ಜಗತ್ತಿನ ಭೂಸ್ವರ್ಗವೆಂದೇ ಬಿಂಬಿತವಾಗಿರುವ ಅಮೆರಿಕವೀಗ ಅಲ್ಲಿರುವ ವಲಸಿಗರ ಪಾಲಿಗೆ ದುಃಸ್ವಪ್ನವೆನಿಸತೊಡಗಿದ್ದು ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾದ ಬಳಿಕ. ಬಿಳಿಯರು ಹಾಗೂ ಬಿಳಿಯರಲ್ಲದವರು ಎಂದು ಭೇದ ಸೃಷ್ಟಿಸಿ, ಬಿಳಿಯರಲ್ಲದವರ ಮೇಲೆ ಜನಾಂಗೀಯ ಹಲ್ಲೆ ನಡೆಸುವ ಹೀನಕಾರ್ಯ ಶುರುವಿಟ್ಟುಕೊಂಡಿದೆ. ಕನ್ಸಾಸ್ ಸಿಟಿಯಲ್ಲಿ ಹೈದರಾಬಾದ್ ಮೂಲದ ಟೆಕ್ಕಿ ಶ್ರೀನಿವಾಸ್ ಅವರನ್ನು ಬಾರ್ ಒಂದರಲ್ಲಿ ಕೊಂದುಹಾಕಿದ ಘಟನೆ ಅಮೆರಿಕದಲ್ಲಿರುವ ಭಾರತೀಯರೆಲ್ಲರನ್ನೂ ಬೆಚ್ಚಿಬೀಳಿಸಿರುವುದು ಸಹಜ. ಕಂದುಬಣ್ಣದವರೆಲ್ಲ ಮಧ್ಯಪ್ರಾಚ್ಯದವರು ಎಂಬ ತಪ್ಪು ಕಲ್ಪನೆಯೂ ಇಂತಹ ಘಟನೆಗೆ ಕಾರಣವಾಗಿರಬಹುದು. ಶ್ರೀನಿವಾಸ್ ಕೊಲೆ ಪ್ರಕರಣಕ್ಕಿಂತ ಮೊದಲೇ ಕಳೆದ ಫೆಬ್ರವರಿ ತಿಂಗಳಲ್ಲಿ ದಕ್ಷಿಣ ಕೊಲೋರಾಡೋದ ಪೇಯ್ಟನ್ ಎಂಬಲ್ಲಿ ಭಾರತೀಯರ ಮನೆಯ ಮೇಲೆ ಮೊಟ್ಟೆ ಹಾಗೂ ನಾಯಿಯ ಮಲದಿಂದ ದಾಳಿ ನಡೆಸಿದ ಘಟನೆಯೂ ನಡೆದಿತ್ತು. ದಾಳಿಕೋರರು ಭಾರತೀಯನ ನಿವಾಸಕ್ಕೆ ಆಗಮಿಸಿ, ಏ…ಕಂದುಬಣ್ಣದವನೇ… ನೀನು ಇಲ್ಲಿ ಇರಕೂಡದು ಎಂದಿದ್ದರು. ಅಲ್ಲದೆ ಆ ಮನೆಯ ಮೇಲೆ 50 ಭಿತ್ತಿಚಿತ್ರಗಳನ್ನು ಅಂಟಿಸಿದ್ದರು.
