ಕೊನೆಗೂ ರಾಜ್ಯ ಬಿಜೆಪಿಯಲ್ಲಿನ ಗೊಂದಲಕ್ಕೆ ತಾತ್ಕಾಲಿಕ ತೆರೆ ಎಳೆಯಲಾಗಿದೆ. ಯಡಿಯೂರಪ್ಪ ಹಾಗೂ ಈಶ್ವರಪ್ಪ ಅವರ ನಡುವೆ ನಡೆದಿದ್ದ ಕಲಹ ಶಮನಗೊಂಡಿದೆ ಎನ್ನಲಾಗಿದೆ. ದೆಹಲಿಯಲ್ಲಿ ನಡೆದ ಸಂಧಾನಸೂತ್ರ ಸಭೆಯಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಇಬ್ಬರ ಜಗಳಕ್ಕೂ ತಾರ್ಕಿಕ ಅಂತ್ಯ ಹಾಡಲಾಗಿದೆ. ಈ ಸಂಧಾನಸೂತ್ರದಲ್ಲಿ ಯಡಿಯೂರಪ್ಪ, ಈಶ್ವರಪ್ಪ ಇಬ್ಬರಿಗೂ ಗೆಲುವಾಗಿದೆ. ರಾಯಣ್ಣ ಬ್ರಿಗೇಡನ್ನು ಬಿಜೆಪಿಯಿಂದ ನಿಷೇಧಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾದರೆ, ಸಂಗೊಳ್ಳಿರಾಯಣ್ಣನ ಹೆಸರನ್ನು ಉಳಿಸಿಕೊಂಡೇ ಹಿಂದುಳಿದ ವರ್ಗಗಳ ನಾಯಕನಾಗುವಲ್ಲಿ ಈಶ್ವರಪ್ಪ ಗೆದ್ದಿದ್ದಾರೆ ಎಂದು ಮಾಧ್ಯಮಗಳ ವಿಶ್ಲೇಷಣೆ. ಜಗಳವಾಡುತ್ತಿದ್ದ ಇವರಿಬ್ಬರು ನಾಯಕರೂ ಗೆದ್ದಿರಬಹುದು. ಆದರೆ ಆ ಜಗಳದ ಪರಿಣಾಮವಾಗಿ ಪಕ್ಷವಂತೂ ಸೋತು ಹೈರಾಣಾಗಿದೆ. ಪಕ್ಷದ ಸಿದ್ಧಾಂತ, ನೀತಿ-ನಿಲುವಿಗೆ ಬದ್ಧರಾಗಿದ್ದ ಕಾರ್ಯಕರ್ತರಿಗಂತೂ ಘೋರ ನಿರಾಶೆಯಾಗಿದೆ. ಇಂತಹ ಜಗಳವಾಡುವ, ಅಕಾರಕ್ಕಾಗಿ ಯಾವ ಮಟ್ಟಕ್ಕೂ ಇಳಿಯುವ ನಾಯಕರ ನೇತೃತ್ವದಲ್ಲಿ ನಾವೆಲ್ಲಾ ಪಕ್ಷಕ್ಕಾಗಿ ದುಡಿಯಬೇಕೆ? ಎಂಬ ಪ್ರಶ್ನೆ ಕಾರ್ಯಕರ್ತರನ್ನು ಗಂಭೀರವಾಗಿ ಕಾಡತೊಡಗಿದೆ.
