ಕಳೆದ 60 ವರ್ಷಗಳಲ್ಲಿ ಭಾರತ ಸಾಕಷ್ಟು ಭ್ರಷ್ಟಾಚಾರ ಕಂಡಿದೆ. ಆದರೆ 2004-2014 ರ ಅವಧಿಯ ಒಂದು ದಶಕವಂತೂ ಭಾರತ ಹಗರಣಗಳ ದೇಶ ಎನ್ನುವಷ್ಟರ ಮಟ್ಟಿಗೆ ತಲುಪಿದ್ದು ಗಂಭೀರ ಸಂಗತಿ. ಪರಿಣಾಮ ಭಾರತದ ಆರ್ಥಿಕತೆಯ ಮೇಲೂ ಪ್ರತಿಕೂಲ ಪರಿಣಾಮ ಬೀರಿದ್ದನ್ನು ಅಲ್ಲಗಳೆಯುವಂತಿಲ್ಲ.
ಕಲ್ಲಿದ್ದಿಲು ಹಗರಣ : 10,60,0000 ರೂಪಾಯಿ ನಷ್ಟ
ಭಾರತ ಹಿಂದೆಂದೂ ಕಂಡರಿಯದ ಬೃಹತ್ ಹಗರಣವೆಂದರೆ ಕಾಂಗ್ರೆಸ್ ಅವಧಿಯಲ್ಲಿನ ಕಲ್ಲಿದ್ದಿಲು ಹಗರಣ. ರೂ.1,85,900 ಕೋಟಿಯಷ್ಟು ಭಾರತದ ಬೊಕ್ಕಸಕ್ಕೆ ಆದ ಒಟ್ಟು ನಷ್ಟ. ಬಹುಶಃ ಮುಂದಿನ ಎಲ್ಲ ಹಗರಣಗಳಿಗೇ ಇದೇ ಮೂಲ ಎನ್ನುವಷ್ಟರ ಮಟ್ಟಿಗೆ ಕಲ್ಲಿದ್ದಿಲು ನಿಕ್ಷೇಪದ ಸಂಪನ್ಮೂಲವನ್ನು ನಾಶಪಡಿಸಿತು.
ಆಡಳಿತಾರೂಢ ಸರ್ಕಾರ ಮತ್ತು ಬೃಹತ್ ವ್ಯಾಪಾರಿ ವರ್ಗ ಈ ಹಗರಣದಲ್ಲಿ ಭಾಗಿಯಾದವರು. ಸಿಎಜಿ (ಕಂಟ್ರೋಲರ್ ಆಫ್ ಅಡಿಟರ್ ಜನರಲ್)ಯಿಂದ ಈ ಹಗರಣ ಮೊದಲು ಬೆಳಕಿಗೆ ಬಂದಿದ್ದು, ಹರಾಜು ಕರೆಯುವ ಬದಲು ಖಾಸಗಿ ಹಾಗೂ ರಾಜ್ಯಗಳಿಂದ ನಡೆಯುವ ಘಟಕಗಳಿಗೆ ಕಲ್ಲಿದ್ದಿಲು ಸಂಪತ್ತಿನ ಬಹುದೊಡ್ಡ ಭೂ ಪ್ರದೇಶವನ್ನು ನೀಡಿದ್ದರಿಂದ ದೇಶಕ್ಕೆ ಭರಿಸಲಾಗದ ನಷ್ಟವುಂಟಾಗಿದೆ ಎಂದು ಸಿಎಜಿ ಹೇಳಿತು.
ಅಂದಾಜು ರೂ.1,85,900 ಕೋಟಿಯಷ್ಟು ನಷ್ಟವಾಗಿದೆ (2004 ರಿಂದ 2009) ಎಂದರೂ, ವಾಸ್ತವವಾಗಿ 10,60,000 ಕೋಟಿ ನಷ್ಟವಾಗಿದೆ ಎನ್ನಲಾಗಿದೆ.