ಈ ಘಟನೆಗಳ ಗಾಯ ಒಣಗುವ ಮುನ್ನವೇ ಅಮೆರಿಕದ ಸಂಸತ್ತಿನಲ್ಲಿ, ವಿದೇಶಿ ಕಂಪೆನಿಗಳು ಅಮೆರಿಕದ ಉದ್ಯೋಗಗಳನ್ನು ಹಂಚಿಕೊಳ್ಳುವುದನ್ನು ತಡೆಯುವ ಮಸೂದೆಯೊಂದನ್ನು ಮಂಡಿಸಲಾಗಿದೆ. ಡೆಮೋಕ್ರಟಿಕ್ ಸಂಸದ ಜೇನೇ ಗ್ರೀನ್ ಮತ್ತು ರಿಪಬ್ಲಿಕನ್ ಪಕ್ಷದ ಡೇವಿಡ್ ಮೆಕಿನ್ಲೇ ಅವರು ದಿ ಯುಎಸ್ ಕಾಲ್ಸೆಂಟರ್ ಆಂಡ್ ಕನ್ಷೂಮರ್ ಪ್ರೊಟೆಕ್ಷನ್ ಆ್ಯಕ್ಟ್ ಎಂಬ ಮಸೂದೆಯನ್ನು ಮಂಡಿಸಿದ್ದಾರೆ. ಭಾರತದಂತಹ ದೇಶಗಳಿಗೆ ಉದ್ಯೋಗಗಳು ವರ್ಗಾವಣೆಯಾಗುವುದನ್ನು ಹತ್ತಿಕ್ಕುವುದು ಈ ಮಸೂದೆಯ ಉದ್ದೇಶ. ದೇಶದಿಂದ ಹೊರಗಡೆ ಕಾಲ್ಸೆಂಟರ್ಗಳನ್ನು ಹೊಂದಿದ್ದಲ್ಲಿ ಅಂತಹ ಕಂಪೆನಿಗಳಿಗೆ ಸರ್ಕಾರಿ ಸಾಲ ಅಥವಾ ಅನುದಾನಗಳನ್ನು ಪಡೆಯಲು ಸಾಧ್ಯವಾಗದಂತಹ ಮಸೂದೆ ಅದು. ಅಂತಹ ಕಂಪೆನಿಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ. ಒಮ್ಮೆ ಕಪ್ಪುಪಟ್ಟಿಗೆ ಇಂತಹ ಕಂಪೆನಿಗಳು ಸೇರಿದ್ದೇ ಆದರೆ ಅಮೆರಿಕ ಸರ್ಕಾರದಿಂದ ಯಾವುದೇ ಅನುದಾನ ಅಥವಾ ಸಾಲಸೌಲಭ್ಯ ಸಿಗುವುದಿಲ್ಲ. ಡೊನಾಲ್ಡ್ ಟ್ರಂಪ್ ಸರ್ಕಾರದ ಈ ಕಠಿಣ ಕ್ರಮದಿಂದಾಗಿ ಹೊರಗುತ್ತಿಗೆ ಉದ್ಯೋಗಗಳನ್ನೇ ನೆಚ್ಚಿಕೊಂಡಿರುವ ಭಾರತದಂತಹ ದೇಶಗಳಿಗೆ ತೀವ್ರಹೊಡೆತ ಬೀಳುವುದರಲ್ಲಿ ಅನುಮಾನವಿಲ್ಲ.
ಈ ಮಸೂದೆ ಏನಾದರೂ ಜಾರಿಗೆ ಬಂದಲ್ಲಿ ಅಮೆರಿಕದಲ್ಲಿರುವ ಭಾರತೀಯರ ಸಂಕಷ್ಟ ಇನ್ನಷ್ಟು ಹೆಚ್ಚಲಿದೆ. ಏಕೆಂದರೆ ಅಮೆರಿಕ ಮೂಲದ ಕಂಪೆನಿಗಳ ಕಾಲ್ಸೆಂಟರ್ಗಳಲ್ಲಿ ಭಾರತೀಯರು ಹಾಗೂ ಫಿಲಿಪೈನ್ಸ್ಗೆ ಸೇರಿದವರೇ ಹೆಚ್ಚಿನವರಿದ್ದಾರೆ. ಜೊತೆಗೆ ಜನಾಂಗೀಯ ದ್ವೇಷ ಟ್ರಂಪ್ ಆಡಳಿತ ಬಂದ ಬಳಿಕ ಹೆಚ್ಚುತ್ತಿರುವಾಗ ಅಮೆರಿಕದಲ್ಲಿರುವ ಭಾರತೀಯರು ಪ್ರತಿನಿತ್ಯ ಆತಂಕದಿಂದಲೇ ಜೀವ ಕೈಯಲ್ಲಿ ಹಿಡಿದು ಬದುಕಬೇಕಾದ ದಯನೀಯ ಸ್ಥಿತಿ ಒದಗಲಿದೆ.
