ವಿರಾಟ್ ಕೊಹ್ಲಿ, ಸಾಕ್ಷಿ ಮಲಿಕ್, ದೀಪಾ ಮಲ್ಲಿಕ್, ಕೈಲಾಶ ಖೇರ್ ಇವರು ಈ ಬಾರಿ (2017) ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಕ್ರಿಕೆಟ್, ಸಿನಿಮಾ, ಸಂಗೀತ ಕ್ಷೇತ್ರದ ಪ್ರಮುಖರು. ಚಿರಪರಿಚಿತ ಮುಖಗಳಿಗೇ ಪದ್ಮಶ್ರೀ ಮುಂತಾದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳು ದೊರೆತದ್ದು ನಮಗೆ ಗೊತ್ತಾಗುವುದು ಸಹಜ. ಇವರೊಂದಿಗೇ ಆಯ್ಕೆಯಾದ ಇನ್ನೂ ಅಪರೂಪದ ವ್ಯಕ್ತಿಗಳಿದ್ದಾರೆ. ಅವರಲ್ಲಿ ಕೆಲವರ ಬದುಕಂತೂ ಅಕ್ಷರಶಃ ಸ್ಫೂರ್ತಿದಾಯಕ. ಆಯ್ದ ಕೆಲವರ ಬದುಕನ್ನು ಸಂಕ್ಷಿಪ್ತವಾಗಿ ಅವಲೋಕಿಸೋಣ.
ಡಾ.ಭಕ್ತಿ ಯಾದವ
91 ವರ್ಷ ವಯಸ್ಸಿನ ವಯೋವೃದ್ಧೆ ಇವರು. ವೃತ್ತಿಯಿಂದ ಪ್ರಸೂತಿ ತಜ್ಞೆ. ಕಳೆದ 68 ವರ್ಷಗಳಿಂದ ಇದುವರೆಗೂ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. 68 ವರ್ಷಗಳ ವೃತ್ತಿ ಜೀವನದಲ್ಲಿ ಮಧ್ಯ ಪ್ರದೇಶ ಹಾಗೂ ಉತ್ತರ ಪ್ರದೇಶದಲ್ಲಿ ಅಂದಾಜು 1000 ಕ್ಕೂ ಹೆಚ್ಚು ಹೆರಿಗೆಗಳನ್ನು ಉಚಿತವಾಗಿ ಮಾಡಿಸಿರುವುದು ಇವರ ವೈಶಿಷ್ಟ್ಯ.
ವಯಸ್ಸಿಗನುಗುಣವಾಗಿ ಸದ್ಯ ದೈಹಿಕವಾಗಿ ತುಸು ಕ್ಷೀಣವಾಗುತ್ತ ಸಾಗಿದ್ದರೂ ಡಾ.ಭಕ್ತಿ ಯಾದವ ಅವರು, ಇಂದಿಗೂ ತಮ್ಮ ಸೇವಾಕಾರ್ಯ ಮಂದುವರೆಸಿದ್ದು ಅವರ ಮನೋಬಲಕ್ಕೆ ಸಾಕ್ಷಿ.
ವಿಶೇಷವೆಂದರೆ ಇಂದೋರ್ನಲ್ಲಿ ಎಂಬಿಬಿಎಸ್ ಮಾಡಿದ ಮೊದಲ ಮಹಿಳೆ ಡಾ.ಭಕ್ತಿ ಯಾದವ್. ಆರಂಭದ ದಿನಗಳಲ್ಲಿಯೇ ಅವರು ಸರ್ಕಾರಿ ನೌಕರಿಯನ್ನು ನಿರಾಕರಿಸಿ, ಕ್ಲಾಥ್ ಮಿಲ್ವೊಂದರ ಕಾರ್ಮಿಕರಿಗೆಂದು ಇದ್ದ ನಂದಲಾಲ್ ಭಂಡಾರಿ ಮೆಟರ್ನಿಟಿ ಹೋಮ್ಗೆ ಸೇರಿಕೊಳ್ಳುತ್ತಾರೆ. ಮಧ್ಯಪ್ರದೇಶದಲ್ಲಿರುವ ಇವರು ಡಾ.ದಾದಿ ಎಂದೇ ಚಿರಪರಿಚಿತರು.
ಮೀನಾಕ್ಷಿ ಅಮ್ಮ
ಕಳೆದ 68 ವರ್ಷಗಳಿಂದ ಕಲರಿಪಯಟ್ಟು ಅಭ್ಯಾಸ ಹಾಗೂ ತರಬೇತಿ ನಿರತ ಮೀನಾಕ್ಷಿ ಅಮ್ಮ ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೇರಳದ ವತಕರಾ ಗ್ರಾಮದಲ್ಲಿ ಕಾದಥನದನ್ ಕಲರಿ ಸಂಘಮ್ ಎಂಬ ಶಾಲೆಯನ್ನು ಇವರು ಸ್ಥಾಪಿಸಿದ್ದಾರೆ.
ಮೀನಾಕ್ಷಿ ಅಮ್ಮನವರು ತಮ್ಮ 7ನೇ ವಯಸ್ಸಿನಲ್ಲಿಯೇ ಕಲರಿ ವಿದ್ಯೆಯನ್ನು ಮೊದಲು ಅವರ ತಂದೆಯ ಬಳಿ ಕಲಿಯುತ್ತಾರೆ. ಅಲ್ಲಿಂದ ಇದುವರೆಗೂ ಕಲರಿ ಸಂಸ್ಕೃತಿಗಾಗಿಯೇ ತಮ್ಮ ಜೀವನ ಮುಡಿಪಿಟ್ಟಿರುವುದು ವಿಶೇಷ.
