ಹುಬ್ಬಳ್ಳಿ : ಫೆ.1 ರಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬಜೆಟ್ ಮಂಡಿಸಿದ್ದು, ಬಹುತೇಕರು ಬಜೆಟ್ ಮಂಡನೆಯ ಅಂಶಗಳನ್ನು ಸ್ವಾಗತಿಸಿದ್ದಾರೆ. ಇನ್ನು ಕೆಲವರು ತಮಗಿದ್ದ ನಿರೀಕ್ಷೆಗಳ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇಲ್ಲಿ ಅಧಿಕಾರಿ, ಲೇಖಕರು, ಜನಪ್ರತಿನಿಧಿಗಳು, ವಾಣಿಜ್ಯೋದ್ಯಮ ಸಂಸ್ಥೆಯನ್ನು ಪ್ರತಿನಿಧಿಸುವವರು ಹಾಗೂ ಗೃಹಿಣಿಯ ಮನದಿಂಗಿತವನ್ನು ಇಲ್ಲಿ ನೀಡಲಾಗಿದೆ.
ನೈಋತ್ಯ ರೈಲ್ವೆ ವಲಯಕ್ಕೆ ಸಾಕಷ್ಟು ಆದ್ಯತೆ: ಗುಪ್ತಾ
ಸ್ವತಂತ್ರ ಭಾರತದ ಮೊಟ್ಟಮೊದಲ ಏಕೀಕೃತ ಬಜೆಟ್ನಲ್ಲಿ ನೈಋತ್ಯ ರೈಲ್ವೆ ವಲಯಕ್ಕೆ ಸಾಕಷ್ಟು ಆದ್ಯತೆ ನೀಡಲಾಗಿದೆ ಎಂದು ನೈಋತ್ಯ ವಲಯ ಜನರಲ್ ಮ್ಯಾನೇಜರ್ ಎ.ಕೆ.ಗುಪ್ತಾ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ನೈಋತ್ಯ ರೈಲ್ವೆ ವಲಯದ ವಿವಿಧ ಯೋಜನೆಗಳ ಅಭಿವೃದ್ಧಿಗೆ 2903 ಕೋಟಿ ಬೇಡಿಕೆ ಇಡಲಾಗಿತ್ತು. ಆದರೆ ಈ ಬಾರಿಯ ಬಜೆಟ್ನಲ್ಲಿ ಈ ವಲಯಕ್ಕೆ 3174 ಕೋಟಿ ಬಿಡುಗಡೆ ಮಾಡಿರುವುದು ಸಂತಸದ ಸಂಗತಿ ಎಂದಿದ್ದಾರೆ.
ಪ್ರಯಾಣಿಕರ ಸುರಕ್ಷತೆ, ಬಂಡವಾಳ, ಅಭಿವೃದ್ಧಿ ಹಾಗೂ ಸ್ವಚ್ಛತೆಗೆ ಬಜೆಟ್ನಲ್ಲಿ ಆದ್ಯತೆ ನೀಡಲಾಗಿದೆ. 5 ವರ್ಷದ ಅವಧಿಯಲ್ಲಿ ರೈಲು ಸುರಕ್ಷಾ ನಿಧಿಗೆ ಒಂದು ಲಕ್ಷ ಕೋಟಿ ಮೀಸಲು ನಿಧಿ ಕೊಡಲಾಗುವುದು ಎಂದು ಅವರು ಹೇಳಿದರು.