ವಲಸಿಗರ ಬಾಹುಳ್ಯದಿಂದಾಗಿ ಅಮೆರಿಕದಲ್ಲಿ ಅಲ್ಲಿನ ಮೂಲನಿವಾಸಿಗಳಿಗೆ ಉದ್ಯೋಗಾವಕಾಶಗಳು ಕೈತಪ್ಪಿರುವುದು ನಿಜ. ಆದರೆ ವಲಸಿಗರಿಂದ ಅಮೆರಿಕಕ್ಕೆ ಸಾಕಷ್ಟು ಲಾಭವಾಗಿರುವುದನ್ನು ಅಲ್ಲಗಳೆಯುವಂತಿಲ್ಲ. ಪರಿಣತ, ಕುಶಲ ಕೆಲಸಗಾರರ ಅಗತ್ಯದ ಉದ್ಯಮ ಮತ್ತು ಅರ್ಥವ್ಯವಸ್ಥೆ 1970 ರಿಂದ 2000 ದ ವರೆಗೆ ದೊಡ್ಡಸಂಖ್ಯೆಯ ಭಾರತೀಯರ ವಲಸೆಗೆ ಕಾರಣವಾಯಿತು. ಹಾಗಾಗಿ ಇವತ್ತು ಉದ್ಯೋಗ ವೀಸಾ ಎಚ್-1 ಬಿ ಮೇಲೆ ಅಮೆರಿಕದಲ್ಲಿ ನೆಲೆ ಕಂಡುಕೊಂಡಿರುವವರ ಪೈಕಿ ಶೇ. 90 ರಷ್ಟು ಭಾರತೀಯರೇ ಇದ್ದಾರೆ. ಅಮೆರಿಕದ ಒಟ್ಟು ಜನಸಂಖ್ಯೆಯಲ್ಲಿ ಶೇ.1 ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿರುವ ಭಾರತೀಯರು ಆ ದೇಶದ ಅರ್ಥವ್ಯವಸ್ಥೆಗೆ ಮತ್ತು ಜನಪ್ರಿಯ ಸಂಸ್ಕೃತಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಬಾಲಿವುಡ್ ನೃತ್ಯಗಳು ಮತ್ತು ಯೋಗ ಬಹಳಷ್ಟು ಅಮೆರಿಕನ್ನರ ಪ್ರಮುಖ ಚಟುವಟಿಕೆಗಳಾಗಿ ಜನಪ್ರಿಯವಾಗಿವೆ. ಭಾರತೀಯರ ಆಹಾರ ದಿನದಿಂದ ದಿನಕ್ಕೆ ಜನಾಕರ್ಷಣೆ ಪಡೆಯುತ್ತಿದೆ. ಆ ದೇಶದ ಪ್ರಮುಖ ಎರಡು ಸಾಫ್ಟ್ವೇರ್ ಕಂಪೆನಿಗಳ ಚುಕ್ಕಾಣಿ ಭಾರತೀಯರ ಕೈಯಲ್ಲಿದೆ. ಈ ಎಲ್ಲ ಕೊಡುಗೆಗಳನ್ನು ಬಹುತೇಕ ಅಮೆರಿಕನ್ನರು ಮೆಚ್ಚುಗೆ ಮತ್ತು ಗೌರವದಿಂದ ಕಂಡಿದ್ದಾರೆ.
