ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಬಜೆಟ್ ಮಂಡಿಸಿದ ಬಳಿಕ ವಿತ್ತ ಸಚಿವ ಅರುಣ್ ಜೇಟ್ಲಿ ಟಿವಿ ಸಂದರ್ಶನವೊಂದರಲ್ಲಿ ಹೇಳಿದ ಮಾತುಗಳನ್ನು ಆರ್ಥಿಕ ತಜ್ಞರನ್ನು ಹೊರತುಪಡಿಸಿ ಬಹುಶಃ ಇನ್ನಾರೂ ಅಷ್ಟಾಗಿ ಗಮನಿಸಿರಲಿಕ್ಕಿಲ್ಲ. ಆದರೆ ಆ ಮಾತುಗಳು ಭಾರತದ ಆರ್ಥಿಕ ಕ್ಷೇತ್ರದ ಮೇಲೆ ಕ್ಷಕಿರಣ ಬೀರುವಂತಿವೆ. ಅವರು ಹೇಳಿದ್ದಿಷ್ಟು : ’ಭಾರತೀಯರು ಸಾಮಾನ್ಯವಾಗಿ ಒಳ್ಳೆಯವರು. ಬೇರೆ ಯಾರಿಗೆ ಹೆದರದಿದ್ದರೂ ದೇವರಿಗೆ ಮಾತ್ರ ಹೆದರುತ್ತಾರೆ. ಮೌಲ್ಯಗಳಿಗೆ ಬೆಲೆ ಕೊಡುತ್ತಾರೆ. ಆದರೆ ತೆರಿಗೆ ವಂಚನೆಯನ್ನು ನೈತಿಕ ಅಪರಾಧ ಎಂದು ಅವರು ಯೋಚಿಸುವುದೇ ಇಲ್ಲ. ತೆರಿಗೆ ವಂಚನೆ ಸರ್ಕಾರಕ್ಕೆ ಬಗೆಯುವ ಮೋಸವೆಂದು ಜನರಿಗೆ ಅನಿಸುವುದೇ ಇಲ್ಲ. ಬದಲಿಗೆ ಇದು ಜಾಣತನ ಎಂದುಕೊಳ್ಳುತ್ತಾರೆ. ತೆರಿಗೆ ಕಟ್ಟುವವರನ್ನು ಮೂರ್ಖರು ಎಂದೂ, ತೆರಿಗೆ ವಂಚಿಸುವವರನ್ನು ಚಾಣಾಕ್ಷರು ಎಂದೂ ಭಾವಿಸಲಾಗುತ್ತದೆ. ಬೇರೆಲ್ಲಾ ವಿಷಯಗಳಲ್ಲಿ ಸಾಮಾನ್ಯವಾಗಿ ಕಾನೂನನ್ನು ಗೌರವಿಸುವ ಸಮಾಜ, ತೆರಿಗೆಯ ವಿಷಯಕ್ಕೆ ಬಂದಾಗ ಮಾತ್ರ ಅಪ್ರಾಮಾಣಿಕತೆ ಹಾಗೂ ಅನೈತಿಕತೆಯನ್ನು ಸರಿ ಎಂದೇ ಒಪ್ಪಿಕೊಳ್ಳುತ್ತದೆ. ಇದರ ಪರಿಣಾಮವಾಗಿ ದೇಶದಲ್ಲಿ ಇವತ್ತಿಗೂ ತೆರಿಗೆ ವ್ಯಾಪ್ತಿಗೆ ಬರುವಷ್ಟು ಆದಾಯ ಇರುವವರು ಸಾಕಷ್ಟು ಜನರಿದ್ದರೂ ಆದಾಯ ತೆರಿಗೆ ಪಾವತಿಸುವವರು ಶೇ. 1ರಷ್ಟು ಮಾತ್ರ’.