76 ವರ್ಷ ವಯಸ್ಸಿನ ಮೀನಾಕ್ಷಿ ಅವರು ಕೇರಳದ ನಿವಾಸಿಯಾಗಿದ್ದು, ಮಾರ್ಷಿಯಲ್ ಆರ್ಟ್ನಲ್ಲೂ ವಿಶೇಷ ಪರಿಣಿತಿ ಪಡೆದಿದ್ದಾರೆ.
ದಾರಿಪಲ್ಲಿ ರಾಮಯ್ಯ
ಭಾರತ ಹಸಿರಿನಿಂದ ಕಂಗೊಳಿಸಬೇಕೆಂಬ ಕನಸು. ಇದುವರೆಗೂ ಏನಿಲ್ಲವೆಂದರೂ 1 ಕೋಟಿಗೂ ಹೆಚ್ಚು ಗಿಡವನ್ನು ನೆಟ್ಟಿರುವ ಹಿರಿಮೆ ಅವರದು. ತೆಲಂಗಾಣ ನಿವಾಸಿ ಸಮಾಜ ಸೇವೆಯಲ್ಲಿ ದಾರಿಪಲ್ಲಿ ರಾಮಯ್ಯ ಅವರೇ ಇಂಥ ಅಪರೂಪದ ಪರಿಸರ ಸ್ನೇಹಜೀವಿ. ಇವರು ಚೆಟ್ಲಾ ರಾಮಯ್ಯ ಎಂದೇ ಪರಿಚಿತ. (ಚೆಟ್ಟು ಎಂದರೆ ಗಿಡ ಎಂದರ್ಥ)
ಎಲ್ಲಿ ನೋಡಿದರೂ ಹಸಿರೇ ಕಾಣಬೇಕು ಎಂಬ ಧ್ಯೇಯದ ರಾಮಯ್ಯ ತಮ್ಮ ಸ್ವಂತ ಖರ್ಚಿನಿಂದ ಗಿಡನೆಡುತ್ತಾರೆ. ಅವರ ಈ ಹಸಿರಿನ ಹೋರಾಟ ಒಂಟಿಯಾಗಿಲ್ಲ. ರಾಮಯ್ಯ ಅವರ ಪತ್ನಿ ಜಾನಮ್ಮ ಅವರ ಸಾಥ್ ಕೂಡಾ ಗಣನೀಯವಾಗಿದೆ.
ಡಾ.ಸುಭ್ರತೋ ದಾಸ್
ರಾಷ್ಟ್ರೀಯ ಹೆದ್ದಾರಿಗಳಲ್ಲಾಗುವ ಅಪಘಾತಗಳಲ್ಲಿ ಗಾಯಗೊಂಡವರಿಗೆ ತಕ್ಷಣ ವೈದ್ಯಕೀಯ ನೆರವನ್ನು ನೀಡುವ ಮಹತ್ತರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಡಾ.ಸುಬ್ರತೋ ದಾಸ್.
ಗುಜರಾತ್ನಲ್ಲಿ ಲೈಫ್ಲೈನ್ ಫೌಂಡೇಶನ್ ಆರಂಭಿಸಿದ್ದು, ಇದೀಗ ಮಹಾರಾಷ್ಟ್ರ, ಕೇರಳ, ರಾಜಸ್ಥಾನ ಹಾಗೂ ಪ.ಬಂಗಾಲಗಳಿಗೂ ಈ ಸೇವೆ ವಿಸ್ತರಿಸಿದ್ದು ವಿಶೇಷ. ಒಟ್ಟು 4000 ಕಿ.ಮೀ ವ್ಯಾಪ್ತಿಯಲ್ಲಿ ವೈದ್ಯಕೀಯ ನೆರವಿಗೆ ಅನುಕೂಲ ಮಾಡಿಕೊಟ್ಟ ಹಿರಿಮೆ ಡಾ.ದಾಸ್ ಅವರದು.
ಅಪಘಾತ ನಡೆದ ಸ್ಥಳಕ್ಕೆ ಇವರ ತಂಡ ಮಾಹಿತಿ ತಿಳಿದ 40 ನಿಮಿಷದೊಳಗೆ ಅಲ್ಲಿರುತ್ತದೆ. ಇದುವರೆಗೂ ಏನಿಲ್ಲವೆಂದರೂ ರಸ್ತೆ ಅಪಘಾತದಲ್ಲಿ ಗಾಯಗೊಂಡ 1,200 ಜನರನ್ನು ಉಳಿಸಿದ ಗರಿಮೆ ಇವರದು.
ಡಾ.ದಾಸ್ ಅವರ ಈ ಕಾರ್ಯಕ್ಕೆ ಅವರ ಅನುಭವವೇ ಮೂಲ ಪ್ರೇರಣೆಯಂತೆ. ಒಮ್ಮೆ ಅವರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೊಳಗಾಗುತ್ತಾರೆ. ಆಗ ಅವಶ್ಯಕವಾದ ತುರ್ತು ಸೇವೆಗಳು ಸಾಕಷ್ಟು ಪ್ರಮಾಣದಲ್ಲಿ ಇಲ್ಲದಿರುವುದು ಅವರ ಗಮನಕ್ಕೆ ಬರುತ್ತದೆ. ಅದರ ಪರಿಣಾಮವಾಗಿ ಅವರು ಒಂದು ಲೈಫ್ಲೈನ್ ಫೌಂಡೇಶನ್ ನಿರ್ಮಾಣಕ್ಕೆ ಮುಂದಾಗುತ್ತಾರೆ.