ಹಾಗೆ ನೋಡಿದರೆ ಅಮೆರಿಕದಲ್ಲಿರುವ ಭಾರತೀಯರ ಬಗ್ಗೆ ಅಲ್ಲಿನವರಿಗೆ ಕೆಟ್ಟಭಾವನೆ ಏನಿಲ್ಲ. ಭಾರತೀಯರನ್ನು ಶಾಂತಿಪ್ರಿಯರೆಂದೇ ಅಮೆರಿಕನ್ನರು ಭಾವಿಸಿದ್ದಾರೆ. ಆದರೀಗ ಭಾರತೀಯರನ್ನು ತಪ್ಪಾಗಿ ಭಾವಿಸುವ ಪೂರ್ವಗ್ರಹಪೀಡಿತ ಮಾನಸಿಕತೆ ಅಲ್ಲಿನ ಮೂಲನಿವಾಸಿಗಳಿಗೆ ಬಂದಿದ್ದಾದರೂ ಹೇಗೆ? ಅಮೆರಿಕದ ದೊಡ್ಡನಗರಗಳಾದ ವಾಷಿಂಗ್ಟನ್ ಡಿ.ಸಿ, ಶಿಕಾಗೋ, ಲಾಸ್ಏಂಜಲೀಸ್, ಸ್ಯಾನ್ಫ್ರಾನ್ಸಿಸ್ಕೋ, ನ್ಯೂಯಾರ್ಕ್, ಕ್ಯಾಲಿಫೋರ್ನಿಯಾಗಳಲ್ಲಿ ವಲಸಿಗರಿಗೆ ಹೆಚ್ಚೇನೂ ಸಮಸ್ಯೆಯಾಗಿಲ್ಲ. ಏಕೆಂದರೆ ಅವೆಲ್ಲ ಕಾಸ್ಮೋಪಾಲಿಟನ್ ನಗರಗಳು. ಜಗತ್ತಿನ ಯಾವುದೇ ಕಾಸ್ಮೋಪಾಲಿಟನ್ ನಗರಗಳಲ್ಲಿ ಹೆಚ್ಚಿನವರು ವಲಸಿಗರೇ ಆಗಿರುತ್ತಾರೆ. ಅವರದೇ ಪಾರಮ್ಯವಿರುತ್ತದೆ. ಹಾಗಾಗಿ ಅಲ್ಲಿನ ಇತರ ಜನರು ವಲಸಿಗರೊಂದಿಗೆ ಸಹಬಾಳ್ವೆ ನಡೆಸುವ ಪರಿಪಾಠ ಹೊಂದಿರುತ್ತಾರೆ. ಆದರೆ ಇದೇ ಸ್ಥಿತಿ ಸಣ್ಣಪುಟ್ಟ ನಗರಗಳಲ್ಲಿ ಇದೆ ಎನ್ನುವಂತಿಲ್ಲ. ದಕ್ಷಿಣ ಟೆಕ್ಸಾಸ್, ಕೆಂಟುಕಿ, ಲೂಸಿಯಾನಾ, ಅಲಬಾಮಾ ಮುಂತಾದ ಸಣ್ಣಪುಟ್ಟ ನಗರಗಳಲ್ಲಿ ವಲಸಿಗರ ಸಂಖ್ಯೆ ಕಡಿಮೆಯಿದ್ದರೂ ಸ್ಥಳೀಯರ ಪ್ರತಿರೋಧ ಮಾತ್ರ ಹೆಚ್ಚಿನ ಪ್ರಮಾಣದಲ್ಲಿದೆ. ಶಿಕ್ಷಣದ ಕೊರತೆ, ಹೊರಜಗತ್ತಿಗೆ ತೆರೆದುಕೊಳ್ಳದೇ ಇರುವುದು ಇತ್ಯಾದಿ ಕಾರಣಗಳಿಂದ ಈ ಊರುಗಳ ರೆಡ್ಕಾಲರ್ ಕಾರ್ಮಿಕರು ವಲಸಿಗರನ್ನು ದ್ವೇಷಿಸುತ್ತಾರೆ. ವಲಸಿಗರು ಬಂದಿರುವುದೇ ತಮ್ಮ ಕೆಲಸ ಕಿತ್ತುಕೊಳ್ಳಲು ಎಂಬ ಸಂಶಯದ ಭಾವನೆ ಅವರಲ್ಲಿದೆ.
