ಯಾರೋ ಕಾಲ ಕಾಯುತ್ತಿದ್ದರು ಗಾಂಧಿ ಸಾಯಲಿ ಎಂದು. ಅದಕ್ಕೇನೋ ಒಳಮರ್ಮ, ಕಾರಣ ಇದ್ದಿರಲು ಬೇಕು. ಸರ್ಕಾರಕ್ಕೆ ಗಾಂಧಿ ಹತ್ಯೆ ಬೇಕಿತ್ತು. ಅದು ನಡೆದ ಮೇಲೆ ಬೇರಾರನ್ನೋ ನೇಣು ಹಾಕಿ, ಹಿಂದೂ ಸಂಘಟನೆಗಳ ಮೇಲೆ ಗೂಬೆ ಕೂರಿಸಿ, ಶಾಶ್ವತವಾಗಿ ಅವರನ್ನು ಭಯೋತ್ಪಾದಕರನ್ನಾಗಿ ಬಿಂಬಿಸುತ್ತ, ನಿರಾತಂಕವಾಗಿ ಆಡಳಿತ ನಡೆಸಬಹುದು. ಕಾಂಗ್ರೆಸ್ಸು ಅಪರಾಧಿ ಸ್ಥಾನದಲ್ಲಿ ಸಿಕ್ಕಿ ಬೀಳಬಾರದು. ನಿಜ ಅಪರಾಧಿ ತಲೆಮರೆಸಿಕೊಳ್ಳಲಿ’ ಎಂದು, ಈ ಊಹೆ ಸರಿಯಿಲ್ಲವಾದರೆ ಬೇರೆ ಕಾರಣ, ವಿವರಣೆ ಇದ್ದರೆ ಕೊಡಿ. ಈ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ. ಆಮೇಲೆ ಮುಂದಿನ ಸಬೂಬು, ಮುಂದೆ ನೋಡೋಣ.
ಹೀಗೆ ತಮ್ಮ ಪುಸ್ತಕದ ಮೂಲಕ ಅದೊಂದು ರೀತಿ ಗಾಂಧಿ ಭಕ್ತರಿಗೇ ನೇರ, ಬಹಿರಂಗ ಸವಾಲೆಸೆದವರು ನಾಡಿನ ಖ್ಯಾತ ವಿದ್ವಾಂಸರು, ಹಿರಿಯರೂ, ಬಹುಭಾಷಾ ಪಂಡಿತರೂ ಆದ ಪ್ರೊ.ಕೆ.ಎಸ್.ನಾರಾಯಣಾಚಾರ್ಯ. ಗಾಂಧಿಯನ್ನು ನಿಜವಾಗಿ ಕೊಂದವರು ಯಾರು..? ಎಂಬ ಕೃತಿ ಅದು. ಅನೇಕ ಸಂಶಯ, ಪೂರ್ವಾಗ್ರಹ ಪೀಡೆಗಳ ಕಿಲುಬನ್ನು ಸ್ವಚ್ಚಗೊಳಿಸುವಂತೆ ಅನೇಕ ಸಾಕ್ಷ್ಯಾಧಾರ ಸಹಿತ ವಿಷದಪಡಿಸಿದ್ದು ಕೃತಿಯ ವೈಶಿಷ್ಟ್ಯ.
ಗಾಂಧಿ ಹತ್ಯೆಯ ಸತ್ಯ ಸೇರಿದಂತೆ,ರಾಷ್ಟ್ರ ವಿನಾಶ ತಡೆಯುವುದು ಹೇಗೆ, ಕೌಟಿಲ್ಯನ ಆದರ್ಶ ನಾಯಕತ್ವ ಗುಣಗಳು ಇತ್ಯಾದಿ ಅನೇಕ ವಿಷಯಗಳ ಕುರಿತು ಆ ಕೃತಿಯಲ್ಲಿ ಚಿಂತಿಸಲಾಗಿದ್ದು, ಗಾಂಧಿ ಭಕ್ತರಾದಿಯಾಗಿ ಸರ್ವರೂ ಒಮ್ಮೆ ಓದಲೇಬೇಕಾದ ಕೃತಿ ಎಂದರೆ ತಪ್ಪಿಲ್ಲ.
