“ದುಷ್ಮನೋಂಕಿ ಗೋಲಿಯೋಂಕಾ ಮೈ ಸಾಮನಾ ಕರೂಂಗ….ಆಜಾದ್ ಹು ಮೈ,ಆಜಾದ್ ಹೀ ರಹೂಂಗ!” ಎಂದು ಬಾಲ್ಯದಲ್ಲೇ ಪ್ರತಿಜ್ಞೆ ಮಾಡಿ, ಬ್ರಿಟಿಷರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಾ, ಪೊಲೀಸರಿಗೆ ಸಿಗದೇ, ಅಂಗ್ಲರಿಗೆ ಸಿಂಹ ಸ್ವಪ್ನರಂತೆ ಕಾಡಿದವರು ಅಜೇಯ ಕ್ರಾಂತಿಕಾರಿ ಚಂದ್ರಶೇಖರ ಆಜಾದ್. ವೀರಭದ್ರ ತಿವಾರಿ ಎಂಬ ಮಿತ್ರನ ದ್ರೋಹಕ್ಕೆ ಬಲಿಯಾಗಿ ಪೋಲಿಸರ ಕೈಗೆ ಸಿಕ್ಕರೂ, ಧೃತಿಗೆಡದೆ ಸುಮಾರು 80ಕ್ಕೂ ಪೋಲೀಸರ ಅಕ್ರಮಣವನ್ನು ಒಬ್ಬಂಟಿಯಾಗಿ ಎದುರಿಸಿ, ಕೊನೆಗೆ ತನ್ನಲ್ಲಿರುವ ಗುಂಡು ಖಾಲಿಯಾಗುತ್ತಿದ್ದಂತೆ, ಅಂತಿಮ ಗುಂಡನ್ನು ತನಗೆ ತಾನೇ ಹಾರಿಸಿಕೊಂಡು ತಾಯಿ ಭಾರತಿಗೆ ತನ್ನ ಪ್ರಾಣವನ್ನು ಅರ್ಪಿಸಿದ ಅಮರ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್.
ಚಂದ್ರಶೇಖರ್ ಆಜಾದ್ 1906 ಜುಲೈ 23 ರಂದು ಮಧ್ಯಪ್ರದೇಶದ ಭಾವರಾ ಎಂಬ ಹಳ್ಳಿಯಲ್ಲಿ ಜನಿಸಿದರು. ತಂದೆ ಸೀತಾರಾಮ ತಿವಾರಿ ಮತ್ತು ತಾಯಿ ಜಗರಾಣಿದೇವಿ. ಅವರದು ಬಹಳ ಬಡ ಕುಟುಂಬ. ಸೀತಾರಾಮ ತಿವಾರಿ ಒಂದು ತೋಟದಲ್ಲಿ ಮಾಲಿಯಾಗಿ ಕೆಲಸ ಮಾಡುತ್ತಿದ್ದರು. ಚಂದ್ರಶೇಖರ ಮನೆಗೆ ಸಹಾಯ ಮಾಡಲು ಓದನ್ನು ಬಿಟ್ಟು ಕೆಲಸಕ್ಕೆ ಸೇರಿದ. ಹೆಚ್ಚು ಹಣ ಸಂಪಾದಿಸಬೇಕೆಂದು ಮುಂಬಯಿಗೆ ಹೋದ. ಅಲ್ಲಿ ಕೂಲಿ ಕೆಲಸ ಮಾಡಿದ ಆದರೂ ಸಮಾಧಾನವಾಗಲಿಲ್ಲ. ಓದಿ ಸಂಸ್ಕೃತ ವಿದ್ವಾಂಸನಾಗಬೇಕೆಂದು ಕಾಶಿಗೆ ಹೋದ.