ಅರುಣ್ ಜೇಟ್ಲಿ ಪಾರ್ಲಿಮೆಂಟ್ನಲ್ಲಿ ಮಂಡಿಸಿದ ಬಜೆಟ್ನಲ್ಲಿ ಎಷ್ಟು ಭಾರತೀಯರು ತೆರಿಗೆ ಕಟ್ಟುತ್ತಾರೆ ಎಂಬುದರ ಬಗ್ಗೆ ಖಚಿತ ಮಾಹಿತಿಗಳಿವೆ. 130 ಕೋಟಿ ಜನರಿರುವ ದೇಶದಲ್ಲಿ ತೆರಿಗೆ ರಿಟರ್ನ್ಸ್ ಸಲ್ಲಿಸುವವರು ಕೇವಲ 3.7 ಕೋಟಿ ಮಂದಿ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಅವರಲ್ಲಿ ನಾವು ಆದಾಯ ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ ಎಂದು ನುಣುಚಿಕೊಳ್ಳುವವರು 99 ಲಕ್ಷ ಮಂದಿ. ಇನ್ನುಳಿದವರು ತೆರಿಗೆ ಕಟ್ಟುತ್ತಾರೆ. ಜೇಟ್ಲಿ ಇನ್ನೊಂದು ಸಂಗತಿಯನ್ನೂ ಹೊರಗೆಡವಿದ್ದಾರೆ. ದೇಶದಲ್ಲಿ 1.25 ಕೋಟಿ ಜನ ಕಾರು ಖರೀದಿಸಿದ್ದಾರೆ. 2 ಕೋಟಿ ಜನರು ವಿದೇಶ ಪ್ರವಾಸ ಮಾಡಿದ್ದಾರೆ. ಕಾರು ಖರೀದಿಸಲು, ವಿದೇಶ ಪ್ರವಾಸ ಮಾಡಲು ತಾಕತ್ತು ಇರುವವರು ಆದಾಯ ತೆರಿಗೆ ಪಾವತಿಸಲು ಮಾತ್ರ ಅಸಮರ್ಥರು ಎಂದರೆ ಅದಕ್ಕೇನರ್ಥ? ತೆರಿಗೆ ಕಟ್ಟುವ ಶಕ್ತಿಯಿದ್ದರೂ ಅಥವಾ ತೆರಿಗೆ ಕಟ್ಟಲೇಬೇಕಿದ್ದರೂ ಅದರಿಂದ ಜನರು ತಪ್ಪಿಸಿಕೊಳ್ಳುತ್ತಿರುವುದನ್ನು ಪರೋಕ್ಷವಾಗಿ ಸಾಬೀತುಪಡಿಸುವ ಇನ್ನಷ್ಟು ಅಂಕಿ ಅಂಶಗಳನ್ನು ಜೇಟ್ಲಿ ನೀಡಿದ್ದಾರೆ. ಒಟ್ಟಾರೆ ಜೇಟ್ಲಿ ಒದಗಿಸಿದ ಮಾಹಿತಿಯನ್ನು ವಿಶ್ಲೇಷಿಸಿದರೆ, ಭಾರತೀಯರಿಗೆ ತೆರಿಗೆ ಕಟ್ಟಲು ಮನಸ್ಸಿಲ್ಲ. ಆದರೆ ನಮ್ಮಲ್ಲಿ ಸೌಲಭ್ಯಗಳಿಲ್ಲ, ಅದಿಲ್ಲ, ಇದಿಲ್ಲ ಎಂದು ಸರ್ಕಾರಗಳನ್ನು ದೂಷಿಸುತ್ತ, ಗೊಣಗುತ್ತಿರುವ ಚಾಳಿಯನ್ನು ಮಾತ್ರ ಭಾರತೀಯರು ಬಿಟ್ಟಿಲ್ಲ.