ಯಡಿಯೂರಪ್ಪ, ಈಶ್ವರಪ್ಪ ಇಬ್ಬರೂ ಒಂದೇ ಜಿಲ್ಲೆಗೆ ಸೇರಿದವರು. ಆರಂಭದಿಂದಲೂ ಒಟ್ಟಾಗಿ ಸಂಘಟನೆಗಾಗಿ ಶ್ರಮಿಸಿದವರು. ಒಂದೇ ಸ್ಕೂಟರ್ನಲ್ಲಿ ಹಳ್ಳಿಹಳ್ಳಿಗೆ ತೆರಳಿ ಪಕ್ಷದ ಬೆಳವಣಿಗೆಗಾಗಿ ಬೆವರು ಹರಿಸಿದವರು. ಅದಕ್ಕೆ ಇಬ್ಬರಿಗೂ ಸಾಕಷ್ಟು ಪ್ರತಿಫಲವೂ ದೊರೆತಿದೆ. ಯಡಿಯೂರಪ್ಪ ಶಾಸಕರಾಗಿ, ಪ್ರತಿಪಕ್ಷದ ನಾಯಕರಾಗಿ, ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದ್ದರೆ, ಈಶ್ವರಪ್ಪ ಶಾಸಕರಾಗಿ, ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಹಾಗೂ ಈಗ ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕರಾಗಿ ಹಲವು ಬಗೆಯ ಅಧಿಕಾರದ ರುಚಿ ಸವಿದವರು. ಹಾಗೆ ನೋಡಿದರೆ, ಅವರಷ್ಟೇ ಶ್ರಮಿಸಿದ, ಅವರಿಗಿಂತಲೂ ಹೆಚ್ಚು ಪಕ್ಷಕ್ಕಾಗಿ ಬೆವರು ಹರಿಸಿದ ಹಲವು ಕಾರ್ಯಕರ್ತರಿಗೆ ಯಾವ ಪ್ರತಿಫಲವೂ ದೊರಕಿಲ್ಲ. ಹಲವು ಕಾರ್ಯಕರ್ತರು ಅಂತಹ ಪ್ರತಿಫಲವನ್ನು ನಿರೀಕ್ಷಿಸಿಯೂ ಇಲ್ಲ. ಪಕ್ಷಕ್ಕಾಗಿ, ಸಂಘಟನೆಗಾಗಿ ದುಡಿಯುವುದಷ್ಟೇ ತಮ್ಮ ಕರ್ತವ್ಯ ಎಂದು ಭಾವಿಸಿದ್ದಾರೆ. ಈಗಲೂ ಎಲೆಮರೆಯ ಕಾಯಿಯಂತೆ ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ತಮ್ಮ ಪಾಡಿಗೆ ಪಕ್ಷಕ್ಕಾಗಿ ಶ್ರಮಿಸುತ್ತಲೇ ಇದ್ದಾರೆ.
ಯಡಿಯೂರಪ್ಪ-ಈಶ್ವರಪ್ಪ ಇವರಿಬ್ಬರ ನಡುವಣ ಜಗಳ ಪರಿಹರಿಸಿಕೊಳ್ಳಲು ಅಮಿತ್ ಶಾ ಮೂರು ತಾಸಿನ ಸಂಧಾನಸಭೆ ನಡೆಸಬೇಕಾದ ಅಗತ್ಯವೇ ಬರಬಾರದಿತ್ತು. ಅದನ್ನು ರಾಜ್ಯಮಟ್ಟದಲ್ಲಿಯೇ ಒಂದೆಡೆ ಕುಳಿತು ಸೌಹಾರ್ದವಾಗಿ ಬಗೆಹರಿಸಿಕೊಳ್ಳಬಹುದಿತ್ತು. ದೆಹಲಿಗೆ ಹೋಗಬೇಕಾದ ಅಗತ್ಯವೇ ಇರಲಿಲ್ಲ. ಆದರೆ ಮುರಿದುಹೋದ ಮನಸ್ಸುಗಳು, ಸಂಕುಚಿತ ದೃಷ್ಟಿಕೋನ, ಅಧಿಕಾರದ ಹಪಾಹಪಿ, ಪಕ್ಷಕ್ಕೆ ಆಗುವ ಆಪಾರ ಹಾನಿಯ ಕುರಿತು ನಿಷ್ಕಾಳಜಿ, ಎಲ್ಲದಕ್ಕಿಂತ ಮುಖ್ಯವಾಗಿ ಒಣಪ್ರತಿಷ್ಠೆಯಿಂದಾಗಿ ರಾಜ್ಯಮಟ್ಟದಲ್ಲೇ ಈ ಸಂಧಾನ ಸಾಧ್ಯವಾಗಿಲ್ಲ ಎನ್ನುವುದು ಹಗಲಿನಷ್ಟು ಸ್ಪಷ್ಟ. ಇವರಿಬ್ಬರೂ ಸಂದರ್ಭ ಸಿಕ್ಕಿದಾಗೆಲ್ಲ ತಾವು ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ಪಕ್ಷಕ್ಕಾಗಿ ಪ್ರಾಣವನ್ನೇ ಕೊಡುತ್ತೇವೆ ಎಂದು ಹೇಳುತ್ತಲೇ ಇರುತ್ತಾರೆ. ಆದರೆ ಬಾಹ್ಯವರ್ತನೆಯಲ್ಲಿ ಮಾತ್ರ ಅದು ಕಾಣಿಸಿಕೊಳ್ಳುವುದೇ ಇಲ್ಲ. ನಿಷ್ಠಾವಂತ ಕಾರ್ಯಕರ್ತರಾಗಿದ್ದರೆ ಆಗಾಗ ಕಿತ್ತಾಡುವುದಾದರೂ ಏಕೆ? ಮಾಧ್ಯಮಗಳ ಬಳಿ ಧಾವಿಸಿ ಒಬ್ಬರ ವಿರುದ್ಧ ಇನ್ನೊಬ್ಬರು ಕೆಸರೆರಚುವುದಾದರೂ ಏಕೆ? ಪಕ್ಷದ ವೇದಿಕೆಯಲ್ಲಿ ಅಥವಾ ವೈಯಕ್ತಿಕವಾಗಿ ತಮ್ಮಿಬ್ಬರ ನಡುವಿನ ಗೊಂದಲವನ್ನು, ಕಿತ್ತಾಟವನ್ನು ಪರಿಹರಿಸಿಕೊಳ್ಳಲು ಸಾಧ್ಯವಿರಲಿಲ್ಲವೆ?