ರೈತರಿಗೆ ನಿರಾಶಾದಾಯಕ: ಎಚ್ಡಿಕೆ
ಕೇಂದ್ರ ಹಣಕಾಸು ಸಚಿವ ಅರುಣ್ ಜೈಟ್ಲಿ ಅವರು ಮಂಡಿಸಿರುವ ಬಜೆಟ್ ದೇಶದ ಅಭಿವೃದ್ಧಿಗೆ ಪೂರಕವಾಗಿಲ್ಲ. ರೈತರಿಗೆ ನಿರಾಶಾದಾಯಕವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬಜೆಟ್ ಬಗ್ಗೆ ಬಳ್ಳಾರಿಯಲ್ಲಿ ಮಾತನಾಡಿರುವ ಅವರು, ಉತ್ತರಪ್ರದೇಶ ಮತ್ತು ಪಂಜಾಬ್ ಚುನಾವಣೆಗಳ ಹಿನ್ನೆಲೆಯಲ್ಲಿ ರೈತರಿಗೆ ಕಬ್ಬಿನ ಬಾಕಿ ಮೊತ್ತ 9 ಸಾವಿರ ಕೋಟಿ ಕೊಡಲು ಬಜೆಟ್ನಲ್ಲಿ ಹೇಳಲಾಗಿದೆ. ರೈತರ ಸಾಲದ ಮೇಲಿನ ಬಡ್ಡಿ ಮನ್ನಾಕ್ಕೆ ಕೇವಲ 60 ದಿನದ ಬಡ್ಡಿ ಸಾಕೆ ಎಂದು ಪ್ರಶ್ನಿಸಿದ್ದಾರೆ.
ಸಾಲ ಮನ್ನಾ ಪ್ರಸ್ತಾವನೆಯೇ ಇಲ್ಲ : ಹೊರಟ್ಟಿ
ಅರುಣ್ ಜೈಟ್ಲಿ ಅವರು ಮಂಡಿಸಿರುವ ಬಜೆಟ್ ಸಮಾಧಾನಕರವಾಗಿಲ್ಲ. ಕೇಂದ್ರ ಬಜೆಟ್ನಲ್ಲಿ ನಮ್ಮ ರಾಜ್ಯಕ್ಕೆ ಯಾವುದೇ ಕೊಡುಗೆ ಕೊಟ್ಟಿಲ್ಲ. ರೈತರ ಸಾಲಮನ್ನಾ ಮಾಡಬೇಕಿತ್ತು. ಆದ್ರೆ ಯಾವುದೇ ಸಾಲ ಮನ್ನಾ ಬಗ್ಗೆ ಪ್ರಸ್ತಾವನೆಯಾಗಲಿಲ್ಲ ಎಂದು ಜೆಡಿಎಸ್ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಹೊರಟ್ಟಿ ಅವರು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ರೈತರಿಗೆ ಅನುಕೂಲವಾಗುವ ಯಾವುದೇ ಘೋಷಣೆ ಮಾಡಿಲ್ಲ. ಬರದಿಂದ ತತ್ತರಿಸಿರುವ ರೈತರಿಗೆ ಏನು ಪ್ರಯೋಜನವಾಗಿಲ್ಲ. ಕೇವಲ ಕೈ ತೋರಿಸಿ ಜಾದೂ ಮಾಡಿದ್ದಾರೆ ಎಂದು ಹೊರಟ್ಟಿ ಆರೋಪಿಸಿದ್ದಾರೆ.
ಆಶಾಭಾವನೆ ಮೂಡಿಸಿದ ಬಜೆಟ್ : ರಮೇಶ ಪಾಟೀಲ್
ವಿತ್ತ ಸಚಿವ ಅರುಣ್ ಜೈಟ್ಲಿ ಅವರು ಮಂಡಿಸಿದ ಬಜೆಟ್ ಜನಸಾಮಾನ್ಯರ ಬಜೆಟ್ ಆಗಿದ್ದು, ಹೊಸ ಆಶಾಭಾವನೆ ಮೂಡಿಸಿದೆ ಎಂದು ಹುಬ್ಬಳ್ಳಿ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ರಮೇಶ್ ಪಾಟೀಲ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಚಿವ ಅರುಣ್ ಜೇಟ್ಲಿ ಆಶಾದಾಯಕ ಮತ್ತು ಅಭಿವೃದ್ಧಿಪರ ಬಜೆಟ್ ಮಂಡಿಸಿದ್ದಾರೆ. ಅತ್ಯುತ್ತಮ ಬಜೆಟ್ ಇದಾಗಿದ್ದು, ವಾಣಿಜ್ಯೋದ್ಯಮ ಸಂಸ್ಥೆ ಇದನ್ನು ಸ್ವಾಗತಿಸುತ್ತದೆ ಎಂದರು.