ಬಿಪಿನ್ ಗಣತ್ರಾ
ಪ.ಬಂಗಾಲದ ಬಿಪಿನ್ ಗಣತ್ರಾ ಅವರಿಗೆ ಬೆಂಕಿ ಅವಘಡಗಳಿಂದ ಜನರನ್ನು ರಕ್ಷಿಸುವುದೇ ಕಾಯಕ. ಅವರೇನೂ ಅಗ್ನಿ ಶಾಮಕ ದಳದವರಲ್ಲ. ಆದರೂ ಬೆಂಕಿ ಅವಘಡದಿಂದ ರಕ್ಷಿಸುವ ಸ್ವಯಂ ಸೇವಕ ಎಂದು ಕೊಲ್ಕತ್ತಾದಲ್ಲಿ ಅಗ್ನಿ ಶಾಮಕದಳದಿಂದ ಗುರುತಿಸಿಕೊಂಡಿದ್ದಾರೆ.
ಕಳೆದ 40 ವರ್ಷಗಳಿಂದ ಬಿಪಿನ್ ಈ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿಕ್ಕಂದಿನಲ್ಲಿಯೇ ಶಾಲೆಯನ್ನು ಬಿಟ್ಟಿದ್ದ ಇವರು, ಎಲೆಕ್ಟ್ರಿಶಿಯನ್ ಹಾಗೂ ಇನ್ನಿತರ ಉದ್ಯೋಗಗಳನ್ನು ಮಾಡಿದ್ದಾರೆ.
ತಮ್ಮ ಜೀವವನ್ನು ಒತ್ತೆ ಇಟ್ಟಾದರೂ ಮತ್ತೊಬ್ಬರ ಜೀವವನ್ನು ಉಳಿಸಲು ಅವರು ಯತ್ನಿಸುತ್ತಾರೆ. ಬೆಂಕಿ ಅವಘಡದಲ್ಲಿ ಅವರು ತಮ್ಮ ಸಹೋದರನನ್ನು ಕಳೆದುಕೊಂಡದ್ದೇ ಈ ಕಾರ್ಯಕ್ಕೆ ಪ್ರೇರಣೆಯಂತೆ.
ಶೇಖರ್ ನಾಯ್ಕ್
ಭಾರತೀಯ ಅಂಧರ ಕ್ರಿಕೆಟ್ನ ಮೊದಲ ಟ್ವೆಂಟಿ-ಟ್ವೆಂಟಿ ವಿಶ್ವಕಪ್ (2012) ಹಾಗೂ ಏಕದಿನ ವಿಶ್ವಕಪ್-2014 ರಲ್ಲಿ ಚಾಂಪಿಯನ್ ಪಟ್ಟ ತಂದು ಕೊಟ್ಟಿದ್ದು, ತಂಡದ ನಾಯಕ ಕರ್ನಾಟಕದ ಶೇಖರ್ ನಾಯ್ಕ್.
ಅಂಧರ ಕ್ರಿಕೆಟ್ನಲ್ಲಿ ಉತ್ತಮ ಬ್ಯಾಟ್ಸ್ಮನ್ ಆಗಿರುವ ಶೇಖರ್ ನಾಯ್ಕ್ ಕೇವಲ 13 ವರ್ಷಗಳಲ್ಲಿ 32 ಶತಕಗಳನ್ನು ಬಾರಿಸಿದ ಹಿರಿಮೆಗೆ ಪಾತ್ರವಾಗಿದ್ದಾರೆ. ಕ್ರಿಕೆಟ್ನ ಎಲ್ಲ ಪ್ರಕಾರಗಳ ಒಟ್ಟು 63 ಪಂದ್ಯಗಳನ್ನು ಆಡಿರುವ ಅವರು, ಉತ್ತಮ ಆಲ್ರೌಂಡರ್ ಖ್ಯಾತಿಗೆ ಪಾತ್ರರಾಗಿದ್ದಾರೆ.
ತುಂಬಾ ಬಡತನ ಕುಟುಂಬದ ಹಿನ್ನೆಲೆಯಲ್ಲಿ ಬೆಳೆದು ಬಂದ ಇವರು, ತಮ್ಮ 12 ವಯಸ್ಸಿನಲ್ಲಿಯೇ ತಂದೆ ತಾಯಿಯರನ್ನು ಕಳೆದುಕೊಂಡಿದ್ದು ವಿಧಿಯ ಅಟ್ಟಹಾಸ.
ಗಿರೀಶ್ ಭಾರದ್ವಾಜ
ಪರಿಸರ ಸ್ನೇಹಿ ಸೇತುವೆ ನಿರ್ಮಿಸುವ ಮೂಲಕ ಭಾರತದ ಹಳ್ಳಿಗಳ ಮಧ್ಯೆ ಸಂಪರ್ಕ ಕಲ್ಪಿಸಿದ ಹಿರಿಮೆ ಇವರದು. ವೃತ್ತಿಯಿಂದ ಎಂಜಿನಿಯರ್ ಆಗಿರುವ ಇವರು, 100 ಕ್ಕೂ ಹೆಚ್ಚು ಸೇತುವೆಗಳನ್ನು ಕಡಿಮೆ ಖರ್ಚಿನಲ್ಲಿ ಹಾಗೂ ಪರಿಸರಕ್ಕೆ ಪೂರಕವಾಗಿ ನಿರ್ಮಿಸಿದ್ದು ಅವರ ವಿಶೇಷ.