ಕಳೆದೊಂದು ತಿಂಗಳಿನಿಂದ ಈ ಇಬ್ಬರು ನಾಯಕರ ನಡುವೆ ನಡೆದ ಜಗಳ ಪಕ್ಷಕ್ಕಂತೂ ಸಾಕಷ್ಟು ಹಾನಿಯುಂಟುಮಾಡಿದೆ. ಪಕ್ಷಕ್ಕಾಗಿ ನಿಷ್ಠೆಯಿಂದ ಶ್ರಮಿಸುತ್ತಿರುವ ಕಾರ್ಯಕರ್ತರ ಮನಸ್ಸುಗಳು ಮುರಿದುಹೋಗಿವೆ. ಸಾಕಪ್ಪಾ ಇವರಿಬ್ಬರ ಸಹವಾಸ… ಎಂದೆನಿಸಿದ್ದರೆ ಆಶ್ಚರ್ಯವಿಲ್ಲ. ಬಿಜೆಪಿಗೆ ಸಾಕಷ್ಟು ಹಿನ್ನಡೆಯಂತೂ ಆಗಿದೆ. ಸಿದ್ಧರಾಮಯ್ಯ ಸರ್ಕಾರದ ದುರಾಡಳಿತ, ಸಚಿವಸಂಪುಟದ ಅಪಸವ್ಯಗಳು, ಜನವಿರೋಧಿ ನಿಲುವು ಇತ್ಯಾದಿಗಳಿಂದಾಗಿ ರಾಜ್ಯದ ಜನತೆ ಬೇಸತ್ತುಹೋಗಿದ್ದರು. ಮುಂದಿನ ಚುನಾವಣೆಯಲ್ಲಿ ಇನ್ನೊಮ್ಮೆ ಖಂಡಿತ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲೇಬಾರದು ಎಂಬ ದೃಢನಿಶ್ಚಯ ಜನಮಾನಸದಲ್ಲಿ ಹೆಪ್ಪುಗಟ್ಟತೊಡಗಿತ್ತು. ಅತ್ತ ಜೆಡಿಎಸ್ನಲ್ಲೂ ಅತೃಪ್ತಿ, ಅಸಮಾಧಾನ ಹೊಗೆಯಾಡಿತ್ತು. ಆ ಪಕ್ಷದ ಏಳೆಂಟು ಮಂದಿ ಅತೃಪ್ತ ಶಾಸಕರು ಬಿಜೆಪಿಯತ್ತ ಒಲವು ತೋರಿಸಿದ್ದರು. ಆದರೆ ಅಷ್ಟರಲ್ಲೇ ಬಿಜೆಪಿಯ ವರಿಷ್ಠ ನಾಯಕರಿಬ್ಬರಲ್ಲಿ ತಾರಕಮಟ್ಟದಲ್ಲಿ ಜಗಳ ಶುರುವಾದಾಗ ಬಿಜೆಪಿಯತ್ತ ಬರಬೇಕೆಂದಿದ್ದ ಜೆಡಿಎಸ್ ಶಾಸಕರು ಹಿಂದೆ ಸರಿದರು. ಈಗ ಅವರ ಒಲವು ಕಾಂಗ್ರೆಸ್ನತ್ತ ಹರಿದಿದೆ.