ಇದೇ ವೇಳೆ ಮಾತನಾಡಿದ ವಾಣಿಜ್ಯೋದ್ಯಮ ಸಂಸ್ಥೆಯ ಗೌರವ ಕಾರ್ಯದರ್ಶಿ ಸಿದ್ಧೇಶ್ವರ್ ಕಮ್ಮಾರ್,
ಅರುಣ್ ಜೇಟ್ಲಿಯವರು ಮಂಡಿಸಿದ ಬಜೆಟ್ ಸಮಾಧಾನಕರವಾಗಿದೆ. ಎಲ್ಲ ಕ್ಷೇತ್ರಗಳಿಗೂ ಬಜೆಟ್ನಲ್ಲಿ ಆದ್ಯತೆ ನೀಡಿದ್ದಾರೆ. ವಾಣಿಜ್ಯೋದ್ಯಮ ಸಂಸ್ಥೆ ಸಲ್ಲಿಸಿದ್ದ ಬಹುತೇಕ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ ಎಂದರು.
ಹಿರಿಯರಿಗೆ ಇನ್ನಷ್ಟು ಅನುಕೂಲ ಬೇಕಿತ್ತು : ಕಾಖಂಡಕಿ
ಹಿರಿಯರಿಗಾಗಿ ವಿಶೇಷ ಎಲ್ಐಸಿ ಯೋಜನೆ, ಆರೋಗ್ಯ ಕಾರ್ಡ್ ನೀಡುವುದಾಗಿ ಘೋಷಿಸಿರುವುದು ಸಂತಸದ ವಿಷಯ. ಆದರೆ ಹಿರಿಯರ ಫಂಡ್ಗಳ ಮೇಲೆ ಇರುವ ಬಡ್ಡಿ ದರವನ್ನು ಇನ್ನಷ್ಟು ಹೆಚ್ಚಿಸಬೇಕಿತ್ತು. ರಾಷ್ಟ್ರಮಟ್ಟದಲ್ಲಿ ಹಿರಿಯರ ಆರೋಗ್ಯಕ್ಕೆ ಸಂಬಂಧಿಸಿದಂತೆ ಬೃಹತ್ ಯೋಜನೆಯೊಂದನ್ನು ಪ್ರಕಟಿಸಬೇಕಿತ್ತು ಅನಿಸುತ್ತದೆ. ಆದರೆ, ಉಳಿದಂತೆ ಬಜೆಟ್ ನಿಜಕ್ಕೂ ತೃಪ್ತಿಕರ ಎಂದು ಧಾರವಾಡ ನಿವಾಸಿ ಲೇಖಕ ಡಾ.ಹ.ವೆಂ.ಕಾಖಂಡಕಿ ಅಭಿಪ್ರಾಯಪಟ್ಟಿದ್ದಾರೆ.
ಮಹಿಳೆಯರ ಸಬಲೀಕರಣಕ್ಕೆ ಒತ್ತು
ಮಹಿಳಾ ಶಕ್ತಿಕೇಂದ್ರಗಳಿಗೆ 500 ಕೋಟಿ ಹಣ ಮೀಸಲು ಇಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಬಜೆಟ್ ಒತ್ತು ನೀಡಿದೆ ಎನ್ನಬಹುದು. ಇನ್ನು ಗರ್ಭಿಣಿಯರಿಗೆ 6 ಸಾವಿರ ರೂಪಾಯಿ ಅನುದಾನ ನೀಡುವುದು ಸ್ವಾಗತಾರ್ಹ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಇನ್ನೂ ಹೆಚ್ಚಿನ ನಿಟ್ಟಿನಲ್ಲಿ ಮಹಿಳಾ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬಹುದು ಎಂಬ ವಿಶ್ವಾಸವಿದೆ ಎಂದು ವಾಣಿಜ್ಯ ನಗರಿ ಹುಬ್ಬಳ್ಳಿ ನಿವಾಸಿ ರೋಜಾ ರಿತ್ತಿ ಅವರು ಅಭಿಪ್ರಾಯಪಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.