ಈ ಪುಸ್ತಕದಲ್ಲಿ ಗಾಂಧಿ ಹತ್ಯೆಗಿರುವ ವಿಭಿನ್ನ ಸತ್ಯಾಂಶಗಳನ್ನು ಪ್ರೊ. ಕೆ.ಎಸ್.ನಾರಾಯಣಾಚಾರ್ಯರು ತೆರೆದಿಡುವ ಪ್ರಯತ್ನ ಮಾಡಿದ್ದು, ಅವರ ಮಾತಲ್ಲೇ ಕೇಳುವುದು ಉಚಿತ.
ವಿಭಿನ್ನ ಚಿತ್ರಣ
ಗಾಂಧೀಜಿಯವರನ್ನು ರಾಜಕೀಯ ನಕಾಶೆಯಿಂದ ಅಳಿಸಿಬಿಡಲು ಹೊರಟವರು ಒಂದಲ್ಲ ಎರಡು ವಿಭಿನ್ನ ಪಟ್ಟಭದ್ರರ ಗುಂಪುಗಳು. ಸೇನೆ ಎನ್ನಿ, ಕಾರ್ಯಾಚರಣೆಯ ಏಜೆಂಟರು ಎನ್ನಿ, ಇವುಗಳ ಗುರಿ ಧ್ಯೇಯ ಬೇರೆಯಾಗಿಯೇ ಇದ್ದವು. ಆದರೆ ಇಲ್ಲಿ ಗಾಂಧಿ ಹತ್ಯೆ ಎಂಬ ಏಕಾಂಶದಲ್ಲಿ ಭಿನ್ನತೆ ಇರಲಿಲ್ಲ. ಒಂದರ ನಿಯೋಜಿತ, ನಾಥೂರಾಂ ಗೋಡ್ಸೆ. ಇನ್ನೊಂದರ ಮುಖಂಡ ಒಬ್ಬ ಕಾಂಗ್ರೆಸ್ಸಿಗ ! 1978 ರವರೆಗೆ ಅವನು ಜೀವಂತ ಇದ್ದ. ಪುಣೆಯಲ್ಲಿ ಎಲ್ಲರಿಗೂ ಕಾಣುವಂತೆ ನಿರ್ಭಯವಾಗಿ ಓಡಾಡುತ್ತಿದ್ದ ನಿರಪರಾಧಿಯಂತೆ. 30 ಜ.1948 ರಂದೇ ಗಾಂಧಿಯವರನ್ನು ಮುಗಿಸುವ ಕಾಯಕದ ಹೊಣೆ ಇಬ್ಬರ ಮೇಲೂ ಇತ್ತು ಎಂಬುದು ಸಾಮಾನ್ಯ ಅಂಶ. (ಪುಟ.3 )
ಲೋಪ
ಎ). ಮ್ಯಾಜಿಸ್ಟ್ರೇಟರ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗುವ ಮುನ್ನ ಸರ್ಕಾರಿ ವಕೀಲರು ಇಲ್ಲಿ ಸಾಕ್ಷಿದಾರರ ಹೇಳಿಕೆಗಳ ಪ್ರತಿಗಳನ್ನು ಕೋರ್ಟಿನಲ್ಲಿ ದಾಖಲೆಯಾದವನ್ನು police U/S 161. ಅಡಿ ಅನ್ವಯ, ಆರೋಪಿಗಳಿಗೆ ಮೊದಲು ಕೊಟ್ಟು, ಅವರೇನು ಹೇಳುತ್ತಾರೋ ಅದನ್ನು ಪಾಟೀಸವಾಲು ಮಾಡುವಾಗ ದಾಖಲಿಸಿಕೊಳ್ಳುವುದು ವಾಡಿಕೆ. ಪ್ರಕೃತ ಗಾಂಧಿ ಹತ್ಯಾ ಪ್ರಕರಣದಲ್ಲಿ ಇಬ್ಬರು ಅತಿ ಮುಖ್ಯ ಸಾಕ್ಷಿದಾರರ, ಹೇಳಿಕೆಗಳನ್ನು ಪೊಲೀಸರು ಆರೋಪಿಗೆ ಕೊಡಲೇ ಇಲ್ಲ. ತಪ್ಪಿಸಿ ಮುಚ್ಚಿಟ್ಟರು. ಅವರು ಯಾರು..?