ಕರ್ನಾಟಕ, ಕೇರಳ ಹಾಗೂ ಆಂದ್ರ ಪ್ರದೇಶಗಳಲ್ಲಿ ಒಟ್ಟು 100 ಕ್ಕೂ ಹೆಚ್ಚು ಸೇತುವೆಗಳನ್ನು ಗಿರೀಶ ಭಾರದ್ವಾಜ ನಿರ್ಮಿಸಿದ್ದಾರೆ. ಸಂಪರ್ಕ ಸಾಧನ ಹೆಚ್ಚಿಸುವ ಮೂಲಕ ಹಳ್ಳಿಗಳ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ.
ಸಾಮಾನ್ಯವಾಗಿ ಆಧುನಿಕ ಸೇತುವೆ ನಿರ್ಮಾಣಕ್ಕೆ ತಗಲುವ ಖರ್ಚಿಗಿಂತಲೂ ಹತ್ತುಪಟ್ಟು ಕಡಿಮೆ ಇರುತ್ತದಲ್ಲದೇ, ಕಾಮಗಾರಿಯ ಅವಧಿಯೂ 3 ತಿಂಗಳು ಬೇಗ ಮುಗಿಯುತ್ತದೆ. ಹಾಗೆಂದು ಸುರಕ್ಷತೆಯಲ್ಲಿ ಯಾವುದೂ ರಾಜಿ ಇಲ್ಲದಂತೆ ನಿರ್ಮಿಸುವುದು ಇವರ ವೈಶಿಷ್ಟ್ಯತೆ.
ಎಂಜಿನಿಯರಿಂಗ್ ಪದವಿಧರರಾದ ಇವರು, ಕೆಲಸ ಗಿಟ್ಟಿಸುವಲ್ಲಿ ವಿಫಲರಾದರು. ಆದರೆ ಅದನ್ನೇ ಧನಾತ್ಮಕವಾಗಿ ಸ್ವೀಕರಿಸಿದ ಇವರು, ಸೇತುವೆ ನಿರ್ಮಾಣದ ಮೂಲಕ ದೇಶಹಿತಕ್ಕೆ ಮುಂದಾಗಿರುವುದು ನಿಜಕ್ಕೂ ಮಾದರಿ.
ಪ್ಯಾರಾಲಿಂಪಿಯನ್ ತಂಗವೇಲು
2016 ರ ಪ್ಯಾರಾಲಿಂಪಿಕ್ನ ಎತ್ತರ ಜಿಗಿತದಲ್ಲಿ ಚಿನ್ನದ ಪದಕ ಮುಡಿದ ಆಟಗಾರ ತಂಗವೇಲು ಮರಿಯಪ್ಪನ್. ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದವರಲ್ಲಿ ಮೂರನೇಯವರು ಇವರು. ( ಮುರಳಿಕಾಂತ ಪೇಟ್ಕರ್ ಹಾಗೂ ದೇವೇಂದ್ರ ಜಝಾರಿಯಾ ನಂತರ)
ವಿಶೇಷ ಎಂದರೆ ಅವರಿಗೆ ಸರ್ಕಾರ ಕೊಡಮಾಡಿದ ಬಹುಮಾನದ ಮೊತ್ತದಲ್ಲಿ ಒಂದಿಷ್ಟು ಭಾಗವನ್ನು ಶಾಲೆಯ ಕ್ರೀಡಾ ಸೌಲಭ್ಯಗಳ ಅಭಿವೃದ್ಧಿಗೋಸ್ಕರ ದಾನ ಮಾಡಿದ್ದಾರೆ. ಬಸ್ ಅಪಘಾತದಲ್ಲಿ ಇವರು ಬಲಗಾಲು ಕಳೆದುಕೊಂಡಿದ್ದಾರೆ. ಇವರು ಶಾಲೆಗೆ ಹೋಗುವಾಗ ಈ ದುರ್ಘಟನೆ ನಡೆದಿರುತ್ತದೆ.
ತಮಿಳುನಾಡಿನ 21 ವರ್ಷದ ತಂಗವೇಲು ವೃತ್ತಿಯಿಂದ ಅಥ್ಲೀಟ್. ಇವರ ತಂದೆ ಬಹುಬೇಗ ಇವರ ಕುಟುಂಬವನ್ನು ತ್ಯಜಿಸುತ್ತಾರೆ. ಇಟ್ಟಿಗೆಯನ್ನು ಹೊತ್ತುಕೊಂಡು ಹೋಗುವ ಕೆಲಸಕ್ಕೆ ಸೇರಿದ ಇವರ ತಾಯಿ, ಕಾರ್ಮಿಕರಾಗಿ ಬಹುಕಷ್ಟಪಟ್ಟು ಮಗನ ಭವಿಷ್ಯಕ್ಕೆ ಶ್ರಮಿಸಿದ್ದಾರೆ.