ಮುಂದುವರಿದ ದೇಶಗಳಾದ ಅಮೆರಿಕಾ, ಇಂಗ್ಲೆಂಡ್ಗಳಲ್ಲಿ ಹಾಗಿದೆ, ಅಲ್ಲಿ ಎಷ್ಟೊಂದು ಚೆನ್ನಾಗಿದೆ, ಚೀನಾದಲ್ಲಿ ಏನೆಲ್ಲ ಸೌಕರ್ಯಗಳಿವೆ ಎಂದು ಭೋಂಗು ಬಿಡುತ್ತ, ನಮ್ಮ ದೇಶದ ಪರಿಸ್ಥಿತಿ ಮಾತ್ರ ಇಷ್ಟೇ ಎಂದು ಜರಿಯುವವರು ನಮ್ಮ ಸುತ್ತಮುತ್ತ ಸಾಕಷ್ಟಿದ್ದಾರೆ. ಆದರೆ ನಮ್ಮ ಜನರು ಹೊಗಳುವ ಅಮೆರಿಕಾದಲ್ಲಿ ಆದಾಯ ತೆರಿಗೆ ಪಾವತಿಸುವವರ ಪ್ರಮಾಣ ಶೇ. 53 ರಷ್ಟು ! ನಮ್ಮಷ್ಟೇ ಆರ್ಥಿಕತೆ ಹೊಂದಿರುವ ಚೀನಾದಲ್ಲೂ ಆದಾಯ ತೆರಿಗೆ ಕಟ್ಟುವವರು ಶೇ. 8 ರಷ್ಟು. ಭಾರತದಲ್ಲಿ ಮಾತ್ರ ಆದಾಯ ತೆರಿಗೆ ಪಾವತಿಸುವವರು ಶೇ. 1 ರಷ್ಟು ಮಾತ್ರ. ಭಾರತೀಯರಿಗಿಂತ ಕಡಿಮೆ ಆದಾಯ ತೆರಿಗೆ ಕಟ್ಟುವವರಿದ್ದರೆ ಅವರು ಪಾಕಿಸ್ಥಾನೀಯರು.
ಆದಾಯ ತೆರಿಗೆ ಕಟ್ಟದಿದ್ದರೂ ವ್ಯಾಟ್, ಸೇವಾತೆರಿಗೆ, ಅಬಕಾರಿ ಸುಂಕ, ಕಸ್ಟಮ್ಸ್ ಸುಂಕ ಇತ್ಯಾದಿ ಹೆಸರಿನಲ್ಲಿ ಪರೋಕ್ಷ ತೆರಿಗೆಗಳನ್ನು ಪ್ರತಿಯೊಬ್ಬ ಭಾರತೀಯನು ಪಾವತಿಸುತ್ತಲೇ ಇರುತ್ತಾನೆ ಎಂದು ಕೆಲವರು ಕ್ಯಾತೆ ತೆಗೆಯಬಹುದು. ಆದರೆ ದೇಶದ ಬೊಕ್ಕಸಕ್ಕೆ ಬರುವ ಆದಾಯದಲ್ಲಿ ಕಾರ್ಪೊರೇಟ್ ಹಾಗೂ ವೈಯಕ್ತಿಕ ಆದಾಯ ತೆರಿಗೆಯ ಮೊತ್ತವೇ ಬಹುದೊಡ್ಡದು. ಪರೋಕ್ಷ ತೆರಿಗೆ ಪ್ರಮಾಣ ಅದಕ್ಕಿಂತಲೂ ಕಮ್ಮಿ.