ಗಾಂಧಿಯವರು ಪ್ರಾರ್ಥನಾ ಸಭೆಯ ವೇದಿಕೆಗೆ ಬರುವಾಗ, ಯಾರ ಭುಜಗಳ ಮೇಲೆ ಎರಡೂ ತೋಳುಗಳನ್ನಿಟ್ಟು ಬರುತ್ತಿದ್ದರೋ ಆ ಹುಡುಗಿಯರು, ತೀರ ಸಮೀಪದಲ್ಲಿದ್ದ ಅತಿ ಮುಖ್ಯ ಸಾಕ್ಷಿದಾರರು.
ಬಿ) ವಿರೋಧಾಭಾಸ..?
ಪೊಲೀಸರು ಇಲ್ಲಿ ಏನು ತಂತ್ರ ಮಾಡಿದ್ದರು ? ತಾವು ದಾಖಲಿಸಿಕೊಂಡಿದ್ದ ಹೇಳಿಕೆಗಳನ್ನು ಒದಗಿಸುವಾಗ ಆರೋಪಿಗೆ ಅಲ್ಲಿ ಒಂದು ಮುಖಪತ್ರ ಇಟ್ಟಿದ್ದರು. ಈ ಸಾಕ್ಷಿದಾರರನ್ನು ವಿಚಾರಣೆಗೆ ಕರೆತಂದು ಹೇಳಿಕೆ ಪರೀಕ್ಷೆ ನಡೆಸುವ ಉದ್ದೇಶ ನಮಗಿಲ್ಲ. ಆದ್ದರಿಂದ ಅವರಿಬ್ಬರ ಹೇಳಿಕೆಗಳನ್ನು ನಿಮಗೆ ಕೊಡಲು ಆಗುವುದಿಲ್ಲ. ಅದು ಅನವಶ್ಯಕ ಎಂದು. ಹಾಗೂ ಮುಂದೊಂದು ದಿನ ಸಂಭವನೀಯ ಸಂದರ್ಭದಲ್ಲಿ ಆ ಲಿಖಿತ ಹೇಳಿಕೆಗಳು ಅವಶ್ಯವಾಗುವುದಾದರೆ ಮಾತ್ರ ಆಗಲೂ ಬರೀ ಹೇಳಿಕೆಗಳನ್ನು ಒದಗಿಸಲಾಗುವುದು, ಸಾಕ್ಷಿದಾರರ ನೇರ ಹಾಜರಾತಿ ಬೇಕಾಗುವುದಿಲ್ಲ ಎಂದು.
ಸಿ) ಮೋಜು
ಈಗ ಮೋಜು ನೋಡಿ ! ಸರ್ಕಾರಿವಾದಕ್ಕೆ, ನಿಲುವಿಗೆ, ಸಾಕ್ಷಿ ಆಗಬೇಕಾದವರಲ್ಲಿ ಈ ಹುಡುಗಿಯರಿಬ್ಬರೇ ಅತೀ ಮುಖ್ಯರಾಗಿದ್ದವರು. ಏಕೆ ? ಅವರು ಗಾಂಧಿ ಕೊಲೆಯನ್ನು ನೇರ ಮತ್ತು ತಮ್ಮ ಸ್ವಂತ ಕಂಗಳಿಂದಲೇ ಕಂಡಿದ್ದವರು. ನಾಥೂರಾಂ ಗೋಡ್ಸೆಗೆ ಕೇವಲ ಒಂದೇ ಅಡಿಯಷ್ಟು ದೂರದಲ್ಲಿದ್ದವರು.
ಡಿ) ಹೇಳಿಕೆಗಳು
ಈಗ ಇಲ್ಲಿ ಅನಿವಾರ್ಯವಾಗಬೇಕಿದ್ದ ಸಾಕ್ಷಿಗಳಾದರೂ ಯಾರೂ ? ಒಬ್ಬಳು ಸರ್ದಾರ ಪಟೇಲರ ಮಗಳು. ಇನ್ನೊಬ್ಬಳು ಗಾಂಧಿ ದತ್ತು ಪುತ್ರಿ. ಇವರಿಬ್ಬರೂ ಇತ್ತ ಹೇಳಿಕೆಗಳು ನಂತರ ಪತ್ರಿಕೆಗಳಲ್ಲಿ ಬಂದವು. ಅವೆಂದರೆ..