2ಜಿ ಹಗರಣ : 1.76 ಲಕ್ಷ ಕೋಟಿ ನಷ್ಟ
ಭಾರತದ ಇತಿಹಾಸದಲ್ಲಿ ದೊಡ್ಡ ಮೊತ್ತದ ಹಗರಣದ ಪಟ್ಟಿಯಲ್ಲಿ 2ನೇ ಸ್ಥಾನ 2 ಜಿ ಸ್ಪೆಕ್ಟ್ರಂ ಹಗರಣಕ್ಕೆ. ಯಪಿಎ ಸರ್ಕಾರದ ಸಚಿವ ಎ.ರಾಜಾ ಅವರೇ ನೇರವಾಗಿ ಭಾಗಿಯಾಗಿದ್ದ ಹಗರಣವಿದು. ಎಲ್ಲ ಪರವಾನಿಗೆಯ ನಿಯಮಗಳನ್ನು ಇಲ್ಲಿ ಉಲ್ಲಂಘಿಸಲಾಗಿತ್ತು. 2 ಜಿ ಸ್ಪೆಕ್ಟ್ರಂ (ತರಂಗಾಂತರಗಳು) ಗಳನ್ನು 2008 ರಲ್ಲಿ ನಿಗದಿಗೊಳಿಸಿದ ದರದ ಬದಲು, 2001 ರಲ್ಲಿ ನಿಗದಿಗೊಳಿಸಿದ ದರಕ್ಕೆ ಮಾರಾಟ ಮಾಡಲಾಗಿತ್ತು. ಪರಿಣಾಮ ದೇಶದ ಬೊಕ್ಕಸಕ್ಕೆ ಭಾರಿ ಹೊಡೆತ ಬಿದ್ದಿತ್ತು.
ಕಾಮನ್ವೆಲ್ತ್ ಹಗರಣ: 70,000 ಕೋಟಿ
ಕಾಂಗ್ರೆಸ್ ಅವಧಿಯಲ್ಲಿ ನಡೆದ ಮತ್ತೊಂದು ತಲೆ ತಗ್ಗಿಸುವ ಪ್ರಕರಣವೆಂದರೆ ಕಾಮನ್ವೆಲ್ತ್ ಹಗರಣ. ಕ್ರೀಡಾ ಸಚಿವರಾಗಿದ್ದ ಸುರೇಶ್ ಕಲ್ಮಾಡಿಯವರು ಈ ಹಗರಣದಲ್ಲಿ ಭಾಗಿಯಾಗುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಭಾರತಕ್ಕೆ ಮುಜುಗುರವಾಗುವ ಸ್ಥಿತಿ ತಂದಿಟ್ಟರು.
ಕಾಮನ್ವೆಲ್ತ್ ಕ್ರೀಡೆಗೆಂದು ಬಿಡುಗಡೆ ಮಾಡಿದ್ದ 70 ಸಾವಿರ ಕೋಟಿ ಹಣದಲ್ಲಿ ಪ್ರತಿಶತ ಅರ್ಧದಷ್ಟು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುವ ಮೂಲಕ ದುರುಪಯೋಗಪಡಿಸಿಕೊಂಡರು. ಕೇಂದ್ರ ವಿಚಕ್ಷಣಾ ಆಯೋಗದಿಂದ ತನಿಖೆಯನ್ನು ನಡೆಸಿದಾಗ ಸತ್ಯ ಬಯಲಾಯಿತು. ಅಸ್ತಿತ್ವದಲ್ಲೇ ಇರದ ಅನೇಕ ಘಟಕಗಳ ಹೆಸರಿನಲ್ಲಿ ಭಾರೀ ಮೊತ್ತವನ್ನು ಪಾವತಿಸಲಾಗಿತ್ತು. ಅಲ್ಲದೇ ತಮ್ಮ ವೈಯಕ್ತಿಕ ಖಾತೆಗೆ ಹಣ ವರ್ಗಾವಣೆ ಮಾಡಿಕೊಳ್ಳುವ ಕಾರಣ ಉದ್ದೇಶ ಪೂರ್ವಕವಾಗಿ ಕಾಮನ್ವೆಲ್ತ್ ಸಿದ್ಧತೆಯಲ್ಲಿ ವಿಳಂಬ ನೀತಿ ಅನುಸರಿಸಿದ್ದರು ಎಂಬುದು ಈಗ ಬಹಿರಂಗ.