ಕನ್ಸಾಸ್ ಸಿಟಿ ವಿದ್ಯಮಾನ ನಡೆದ ಬಳಿಕ ಅಮೆರಿಕದಲ್ಲಿರುವ ಕೆಲವು ಭಾರತೀಯ ಲೇಖಕರು ಭಾರತದ ಮಾಧ್ಯಮಗಳಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಬಹುತೇಕರ ಅನಿಸಿಕೆಗಳನ್ನು ಜರಡಿಹಿಡಿದು ನೋಡಿದಾಗ ಕಾಣುವುದು – ಭವಿಷ್ಯದ ಬಗ್ಗೆ ಆತಂಕ, ವರ್ತಮಾನದ ಬಗೆಗೆ ತೀವ್ರ ತಲ್ಲಣ. ನಮಗೀಗ ಎಂತಹ ಸ್ಥಿತಿ ಬಂದಿದೆಯೆಂದರೆ ಎಲ್ಲಿಗೆ ಹೋಗುವುದಾದರೂ ನಮ್ಮ ಪಾಸ್ಪೋರ್ಟ್ ಇತ್ಯಾದಿ ದಾಖಲೆಗಳನ್ನು ಹಿಡಿದುಕೊಂಡೇ ಹೋಗಬೇಕಾಗಿದೆ. ನಾವಿಲ್ಲಿ ನಮ್ಮ ಬದುಕನ್ನು ಕಟ್ಟಿಕೊಳ್ಳಲು ವಲಸೆ ನಿಯಮಗಳ ಜೊತೆಗೆ ಸಾಕಷ್ಟು ಗುದ್ದಾಡಿದ್ದೇವೆ. ಈಗ ಇನ್ನೆಲ್ಲಿಗೆ ಹೋಗಲು ಸಾಧ್ಯ? ಹಾಗಾಗಿ ನಮ್ಮ ಮುಂದೆ ಈಗ ಉಳಿದಿರುವುದು ಒಂದೇ ದಾರಿ. ನಾವು ಯಾವ ದೇಶದಿಂದಲೇ ಬಂದವರಾಗಿರಲಿ, ಯಾವ ಜನಾಂಗದವರೇ ಆಗಿರಲಿ, ಎಲ್ಲ ವಲಸಿಗರು ಒಟ್ಟಾಗಿ ಹೋರಾಡಬೇಕಾಗಿದೆ. ಕಾನೂನುಬದ್ಧವಾಗಿ ಬಂದ ಎಲ್ಲರೂ ಇದಕ್ಕೆ ಕೈಜೋಡಿಸಿ ಪರಸ್ಪರರಲ್ಲಿ ಅರಿವು ಮೂಡಿಸುತ್ತ ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾಗಿದೆ… ಎಂದು ಹೆಸರು ಹೇಳಲಿಚ್ಛಿಸದ, ಅಮೆರಿಕದಲ್ಲಿರುವ ಕನ್ನಡಿಗರೊಬ್ಬರು ತಮ್ಮ ಅನಿಸಿಕೆ ತೋಡಿಕೊಂಡಿದ್ದಾರೆ.
ಆದರೆ ಅಮೆರಿಕದಲ್ಲಿ ಭಾರತೀಯರಷ್ಟೇ ಅಲ್ಲ, ಪಾಕಿಸ್ಥಾನ, ಬಾಂಗ್ಲಾದೇಶ, ಫಿಲಿಪೈನ್ಸ್ನವರಲ್ಲದೆ ಮಧ್ಯಪ್ರಾಚ್ಯ ದೇಶಗಳ ವಲಸಿಗರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರೆಲ್ಲರೂ ಒಟ್ಟಾಗಿ ಹೋರಾಡಬಲ್ಲರೆ? ಅದೂ ಅಲ್ಲದೆ ಅಲ್ಲಿರುವ ವಲಸಿಗರನ್ನು ಅಕ್ರಮ ವಲಸಿಗರೋ, ಅಥವಾ ಸಕ್ರಮ ವಲಸಿಗರೋ ಎಂದು ವಿಂಗಡಿಸಲು ಇರುವ ಮಾನದಂಡವಾದರೂ ಯಾವುದು? ಸರ್ಕಾರಿ ದಾಖಲೆಗಳನ್ನು ಹೊಂದಿಲ್ಲದಿರುವವರು ಅಕ್ರಮ ವಲಸಿಗರೆಂದು ಹೇಳಿಬಿಡಬಹುದು. ಆದರೆ ಅದನ್ನು ಪತ್ತೆಹಚ್ಚುವ ಅಧಿಕಾರಿಗಳ ವಿಶ್ವಾಸಾರ್ಹತೆಯ ಬಗ್ಗೆಯೇ ಈಗ ವಲಸಿಗರ ಚಿಂತೆ.