ಎಲಿ ಅಹ್ಮದ್
ಕ್ರಿಯಾಶೀಲ ಬರಹಗಾರ್ತಿ ಎಂದೇ ಗುರುತಿಸಿಕೊಂಡಿರುವ ಎಲಿ ಅಹ್ಮದ್ ಅವರು, ಅಸ್ಸಾಂನಲ್ಲಿ ಮಕ್ಕಳು ಹಾಗೂ ಮಹಿಳಾ ಸಾಹಿತ್ಯಕ್ಕೆ ನೀಡಿದ ಕೊಡುಗೆಗೆ ಹೆಸರಾಗಿದ್ದಾರೆ. 1970 ರಲ್ಲಿದ್ದ ಒಂದೇ ಒಂದು ಮಹಿಳಾ ನಿಯತಕಾಲಿಕೆ (ಮ್ಯಾಗಜಿನ್) ಓರಾನಿಯ ಸಂಪಾದಕರು, ಪ್ರಕಾಶಕರು ಹಾಗೂ ಮಾಲಿಕರೂ ಆಗಿದ್ದರು ಎಲಿ ಅಹ್ಮದ್. ಈಶಾನ್ಯ ಭಾಗದಲ್ಲಿ ಮೊದಲ ಆಸ್ಸಾಂ ಫಿಲ್ಮ್ ಇನ್ಸ್ಟಿಟ್ಯೂಟ್ ಆರಂಭಿಸಿದ ಕೀರ್ತಿ ಇವರದು. ಅಲ್ಲದೇ ಮಹಿಳಾ ಸಬಲೀಕರಣಕ್ಕಾಗಿ ಇವರು ಇಂದಿಗೂ ಹೋರಾಡುತ್ತಿದ್ದಾರೆ.
ದೈಹಿಕ ಅಂಗವೈಕಲ್ಯ ಹೊಂದಿದ ಮಕ್ಕಳು, ಬಾಲ ಕಾರ್ಮಿಕರು ಹಾಗೂ ಮಕ್ಕಳ ಶಿಕ್ಷಣ ಆಧರಿತ, ’ಅಮಿ ಅಭಿನೊಯ್ ಕೋರಾ ನೈ’ ಎಂಬ ನಾಟಕವನ್ನೂ ಅವರು ಬರೆದಿದ್ದಾರೆ. ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಅಸ್ಸಾಂನ ಈ ಮಹಿಳೆಗೆ ಈಗ 81 ವರ್ಷ.
ಬಲ್ಬೀರ್ ಸಿಂಗ್
ಪಂಜಾಬ್ನಲ್ಲಿ ಹರಿದ 160 ಕಿ.ಮೀ ಕಾಳಿ ನದಿಯನ್ನು ಸ್ಥಳೀಯ ಸ್ವಯಂ ಸೇವಕರ ಸಹಕಾರದಿಂದ ಪುನರುತ್ಥಾನಗೊಳಿಸಿದ ಕೀರ್ತಿ ಬಲ್ಬೀರ್ ಸಿಂಗ್ ಅವರದು. ಅಲ್ಲದೇ ಒಳಚರಂಡಿ ವ್ಯವಸ್ಥೆಗೊಂದು ಶಿಸ್ತು ತರುವಲ್ಲಿ ಸೀಚ್ವಾಲಾ ಮಾದರಿಯನ್ನು ಅಭಿವೃದ್ಧಿಪಡಿಸಿದರು.
ಸ್ಥಳೀಯರಿಂದಲೇ ನಿಧಿಯನ್ನು ಸಂಗ್ರಹಿಸಿದ ಬಲ್ಬೀರ್ ಸಿಂಗ್ ಜನರಲ್ಲಿ ಮಲಿನ ನೀರು ಹಾಗೂ ತ್ಯಾಜ್ಯವನ್ನು ನದಿಗೆ ಬಿಡದಂತೆ ಜಾಗೃತಿಯನ್ನೂ ಉಂಟು ಮಾಡಲು ಶ್ರಮಿಸಿದರು. ಇದರ ಪರಿಣಾಮ ನದಿ ತೀರದ ಭಾಗ ಸ್ವಚ್ಛಂದವಾಯಿತಲ್ಲದೇ ಕಾಳಿ ಮತ್ತೆ ಮೊದಲಿನಂತೆ ಮೈದುಂಬಿಕೊಂಡು ಶೋಭಿಸತೊಡಗಿದಳು.
ಇದೇ ಸೀಚ್ವಾಲ್ ಮಾದರಿಯನ್ನು ದೇಶದೆಲ್ಲೆಡೆ ಅನುಸರಿಸುತ್ತಿದ್ದಾರೆ. ರಸ್ತೆ ಸುಧಾರಣೆ, ಪರಿಸರ ಪ್ರಜ್ಞೆ, ನದಿ ಶುದ್ಧತೆ ಅಲ್ಲದೇ ರೈಲ್ವೆ ನಿಲ್ದಾಣಗಳನ್ನೂ ಬಲ್ಬೀರ್ಸಿಂಗ್ ಸ್ವಚ್ಛಗೊಳಿಸಿದ್ದಾರೆ. ಪರಿಣಾಮ ರಸ್ತೆ ಬಾಬಾ, ಇಕೊ ಬಾಬಾ, ಬೇನ್ವಾಲೆ ಬಾಬಾ ಮತ್ತು ರೈಲ್ವೆ ಬಾಬಾ ಎಂತಲೂ ಇವರನ್ನು ಜನ ಪ್ರೀತಿಯಿಂದ ಕರೆಯುತ್ತಾರೆ.
ಜಿನಾಭಾಯಿ ದರ್ಗಾಭಾಯಿ ಪಟೇಲ್
ದಿವ್ಯಾಂಗ ರೈತ ಜಿನಾಭಾಯಿ ಪಟೇಲ್ ಹೆಚ್ಚಿನ ಪ್ರಮಾಣದಲ್ಲಿ ದಾಳಿಂಬೆ ಬೆಳೆಯುವ ಮೂಲಕ ಭೀಕರ ಬರಕ್ಕೆ ಏಕಾಂಗಿಯಾಗಿ ಸೆಡ್ಡು ಹೊಡೆದಿರುವುದು ವಿಶೇಷ.
ಗುಜರಾತ್ನ ಬಾಣಸ್ಕಂಠಾ ಜಿಲ್ಲೆ, ದೀಸಾ ತಾಲ್ಲೂಕಿನ ಸರ್ಕರಿ ಗೋಲಿಯಾ ಗ್ರಾಮದ ರೈತ ಜಿನಾಭಾಯಿ. 2005 ರಲ್ಲಿ ದಾಳಿಂಬೆ ಕೃಷಿ ಮೂಲಕ ಪ್ರಯೋಗ ಆರಂಭಿಸಿದರು. ಇದರಲ್ಲಿ ವಿವಿಧ ತಂತ್ರಜ್ಞಾನಗಳನ್ನು ಬಳಸುವ ಮೂಲಕ ಉನ್ನತ ಗುಣಮಟ್ಟದ ದಾಳಿಂಬೆಯನ್ನು ಬೆಳೆಯಲು ಮುಂದಾದರು.
ಯಾವುದೇ ರಾಸಾಯನಿಕ ಗೊಬ್ಬರಕ್ಕೆ ಮಾರುಹೋಗದೇ ದೇಶೀ ಗೊಬ್ಬರಕ್ಕೆ ಆದ್ಯತೆ ನೀಡುವುದು. ನೀರು ಹಾಗೂ ವಿದ್ಯುಚ್ಚಕ್ತಿಯನ್ನು ಉಳಿಸುವ ನಿಟ್ಟಿನಲ್ಲಿ ಹನಿ ನೀರಾವರಿ, ಮಿನಿ ಟ್ರ್ಯಾಕ್ಟರ್ ಬಳಕೆ ಹೀಗೆ ಎಲ್ಲದರಲ್ಲಿಯೂ ವಿಭಿನ್ನತೆ ಅಳವಡಿಸಿಕೊಂಡರು.
ತಾವು ಪ್ರಯೋಗಿಸಿ ಸಾಧಿಸಿದ ಯಶಸ್ಸಿನ ಗುಟ್ಟನ್ನು ಇತರರಿಗೂ ಹೇಳುತ್ತಾರೆ. ದಾಳಿಂಬೆ ಕೃಷಿಯಲ್ಲಿನ ಉತ್ತಮ ಇಳುವರಿಗೆ ಅಗತ್ಯವಾದ ತಂತ್ರಗಳನ್ನು ಎಲ್ಲೆಡೆ ಪ್ರಸಾರ ಮಾಡಿದ್ದಾರೆ. ಈ ಮೂಲಕ ದೇಶದಲ್ಲಿಯೇ ಗುಣಮಟ್ಟದ ದಾಳಿಂಬೆಯನ್ನು ಹೆಚ್ಚು ಉತ್ಪಾದಿಸುವ ರೈತರಾಗಿ ಗುರುತಿಸಿಕೊಂಡಿದ್ದಾರೆ.
ಕರೀಮುಲ್ ಹಕ್
ಚಹಾ ತೋಟದಲ್ಲಿ ಕೆಲಸ ಮಾಡುವ ಕರೀಮುಲ್ ಹಕ್ ತಮ್ಮ ಬೈಕನ್ನೇ ಅಂಬ್ಯುಲನ್ಸ್ ಆಗಿ ಪರಿವರ್ತಿಸಿದ್ದು ಗಮನಾರ್ಹ. ದಿನದ ೨೪ ಗಂಟೆಯೂ ಸಾರ್ವಜನಿಕ ಸೇವೆಗೆ ಬೈಕ್ ಅಂಬ್ಯುಲೆನ್ಸ್ ಲಭ್ಯವಿರುತ್ತದೆ.
ದುರ್ಬಲ ವರ್ಗದವರನ್ನು ಜಿಲ್ಲಾ ಆಸ್ಪತ್ರೆಗೆ ತಮ್ಮ ಬೈಕ್ ಮೇಲೆಯೇ ಕರೆದೊಯ್ಯುತ್ತಾರೆ. ಅಲ್ಲದೇ ಅಗತ್ಯ ಬಿದ್ದಲ್ಲಿ ಪ್ರಥಮ ಚಿಕಿತ್ಸೆಯನ್ನೂ ಅವರು ನೀಡುತ್ತಾರೆ. ಇದುವರೆಗೂ ಅವರು ಅಂದಾಜು ೩೦೦೦ಕ್ಕೂ ಹೆಚ್ಚು ಜನರ ಜೀವ ಉಳಿಸುವಲ್ಲಿ ಸಹಕಾರಿಯಾಗಿದ್ದು ಗಮನಾರ್ಹ.