ಆದಾಯ ತೆರಿಗೆಯನ್ನು ಪ್ರಾಮಾಣಿಕವಾಗಿ ಪಾವತಿಸುವವರಲ್ಲಿ ಸಂಬಳದಾರರ ಪ್ರಮಾಣವೇ ಹೆಚ್ಚು. ಸಂಬಳದಾರರಿಗೆ ತೆರಿಗೆ ಪಾವತಿಸದೆ ಅನ್ಯ ಮಾರ್ಗವೇ ಇಲ್ಲ. ಇತರ ಸಂಘಟಿತ ಹಾಗೂ ಅಸಂಘಟಿತ ಉದ್ಯೋಗಿಗಳು, ಉದ್ದಿಮೆದಾರರು, ಮತ್ತಿತರರು ದೊಡ್ಡಪ್ರಮಾಣದಲ್ಲಿ ತೆರಿಗೆ ವಂಚಿಸುತ್ತಿರುವುದು ಗುಟ್ಟೇನಲ್ಲ. ಇವರೆಲ್ಲಾ ಸರ್ಕಾರಕ್ಕೆ ಕೊಡಬೇಕಾದ ತೆರಿಗೆಯನ್ನು ಸಕಾಲದಲ್ಲಿ ಪಾವತಿಸಿದರೆ ದೇಶದ ನಿರೀಕ್ಷಿತ ಅಭಿವೃದ್ಧಿ ಕಷ್ಟಸಾಧ್ಯವೇನಲ್ಲ. ಮಾಧ್ಯಮಗಳಲ್ಲಿ ಆಗಾಗ ವರದಿಯಾಗುವ, ಉದ್ಯಮಿಗಳು, ಶಾಸಕರು, ಸಚಿವರುಗಳ ಮನೆಗೆ ಆದಾಯ ತೆರಿಗೆ ಇಲಾಖೆ ದಾಳಿಮಾಡಿ ಕೋಟಿ ಕೋಟಿ ನಗದು, ಕೇಜಿಗಟ್ಟಲೆ ಚಿನ್ನಾಭರಣ ವಶಮಾಡಿಕೊಂಡ ಸುದ್ದಿಗಳನ್ನು ಓದಿ ಒಂದು ಕ್ಷಣ ಆಶ್ಚರ್ಯದಿಂದ ಕಣ್ಣು ಬಿಡುತ್ತೇವೆ. ನೂರಿನ್ನೂರು ಕೋಟಿ ರೂ. ನಗದು ಹಣವನ್ನು ಮನೆಯಲ್ಲೇ ಇಟ್ಟುಕೊಳ್ಳುವವರ ನಿಜವಾದ ಉದ್ದೇಶವಾದರೂ ಏನು? ಅದನ್ನು ಬ್ಯಾಂಕಿಗೆ ಜಮಾಮಾಡಿ, ಅಗತ್ಯವಿದ್ದಾಗ ನಗದು ಪಡೆದುಕೊಳ್ಳಬಹುದಲ್ಲವೆ? ಆದರೆ ಈ ಮಂದಿ ಅದನ್ನು ಬ್ಯಾಂಕಿಗೆ ಜಮಾ ಮಾಡುವುದಿಲ್ಲ. ಏಕೆಂದರೆ ಜಮಾ ಮಾಡಿದರೆ ಅದು ಸರ್ಕಾರದ ಲೆಕ್ಕಕ್ಕೆ ಸಿಗುತ್ತದೆ. ಸರ್ಕಾರದ ಲೆಕ್ಕದಿಂದ ತಪ್ಪಿಸಿಕೊಳ್ಳಲೆಂದೇ ಇಂತಹ ಹುನ್ನಾರ.
ಈಚೆಗೆ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿ ಇದು. ಮಿನಿ ಗೂಡ್ಸ್ ಲಾರಿಯಲ್ಲಿ ಈರುಳ್ಳಿ ಮತ್ತು ಆಲೂಗಡ್ಡೆ ಮೂಟೆಗಳ ಮಧ್ಯೆ ಕೋಟ್ಯಾಂತರ ರೂಪಾಯಿ ಹೊಸನೋಟುಗಳ ಕಂತೆಗಳನ್ನಿಟ್ಟು ಬೆಂಗಳೂರಿನಿಂದ ಅಕ್ರಮವಾಗಿ ಕೇರಳಕ್ಕೆ ಸಾಗಿಸಲು ಯತ್ನಿಸಿದ ಜಾಲವನ್ನು ಸಿಸಿಬಿ ಪೊಲೀಸರು ಬಯಲಿಗೆಳೆದಿದ್ದರು. ಮೂವರು ಆರೋಪಿಗಳನ್ನು ಬಂಧಿಸಿ 4.12 ಕೋಟಿ ನಗದು ಹಣವನ್ನು ಅವರು ವಶಕ್ಕೆ ಪಡೆದಿದ್ದರು. ಆ ಪೈಕಿ 5 ಲಕ್ಷ ರೂ. ಮಾತ್ರ 100 ರೂ. ಮುಖಬೆಲೆಯ ನೋಟುಗಳಾಗಿದ್ದು , ಉಳಿದ ಅಷ್ಟೂ ಮೊತ್ತ ಹೊಸ 2 ಸಾವಿರ ಹಾಗೂ 500 ಮುಖಬೆಲೆಯ ನೋಟುಗಳ ರೂಪದಲ್ಲಿತ್ತು. ಈ ದಂಧೆ ಅದೆಷ್ಟು ದಿನಗಳಿಂದ ನಡೆಯುತ್ತಿತ್ತೋ ಗೊತ್ತಿಲ್ಲ. ಸ್ಥಳೀಯರೊಬ್ಬರು ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆಗಿಳಿದ ಸಿಸಿಬಿ ಪೊಲೀಸರು, ಟೊಯೊಟಾ ಫಾರ್ಚುನರ್ ಕಾರಿನಿಂದ ಪ್ಲಾಸ್ಟಿಕ್ ಕವರ್ನಲ್ಲಿ ತಂದಿದ್ದ ನೋಟಿನ ಕಂತೆಗಳನ್ನು ಮಿನಿಲಾರಿಗೆ ತುಂಬುತ್ತಿದ್ದಾಗ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದರು. ಈ ಹಣ ಕೇರಳ ಮೂಲದ ಜ್ಯುವೆಲರಿ ಕಂಪೆನಿಯೊಂದಕ್ಕೆ ಸೇರಿದ್ದು ಎನ್ನುವ ಶಂಕೆಯಿದೆ. ತಮ್ಮ ಶಾಖೆಗಳಲ್ಲಿ ಬಂದಿರುವ ಆದಾಯವನ್ನು ಮರೆಮಾಚಲು ಈ ರೀತಿ ಆಲೂಗಡ್ಡೆ , ಈರುಳ್ಳಿ ಚೀಲದಲ್ಲಿ ಹಣ ಸಾಗಾಟಮಾಡಲು ಹುನ್ನಾರ ನಡೆಸಿದ್ದರೆಂದು ವರದಿ.
ಬೆಂಗಳೂರಿನ ಶೇಷಾದ್ರಿಪುರಂ ಲಿಂಕ್ ರಸ್ತೆಯ ಬ್ಯಾಂಕ್ ಆಫ್ ಬರೋಡಾ ಎಟಿಎಂ ಕೇಂದ್ರದ ಸಮೀಪವಿರುವ ಚರಂಡಿಯಲ್ಲಿ ಎಸೆಯಲಾಗಿದ್ದ ಅಮಾನ್ಯಗೊಂಡ 500, 1000 ಮುಖಬೆಲೆಯ ಲಕ್ಷಾಂತರ ಮೌಲ್ಯದ ನೋಟುಗಳನ್ನು ಆರಿಸಿಕೊಳ್ಳಲು ಜನರು ಮುಗಿಬಿದ್ದ ಘಟನೆಯೂ ಈಚೆಗೆ ವರದಿಯಾಗಿತ್ತು. ನಿಗದಿತ ಅವಯೊಳಗೆ ನೋಟು ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗದವರು ಬಹುಶಃ ಅದನ್ನು ಚರಂಡಿಗೆ ಎಸೆದು ಹೋಗಿದ್ದಿರಬಹುದು. ಲಕ್ಷಾಂತರ ಮೌಲ್ಯದ ಆ ಹಳೇ ನೋಟುಗಳನ್ನು ವಿನಿಮಯ ಮಾಡಿಕೊಂಡಿದ್ದರೆ ಅದು ಯಾರಿಗೆ ಸೇರಿದ ಹಣ ಎಂಬುದು ಪತ್ತೆಯಾಗಿ, ಅವರು ತೆರಿಗೆ ಕಟ್ಟಬೇಕಾಗುತ್ತಿತ್ತು. ತೆರಿಗೆಯಿಂದ ತಪ್ಪಿಸಿಕೊಳ್ಳಲೆಂದೇ ಅಮಾನ್ಯಗೊಂಡ ರಾಶಿ ರಾಶಿ ನೋಟುಗಳನ್ನು ಚರಂಡಿಗೆ ಎಸೆಯಲಾಗಿದೆ.