ಘಟನೆಯೊಂದು ನೆನಪಾಗುತ್ತಿದೆ. ಇದು ನಡೆದಿದ್ದು 6 ದಶಕಗಳಿಗೂ ಹಿಂದೆ. ಜಪಾನ್ನ ಹಿರೋಶಿಮಾ ಮತ್ತು ನಾಗಸಾಕಿಯ ಮೇಲೆ ಅಮೆರಿಕ ಅಣುಬಾಂಬು ಪ್ರಯೋಗಿಸಿದ್ದರಿಂದಾಗಿ ಜಪಾನ್ ಯುದ್ಧದಲ್ಲಿ ಸೋತು ಶರಣಾಗಿತ್ತು. ದ್ವಿತೀಯ ಜಾಗತಿಕ ಸಮರ ಕೊನೆಗೊಂಡು ಶಾಂತಿಕಾಲ ಆರಂಭವಾಗಿತ್ತು. ಆದರೆ ಉಭಯದೇಶಗಳಲ್ಲಿ ಜನಾಂಗೀಯ ವಿರಸದ ಕಾವು ಇನ್ನೂ ಆರಿರಲಿಲ್ಲ. ಅಂತಹ ಸಂದರ್ಭದಲ್ಲಿ ಜಪಾನಿನ ವ್ಯಾಪಾರಿ ನಿಯೋಗವೊಂದು ಅಮೆರಿಕಕ್ಕೆ ಬಂದಾಗಿನ ಪ್ರಸಂಗ. ಹಲವಾರು ಸುತ್ತು ಮಾತುಕತೆ, ಒಪ್ಪಂದ ಇತ್ಯಾದಿ ಮುಗಿದು ನಿಯೋಗವು ಸ್ವದೇಶಕ್ಕೆ ವಾಪಸ್ ಹೊರಡುವ ಸಂದರ್ಭ. ನಿಯೋಗದ ಕೆಲವು ಸದಸ್ಯರು ವಾಷಿಂಗ್ಟನ್ನ ಒಂದು ಹೊಟೇಲ್ಗೆ ಹೋಗಿದ್ದಾಗ ಅವರಿಗೆ ಪ್ರವೇಶ ನಿರಾಕರಿಸಲಾಯಿತು. ನಿಯೋಗದಲ್ಲಿದ್ದವರು ಇದನ್ನೊಂದು ಗಂಭೀರ ಅವಮಾನವೆಂದು ಭಾವಿಸಿದರು. ಕೂಡಲೇ ನಿಯೋಗದ ವತಿಯಿಂದ ವಾಷಿಂಗ್ಟನ್ನ ಜಪಾನೀ ರಾಯಭಾರಿ ಕಚೇರಿಗೆ ದೂರುಹೋಯಿತು.