ಶಾರದಾ ಚಿಟ್ ಫಂಡ್ ಹಗರಣ: 40 ಕೋಟಿ ನಷ್ಟ
ಪಶ್ಚಿಮ ಬಂಗಾಲದಲ್ಲಿ ಸಾವಿರಾರು ಕುಟುಂಬಗಳನ್ನು ವಂಚಿಸುವ ಮೂಲಕ ಅಕ್ಷರಶಃ ಬೀದಿಗೆ ತಂದ ನಾಚಿಕೆಗೇಡಿನ ಹಗರಣವಿದು. ಶಾರದಾ ಎಂಬ ಚಿಂಡ್ ಪಂಡ್ ಕಂಪನಿಯು ಅನೇಕ ರಾಜಕಾರಣಿಗಳಿಗೆ ಸಂಬಂಧ ಹೊಂದಿರುವ ಕುರಿತು ಬೆಳಕಿಗೂ ಬಂತು. ಏನಿಲ್ಲವೆಂದರೂ ಜನರ ೪೦ ಸಾವಿರ ಕೋಟಿ ಹಣಕ್ಕೆ ಪಂಗನಾಮ ಹಾಕಿದ್ದ ಈ ಹಗರಣದಲ್ಲಿ ಪ.ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ನಿಕಟ ಸಂಪರ್ಕಹೊಂದಿದವರೂ ಇದ್ದರು.
ದೆಹಲಿ ಏರ್ಪೋರ್ಟ್ ಮತ್ತು ಭೂ ಹಗರಣ : ರೂ. 1.63 ಲಕ್ಷ ಕೋಟಿ
ದಿಲ್ಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಡಿಐಎಎಲ್)ಕ್ಕಾಗಿ ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಕುರಿತಾದದ್ದು. ಈ ವರದಿ ನಾಗರಿಕ ವಿಮಾನಯಾನ ಮಂತ್ರಾಲಯ ಮತ್ತು ಭಾರತ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ) ಈ ವಿಷಯದಲ್ಲಿ ತಪ್ಪು ಕ್ರಮಗಳಿಗೆ ಎರಡು ರೀತಿಗಳಲ್ಲಿ ಅನುಕೂಲ ಮಾಡಿಕೊಟ್ಟಿವೆ ಎಂದು ಸಿಎಜಿ ವರದಿ ಹೇಳಿದೆ.
ಈ ಪಿಪಿಪಿಯಲ್ಲಿ ಖಾಸಗಿಯವರು 2450 ಕೋಟಿ ರೂ.ಗಳ ಬಂಡವಾಳ ಹಾಕಿದ್ದಕ್ಕಾಗಿ 240 ಎಕರೆ ಭೂಮಿಯ ವಾಣಿಜ್ಯ ಬಳಕೆಯ ಹಕ್ಕನ್ನು ಕೊಡಲಾಗಿದೆ. ಇದರಿಂದ ಲೈಸೆನ್ಸ್ ಶುಲ್ಕದ ಮೂಲಕ 58 ವರ್ಷಗಳಲ್ಲಿ ಬರುವ ಆದಾಯದ ಪ್ರಮಾಣ 1,83,557 ಕೋಟಿ ರೂ. ಹಾಗೂ ಇದರಲ್ಲಿ ಡಿಐಎಎಲ್ ಪಾಲು ರೂ.88,337 ಕೋಟಿ ಎಂದು ಸ್ವತಃ ಆ ಕಂಪನಿಯೇ ಲೆಕ್ಕ ಹಾಕಿತ್ತು. ಇದಕ್ಕೆ ಇನ್ನೂ 190.19 ಎಕರೆ ಜಮೀನನ್ನು ಕೇವಲ ರೂ. 6.19 ಕೋಟಿಗೆ ಲೀಸಿಗೆ ಕೊಡಲಾಯಿತು. ಇದು ಸರಕಾರಿ ಸಂಸ್ಥೆಗಳಾದ ನಾಗರಿಕ ವಿಮಾನಯಾನ ಮಹಾನಿರ್ದೇಶಕ ಕಚೇರಿ(ಡಿಜಿಸಿಎ) ಮತ್ತು ನಾಗರಿಕ ವಿಮಾನಯಾನ ಭದ್ರತಾ ಕಚೇರಿ (ಬಿಸಿಎಎಸ್) ಸಾಮಾನ್ಯವಾಗಿ ನಿಗದಿ ಪಡಿಸುವ ದರಕ್ಕಿಂತ ಬಹಳ ಕಡಿಮೆ. ಅಲ್ಲದೆ ಹರಾಜಿನ ನಂತರ, ಕರಾರು ಮಾಡಿಕೊಂಡ ನಂತರ ಖಾಸಗಿ ಪಾಲುದಾರರಿಗೆ ಹೆಚ್ಚಿನ ಪ್ರಯೋಜನಗಳನ್ನು ಕೊಡಮಾಡಿರುವುದು ಟೆಂಡರ್ ಪ್ರಕ್ರಿಯೆಯ ಉಲ್ಲಂಘನೆ ಮತ್ತು ಶಾಮೀಲಿನ ಪ್ರಶ್ನೆಗಳನ್ನು ಎಬ್ಬಿಸಿದ್ದವು.