ಹಳೇ ನೋಟುಗಳನ್ನು ನಿಷೇಧ ಮಾಡಿದ ಬಳಿಕ ಈಗ ಎಲ್ಲರ ಲೆಕ್ಕವೂ ಸರ್ಕಾರಕ್ಕೆ ಪಕ್ಕಾ ಆಗಿದೆ. ತೆರಿಗೆ ಪಾವತಿಸಬೇಕಾದವರಲ್ಲಿ ಹೆಚ್ಚಿನವರು ಇನ್ನು ಮುಂದೆ ಆದಾಯ ತೆರಿಗೆ ವ್ಯಾಪ್ತಿಗೆ ಅನಿವಾರ್ಯವಾಗಿ ಬಂದೇ ಬರುತ್ತಾರೆ. ಅದೇ ಹಿನ್ನೆಲೆಯಲ್ಲಿ ಬಜೆಟ್ನಲ್ಲಿ ಎರಡು ದಶಕದ ನಂತರ ಜೇಟ್ಲಿ ಧೈರ್ಯವಾಗಿ ತೆರಿಗೆ ದರ ಇಳಿಸಿರುವುದು.
ಸಶಕ್ತ ಆರ್ಥಿಕತೆಯ ರಾಷ್ಟ್ರ
2007-08 ರಲ್ಲಿ ಜಾಗತಿಕ ಆರ್ಥಿಕ ಆಘಾತ ಸಂಭವಿಸಿದಾಗಲೂ ಭಾರತ ಮಾತ್ರ ನಲುಗಲಿಲ್ಲ. ಅಮೆರಿಕಾ, ಇಂಗ್ಲೆಂಡ್, ಯೂರೋಪಿನ ಮತ್ತಿತರ ರಾಷ್ಟ್ರಗಳು ಹಾಗೂ ಜಗತ್ತಿನ ಇನ್ನಿತರ ದೇಶಗಳು ಈ ಆಘಾತಕ್ಕೆ ತತ್ತರಿಸಿ ಹೋಗಿದ್ದವು. ಹಾಗೆ ನೋಡಿದರೆ ಆ ಎಲ್ಲಾ ದೇಶಗಳ ಆರ್ಥಿಕ ಸ್ಥಿತಿ ಭಾರತಕ್ಕಿಂತ ಅತ್ಯುತ್ತಮವಾಗಿಯೇ ಇತ್ತು. ಆದರೂ ಜಾಗತಿಕ ಆರ್ಥಿಕ ಆಘಾತವನ್ನು ತಡೆದುಕೊಳ್ಳಲು ಅವುಗಳಿಗೆ ಸಾಧ್ಯವಾಗಲಿಲ್ಲ. ಭಾರತದ ಪಾಲಿಗೆ ಈ ಜಾಗತಿಕ ಆಘಾತ ಯಾವ ದುಷ್ಪರಿಣಾಮವನ್ನು ಬೀರಲಿಲ್ಲ. ಏಕೆಂದರೆ ಭಾರತದ ಆರ್ಥಿಕತೆಯ ಹಿನ್ನೆಲೆಯೇ ವಿಭಿನ್ನ ಹಾಗೂ ವಿಶಿಷ್ಟ. ಇದು ಕುಟುಂಬ ಪ್ರಧಾನ ದೇಶ. ಪ್ರತಿಯೊಂದು ಕುಟುಂಬದಲ್ಲೂ ಅತಿ ಹೆಚ್ಚು ಮೊತ್ತದ ಉಳಿತಾಯ ವ್ಯವಸ್ಥೆ ಲಾಗಾಯ್ತಿನಿಂದಲೂ ಇದೆ. ಒಬ್ಬ ಸಾಮಾನ್ಯ ಬಡವ ಕೂಡ ಭವಿಷ್ಯಕ್ಕಿರಲೆಂದು ಒಂದಷ್ಟು ಹಣವನ್ನು ಉಳಿತಾಯ ಮಾಡಿರುತ್ತಾನೆ. ಅಲ್ಲದೆ ಸ್ವಂತ ಉದ್ಯೋಗ, ನಂಬಿಕೆ, ವಿಶ್ವಾಸ, ವ್ಯಾಪಕ ಉದ್ಯಮಶೀಲತೆ, ಯಾವುದೇ ಉದ್ಯಮಕ್ಕೆ ಸರ್ಕಾರವನ್ನೇ ನಂಬಿ ಕೂರದ ಜಾಯಮಾನ… ಮುಂತಾದ ಹಿನ್ನೆಲೆ ಇರುವುದರಿಂದ ಜಾಗತಿಕ ಮಟ್ಟದಲ್ಲಿ ಯಾವುದೇ ಆರ್ಥಿಕ ಹೊಡೆತ ಇದ್ದಾಗಲೂ ಭಾರತವನ್ನು ಅದು ಬಾಧಿಸದು. ಭಾರತೀಯರು ಉಳಿತಾಯಕ್ಕೆ ಮಹತ್ವ ಕೊಡುತ್ತಾರೆಯೇ ಹೊರತು ದುಂದುವೆಚ್ಚಕ್ಕಲ್ಲ. ಅಮೆರಿಕಾ, ಇಂಗ್ಲೆಂಡ್ನಂತಹ ದೇಶಗಳಲ್ಲಿ ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕೆಂಬ ತಹತಹ ಆ ದೇಶದ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಿದೆ.