ಜಪಾನಿ ರಾಯಭಾರಿ ಈ ಮಾಹಿತಿಯನ್ನು ಟೋಕಿಯೋದಲ್ಲಿನ ತನ್ನ ವಿದೇಶಾಂಗ ಕಚೇರಿಗೆ ತಲುಪಿಸಿದರು. ಜಪಾನಿ ವಿದೇಶಾಂಗ ಖಾತೆ ಮಂತ್ರಿ ಕೂಡಲೇ ತನ್ನ ಪ್ರಧಾನಿಯ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಂಡರು. ಜಪಾನಿನಾದ್ಯಂತ ಇರುವ ಪೊಲೀಸ್ಠಾಣೆಗಳಿಗೆ ತುರ್ತು ಆದೇಶ ರವಾನೆಯಾಯಿತು. ಆ ಆದೇಶದಲ್ಲಿದ್ದಿದ್ದು ಇಷ್ಟೆ : ತಮ್ಮ ಕ್ಷೇತ್ರವ್ಯಾಪ್ತಿಯಲ್ಲಿನ ಯಾವುದೇ ಹೊಟೇಲ್ನಲ್ಲಿರುವ ಅಮೆರಿಕನ್ ಯಾತ್ರಿಕರನ್ನು – ಪುರುಷ, ಮಹಿಳೆ, ಮಗು ಯಾರೇ ಇದ್ದರೂ – ಅಲ್ಲಿಂದ ಹೊರಗೆಹಾಕಿ. ಬಲಾತ್ಕಾರ ಪ್ರಯೋಗಿಸಿದರೂ ಪರವಾಗಿಲ್ಲ. ಕಾರಣ ತಿಳಿಸಬೇಕಾದ ಅಗತ್ಯವಿಲ್ಲ.
ಪರಿಣಾಮವಾಗಿ ಒಂದೆರಡು ಗಂಟಗಳಲ್ಲೇ ಜಪಾನಿನಲ್ಲಿದ್ದ ಅಮೆರಿಕನ್ನರೆಲ್ಲ ಬೀದಿಪಾಲಾದರು. ಕಾರಣ ಯಾರಿಗೂ ಗೊತ್ತಾಗಲಿಲ್ಲ. ಎಲ್ಲೆಡೆ ಬೀದಿಪಾಲಾದ ಅಮೆರಿಕನ್ನರ ಲಬೋಲಬೋ ಆರ್ತನಾದ. ಟೋಕಿಯೋದಲ್ಲಿನ ಅಮೆರಿಕನ್ ರಾಯಭಾರಿ ಕಚೇರಿಗೆ ದೂರುಗಳ ಸುರಿಮಳೆ. ಏನಿದು?- ಅಮೆರಿಕನ್ ರಾಯಭಾರಿ ಜಪಾನ್ ವಿದೇಶಾಂಗ ಸಚಿವರಿಗೆ ವಿಚಾರಿಸಿದರು. ಜಪಾನ್ ವಿದೇಶಾಂಗ ಮಂತ್ರಿ ತಣ್ಣಗೆ ವಾಷಿಂಗ್ಟನ್ನಲ್ಲಿರುವ ನಿಮ್ಮ ವಿದೇಶಾಂಗ ಮಂತ್ರಿಯನ್ನು ಕೇಳಿ ಉತ್ತರಪಡೆಯಿರಿ ಎಂದರು. ಆಗ ಮಧ್ಯರಾತ್ರಿ. ದೂರು ತಲುಪಿದಾಗ ವಾಷಿಂಗ್ಟನ್ನಲ್ಲಿರುವ ವಿದೇಶಾಂಗ ಮಂತ್ರಿ ಎಚ್ಚರಗೊಂಡು ಜಪಾನಿ ರಾಯಭಾರಿಗೆ ಏನಿದು, ನಿಮ್ಮ ದೇಶದಲ್ಲಿ ನಡೆಯುತ್ತಿರುವ ರಾದ್ಧಾಂತ? ಎಂದು ಗಾಬರಿಯಾಗಿ ಕೇಳಿದರು. ಆಗ ಜಪಾನಿನ ರಾಯಭಾರಿ, ಏನಿಲ್ಲ , ಇಲ್ಲಿ ನಮ್ಮವರಿಗಾಗಿರುವ ಅವಮಾನಕ್ಕೆ ಅಲ್ಲಿ ನಿಮ್ಮವರಿಗೆ ತಕ್ಕಪಾಠ ಕಲಿಸಲಾಗುತ್ತಿದೆ ಎಂದು ಶಾಂತವಾಗಿ ಹೇಳಿದರು. ಮುಂದೆ ಸೂಕ್ತ ವಿಚಾರಣೆ ನಡೆಸಿ ಅವಮಾನಕ್ಕೊಳಗಾದ ಜಪಾನಿ ನಿಯೋಗದ ಸದಸ್ಯರಿಗೆ ಗೌರವಪೂರ್ವಕವಾಗಿ ಅದೇ ಹೊಟೇಲ್ನಲ್ಲಿ ಪ್ರವೇಶ ನೀಡಲಾಯಿತು. ಅದಾದ ನಂತರವೇ ಜಪಾನಿನಲ್ಲಿ ಬೀದಿಪಾಲಾಗಿದ್ದ ಅಮೆರಿಕನ್ನರಿಗೆ ಹೊಟೇಲ್ಗಳಲ್ಲಿ ಮತ್ತೆ ಪ್ರವೇಶ ದೊರಕಿತು!