ಒಬ್ಬಳೆಂದಳು, ಈ ಗೋಡ್ಸೆ ಎಂದು ನೀವು ಕರೆಯುವ ವ್ಯಕ್ತಿ ಗಾಂಧಿಯವರಿಗೆ ನಮಸ್ತೆ ಮಾಡುತ್ತಿದ್ದ. ಅವರ ಎರಡೂ ಕೈಗಳು ಅಂಜಲಿ ಸಂಪುಟಗಳಲ್ಲಿ ಮುದ್ರೆಯಲ್ಲಿರುತ್ತಾ ಕೈ ಮುಗಿಯುತ್ತಿದ್ದಾಗ, ಆತನ ಬಲ ತೋಳು ಕೆಳಗಡೆ ಸಂದಿನಿಂದ ಖಾದಿ ತುಂಬಿದ್ದ ಬೇರೊಂದು ತೋಳು ಹೊರ ಚಾಚಿ ಬಂದು, ಅದರ ಕೈಲಿ ಆಯುಧದಿಂದ ಮೂರು ಸುತ್ತು ಗುಂಡು ಚಲಾಯಿಸಲ್ಪಟ್ಟಿತು. ಗಾಂಧಿ ಕುಸಿದರು. (ಎರಡೂ ಕೈಯಿಂದ ನಮಸ್ತೆ ಮಾಡುವಾಗ ಗೋಡ್ಸೆ ಕೈಯಲ್ಲಿ ಪಿಸ್ತೂಲ್ ಇರಲು ಸಾಧ್ಯವೇ)
ಇನ್ನೋರ್ವಳ ಹೇಳಿಕೆಯೂ ಇದಕ್ಕೆ ಪೂರಕವಾಗೇ ಇದೆ.
ನಿಗೂಢತೆಗಳು
ಈ ಇಬ್ಬರು ಹುಡುಗಿಯರೇ ಮುಖ್ಯ ಸಾಕ್ಷಿದಾರರು. ನಂಬಲರ್ಹವಾದವರು. ಇವರನ್ನು ಸರ್ಕಾರಿ ವಕೀಲರು ಏಕೆ ಹಾಜರುಪಡಿಸಲಿಲ್ಲ ? ವಿಚಾರಿಸಲಿಲ್ಲ ? ಏಕೆ ಪಾಟೀ ಸವಾಲಿಗೆ ಒಳಪಡಿಸಲಿಲ್ಲ ? ಏನು ಭಯವಿತ್ತು ? ಯಾರ ಒತ್ತಡ ಇತ್ತು? ಏನು ಆತಂಕ ? ಏನು ಮುಚ್ಚಿಡಲು ಬೇಕಿತ್ತು ? ಯಾವುದು ಆ ತವಕ ?
ಮಹತ್ವದ ಅಂಶ
ಗೋಡ್ಸೆ ನಮಸ್ತೆ ಮಾಡಿದ ಮೇಲೆ ಪಿಸ್ತೂಲನ್ನು ತೆಗೆದುಕೊಂಡು ಗುರಿಯಿಡುವ ಮುನ್ನವೇ, ಅವನನ್ನು ಹತ್ತಿರವಿದ್ದ ಮಿಲಿಟರಿ ರಕ್ಷಕ, ಅವನ ಮುಂಗೈನ ಕಟ್ಟನ್ನು ಬಿಡಿಸಿಕೊಳ್ಳಲಾಗದಂತೆ ಭದ್ರವಾಗಿ ಹಿಡಿದುಕೊಂಡ. ಇನ್ನೊಬ್ಬ ಅವನ ಹಿಂತಲೆಯ ಬದಿಗೆ ಲಾಠಿಯಿಂದ ಬಲವಾಗಿ ಹೊಡೆದ. ಅಲ್ಲಿ ಗಾಯವೂ ಆಯ್ತು. ಇದೆಲ್ಲ ಪೊಲೀಸ್ ವರದಿಯಲ್ಲೇ ಇದೆ. ಆಗ ವಶಪಡಿಸಿಕೊಂಡ ಗೋಡ್ಸೆ ಕೈಯಲ್ಲಿದ್ದ ಪಿಸ್ತೂಲಿನಲ್ಲಿ ಪೂರ್ಣ ಗೋಲಿಗಳಿದ್ದವು. ಒಟ್ಟು ಏಲು ಗೋಲಿಗಳು ಎಂಬುದು ಸತ್ಯ ವರದಿ. ಗೋಡ್ಸೆ ಪಿಸ್ತೂಲು ಚಾಲಿಸಲೇ ಇಲ್ಲ !