ಪ.ಬಂಗಾಲದ ಜಲ್ಪೈಗುರಿ ಜಿಲ್ಲೆಯ ಧಲಬಾರಿ ಗ್ರಾಮದಲ್ಲಿ ಈ ಸೇವೆ ಆರಂಭಿಸಿದ್ದು, ಸುತ್ತ ಮುತ್ತಲಿನ 20 ಗ್ರಾಮಕ್ಕೆ ಈ ಸೇವೆ ಲಭ್ಯವಿದೆ.
ವಾಹನ ಇಲ್ಲದ ಕಾರಣ ತಮ್ಮ ತಾಯಿಯನ್ನು ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಗಿರಲಿಲ್ಲ. ಆದ್ದರಿಂದ ವಾಹನ ಇಲ್ಲದವರು ಅನ್ಯಥಾ ಜೀವ ಕಳೆದುಕೊಳ್ಳಬಾರದು ಎಂಬ ಕಾಳಜಿಯೇ ಇದಕ್ಕೆ ಪ್ರೇರಣೆ.
ಸುಕ್ರಿ ಬೊಮ್ಮಗೌಡ
ಹಾಲಕ್ಕಿ ಸಮುದಾಯದ ಮೂಲ ಸಂಸ್ಕೃತಿಯನ್ನು ಉಳಿಸುವಲ್ಲಿ 58 ವರ್ಷಗಳಿಂದ ಹೋರಾಡುತ್ತಿರುವ ಹಿರಿಜೀವ ಸುಕ್ರಿ ಬೊಮ್ಮಗೌಡ. ಬುಡಕಟ್ಟು ಸಂಸ್ಕೃತಿಯ ಸಂರಕ್ಷಣೆಗೆ ಸುಕ್ರಿ ಬೊಮ್ಮಗೌಡ ಹಿಡಿದಿದ್ದು ಜಾನಪದ ಹಾಡಿನ ದಾರಿ.
ಬೆಂಡಿಗೇರಿ ಹಾಡಿಯಲ್ಲಿ ಮದ್ಯ ಮಾರಾಟದ ವಿರುದ್ಧ ಪ್ರತಿಭಟನೆಗೂ ಇಳಿದ ಸುಕ್ರಿ ಬೊಮ್ಮಗೌಡ ಸಾಮಾಜಿಕ ಕಾರ್ಯಕರ್ತೆಯೂ ಹೌದು. ನಶಿಸಿ ಹೋಗುತ್ತಿರುವ ತಮ್ಮ ಹಾಲಕ್ಕಿ ಸಂಸ್ಕೃತಿಯನ್ನು ಜೀವಂತವಾಗಿ ಇಡುವುದಕ್ಕಾಗಿ ಸುಕ್ರಿ ಬೊಮ್ಮಗೌಡ ಹಾಡುತ್ತಾರೆ.
ಕರ್ನಾಟಕದ ಅಂಕೋಲಾದವರು ಸುಕ್ರಿ ಬೊಮ್ಮಗೌಡ. ಸುಕ್ರಿ ಅಜ್ಜಿ ಎಂದೇ ಇವರು ಪ್ರಸಿದ್ಧ. ಜನ್ಮದಿನ, ಮದುವೆ, ಯಾವುದೇ ಕೃಷಿ ಚಟುವಟಿಕೆ, ಹಬ್ಬ ಹರಿದಿನಗಳಲ್ಲಿ ಸುಕ್ರಿ ಅಜ್ಜಿ ತಮ್ಮ ಜಾನಪದದ ರಾಗದ ರಂಗು ತುಂಬುತ್ತಾರೆ.
ಚಿಂತಕಿಂಡಿ ಮಲ್ಲೇಶಂ
44 ವರ್ಷ ವಯಸ್ಸಿನ ಚಿಂತಕಿಂಡಿ ಮಲ್ಲೇಶಂ ತೆಲಂಗಾಣದವರು. ಎಂಜಿನಿಯರಿಂಗ್ ಪದವಿಧರರು. ಲಕ್ಷ್ಮೀ ಎಎಸ್ಯು ಎಂಬ ಅಪರೂಪದ ಯಂತ್ರದ ಸಂಶೋಧಕ. ಈ ಯಂತ್ರವು ಪೂಚಂಪಲ್ಲಿ ರೇಶ್ಮೆ ಸೀರೆಯನ್ನು ನೇಯುಲು ಹೆಚ್ಚು ಅನುಕೂಲವಾಗಿದೆ. ಏಕೆಂದರೆ ಇದರ ಬಳಕೆಯಿಂದ ಸಮಯವಲ್ಲದೇ, ಮಾನವ ಸಂಪನ್ಮೂಲದ ಅವಶ್ಯಕತೆಯನ್ನೂ ಕಡಿಮೆಗೊಳಿಸಿದೆ.
ಸತತವಾಗಿ ಈ ನಿಟ್ಟಿನಲ್ಲಿ ಸಂಶೋಧನೆಗೈಯುತ್ತಲೇ ಇದ್ದ ಅವರು, 1999 ರಲ್ಲಿ ಕಟ್ಟಿಗೆಯ ಮೇಲೆ ಜೋಡಿಸಲಾದ ಯಂತ್ರವನ್ನು ಮೊದಲು ಕಂಡು ಹಿಡಿದರು. ಮರುವರ್ಷ ಅದೇ ಯಂತ್ರವನ್ನು ಸ್ಟೀಲ್ಗೆ ಪರಿವರ್ತಿಸಿದರು. ನಂತರದ ದಿನಗಳಲ್ಲಿ ಅದನ್ನು ಎಲೆಕ್ಟ್ರಾನಿಕ್ ವಸ್ತುಗಳ ಸಹಕಾರದಿಂದ ಸಿದ್ಧಪಡಿಸಿದರು. ಈ ಯಂತ್ರಗಳನ್ನು ತಯಾರಿಸಿ ಆಂದ್ರ ಹಾಗೂ ಓಡಿಸ್ಸಾಗಳಲ್ಲಿ ಮಾರಾಟವನ್ನೂ ಮಾಡಿದ್ದಾರೆ.