ಇದು ಜಪಾನೀಯರ ಸ್ವಾಭಿಮಾನದ ತಾಕತ್ತು. ಸ್ವಾಭಿಮಾನಿ ಜನಾಂಗಕ್ಕೆ ಸೇರಿದ ಜಪಾನಿನ ಯಾವನೇ ಸಾಮಾನ್ಯ ವ್ಯಕ್ತಿ ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಆತ ಸುರಕ್ಷಿತ. ಏಕೆಂದರೆ ಆತ ಸ್ವಾಭಿಮಾನಿ. ಆತನ ಹಿಂದೆ ಇಡೀ ದೇಶವೇ ಇರುತ್ತದೆ. ಅಮೆರಿಕದಲ್ಲಿರುವ ಭಾರತೀಯರನ್ನು ಹೊರಗಟ್ಟದಂತೆ, ಅವರ ಮೇಲೆ ಹಿಂಸಾಚಾರ ನಡೆಸದಂತೆ ಭಾರತ ಸರ್ಕಾರ ರಾಜತಾಂತ್ರಿಕ ಮಟ್ಟದಲ್ಲಿ ಎಚ್ಚರಿಕೆ ನೀಡಬೇಕು. ಅದಕ್ಕೂ ಮುಂಚೆ, ಅಮೆರಿಕದಲ್ಲಿರುವ ಭಾರತೀಯರೇ ಸ್ವಾಭಿಮಾನಧನರಾಗಿ, ತಮ್ಮ ವಿರುದ್ಧ ಯಾವುದೇ ಹಿಂಸಾಚಾರ ನಡೆಯದಂತೆ ಕ್ರಮ ಕೈಗೊಳ್ಳಬೇಕೆಂದು ಅಲ್ಲಿನ ಸರ್ಕಾರದ ಮೇಲೆ ಒತ್ತಡತಂತ್ರ ಹೇರಬೇಕು. ಅದೂ ಸಾಧ್ಯವಾಗದಿದ್ದರೆ, ನಿಮ್ಮಂತಹ ಜನಾಂಗೀಯ ದ್ವೇಷದ ನಾಡಿನಲ್ಲಿ ನಾವು ಉದ್ಯೋಗ ನಿರ್ವಹಿಸುವುದಿಲ್ಲ ಎಂದು ದಿಟ್ಟತನದಿಂದ ಹೇಳಿ ತವರುಭೂಮಿಗೆ ಮರಳಬೇಕು. ಆಗ ನಷ್ಟವಾಗುವುದು ಅಮೆರಿಕಕ್ಕೇ. ಆದರೆ ಇದಕ್ಕಾಗಿ ಭಾರತೀಯರು ತಮ್ಮ ಅಮೆರಿಕ ವ್ಯಾಮೋಹವನ್ನು ತ್ಯಜಿಸಲು ಸಿದ್ಧರಾಗುತ್ತಾರಾ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.