ನವದೆಹಲಿ : ಭಾರತದಲ್ಲಿ ಬ್ರಿಟಿಷ್ ವಸಾಹತು ಶಾಹಿಯ ಅವಧಿ ಕುರಿತು ಶಾಲೆಯಲ್ಲಿ ಏಕೆ ಬೋಧಿಸುವುದಿಲ್ಲ ? ನಿಮ್ಮವರ ಇತಿಹಾಸ ನಿಮ್ಮ ನವಪೀಳಿಗೆಗೂ ಗೊತ್ತಾಗಬೇಕಲ್ಲ? ಹೀಗೆ ಬ್ರಿಟಿಷ್ ಶೈಕ್ಷಣಿಕ ವ್ಯವಸ್ಥೆ ಬಗ್ಗೆ ಕಿಡಿ ಕಾರಿದ್ದಾರೆ ಕಾಂಗ್ರೆಸ್ನ ಹಿರಿಯ ಮುಖಂಡ ಶಶಿ ತರೂರ್.
ಇಂಗ್ಲೆಂಡ್ನ 4 ಸುದ್ದಿ ವಾಹಿನಿಗಳಿಗೆ ಸಂದರ್ಶನ ನೀಡಿರುವ ಅವರು, ಬ್ರಿಟಿಷರ ಅವಧಿಯಲ್ಲಿ ಭಾರತ ಉನ್ನತಿ ಹೊಂದಿತು ಎಂದು ತಿಳಿಸಲಾಗುತ್ತಿದೆ. ಆದರೆ ವಸಾಹತು ಶಾಹಿ ಸಂದರ್ಭದಲ್ಲಿ ಬ್ರಿಟಿಷರ ಧ್ಯೇಯೋದ್ದೇಶಗಳೇನಿದ್ದವು? ಅವರು ಏನು ಮಾಡಿದರು ಎಂಬ ಸತ್ಯಾಂಶವನ್ನು ಮಕ್ಕಳಿಗೆ ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಆಡಳಿತದಲ್ಲಿದ್ದ ಅವಧಿಯ ನೈಜ ಚಿತ್ರಣವನ್ನು ಮಕ್ಕಳಿಗೆ ತಿಳಿಸಬೇಕು. ಅದೆಷ್ಟೋ ಜನರು ಭಾರತದ ಅಭಿವೃದ್ಧಿಗೆ ಬ್ರಿಟಿಷರೇ ಕಾರಣ. ಬ್ರಿಟಿಷ್ ಆಡಳಿತದ ಪರಿಣಾಮವೇ ಭಾರತ ಅಭ್ಯುದಯ ಕಂಡಿದ್ದು ಎಂದು ನಂಬಿದ್ದಾರೆ. ನಿಜ ಹೇಳಬೇಕೆಂದರೆ ಗಳಿಸಿದ್ದಕ್ಕಿಂತ ಭಾರತ ಕಳೆದುಕೊಂಡಿದ್ದೇ ಹೆಚ್ಚು ಎಂದು ತರೂರ್ ಅಭಿಪ್ರಾಯಪಟ್ಟಿದ್ದಾರೆ.
ಇಂಗ್ಲೆಂಡಿನ ಜನ ತಮ್ಮನ್ನು ತಾವು ಯಾವಾಗಲೂ ಇತರ ರಾಷ್ಟ್ರಗಳಿಗಿಂತಲೂ ಶ್ರೇಷ್ಠರು ಎಂದುಕೊಳ್ಳುತ್ತಾರೆ. ಅಲ್ಲದೇ ಇತರರ ನಂಬಿಕೆಗಳನ್ನು ಗೌರವಿಸುವುದು ಹಾಗೂ ನಂಬುವುದು ಇವರಿಗೆ ಗೊತ್ತಿಲ್ಲ. ಪ್ರಾಥಮಿಕ ಹಂತದಲ್ಲಿ ಓದುತ್ತಿರುವ ಮಕ್ಕಳು ತಮ್ಮ ದೇಶದ ನೈಜ ಇತಿಹಾಸವೇನು? ಭಾರತದಲ್ಲಿ ತಮ್ಮವರು ಆಡಳಿತ ನಡೆಸಿದಾಗಿನ ವಾಸ್ತವಿಕತೆಗಳೇನು ? ಎಂಬ ಕುರಿತು ತಿಳಿಯಬೇಕಲ್ಲವೇ? ಎಂದು ಪ್ರಶ್ನಿಸಿರುವ ಅವರು, ಇದನ್ನು ’ಹಿಸ್ಟಾರಿಕಲ್ ಅಮ್ನೆಸಿಯಾ’ಎಂದು ಕರೆದಿದ್ದಾರೆ. ಸತ್ಯ ಸಂಗತಿಯನ್ನು ಬೋಧಿಸದ ಪರಿಣಾಮ, ತಮ್ಮ ದೇಶದವರು ಆಡಳಿತ ನಿಯಂತ್ರಿಸುವ ಮೂಲಕ ಭಾರತದ ಏಳ್ಗೆಗೆ ಶ್ರಮಿಸಿದ್ದಾರೆ ಎಂದು ಮಕ್ಕಳು ತಪ್ಪಾಗಿ ತಿಳಿದುಕೊಳ್ಳುವ ಪ್ರಸಂಗ ನಿರ್ಮಾಣವಾಗಿದೆ ಎಂದಿದ್ದಾರೆ.