ಸತ್ಯದರ್ಶನ
ಈಗ ದೃಢವಾಗಿ ಕಾಣುವ ಸತ್ಯ ಊಹೆಯಿಂದ ಬರುವುದು ಹೀಗೆ. ಸರ್ಕಾರ (ನೆಹ್ರೂ), ನ್ಯಾಯಾಂಗಗಳಿಗೆ ನಿಜ ಅಪರಾಧಿಯನ್ನು ರಕ್ಷಿಸುವುದೇ ಬೇಕಿತ್ತು. ಅದೂ ಗೋಡ್ಸೆಗೆ ಸಮ್ಮತವಿತ್ತು. ಇಲ್ಲವಾದರೆ ಗೋಡ್ಸೆ ತನ್ನ ಪ್ರಾಣ ಉಳಿಸಿಕೊಳ್ಳಲಾದರೂ ಆ ಇಬ್ಬರು ಹುಡುಗಿಯರನ್ನು ಕರೆಸಿ ಸಾಕ್ಷಿ ಹೇಳಿಸುವಂತೆ ಆಗ್ರಹಿಸಬಹುದಿತ್ತು. ಆತ ಹಾಗೆ ಮಾಡಲಿಲ್ಲ. ಗೋಡ್ಸೆಗೆ ಗಾಂಧಿಯನ್ನು ಕೊಂದ ಕೀರ್ತಿ ಬೇಕಿತ್ತೇ ? ಹೇಗೂ ನಾನು ಹುತಾತ್ಮನಾಗಲೂ ಹೊರಟಿದ್ದೇನೆ. ನನ್ನದೇ ಗುಂಡಿನಿಂದ ಸಾಯಬೇಕಿತ್ತು. ಹೋಗಲಿ ಬೇಟೆ ಹೇಗೂ ಸತ್ತಾಗಿದೆ ಎಂಬ ಉಪೇಕ್ಷೆಯೇ ? ಉದಾಸೀನತೆಯೇ ? ಇನ್ನೇನನ್ನೋ ರಕ್ಷಿಸುವ ಬಯಕೆಯೋ ? ಆಮೆಲೆ ಆದರೂ ನಾನೇಕೆ ಗಾಂಧಿಯನ್ನು ಕೊಂದೆ ಎಂಬ ಸುದೀರ್ಘ, ಕುತೂಹಲಭರಿತ ಸಪ್ರಮಾಣ, ಸತ್ತರ್ಕಬದ್ಧ ಹೇಳಿಕೆಯಲ್ಲೂ ಈ ಗೂಢತೆಯನ್ನೇಕೆ ಆತ ಬಿಚ್ಚಿಡಲಿಲ್ಲ..? ಗೋಡ್ಸೆ ಹರಕೆ ಕುರಿ ಆಗಲು ಒಪ್ಪಿದ್ದ ಎಂಬುದು ಈಗ ಗಾಬರಿ ತರುವ ವಿಷಯ. ಯಾರೂ ಈಗ ನಂಬುವುದಿಲ್ಲ. ಮುಂದೆ ಇನ್ನೂ ಇದೆ.
ಇನ್ನೊಂದು ಮುಖ
ಈ ವಿಷಯದ ಇನ್ನೊಂದು ಮುಖವೆಂದರೆ, ಗಾಂಧಿ ಸತ್ತದ್ದು ಬಿರ್ಲಾ ಭವನದಲ್ಲಿ. ಅಲ್ಲಿ ರಕ್ಷಣಾಪಡೆಯ ತುಕಡಿಯೊಂದು. ಈ ಗಾಂಧಿ ಕಾವಲಿಗೆ ಇತ್ತು. ಅಲ್ಲಿನ ಪ್ರತಿಯೊಂದು ಚಲನವಲನಗಳ ಮೇಲೂ ಗಮನವಿತ್ತು ಎಂದು ರಕ್ಷಣಾಪಡೆಯ ಮುಖ್ಯಸ್ಥರು ಹೇಳುತ್ತಾರೆ.
