ನವದೆಹಲಿ: ಸಾಲ ಮಾಡಿ ದೇಶ ತೊರೆದ ವಿಜಯ್ ಮಲ್ಯ ಹಾಗೂ ಲಲಿತ್ ಮೋದಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೈಟ್ಲಿ ಆರ್ಥಿಕ ಅಪರಾಧಿಗಳ ಆಸ್ತಿ ಮುಟ್ಟುಗೋಲಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ಇಂದು ಕೇಂದ್ರ ಸಾಮಾನ್ಯ ಬಜೆಟ್ ಮಂಡಿಸುವ ವೇಳೆ ಈ ವಿಷಯ ಪ್ರಸ್ತಾಪಿಸಿರುವ ಅವರು, ದೇಶ ತೊರೆದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ನೂತನ ಕಾಯ್ದೆ ಜಾರಿಗೆ ತರಲಿದೆ ಎಂದು ಹೇಳಿದ್ದಾರೆ.
ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ ಮಲ್ಯ ಸಾಲ ಪಡೆಯಲು ಶಿಫಾರಸು ಮಾಡಿದ್ದರು ಎಂದು ಕಳೆದ ವಾರ ಬಿಜೆಪಿ ಆರೋಪಿಸಿದರೆ, ಮಲ್ಯ ದೇಶ ತೊರೆಯಲು ಬಿಜೆಪಿ ಸಹಕರಿಸಿದೆ ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿತ್ತು. ಈ ದೃಷ್ಟಿಯಲ್ಲಿ ಅರುಣ್ ಜೇಟ್ಲಿ ಅವರ ನೂತನ ಕಾಯ್ದೆ ಜಾರಿಗೆ ತರುವ ಮಾತು ಗಮನ ಸೆಳೆದಿದೆ.
ತೆರಿಗೆ ವಂಚಕರ ವಿರುದ್ಧ ಜೇಟ್ಲಿ ಗರಂ
ಸರ್ಕಾರಕ್ಕೆ ತೆರಿಗೆ ಪಾವತಿಸದೇ ವಂಚಿಸುವವರ ಜನ್ಮ ಜಾಲಾಡಿರುವ ಸಚಿವ ಜೇಟ್ಲಿ ಅವರು, ದೇಶದಲ್ಲಿ 13.97 ಲಕ್ಷ ನೊಂದಾಯಿತ ಕಂಪನಿಗಳಿವೆ. ಆದರೆ ಕೇವಲ 5.97 ಲಕ್ಷ ಸಂಸ್ಥೆಗಳು ಮಾತ್ರ ತೆರಿಗೆ ಪಾವತಿಸುತ್ತಿವೆ. ಉಳಿದ 8 ಲಕ್ಷ ಸಂಸ್ಥೆಗಳು ತೆರಿಗೆ ವಂಚಿಸುತ್ತಿವೆ ಎಂದು ಹೇಳಿದರು.
ತೆರಿಗೆ ಪಾವತಿಸುವವರ ಸಂಖ್ಯೆ ಕಡಿಮೆ ಇದ್ದರೂ ಕಾರು ಕೊಳ್ಳುವವರ ಸಂಖ್ಯೆ ಹಾಗೂ ವಿದೇಶಕ್ಕೆ ಹಾರುವವರ ಸಂಖ್ಯೆ ಹೆಚ್ಚುತ್ತಲೇ ಇದೆ, ಆದರೆ ಸರ್ಕಾರವನ್ನು ವಂಚಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೇ ಬಿಡುವುದಿಲ್ಲ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.