ಅದು 1921ನೇ ದೇಶದಲ್ಲಿ ಅಸಹಕಾರ ಚಳುವಳಿ ನಡೆಯುತ್ತಿತ್ತು. ಚಂದ್ರಶೇಖರ ತಾನೂ ಚಳುವಳಿಯಲ್ಲಿ ಭಾಗವಹಿಸಬೇಕೆಂದು ನಿರ್ಧರಿಸಿದ. ಒಂದು ದಿನ ಕಾಶಿಯಲ್ಲಿ ಒಂದು ಮೆರವಣಿಗೆ ನಡೆಯುತ್ತಿತ್ತು. ಹೋರಾಟ ಮಾಡುತ್ತಿದ್ದ ದೇಶಭಕ್ತರ ಮೇಲೆ ಪೊಲೀಸರು ಲಾಟಿ ಚಾರ್ಜ್ ಮಾಡಿದರು. ಮನಬಂದಂತೆ ಥಳಿಸಿದರು. ಇದನ್ನು ಕಂಡ ಚಂದ್ರಶೇಖರ ಸಿಟ್ಟಿಗೆದ್ದು ಒಬ್ಬ ಪೊಲೀಸನಿಗೆ ಕಲ್ಲಿನಿಂದ ಹೊಡೆದ. ಪೊಲೀಸರು ಅಟ್ಟಿಸಿಕೊಂಡು ಬಂದರು. ಚೆನ್ನಾಗಿ ಓಡಿ ಪೊಲೀಸರಿಗೆ ಸುಸ್ತು ಮಾಡಿಸಿದ ಚಂದ್ರಶೇಖರ ಕೊನೆಗೆ ಸಿಕ್ಕಿಬಿದ್ದ. ಮರುದಿನ ನ್ಯಾಯಲಯಕ್ಕೆ ಹಾಜರುಪಡಿಸಿದರು. ಅಲ್ಲಿನ ನ್ಯಾಯಾಧೀಶ ನಿನ್ನ ಹೆಸರೇನು? ಅಂದ. ಅವನಿಗೆ ಗೌರವ ಕೊಡಬಾರದೆಂದು ನಿರ್ಧರಿಸಿದ್ದ ಚಂದ್ರಶೇಖರ “ನನ್ನ ಹೆಸರು ಅಜಾದ್” ಎಂದ. ಸಿಟ್ಟಿಗೆದ್ದ ನ್ಯಾಯಾಧೀಶ ಹನ್ನೆರಡು ಛಡಿ ಏಟಿನ ಶಿಕ್ಷೆ ವಿಧಿಸಿದ. ಅಂದಿನಿಂದ ಚಂದ್ರಶೇಖರನ ಹೆಸರು “ಚಂದ್ರಶೇಖರ್ ಆಜಾದ್” ಆಗಿಹೋಯಿತು.
ನಂತರ ಪೂರ್ಣಪ್ರಮಾಣದ ಹೋರಾಟಕ್ಕೆ ಧುಮುಕಿದ ಆಜಾದ್ ಕ್ರಾಂತಿಕಾರಿ ರಾಮಪ್ರಸಾದ್ ಬಿಸ್ಮಿಲ್ ಅವರ ಶಿಷ್ಯನಾಗಿ ಹಿಂದೂಸ್ಥಾನ್ ರಿಪಬ್ಲಿಕನ್ ಆರ್ಮಿಯ ಸದಸ್ಯನಾದ. ಹಿಂದೂಸ್ಥಾನ್ ರಿಪಬ್ಲಿಕನ್ ಆರ್ಮಿಗೆ ಕ್ರಾಂತಿಕಾರಿ ಚಟುವಟಿಕೆ ನಡೆಸಲು ಹಣದ ಅವಶ್ಯಕತೆ ಇತ್ತು. ಹಣಕ್ಕಾಗಿ ಬ್ರಿಟಿಷ್ ಸರ್ಕಾರದ ಹಣವನ್ನು ದೋಚಬೇಕೆಂದು ಬಿಸ್ಮಿಲರು ನಿರ್ಧರಿಸಿದರು. 1925 ಆಗಸ್ಟ್ 9 ರಂದು ಕಾಕೋರಿ ಎಂಬಲ್ಲಿ ದರೋಡೆ ನಡೆಯಿತು. ಸರ್ಕಾರಿ ಖಜಾನೆಯನ್ನು ಕ್ರಾಂತಿಕಾರಿಗಳು ಲೂಟಿ ಮಾಡಿದರು. ಪೊಲೀಸರು ಎಲ್ಲ ಕ್ರಾಂತಿಕಾರಿಗಳನ್ನು ಬಂಧಿಸಿದರು. ಆದರೆ ಒಬ್ಬ ಮಾತ್ರ ಸಿಗಲಿಲ್ಲ ಅವನೇ ಆಜಾದ್.
ಕಾಕೋರಿ ದರೋಡೆಯ ಪ್ರಕರಣದಲ್ಲಿ ರಾಮಪ್ರಸಾದ್ ಮತ್ತು ಮೂರು ಕ್ರಾಂತಿಕಾರಿಗಳನ್ನು ಬ್ರಿಟಿಷ್ ಸರ್ಕಾರ ಗಲ್ಲಿಗೇರಿಸಿತು. ಹಿಂದೂಸ್ಥಾನ್ ರಿಪಬ್ಲಿಕನ್ ಆರ್ಮಿಯ ಸಂಪೂರ್ಣ ಜವಾಬ್ದಾರಿ ಆಜಾದನ ಮೇಲೆ ಬಿತ್ತು. ಈ ವೇಳೆಗೆ ಮತ್ತೊಬ್ಬ ತರುಣ ಕ್ರಾಂತಿಕಾರಿ ಬೆಳೆಯುತ್ತಿದ್ದ ಆತನ ಹೆಸರೇ ಭಗತ್ ಸಿಂಗ್. ಭಗತ್ ಸಿಂಗ್ ಹಿಂದೂಸ್ಥಾನ್ ರಿಪಬ್ಲಿಕನ್ ಆರ್ಮಿ ಸೇರಿ ಅದಕ್ಕೆ ಹೊಸ ರೂಪ ಕೊಟ್ಟ. ಸಂಸ್ಥೆಯ ಹೆಸರು ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿ ಆಯಿತು. ಇದಕ್ಕೆ ಚಂದ್ರಶೇಖರ್ ಅಜಾದ್ ಸೇನಾಪತಿಯಾದರು.