ವಿಚಿತ್ರವೆಂದರೆ, ಇಷ್ಟೆಲ್ಲ ಗಮನವಿಟ್ಟವರಿಗೆ ಕೊಲೆಯ ಸಂಚು ತಿಳಿಯಲಿಲ್ಲವೇಕೆ ? ಎರಡೂ ಗ್ಯಾಂಗಿನ ಒಬ್ಬನನ್ನಾದರೂ ದಸ್ತಗಿರಿ ಮಾಡಿ ಬಾಯಿ ಬಿಡಿಸಲಿಲ್ಲ ಏಕೆ? ಅಂದರೆ ಸರ್ಕಾರಕ್ಕೂ ಗಾಂಧಿ ಸಾಯುವುದು ಬೇಕಿತ್ತು. ಯಾರ ಗ್ಯಾಂಗಿನವರು ಕೊಂದರೆ ಏನೂ. ಗಾಂಧಿ ಸತ್ತರೆ ಸಾಕು ಎಂಬ ನಿರ್ಭಯ ಮನೋಭಾವದ ಆ ವ್ಯಕ್ತಿ ಯಾರು ? ಏಕೆ ಗೊತ್ತಾಗಲಿಲ್ಲ..
ಪ್ರಮುಖ ಅಂಶಗಳು
ಮೇಲಿನಂತೆ ಅನೇಕ ತರ್ಕಬದ್ಧ ಪ್ರಶ್ನೆಗಳನ್ನು ಎತ್ತುವ ಪ್ರೊ.ಕೆ.ಎಸ್.ನಾರಾಯಣಾಚಾರ್ಯರು ಇನ್ನೂ ಅನೇಕ ಅಂಶಗಳನ್ನು ಎತ್ತುತ್ತಾರೆ. ಅವುಗಳಲ್ಲಿ ಪ್ರಮುಖವಾದವೆಂದರೆ,
1. ಒಬ್ಬ ಪೊಲೀಸ್ ಅಧಿಕಾರಿ ಸಾಕ್ಷಿ ನುಡಿದು ಹೇಳುತ್ತಾನೆ, ನಾನು ಗುಂಡಿನ ಶಬ್ದ ಕೇಳಿದೆ. ಆ ಶಬ್ದ ಬಂದತ್ತ ತಿರುಗಿ ನೋಡಿದೆ. ಗೋಡ್ಸೆಯ ಪಿಸ್ತೂಲು ಹೊಗೆಯಾಡುತ್ತಿತ್ತು. ಅಲ್ಲಿ ಮಿಂಚು, ಗುಡುಗು ಚಲಿಸುವಾಗ ಸಾಮಾನ್ಯವಾಗಿ ಕಾಣುವುದು ಕಾಣಿಸಿತು. ಶಹಬ್ಬಾಸ್ ! ಗೋಡ್ಸೆ ಪಿಸ್ತೂಲಿನ ಕುದುರೆ ಎಳೆದದ್ದು ಕಾಣಿಸಿತು ಎಂದೆನ್ನಲಿಲ್ಲ ಮಹಾಶಯ..
2. ಗೋಡ್ಸೆ ಬಳಿ ಇದ್ದದ್ದು ಇಟಾಲಿಯನ್ ಬ್ರ್ಯಾಂಡ್ ಪಿಸ್ತೂಲ್, ಅದನ್ನೇ ಚಾಲಿಸಿದ್ದು ಎಂಬುದು ಆರೋಪವಲ್ಲವೇ ? ಆ ಬ್ರಾಂಡ್ನ ಪಿಸ್ತೂಲು ಗೋಲಿ ಚಲಾಯಿಸುವಾಗ ಶಬ್ದವನ್ನೂ ಮಾಡುವುದಿಲ್ಲ, ಹೊಗೆಯನ್ನೂ ಬಿಡುವುದಿಲ್ಲ.
3. ಪಂಚನಾಮೆಯಲ್ಲಿ ಮೂರು ಗುಂಡುಗಳು ಗಾಂಧಿಯ ಶರೀರದ ಎಡಭಾಗದ ಕೆಳಗಿನಿಂದ ಹಾದು ಪಕ್ಕೆಲಬುಗಳನ್ನು ಒಡೆದುಕೊಂಡು, ಶರೀರದ ಆಚೆಗೆ ಬಲಗಡೆಯ ಮೇಲುಭಾಗದಿಂದ ತೂರಿ ಹೋದವು ಎಂದಿದೆ.