ಅಲ್ಲದೇ, ನಾಗರಿಕ ವಿಮಾನಯಾನ ಮಂತ್ರಾಲಯ ಫೆಬ್ರುವರಿ 2009ರಲ್ಲಿ ಮತ್ತು ನಂತರ ವಿಮಾನ ನಿಲ್ದಾಣ ಆಥರ್?ಕ ನಿಯಂತ್ರಣ ಪ್ರಾಧಿಕಾರ (ಎಇಆರ್ಎ) ಡಿಐಎಎಲ್ ಅಭಿವೃದ್ಧಿ ಶುಲ್ಕ ಎಂದು 3415.35 ಕೋಟಿ ರೂ.ಗಳನ್ನು ಸಂಗ್ರಹಿಸಲು ಅವಕಾಶ ನೀಡಿವೆ. ಇದರಲ್ಲಿ ಕಾರ್ಯಾಚರಣೆ ನಿರ್ವಹಣೆ ಮತ್ತು ಅಭಿವೃದ್ಧಿ ಒಪ್ಪಂದದ ಹಾಗೂ ಎಎಐ ಕಾನೂನು ಮತ್ತು ಎಐಆರ್ಎ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಮಹಾಲೆಕ್ಕ ಪರಿಶೋಧಕರ ವರದಿ ಹೇಳಿದೆ.
ಮಹಾರಾಷ್ಟ್ರ ನೀರಾವರಿ ಯೋಜನೆಗಳ ಹಗರಣ: 35,000 ಕೋಟಿ
1999-2009 ಅವಧಿಯಲ್ಲಿ ಈ ಹಗರಣ ನಡೆದಿದ್ದು, ಕಾಂಗ್ರೆಸ್ ಹಾಗೂ ಎನ್ಸಿಪಿ ಮಹಾರಾಷ್ಟ್ರದಲ್ಲಿ ಆಡಳಿತದಲ್ಲಿದ್ದ ಸಂದರ್ಭವದು. 2012 ರಲ್ಲಿ ಆರ್ಥಿಕ ಸಮೀಕ್ಷೆಯಿಂದ ಈ ಹಗರಣ ಬೆಳಕಿಗೆ ಬಂದಿತು. ವಿವಿಧ ನೀರಾವರಿ ಯೋಜನೆಗಳಿಗೆಂದು 70,000 ಕೋಟಿ ಹಣವನ್ನು ಖರ್ಚುಮಾಡಲಾಗಿದೆ ಎಂದು ಅಂದಾಜಿಸಲಾಗಿತ್ತು. ಆದರೆ ನೀರಾವರಿ ಕ್ಷೇತ್ರವನ್ನು ಗಮನಿಸಿದಾಗ ಅಲ್ಲಿ 0.1% ಇಷ್ಟೂ ಕೂಡಾ ಅಭಿವೃದ್ಧಿ ಹೊಂದಿರಲಿಲ್ಲ ಎಂಬ ಸತ್ಯ ಹೊರಬಿತ್ತು. ಸರ್ಕಾರಿ ಎಂಜಿನಿಯರ್ ವಿಜಯ್ ಪಾಂಢರೆ ಆರೋಪಿಸುವಂತೆ, ಬಿಡುಗಡೆಗೊಂಡ ಹಣದ ಅರ್ಧದಷ್ಟು ಹಣ ಭ್ರಷ್ಟ ಧುರೀಣರ ಜೇಬಿಗೆ ಹೋಗಿದೆ. ಆಗ ನೀರಾವರಿ ಸಚಿವರಾಗಿದ್ದವರು ಅಜಿತ್ ಪವಾರ್. ಅವರೇ ಈ ಹಗರಣದಲ್ಲಿ ಹೆಚ್ಚು ಲಾಭ ಪಡೆದವರು ಎನ್ನಲಾಗಿದೆ.