ಈ ವೇಳೆಗೆ ಬ್ರಿಟಿಷ್ ಸರ್ಕಾರ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಸೈಮನ್ ಎಂಬ ಆಯೋಗವನ್ನು ರಚಿಸಿತು. ಅದರ ವಿರುದ್ದ ಲಾಹೋರ್’ನಲ್ಲಿ ಪ್ರತಿಭಟನೆ ಮಾಡಬೇಕೆಂದು ಭಗತ್ ಸಿಂಗ್ ಮತ್ತು ಅಜಾದ್ ನಿರ್ಧರಿಸಿದರು. ಕ್ರಾಂತಿಕಾರಿ ನಾಯಕ ಲಾಲ ಲಜಪತ್ ರಾಯ್ ಶಾಂತಿಯುತ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಪೊಲೀಸರು ಅನಾಗರಿಕವಾಗಿ ವರ್ತಿಸಿದರು. ಸ್ಕಾಟ್ ಎಂಬ ಅಧಿಕಾರಿ ಲಾಲ ಲಜಪತ್ ರಾಯ್ ಅವರಿಗೆ ಬಲವಾಗಿ ಹೊಡೆದ. ಲಾಲ ಲಜಪತ್ ರಾಯ್ ಅವರು ನಿಧನರಾದರು. ಈ ಘಟನೆಯಿಂದ ಭಗತ್ ಸಿಂಗ್, ಆಜಾದ್ ಮತ್ತು ಗೆಳೆಯರಿಗೆ ದುಃಖವಾಯಿತು. ಸ್ಕಾಟ್’ನನ್ನು ಕೊಂದು ಸೇಡು ತೀರಿಸಿಕೊಳ್ಳಬೇಕೆಂದು ನಿರ್ಧರಿಸಿದರು.
ಸ್ಕಾಟ್’ನನ್ನು ಕೊಲ್ಲುವ ಯೋಜನೆಯನ್ನು ಆಜಾದ್ ರೂಪಿಸಿದರು. ಆಜಾದ್ , ಭಗತ್ ಸಿಂಗ್, ರಾಜಗುರು ಸಜ್ಜಾಗಿ ಲಾಹೋರ್ನ ಪೋಲಿಸ್ ಮುಖ್ಯ ಕಚೇರಿಯ ಬಳಿ ಸೇರಿದರು. ಆದರೆ ಸ್ಯಾಂಡರ್ಸ್ ಎಂಬ ಅಧಿಕಾರಿಯನ್ನೇ ಸ್ಕಾಟ್ ಎಂದು ಭಾವಿಸಿದ ಕ್ರಾಂತಿಕಾರಿಗಳು ಸ್ಯಾಂಡರ್ಸ್ನನ್ನು ಕೊಂದು ಪರಾರಿಯಾದರು. ಇದರಿಂದ ಬ್ರಿಟಿಷ್ ಸರ್ಕಾರ ಕ್ರಾಂತಿಕಾರಿಗಳನ್ನು ಹಿಡಿಯಲು ತೀವ್ರ ಪ್ರಯತ್ನ ನಡೆಸಿದರು ಆದರೆ ಪೋಲೀಸರ ಕೈಗೆ ಯಾವ ಕ್ರಾಂತಿಕಾರಿಯೂ ಸಿಗಲಿಲ್ಲ.