ಅದಿರಲಿ, ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೊಂದು ಬಂಗಾರದಂತಹ ಅವಕಾಶ ಪ್ರಾಪ್ತವಾಗಿತ್ತು. ಅಂತಹ ಅವಕಾಶವನ್ನು ಸಿದ್ದರಾಮಯ್ಯ ಸರ್ಕಾರದ ದುರಾಡಳಿತ ಒದಗಿಸಿಕೊಟ್ಟಿತ್ತು. ಹಗರಣಗಳ ಮೇಲೆ ಹಗರಣ, ಮೇರೆಮೀರಿದ ಭ್ರಷ್ಟಾಚಾರ, ಎಗ್ಗಿಲ್ಲದ ಆಡಳಿತದಿಂದಾಗಿ ಬಿಜೆಪಿಗೊಂದು ಒಳ್ಳೆಯ ಅವಕಾಶ ಸೃಷ್ಟಿಯಾಗಿತ್ತು. ಆದರೆ ನಾಯಕರಿಬ್ಬರ ಜಗಳದಿಂದಾಗಿ ಅಂತಹ ಅವಕಾಶ ದೂರದೂರ ಸರಿದಿದೆ. ಮತ್ತೆ ಅಂತಹ ಅವಕಾಶವನ್ನು ಸೃಷ್ಟಿಸುವುದು ಅಥವಾ ಅದಾಗಿಯೇ ಏರ್ಪಡುವುದು ಅಷ್ಟು ಸುಲಭವೇನಲ್ಲ.
ಅಧಿಕಾರದಲ್ಲಿದ್ದಾಗ ಇಬ್ಬರೂ ಒಂದಿಷ್ಟು ಒಳ್ಳೆಯ ಕೆಲಸಗಳನ್ನೂ ಮಾಡಿದ್ದಾರೆ. ಆ ಬಗ್ಗೆ ಎರಡು ಮಾತೇ ಇಲ್ಲ. ಆದರೆ ಎಲ್ಲ ಬಣ್ಣ ಮಸಿ ನುಂಗಿತು ಎಂಬಂತೆ ಅವರಿಬ್ಬರ ನಡುವೆ ನಡೆದ ಬೀದಿಜಗಳ ಅವರ ಸಾಧನೆಗಳನ್ನು ಮಂಕಾಗಿಸಿದೆ. ಅವರಿಬ್ಬರನ್ನೂ ಕಾರ್ಯಕರ್ತರು, ಜನತೆ ನೆನಪಿಸಿಕೊಂಡಾಗ ತಟ್ಟನೆ ಗೋಚರವಾಗುವುದು ಅವರ ಸಾಧನೆಗಳಲ್ಲ, ಬದಲಿಗೆ ಪದೇಪದೇ ಪಕ್ಷಕ್ಕೆ ಹಾನಿಯಾಗುವಂತೆ ಅವರಿಬ್ಬರು ನಡೆಸುವ ಬೀದಿಜಗಳ. ಪಕ್ಷದಲ್ಲಿರುವ ಯಾರೋ ಪಡ್ಡೆಗಳು ಇಂತಹ ಬೀದಿಜಗಳ ಮಾಡಿದ್ದರೆ ಅದನ್ನು ಅಷ್ಟೊಂದು ಗಂಭೀರವಾಗಿ ಯಾರೂ ಕಾಣುತ್ತಿರಲಿಲ್ಲ. ಎಷ್ಟಾದರೂ ಪಡ್ಡೆಗಳು, ಪಕ್ವತೆ ಸಾಲದು ಎಂದು ನಾಲ್ಕು ಬುದ್ಧಿಮಾತು ಹೇಳಿ ಸರಿದಾರಿಗೆ ತರುತ್ತಿದ್ದರು. ಆದರೆ ಇವರಿಬ್ಬರು ಪಡ್ಡೆಗಳೇನಲ್ಲ. ಸಾಕಷ್ಟು ಅನುಭವಶಾಲಿಗಳು. ಪಕ್ಷದ ಸಂಘಟನೆಯಲ್ಲಿ ಕಷ್ಟ, ನಷ್ಟ ಉಂಡವರು. ಹೀಗಿದ್ದರೂ ಅಧಿಕಾರದ ಕುರ್ಚಿ ಏರುತ್ತಿದ್ದಂತೆ ಅವರು ಬದಲಾಗಿದ್ದೇಕೆ? ಎಂದು ಈಗಲೂ ಕಾರ್ಯಕರ್ತರಿಗೆ, ಜನತೆಗೆ ಆಶ್ಚರ್ಯವಾಗುತ್ತಿದೆ.