ತಮ್ಮ ತಾಯಿಯು ರೇಶ್ಮೆ ಸೀರೆಯನ್ನು ನೇಯುವಾಗ ಅನುಭವಿಸುವ ನೋವನ್ನು ಕಂಡು ಈ ಲಕ್ಷ್ಮೀ ಎಎಸ್ಯು ಎಂಬ ಯಂತ್ರವನ್ನು ಸಂಶೋಧಿಸಿದರು.
ಡಾ.ಮಾಪುಸ್ಕರ್
ಮಹಾರಾಷ್ಟ್ರದ ದೇಹು(ಪುಣೆ) ಗ್ರಾಮದ ಜನರ ಮನವೊಲಿಸಿ ಇಡೀ ಗ್ರಾಮವನ್ನೇ ಬಯಲು ಶೌಚಮುಕ್ತ ಗ್ರಾಮ ಮಾಡುವಲ್ಲಿ 1960 ರಲ್ಲೇ ಶ್ರೀಕಾರ ಹಾಕಿದವರು ಡಾ.ಮಾಪುಸ್ಕರ್.
2004 ರ ವೇಳೆಗೆ ಗ್ರಾಮದ ಪ್ರತಿಯೊಬ್ಬರೂ ಶೌಚಾಲಯವನ್ನು ಹೊಂದಿದ್ದು ಸಂಪೂರ್ಣ ಬಯಲು ಶೌಚಮುಕ್ತ ಗ್ರಾಮವಾಗಿದೆ. ಗ್ರಾಮದಲ್ಲಿ ತಾವೇ ಮೊದಲು ಶೌಚಾಲಯವನ್ನು ಕಟ್ಟುವ ಮೂಲಕ ಭವಿಷ್ಯದ ಕ್ರಾಂತಿಗೆ ನಾಂದಿ ಇವರು ಹಾಡಿದ್ದರು.
ಡಾ.ಸುನಿತಿ ಸೋಲೋಮನ್
ಎಚ್ಐವಿ ರೋಗ ಪೀಡಿದ ಪ್ರಕರಣವನ್ನು ಭಾರತದಲ್ಲಿ ಮೊದಲು ಕಂಡು ಹಿಡಿದಿದ್ದು (1985) ತಮಿಳುನಾಡಿನ ಡಾ.ಸುನಿತಿ ಸೋಲೋಮನ್. ಮುಂದೆ ಅವರು ಇದಕ್ಕೆ ಸಂಬಂಧಿಸಿದಂತೆ ಸಂಶೋಧನೆ, ಚಿಕಿತ್ಸೆ ಹಾಗೂ ಜಾಗೃತಿ ಮೂಡಿಸುವಲ್ಲಿ ಬಹುವಾಗಿ ಶ್ರಮಿಸುತ್ತ ಬಂದಿದ್ದಾರೆ.
ವೈ ಆರ್. ಗಾಯತೊಂಡೆ ಸೆಂಟರ್ ಫಾರ್ ಏಡ್ಸ್ ರಿಸರ್ಚ್ ಮತ್ತು ಎಜ್ಯುಕೇಶನ್ ಆರಂಭಿಸಿದ್ದೂ ಇವರೇ ಮೊದಲು. ಎಚ್ಐವಿಗೆ ಸಂಬಂಧಿಸಿದಂತೆ ಆಪ್ತಸಮಾಲೋಚನೆ ಹಾಗೂ ಪರೀಕ್ಷೆಯಲ್ಲಿ ಈ ಕೇಂದ್ರಕ್ಕೆ ಭಾರತದಲ್ಲಿ ಮೊದಲ ಸ್ಥಾನವಿದೆ.
ಏಡ್ಸ್ ಕುರಿತು ಇತರ ವೈದ್ಯರು ಮಾತನಾಡಲೂ ಹಿಂಜರಿಯುತ್ತಿದ್ದ ಸಂದರ್ಭದಲ್ಲಿ ಡಾ.ಸುನಿತಿ ಸೋಲೋಮನ್ ಇದರ ಸಂಶೋಧನೆಗೆ ಮುಂದಾಗುತ್ತಾರೆ.
ಮುಗಿಸುವ ಮುನ್ನ
2017 ರ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದವರಲ್ಲಿ ಕೆಲವರ ಬದುಕನ್ನು ಸಂಕ್ಷಿಪ್ತವಾಗಿ ಇಲ್ಲಿ ಪ್ರಸ್ತಾಪಿಸಲಾಗಿದೆ. ಜಾತಿ, ಮತ, ಪಂಥ, ಸ್ವಾರ್ಥದಾಚೆಗೂ ಬದುಕುವ, ಮಾನವೀಯ ಮೌಲ್ಯಗಳನ್ನು ಗೌರವಿಸುವ ಇಂಥವರ ಬದುಕು ಪ್ರೇರಣಾದಾಯಿ ಎನ್ನಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.