ಹುಬ್ಬಳ್ಳಿ: ಗದಗ ಬಳಿ ಇರುವ ಕಪ್ಪತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸಲು ಆಗ್ರಹಿಸಿ ಫೆ. 13 ರಿಂದ ಫೆ. 15 ರವರೆಗೆ ಗದುಗಿನ ಗಾಂಧಿ ಪ್ರತಿಮೆ ಬಳಿ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದೇವೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್. ಆರ್. ಹಿರೇಮಠ ಹೇಳಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಪ್ಪತಗುಡ್ಡ ಉಳಿಸಿ ಹೋರಾಟ ಸಮಿತಿವತಿಯಿಂದ ವಿವಿಧೆಡೆ ಜನಾಂದೋಲನ ಏರ್ಪಡಿಸಲಾಗಿದೆ. ಈಗ ಎರಡನೇ ಹಂತದ ಜನಾಂದೋಲನ ಮಾಡಲಾಗುತ್ತಿದೆ. ಗದಗನ ತೋಂಟದಾರ್ಯ ಮಠದ ಮಹಾಸ್ವಾಮೀಜಿಯವರು ಕಪ್ಪತಗುಡ್ಡ ಉಳಿಸಿ ಕೊಡಿ ಎಂದು ಸರ್ಕಾರದ ಮೇಲೆ ಒತ್ತಡ ಹೇರಲು ಡಂಬಳ ಗ್ರಾಮದಲ್ಲಿ ಜನಾಭಿಪ್ರಾಯ ಸಂಗ್ರಹಿಸುತ್ತಿದ್ದಾರೆ ಎಂದರು.
ಬಲ್ದೋಟಾ ಕಂಪೆನಿಗೆ ಬಂಗಾರದ ಗಣಿಗಾರಿಕೆಗೆ ಸರ್ಕಾರ ಅವಕಾಶ ಕೊಟ್ಟಲ್ಲಿ ಕಪ್ಪತಗುಡ್ಡದ ಪರಿಸರ ನಾಶವಾಗಲಿದೆ. ಸೋಡಿಯಂ ಸೈನೇಡ್ ನಂತಹ ರಾಸಾಯನಿಕ ದ್ರಾವಣವನ್ನು ಗಣಿಗಾರಿಕೆಗೆ ಬಳಸುವುದರಿಂದ ಭೋಪಾಲ್ ನಲ್ಲಿ ನಡೆದ ದುರಂತ ಇಲ್ಲಿಯೂ ಆಗಬಹುದು. ಜನರಿಗೆ ರೋಗ ತಟ್ಟುವ ಭಯ ಮೂಡಿದ್ದು, ಕೂಡಲೇ ಸರ್ಕಾರ ತನ್ನ ಆದೇಶವನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಅಹೋರಾತ್ರಿ ಧರಣಿಯಲ್ಲಿ ಎಚ್.ಎಸ್.ದೊರೆಸ್ವಾಮಿ, ದೇವನೂರು ಮಹಾದೇವ, ಕೆ.ಎಸ್. ಪುಟ್ಟಣ್ಣಯ್ಯ ಸೇರಿದಂತೆ ಅನೇಕ ಸಂಘಟನೆಗಳ ಮುಖಂಡರು ಮತ್ತು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹಿರೇಮಠ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.