4. ಇದಾದ ಮೇಲೆ ಬ್ಯಾಲಿಸ್ಟಿಕ್ ಎಕ್ಸ್ಪರ್ಟ್ ಎಂಬ ಅಪರಾಧ ಶೋಧ ಶಾಸ್ತ್ರ ವಿಭಾಗದ ಅಧಿಕಾರಿ ಬರುತ್ತಾನೆ. ಅವನ ಹೇಳಿಕೆಯಂತೆ ಗಾಂಧಿ ಶರೀರದೊಳಗೆ ಹಾದು ಹೋದವು 4 ಗುಂಡುಗಳು. ಹಾಗಾದರೆ ಅವನ್ನು ನ್ಯಾಯಾಲಯದಲ್ಲೇಕೆ ಅವನ್ನು ಹಾಜರು ಪಡಿಸಲಿಲ್ಲ..?
5. ಸುದ್ದಿಗಾರರ ಮಾಹಿತಿಯಂತೆ, ಪತ್ರಿಕೆಗಳಲ್ಲಿ ವರದಿಯಾಗಿದ್ದು ಗಮನಿಸುವುದಾದರೆ, ಗೋಡ್ಸೆಯನ್ನು ಬಂಧಿಸಿದಾಗ ಅವನ ಕೈಯಲ್ಲಿದ್ದ ಪಿಸ್ತೂಲಿನಲ್ಲಿ ಏಳೂ ಗೋಲಿಗಳು ಪೂರ್ಣವಾಗಿ ತುಂಬಿದ್ದು ಯಾವುದೇ ಪ್ರಯೋಗವೇ ಆಗಿರಲಿಲ್ಲ ಎಂಬುದು.
6. ಗಾಂಧಿ ಶರೀರವನ್ನು, ಅಂತ್ಯಸಂಸ್ಕಾರಕ್ಕಾಗಿ, ನೀರಿನಿಂದ ತೊಳೆದು ಶುದ್ಧಿ ಮಾಡಲು ತೊಡಗಿದಾಗ, ಖಾಲಿ ಗುಂಡೊಂದು ಅವರುಟ್ಟಿದ್ದ ವಸ್ತ್ರದ ಮಡಿಕೆಗಳಿಂದ ಹೊರಬಿತ್ತು. ಅದನ್ನು ಕೋರ್ಟ್ಗೆ ಏಕೆ ಹಾಜರುಪಡಿಸಲಿಲ್ಲ..?
ಹೀಗೆ ಗಾಂಧಿ ಹತ್ಯೆಯ ಕುರಿತು ಇನ್ನೂ ಅನೇಕ ಅಂಶಗಳನ್ನು ಎಳೆ ಎಳೆಯಾಗಿ ಬಿಡಿಸಿಡುವ ಪ್ರೊ.ಕೆ.ಎಸ್.ನಾರಾಯಣಾಚಾರ್ಯರು ಪೂರಕ ಸಾಕ್ಷ್ಯಾಧಾರಗಳನ್ನೂ ಒದಗಿಸಿದ್ದಾರೆ. ಗಾಂಧೀಜಿಯ ಆದರ್ಶಗಳ ಅಳವಡಿಕೆ ಒತ್ತಟ್ಟಿಗಿರಲಿ, ಅವರ ಸಾವಿನ ಸಂಗತಿಯನ್ನೂ ಪರಸ್ಪರ ರಾಜಕೀಯಕ್ಕೆ ಬಳಸಿಕೊಳ್ಳುವುದು ಖೇದಕರ.
ಸಾಹಿತ್ಯ ಪ್ರಕಾಶನ ಪ್ರಕಟಿಸಿದ ಪ್ರೊ.ಕೆ.ಎಸ್.ನಾರಾಯಣಾಚಾರ್ಯ ಬರೆದ, ಗಾಂಧಿಯನ್ನು ನಿಜವಾಗಿ ಕೊಂದವರು ಯಾರು ? ಎಂಬ ಕೃತಿ ಎಂಬ ಹೊತ್ತಿಗೆಯ ಮುಖಬೆಲೆ 130/-.
ಗಾಂಧಿ ಹತ್ಯೆಯ ವಿಭಿನ್ನ ಮುಖದರ್ಶನ ಮಾಡುವ ಕುತೂಹಲಿಗಳು ಇದನ್ನು ಓದಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.