ಆರೆಸ್ಸೆಸ್ನ ದ್ವಿತೀಯ ಸರಸಂಘಚಾಲಕರಾಗಿದ್ದ ಶ್ರೀಗುರೂಜಿಯವರು ಬಹಳ ಹಿಂದೆ ನಡೆದ ಕಾರ್ಯಕರ್ತರ ಬೈಠಕ್ವೊಂದರಲ್ಲಿ ಸಂಘದ ಬಗ್ಗೆ ಮಾತನಾಡುತ್ತಾ ಹೇಳಿದ್ದರು : ಆರೆಸ್ಸೆಸ್ ಅನ್ನು ನಾಶಪಡಿಸಲು ನೆಹರೂ ಅವರಿಂದ ಹಿಡಿದು ಅಧಿಕಾರದಲ್ಲಿದ್ದ ಅನೇಕರು ಹುನ್ನಾರ ನಡೆಸಿದರು. ಸಂಘದ ಮೇಲೆ ಗಾಂಧೀಜಿ ಹತ್ಯೆಯ ಆರೋಪ ಹೊರಿಸಿದರು. ಆದರೂ ಸಂಘ ಆ ಎಲ್ಲ ಅಗ್ನಿಪರೀಕ್ಷೆಗಳಲ್ಲಿ ಯಶಸ್ವಿಯಾಗಿ ಉತ್ತೀರ್ಣವಾಯಿತು. ಸಂಘವನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ. ಆದರೆ ಒಬ್ಬರಿಂದ ಮಾತ್ರ ಸಾಧ್ಯ ಎನ್ನುತ್ತಾ, ’ಅದು ನೀವು’ ಎಂದು ಕಾರ್ಯಕರ್ತರತ್ತ ಬೊಟ್ಟುಮಾಡಿ ತೋರಿಸಿದ್ದರು. ಅಲ್ಲಿ ಕುಳಿತಿದ್ದ ಕಾರ್ಯಕರ್ತರಿಗೆಲ್ಲ ಗುರೂಜಿಯವರ ಈ ಮಾತು ಕೇಳಿ ಆಘಾತ, ಆಶ್ಚರ್ಯ ಎರಡೂ ಆಗಿತ್ತು. ಯಾರಿಂದಲೂ ನಾಶಪಡಿಸಲಾಗದ ಸಂಘಟನೆಯನ್ನು ಕಾರ್ಯಕರ್ತರು ಅಡ್ಡಹಾದಿ ತುಳಿದರೆ ನಾಶಪಡಿಸಲು ಸಾಧ್ಯ ಎಂಬುದು ಗುರೂಜಿಯವರ ಮಾತಿನ ಇಂಗಿತವಾಗಿತ್ತು. ರಾಜ್ಯ ಬಿಜೆಪಿಯಲ್ಲಿ ಆಗಾಗ ನಡೆಯುತ್ತಿರುವ ಅಂತಃಕಲಹ, ವೈಮನಸ್ಸುಗಳನ್ನು ಗಮನಿಸಿದರೆ ಗುರೂಜಿಯವರ ಮಾತು ಅದೆಷ್ಟು ಸತ್ಯ, ಅವರ ಭವಿಷ್ಯವಾಣಿ ಅದೆಷ್ಟು ನಿಜ ಎಂದು ಅರಿವಾಗದೇ ಇರದು. ಬಿಜೆಪಿಯನ್ನು ಕಾಂಗ್ರೆಸ್ ಆಗಲಿ, ಜೆಡಿಎಸ್ ಆಗಲಿ ಅಥವಾ ಇನ್ನಾವುದೇ ಪಕ್ಷ ಹೊಸಕಿಹಾಕಲು ಸಾಧ್ಯವಿಲ್ಲ . ಆದರೆ ಬಿಜೆಪಿಯ ನಾಯಕರೇ ಪಕ್ಷದ ಶಿಸ್ತನ್ನು, ಸಿದ್ಧಾಂತವನ್ನು ಕಾಲಕೆಳಗೆ ಹಾಕಿ ತುಳಿದರೆ, ಅಧಿಕಾರದ ಪಿತ್ತವನ್ನು ನೆತ್ತಿಗೇರಿಸಿಕೊಂಡರೆ ಪಕ್ಷದ ಸರ್ವನಾಶ ಖಚಿತ.
