೆ ಅವಶ್ಯ.
ಕೇವಲ ಸರ್ಟಿಫಿಕೇಟ್ ಕೋರ್ಸ್ಗಳನ್ನು ಮಾಡಿ, ಯೋಗ ಶಿಕ್ಷಕರೋ ಅಥವಾ ಯೋಗ ತರಬೇತಿ ಕೇಂದ್ರಗಳನ್ನು ತೆಗೆಯುವುದರಿಂದ ವ್ಯವಹಾರಿಕವಾಗಿ ಯಶಸ್ಸು ಸಾಧಿಸಬಹುದೇನೋ, ಆದರೆ ಆರೋಗ್ಯದ ದೃಷ್ಟಿಯಿಂದ ಕಷ್ಟಸಾಧ್ಯ. ಈ ಕುರಿತು ಜನರಲ್ಲಿಯೂ ಪ್ರಜ್ಞೆ ಇರಬೇಕು ಎಂಬುದು ಬಸವರಾಜ ಅವರ ಅಭಿಪ್ರಾಯ.
ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಅವರು, ಸದ್ಯ ವಿಯೆಟ್ನಾಂನಲ್ಲಿ ಯೋಗ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮೊಡನೆ ತಮ್ಮ 8 ಜನ ಶಿಷ್ಯರನ್ನು ಕರೆದುಕೊಂಡು ಹೋಗಿದ್ದಾರೆ. ಇದೊಂದು ರೀತಿ ಪ್ರತಿಭಾ ಪಲಾಯನ ಎಂದೆನಿಸಿ ಈ ಕುರಿತು ಪ್ರಶ್ನಿಸಿದಾಗ..
ನೀವು ಹೇಳಿದ್ದು ಸತ್ಯ. ನಾನು ವಿಯೆಟ್ನಾಂಗೆ ಬಂದು 5 ವರ್ಷಗಳಾದವು. ಆದರೆ ನಮಗೆ ದೇಶದಲ್ಲಿ 5 ವರ್ಷಗಳ ಹಿಂದೆ ಸೂಕ್ತ ಮಾನ್ಯತೆ ಇರಲಿಲ್ಲ. ಅದರ ಜಾಗೃತಿಯೂ ಜನ ಸಾಮಾನ್ಯರಲ್ಲಿ ಕಡಿಮೆ ಇತ್ತು ಎಂದೇ ಹೇಳಬಹುದು. ಆದರೆ, ಇದೀಗ ಆಡಳಿತಾರೂಢ ಕೇಂದ್ರ ಸರ್ಕಾರ ವಿಶ್ವ ಯೋಗ ದಿನ ಆಚರಿಸುವ ಮೂಲಕ ಯೋಗದ ಮಹತ್ವ ಎತ್ತಿ ಹಿಡಿದಿದ್ದು ಸ್ವಾಗತಾರ್ಹ ಎಂದರು.
ವಿದೇಶದಲ್ಲಿ ಯೋಗದ ಕುರಿತು ಇರುವ ಒಲವಿನ ಕುರಿತು ತಿಳಿಸಿದ ಅವರು, ಇಲ್ಲಿ ಭಾರತದಂತೆ ಯೋಗವನ್ನು ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ನೋಡುವ ಪರಿಪಾಠವಿಲ್ಲ. ಕೇವಲ ಆರೋಗ್ಯದ ಹಿತದೃಷ್ಟಿಯಿಂದ ಯೋಗ ಇಲ್ಲಿಯವರಿಗೆ ಬೇಕಿದೆ. ಅವರು ತಮ್ಮ ಆರೋಗ್ಯಕ್ಕಾಗಿ ಸಾಕಷ್ಟು ಹಣ ಖರ್ಚೂ ಮಾಡುತ್ತಾರೆ ಎಂಬುದು ಅವರ ಅಂಬೋಣ.
ಏನೇ ಆಗಲಿ, ಮರಳಿ ಭಾರತಕ್ಕೆ ಬರುವ ಚಿಂತನೆ ಖಂಡಿತಾ ಇದೆ. ಹುಬ್ಬಳ್ಳಿ, ಬೆಂಗಳೂರು ಇತ್ಯಾದಿ ಸ್ಥಳಗಳಲ್ಲಿ ಯೋಗ ಕೇಂದ್ರಗಳನ್ನು ಸ್ಥಾಪಿಸಿ, ಶಾಸ್ತ್ರೀಯವಾಗಿ ಯೋಗ ಕಲಿಸುವ, ಯೋಗದ ಕುರಿತು ಸಾಮಾಜಿಕ ಜಾಗೃತಿ ಮೂಡಿಸುವ ಧ್ಯೇಯವಿದೆ. ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ ಎನ್ನುವ ಅವರು, ಯೋಗ ಭಾರತೀಯ ಪರಂಪರೆಯ ವೈಶಿಷ್ಟ್ಯ. ಇದು ನಿಜಕ್ಕೂ ಬದುಕಿನ ಉದ್ಧಾರಕ್ಕೆ ಅತೀ ಅವಶ್ಯ. ಭಾರತ ನಿಜಕ್ಕೂ ವಿಶ್ವಕ್ಕೇ ಯೋಗ ಗುರು ಎಂದು ಹೆಮ್ಮೆಯಿಂದ ಹೇಳಿ ಮಾತಿಗೆ ವಿರಾಮ ನೀಡಿದರು.
ಧರ್ಮ ನಿರಪೇಕ್ಷವಾಗಿದ್ದು ಯೋಗ. ಅದೊಂದು ತಪಸ್ಸು. ಶ್ರದ್ಧೆಯಿಂದ ಮಾಡಿದಲ್ಲಿ ಆರೋಗ್ಯ ಪೂರ್ಣ ಜೀವನ ನಡೆಸಲು ಸಾಧ್ಯ. ಯೋಗ ನಮ್ಮೆಲ್ಲರ ದಿನಚರಿಯಾಗಲಿ.
ಬಸವರಾಜ ಕೊಣ್ಣೂರು, ಯೋಗ ಶಿಕ್ಷಕ, ವಿಯೆಟ್ನಾಂ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.