ಬ್ರಿಟಿಷ್ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶವನ್ನು ನೀಡಲು ಪಾರ್ಲಿಮೆಂಟಿನಲ್ಲಿ ಬಾಂಬ್ ಸ್ಪೋಟಿಸಲು ಹಿಂದುಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿ ನಿರ್ಧರಿಸಿತು. ಭಗತ್ ಸಿಂಗ್ ಮತ್ತು ಬುಟುಕೇಶ್ವರ ದತ್ತ ಅಸೆಂಬ್ಲಿಯಲ್ಲಿ ಬಾಂಬ್ ಸ್ಪೋಟಿಸಿ ಬ್ರಿಟಿಷರ ವಿರುದ್ದ ಪ್ರತಿಭಟಿಸಿ ಪೊಲೀಸರಿಗೆ ಶರಣಾದರು. ಈ ಯೋಜನೆಯ ಅಜಾದ್ ಮಾರ್ಗದರ್ಶನದಲ್ಲಿ ನಡೆಯಿತು. ಆಜಾದನನ್ನು ಹುಡುಕಲು ತೀರ್ವ ಪ್ರಯತ್ನವನ್ನು ಪೊಲೀಸರು ನಡೆಸಿದರು. ಆಜಾದ್ ಪೊಲೀಸರಿಗೆ ಸಿಗದೇ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ. ಕೈಗೆ ಸಿಕ್ಕರೂ ಸಿಗದಂತೆ ತಪ್ಪಿಸಿಕೊಂಡು ಬಿಡುತ್ತಿದ್ದ.
1931 ಫೆಬ್ರವರಿ 27 ರಂದು ಅಜಾದ್ ಒಬ್ಬರನ್ನು ಭೇಟಿ ಮಾಡಲು ಅಲಹಾಬಾದಿನ ಆಲ್ಫ್ರೆಡ್ ಪಾರ್ಕಿನ ಕಡೆ ಹೊರಟ. ಈ ವಿಷಯವನ್ನು ವೀರಭದ್ರ ತಿವಾರಿ ಎಂಬ ದೇಶದ್ರೋಹಿ ಪೊಲೀಸರಿಗೆ ತಿಳಿಸಿದ. ಎಂಬತ್ತು ಮಂದಿ ಪೊಲೀಸರು ಪಾರ್ಕ್ ಸುತ್ತ ಸುತ್ತುವರೆದರು. ಕಾರಿನಲ್ಲಿ ಬಂದ ನಾಟಬಾಪರ್ ಎಂಬ ಅಧಿಕಾರಿ ಆಜಾದ್ ತೊಡೆಗೆ ಗುರಿಯಿಟ್ಟು ಹೊಡೆದ. ಆ ಗುಂಡು ಆಜಾದ್ಗೆ ತಾಕಿತು. ಅಪಾಯದ ಅರಿವಾದ ಕೂಡಲೇ ಆಜಾದ್ ತನ್ನ ಸ್ನೇಹಿತನನ್ನು ರಕ್ಷಿಸಿ ಹೋರಾಟಕ್ಕೆ ಸಜ್ಜಾದ. ಕೈಯಲ್ಲಿ ಬಂದೂಕು ಹಿಡಿದು ಒಂದೇ ಸಮನೆ ಗುಂಡು ಹಾರಿಸಿದ. 80 ಪೊಲೀಸರು ಮತ್ತು ಒಬ್ಬ ಆಜಾದ್. ಆಜಾದ್ ಚಿರತೆಯಂತೆ ಓಡಾಡುತ್ತಾ ಪೊಲೀಸರಿಗೆ ತಕ್ಕ ಉತ್ತರ ನೀಡಿದ. ಅರ್ಧ ಗಂಟೆಗೂ ಹೆಚ್ಚು ಕಾಲ ಯುದ್ದ ಮಾಡಿದ ಆಜಾದ್ಗೆ ತನ್ನ ಬಳಿಯಿರುವ ಗುಂಡಿನ ಲೆಕ್ಕವಿತ್ತು. ಕೊನೆಯ ಗುಂಡು ಉಳಿದಿತ್ತು. ಜೀವಂತವಾಗಿ ಪೋಲೀಸರ ಕೈಗೆ ಸಿಗಬಾರದೆಂದು ನಿರ್ಧರಿಸಿದ್ದ ಆಜಾದ್ ಆ ಒಂದು ಗುಂಡನ್ನು ತಲೆಗೆ ಹೊಡೆದುಕೊಂಡು ಸೇನಾನಿಯಂತೆ ತನ್ನ ತಾಯಿ ಭಾರತಿಗೆ ಕುಸುಮದಂತೆ ತನ್ನ ಪ್ರಾಣವನ್ನು ಅರ್ಪಿಸಿದ.
ಇಂದು ಆಜಾದ್ ಬಲಿದಾನ ದಿವಸ. ಆಜಾದ್ ಅವರ ಅಪ್ರತಿಮ ದೇಶ ಪ್ರೇಮ, ಸಂಘಟನಾ ಕೌಶಲ್ಯ, ಚತುರತೆ ನಮಗೆ ಆದರ್ಶವಾಗಲಿ. ಆಜಾದ್ ಎಂಬ ಅಮರ ಕ್ರಾಂತಿಕಾರಿ ನಮ್ಮೆಲ್ಲರ ಹೃದಯದಲ್ಲಿ ನೆಲೆಸಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.