ಇಷ್ಟಕ್ಕೂ ಅಧಿಕಾರವೊಂದೇ ಶಾಶ್ವತ ಎಂದು ಬಿಜೆಪಿಯ ಕೆಲವು ನಾಯಕರು ಯಾಕೆ ಭ್ರಮಿಸಿದ್ದಾರೋ ಗೊತ್ತಾಗುತ್ತಿಲ್ಲ. ಬಿಜೆಪಿಯ ಪೂರ್ವಾಶ್ರಮವಾದ ಜನಸಂಘದ ನಾಯಕರಾಗಿದ್ದ ದೀನದಯಾಳಜಿ, ನಾನಾಜಿ ದೇಶಮುಖ್ ಇವರೆಲ್ಲ ಹೇಗೆ ನಡೆದುಕೊಂಡಿದ್ದರು ಎಂಬುದು ಈ ಮಹನೀಯರಿಗೆ ಗೊತ್ತಿಲ್ಲವೆ? ದೀನದಯಾಳಜಿ ಒಮ್ಮೆ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸೋತಾಗ, ತನ್ನ ಎದುರಾಳಿ ಅತ್ಯಂತ ಸಮರ್ಥ ಹಾಗೂ ಯೋಗ್ಯನಾಗಿದ್ದ. ಹಾಗಾಗಿ ತಾನು ಸೋಲಬೇಕಾಯಿತು ಎಂದು ವಿನೀತರಾಗಿ ಹೇಳಿದ್ದರು. ಎದುರಾಳಿಯನ್ನು ಯಾವುದೇ ಕಾರಣಕ್ಕೂ ನಿಂದಿಸಿರಲಿಲ್ಲ. 1977 ರಲ್ಲಿ ಮೊರಾರ್ಜಿ ಸರ್ಕಾರದಲ್ಲಿ ಸಚಿವ ಪದವಿಯ ಆಹ್ವಾನ ಬಂದಿದ್ದರೂ ನಾನಾಜಿ ದೇಶಮುಖ್ ಅದನ್ನು ವಿನಯವಾಗಿಯೇ ನಿರಾಕರಿಸಿ, ಗೋಂಡಾ ಜಿಲ್ಲೆಯಲ್ಲಿ ಸಮಗ್ರ ಗ್ರಾಮೀಣ ಅಭಿವೃದ್ಧಿಯ ಕಾಯಕಕ್ಕೆ ತಮ್ಮನ್ನು ಸಮರ್ಪಿಸಿಕೊಂಡರು. ನಿಜವಾದ ಆದರ್ಶವೆಂದರೆ ಅದು. ಅಕಾರ ಕೈಬೀಸಿ ಕರೆದರೂ ಅದನ್ನು ನಿರಾಕರಿಸುವುದಕ್ಕೂ ಒಂದು ಯೋಗ್ಯತೆ, ದಾರ್ಷ್ಟ್ಯ ಇರಬೇಕು. ನಾನಾಜಿಯವರಿಗೆ ಅದಿತ್ತು. ಹಾಗಾಗಿಯೇ ಅವರು ಈಗಲೂ ಪ್ರಾತಃಸ್ಮರಣೀಯರಾಗಿ ಉಳಿದಿದ್ದಾರೆ.