2008ರ ಏಪ್ರಿಲ್ 25 ರಂದು ಡೆಪ್ಯುಟಿ ಸೆಕ್ರೆಟರಿ ಟಿ.ಎನ್. ಮುಂಡೆ ಅವರು ಒಂದು ಸುತ್ತೋಲೆಯನ್ನು ಹೊರಡಿಸುವ ಮೂಲಕ, ನೀರಾವರಿ ಇಲಾಖೆಯು ಅನೇಕ ಕಚ್ಚಾ ವಸ್ತುಗಳು ಹಾಗೂ ಇನ್ನಿತರ ಅಗತ್ಯ ವಸ್ತುಗಳಿಗೆ ಪಾವತಿಸುವಾಗ ಇಲಾಖೆವತಿಯಿಂದ ನಿಗದಿ ಪಡಿಸಿದ ದರಪಟ್ಟಿಯನ್ನು ಅನುಸರಿಸದೇ, ಅತಿ ಹೆಚ್ಚಿನ ದರವನ್ನು ಪಾವತಿಸಲಾಗಿದೆ ಎಂದು ತಿಳಿಸುತ್ತಾರೆ.
ಇದಕ್ಕೆ ಪ್ರತಿಯಾಗಿ ಸಚಿವರ ಕಚೇರಿಯಿಂದ ಮುಂಡೆ ಅವರಿಗೆ ಮೇ.14 2008 ರಂದು ಒಂದು ಪತ್ರ ಬರೆಯುವ ಮೂಲಕ ಸುತ್ತೋಲೆಯನ್ನು ಹಿಂಪಡೆಯುವಂತೆ ಹೇಳಲಾಗುತ್ತದೆ. ಅಲ್ಲದೇ ಸಚಿವರ ಅನುಮತಿಯಿಲ್ಲದೇ ಯಾವುದೇ ಸುತ್ತೋಲೆಯನ್ನು ಹೊರಡಿಸುವಂತಿಲ್ಲ ಎಂದೂ ಆದೇಶವನ್ನೂ ಮಾಡಲಾಗುತ್ತದೆ. ಈ ಕುರಿತು ಸಿಬಿಐಗೆ ವಹಿಸಲು ಕಾಂಗ್ರೆಸ್ ಮನಸು ಮಾಡದೇ, ಹಗರಣವನ್ನು ಮುಚ್ಚಿ ಹಾಕಲು ಯತ್ನಿಸಿತು.