ಮುಖ್ಯವಾಗಿ ಭಾರತದಲ್ಲಿ ಕೈಗಾರಿಕಾ ಕ್ಷೇತ್ರ ಕುಂಠಿತಗೊಳ್ಳಲು ಬ್ರಿಟೀಷರೇ ಕಾರಣ ಎಂದಿರುವ ಶಶಿ ತರೂರ್, ಅವರ ಆಡಳಿತದ ಪರಿಣಾಮ ಭಾರತ ಬಡತನದಿಂದ ಬಳಲುವ ಸ್ಥಿತಿಗೂ ಬಂದು ನಿಲ್ಲುವಂತಾಗಿದೆ ಎಂದು ಹೇಳಿದ್ದಾರೆ.
ಹಾಗಾದರೆ ಇವೆಲ್ಲ ಸತ್ಯಾಂಶಗಳನ್ನು ಬೋಧಿಸುವುದರಿಂದ ಉಭಯ ದೇಶಗಳ ಮಧ್ಯದ ಸಂಬಂಧ ಶಿಥಿಲಗೊಳ್ಳುವುದಿಲ್ಲವೇ? ವಾಣಿಜ್ಯ ಹಾಗೂ ವ್ಯಾಪಾರಿ ಸಂಬಂಧಗಳ ಮೇಲೂ ಇದು ಪ್ರತಿಕೂಲ ಪರಿಣಾಮ ಬೀರದೇ? ಎಂದು ಸಂದರ್ಶಕರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ತರೂರ್, ನೀವು ಎಲ್ಲಿಂದ ಬಂದಿರಿ ಎಂಬುದೇ ನಿಮಗೆ ಗೊತ್ತಿಲ್ಲದಿದ್ದರೆ, ಎಲ್ಲಿಗೆ ಹೊರಟಿದ್ದೀರಿ ಎಂಬುದನ್ನು ಪ್ರಶಂಸಿಸುವುದಾದರೂ ಹೇಗೇ? ಇದನ್ನು ತಿಳಿಯುವುದಕ್ಕಾಗಿ ಇತಿಹಾಸದ ನೈಜ ಅಧ್ಯಯನ ಅಗತ್ಯ ಎಂದು ಶಶಿ ತರೂರ್ ಹೇಳಿದ್ದಾರೆ.
ಮೆಕಾಲೆ ಪ್ರಣೀತ ಶಿಕ್ಷಣ ವ್ಯವಸ್ಥೆಯಲ್ಲಿರುವ ನಾವು ಓದುತ್ತಿರುವ ಇತಿಹಾಸವೂ ನೈಜವಲ್ಲ. ವಸಾಹತು ಶಾಹಿ ಅವಧಿಯ ಬ್ರಿಟಿಷ್ ಆಳ್ವಿಕೆ ಕುರಿತು ಪ್ರಸ್ತಾಪವೇ ಇಲ್ಲದ ಇತಿಹಾಸವನ್ನು ಓದುತ್ತಿರುವ ಯು.ಕೆ. ಇತಿಹಾಸವೂ ನೈಜವಲ್ಲ. ಈ ನಿಟ್ಟಿನಲ್ಲಿ ತರೂರ್ ಅವರ ಮಾತುಗಳು ಗಂಭೀರ ಚಿಂತನೆಗೆ ಅರ್ಹವಾಗಿವೆ ಎನ್ನಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.