70 ವರ್ಷ ದಾಟಿದ ಬಳಿಕ ಅಧಿಕಾರದಲ್ಲಿರುವಂತಿಲ್ಲ ಎಂಬುದು ಬಿಜೆಪಿಯ ಅಲಿಖಿತ ನಿಯಮ. ಸಾರ್ವಜನಿಕ ಜೀವನದಲ್ಲಿ ಯಾವುದೇ ವೃತ್ತಿಯಲ್ಲಿದ್ದರೂ 60 ವರ್ಷ ದಾಟಿದ ಕೂಡಲೇ ನಿವೃತ್ತಿ ಅನಿವಾರ್ಯ. ರಾಜಕೀಯರಂಗದಲ್ಲಿ ಮಾತ್ರ ಇಳಿವಯಸ್ಸಾಗಿದ್ದರೂ ನಿವೃತ್ತಿಯಾಗಬೇಕೆಂಬ ಹಂಬಲವೇ ಇರದಿರುವುದು ಸೋಜಿಗ. ಶಿವಮೊಗ್ಗದವರೇ ಆದ ವಿಧಾನಪರಿಷತ್ ಸಭಾಪತಿ ಡಿ.ಹೆಚ್. ಶಂಕರಮೂರ್ತಿಯವರಿಗೆ ಈಗ 80ರ ಇಳಿವಯಸ್ಸು. ವಿಧಾನಪರಿಷತ್ ಸದಸ್ಯರಾಗಿ, ಸಭಾಪತಿಯಾಗಿ, ಅದಕ್ಕೂ ಮುಂಚೆ ಕ್ಯಾಬಿನೆಟ್ ಸಚಿವರಾಗಿ ಸಾಕಷ್ಟು ಅಧಿಕಾರವನ್ನು ಅನುಭವಿಸಿದವರು. ಹಾಗಿದ್ದರೂ ಅವರು ಈ ಇಳಿವಯಸ್ಸಿನಲ್ಲೂ ರಾಜ್ಯಪಾಲರಾಗಬೇಕೆಂದು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಅದಕ್ಕಾಗಿ ರಾಜನಾಥಸಿಂಗ್, ಅರುಣ್ ಜೇಟ್ಲಿಯವರ ಮನೆಗಳಿಗೆ ಪದೇಪದೇ ಎಡತಾಕಿ ಜೀವನದಲ್ಲಿ ಒಮ್ಮೆ ತನ್ನನ್ನು ರಾಜ್ಯಪಾಲರನ್ನಾಗಿ ಮಾಡಿ ಎಂದು ಗೋಗರೆಯುತ್ತಿದ್ದಾರೆ. ನಿಜಕ್ಕೂ ಅವರು ಈಗ ನಿವೃತ್ತಿ ಪಡೆದು ಪಕ್ಷಕ್ಕೆ ಮಾರ್ಗದರ್ಶನ ಮಾಡಬೇಕಾಗಿತ್ತು. ಯುವಕಾರ್ಯಕರ್ತರಿಗೆ ಅವಕಾಶ ಕಲ್ಪಿಸಬೇಕಾಗಿತ್ತು. ಅವರು ರಾಜ್ಯಪಾಲರಾಗದಿದ್ದರೆ ದೇಶಕ್ಕೇನೂ ನಷ್ಟವಿಲ್ಲ (ಅವರಿಗೆ ಮಾತ್ರ ನಷ್ಟವಾಗಬಹುದೇನೋ!). ಇಳಿವಯಸ್ಸಿನ ಕಾರಣಕ್ಕಾಗಿಯೇ ಕೇಂದ್ರದಲ್ಲಿ ಸಚಿವರಾಗಿದ್ದ ನಜ್ಮಾ ಹೆಫ್ತುಲ್ಲ ಅಧಿಕಾರ ತ್ಯಜಿಸಬೇಕಾಯಿತು. ಆಡ್ವಾಣಿ, ಮುರಳಿಮನೋಹರ್ ಜೋಶಿ ಹಿಂದೆ ಸರಿಯಬೇಕಾಯಿತು. ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಆನಂದಿಬೆನ್ ಪಟೇಲ್ ಕೂಡ ಕೆಳಗಿಳಿಯಬೇಕಾಯಿತು. ಇವೆಲ್ಲ ಡಿ.ಹೆಚ್.ಎಸ್. ಅವರಿಗೆ ಗೊತ್ತಿಲ್ಲವೆ?
ಈಗ ಬಿಜೆಪಿಗೆ ಬೇಕಾಗಿರುವುದು ನಾನಾಜಿಯಂತಹ ’ಸಾಕು’ ಎನ್ನುವವರು. ತನ್ನಂತೆಯೇ ಕಿರಿಯರೂ ಕೂಡ ಅಧಿಕಾರಕ್ಕೇರಲಿ ಎಂದು ಪ್ರಾಂಜಲ ಮನಸ್ಸಿನಿಂದ ಹಾರೈಸುವವರು. ಸಾಕು ಎನ್ನುವವರು ಬಿಜೆಪಿಗೆ ಈಗ ಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.