ಅಲ್ಟ್ರಾ ಮೆಗಾ ಪಾವರ್ ಹಗರಣ : 10,000 ಕೋಟಿ
2012 ರಲ್ಲಿ ಈ ಪ್ರಕಣದ ನಡೆದಿದೆ. ವಿಶೇಷ ಉದ್ದೇಶದ ವಾಹನಗಳು (ಎಸ್ಪಿವಿ) ಎಂಬ ಹೆಸರಿನಲ್ಲಿ ಸರಕಾರ ರಚಿಸಿದ ಸಂಸ್ಥೆಗಳಿಗೆ ಭಾರೀ ಬೃಹತ್ ಪ್ರಮಾಣದ ವಿದ್ಯುತ್ ಯೋಜನೆ (ಯುಎಂಪಿಪಿ)ಗಳಿಗೆ ತೈಲ ನಿಕ್ಷೇಪಗಳ ಹಂಚಿಕೆ ಕುರಿತಾದದ್ದು. ಅಂಬಾನಿ ಗುಂಪಿನ ರಿಲಯನ್ಸ್ ಪವರ್ ಲಿಮಿಟೆಡ್(ಆರ್ಪಿಎಲ್) ಕಂಪನಿಗೆ ಹರಾಜಿನ ಮೂಲಕ ಹಂಚಿಕೆಯ ನಂತರ ಹರಾಜಿನ ಶರತ್ತುಗಳನ್ನು ಉಲ್ಲಂಘಿಸಿ ಸಾಸನ್ ಯುಎಂಪಿಪಿಗೆ ಹಂಚಿದ್ದ ಮೂರು ಕಲ್ಲಿದ್ದಲು ನಿಕ್ಷೇಪಗಳನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಇದು ಹರಾಜು ಶರತ್ತುಗಳ ಉಲ್ಲಂಘನೆ ಮಾತ್ರವಲ್ಲ, ಆರ್ಪಿಎಲ್ ಗೆ ಸಲ್ಲಬಾರದ ಪ್ರಯೋಜನಗಳನ್ನು ಕೊಟ್ಟಿದೆ. ಈ ಮೂಲಕ ಆರ್ಪಿಎಲ್ಗೆ ರೂ. ೨೯ಸಾವಿರ ಕೋಟಿ ಬಕ್ಷೀಸು ನೀಡಿದಂತಾಗಿದೆ ಎಂದು ಸಿಎಜಿ ಲೆಕ್ಕಹಾಕಿದೆ.
ವ್ಯಾಪಂ ಹಗರಣ : 6,000 ಕೋಟಿ
ಮಧ್ಯಪ್ರದೇಶದ ವೃತ್ತಿಪರ ಶಿಕ್ಷಣ ಅಥವಾ ವ್ಯವಸಾಯಿಕ್ ಪರೀಕ್ಷಾ ಮಂಡಲ್(ವ್ಯಾಪಂ) ಮಧ್ಯಪ್ರದೇಶದ ಸ್ವಾಯತ್ತ ಸಂಸ್ಥೆ. 1970ರಲ್ಲಿ ಪ್ರಾರಂಭಗೊಂಡ ಈ ಸಂಸ್ಥೆ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪರೀಕ್ಷೆಗಳನ್ನು ಆಯೋಜಿಸುತ್ತದೆ. ವೃತ್ತಿ ಶಿಕ್ಷಣ ಪ್ರವೇಶ, ವೈದ್ಯರು, ಕಾನ್ಸ್ಟೆಬಲ್, ಶಿಕ್ಷಕರು ಮತ್ತಿತರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಪ್ರವೇಶ ಪರೀಕ್ಷೆಗಳನ್ನು ಈ ಮಂಡಳಿ ನಡೆಸುತ್ತಿದೆ.
ವೈದ್ಯ ಪ್ರವೇಶ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಪರವಾಗಿ ಇನ್ನೊಬ್ಬರು ಭಾಗಿಯಾಗಿರುವುದನ್ನು ಗಮನಿಸಿದ ವೈದ್ಯರಾದ ಡಾ. ಆನಂದ್ ರಾಯ್ ಅವರು 2013 ರಲ್ಲಿ ಈ ಹಗರಣವನ್ನು ಬಯಲು ಮಾಡಿದ್ದರು. ಅಲ್ಲಿಂದ ವ್ಯಾಪಂ ಸಂಬಂಧಪಟ್ಟಂತೆ ನಿಗೂಢ ಸಾವುಗಳು ಸರಣಿ ಶುರುವಾದವು.