ನಿಮಗೆ ಆಶ್ಚರ್ಯವಾಗಬಹುದು. ಭಾರತ ಭಾರೀ ಪ್ರಮಾಣದಲ್ಲಿ ಚಿನ್ನವನ್ನೇನೂ ಉತ್ಪಾದಿಸುವುದಿಲ್ಲ. ದಕ್ಷಿಣ ಆಫ್ರಿಕಾ ದೇಶಗಳಿಗೆ ಹೋಲಿಸಿದರೆ ಇಲ್ಲಿ ಚಿನ್ನದ ಗಣಿಗಳು ಕಡಿಮೆ. ಆದರೆ ಭಾರತ ಪ್ರತಿವರ್ಷ 25 ಸಾವಿರ ಟನ್ ಚಿನ್ನವನ್ನು ರಫ್ತುಮಾಡುತ್ತಿದೆ ! ಜಾಗತಿಕವಾಗಿ ಅತಿಹೆಚ್ಚು ಚಿನ್ನವನ್ನು ರಫ್ತು ಮಾಡುವ ದೇಶವೆಂದರೆ ಭಾರತ! ಕುಟುಂಬ, ಸಂಸ್ಕೃತಿ, ಪರಂಪರೆಯ ಹಿನ್ನೆಲೆ ಹೊಂದಿರುವ ಪ್ರಾಚೀನ ಆರ್ಥಿಕತೆ ನಮ್ಮದು. ಹಾಗಾಗಿಯೇ ಈಗಲೂ ಭಾರತ ನಿರಂತರವಾಗಿ ಆರ್ಥಿಕ ಪ್ರಗತಿಯತ್ತ ಧಾವಿಸುತ್ತಲೇ ಇದೆ. ಭಾರತದಲ್ಲಿ 85 ದಶಲಕ್ಷ ಉದ್ಯಮ ಘಟಕಗಳಿರುವುದು ಈ ದೇಶವನ್ನು ಇನ್ನಷ್ಟು ಸಶಕ್ತಗೊಳಿಸಿದೆ. ಜಾಗತಿಕ ಮಟ್ಟದ ಯಾವುದೇ ಆರ್ಥಿಕ ಬಿರುಗಾಳಿ ಬೀಸಿದರೂ ಭಾರತಕ್ಕೆ ತೊಂದರೆಯಾಗದಿರುವುದು ಇದೇ ಕಾರಣಕ್ಕೆ. ನಮ್ಮ ಆರ್ಥಿಕತೆ ಇನ್ನಷ್ಟು ಸದೃಢವಾಗಲು ನಾವೆಲ್ಲಾ ನೀಡಬಹುದಾದ ಸಣ್ಣ ಕೊಡುಗೆಯೆಂದರೆ ತೆರಿಗೆ ವಂಚಿಸದಿರುವುದು. ತೆರಿಗೆ ವಂಚನೆ ನೈತಿಕ ಅಪರಾಧವೆಂಬ ಪ್ರಜ್ಞೆ ನಮ್ಮಲ್ಲಿ ಮೂಡಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.