ಸೀಟಿಗಾಗಿ ಪ್ರತಿಯೊಬ್ಬ ಅಭ್ಯರ್ಥಿಯಿಂದ ಲಕ್ಷಾಂತರ ರೂಪಾಯಿ ಪಡೆಯಲಾಗಿದೆ. ಇದರಿಂದಾಗಿ ಮೆರಿಟ್ ಇಲ್ಲದಿದ್ದರೂ ಹಣವಿದ್ದವರಿಗೆ ವೃತ್ತಿಪರ ಕೋರ್ಸ್ ಗಳ ಸೀಟು ಬಿಕರಿಯಾಗಿದ್ದವು ಎಂದು ಹೇಳಲಾಗಿದೆ. ಸ್ವಾಯತ್ತ ಸಂಸ್ಥೆಯಾಗಿರುವ ಮಧ್ಯಪ್ರದೇಶ ವ್ಯವಸಾಯಿಕ್ ಪರೀಕ್ಷಾ ಮಂಡಳಿಯು ನಡೆಸಿರುವ ಪ್ರವೇಶ ಪರೀಕ್ಷೆ ಮತ್ತು ನೇಮಕಾತಿಯು ಈ ಹಗರಣದಲ್ಲಿ ಮಾಜಿ ಶಿಕ್ಷಣ ಸಚಿವ ಲಕ್ಷ್ಮೀಕಾಂತ ಶರ್ಮಾ ಸೇರಿದಂತೆ ರಾಜಕಾರಣಿಗಳು, ಹಿರಿಯ ಅಧಿಕಾರಿ ಗಳು, ಉದ್ಯಮಿಗಳು ಭಾಗಿಯಾಗಿದ್ದಾರೆ. ಇದರ ಹಿಂದೆ ದೊಡ್ಡ ದೊಡ್ಡವರ ಹೆಸರುಗಳು ಕೇಳಿ ಬಂದಿವೆ.
ಉತ್ತರ ಪ್ರದೇಶ: ಎನ್ಆರ್ಎಚ್ ಎಂ ಹಗರಣ
ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಯೋಜನೆಯಡಿಯಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಸೇರಿ ಅಂದಾಜು 10 ಸಾವಿರ ಕೋಟಿಯಷ್ಟು ಹಣ ದುರುಪಯೋಗಪಡಿಸಿಕೊಂಡಿರುವ ಆರೋಪವಿದೆ. ಗ್ರಾಮೀಣ ಜನರ ಆರೋಗ್ಯವನ್ನು ಕಾಪಾಡುವ ಹಿತದೃಷ್ಟಿಯಲ್ಲಿ ಜಾರಿಗೆ ಬಂದ ಕೇಂದ್ರ ಸರ್ಕಾರದ ಒಂದು ಪ್ರಮುಖ ಕಾರ್ಯಕ್ರಮ ಇದು. ಈ ಹಗರಣಕ್ಕೆ ಸಂಬಂಧಿಸಿದಂತೆ ಅನೇಕ ಮಾಜಿ ಸಚಿವರು, ಬಿಎಸ್ಪಿ ಸೇರಿದಂತೆ ಅನೇಕರು ಸಿಬಿಐನಿಂದ ತನಿಖೆಗೊಳಪಟ್ಟರು.
ತೆಲಗಿ ಹಗರಣ: 20,000 ಕೋಟಿ
ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ರೂವಾರಿ ಅಬ್ದುಲ್ ಕರೀಂ ತೆಲಗಿ. ಹಣಕಾಸು ಸಂಸ್ಥೆ ಹಾಗೂ ಬ್ಯಾಂಕ್ಗಳಲ್ಲಿ ಅವನ್ನು ಮಾರಾಟ ಮಾಡುವಂತೆ ಮಾಡಿದ್ದೆ. ಇದರಿಂದಲೇ ಅವರು ಕೋಟಿಗಟ್ಟಲೇ ಹಣಗಳಿಸಿದ್ದ. ಈ ಹಗರಣಕ್ಕೆ ಸಂಬಂಧಿಸಿದಂತೆ ಎನ್ಸಿಪಿ ನಾಯಕ ಶರದ್ ಪವಾರ್ ಅವರ ಬೆಂಬಲ ಇರುವುದನ್ನೂ ಅವನು ಬಹಿರಂಗವಾಗೇ ಹೇಳಿದ್ದ.
ಹಗರಣಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ, ಪ್ರಸ್ತುತ ಕೇಂದ್ರ ಸರ್ಕಾರ ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಭರವಸೆ ನೀಡಿದ್ದು, ಇದುವರೆಗೂ ನುಡಿದಂತೆ ನಡೆಯುತ್ತಿರುವುದು ದೇಶದ ಭಾಗ್ಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.