ತಮಿಳುನಾಡಿನ ಬದುಕಲ್ಲಿ ಹಾಸುಹೊಕ್ಕಾಗಿದ್ದ, ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟಿಗೆ ಕಡು ವಿರೋಧ ವ್ಯಕ್ತಪಡಿಸಿದ ’ಪೆಟಾ’ (ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಎನಿಮಲ್ಸ್) ಸಂಸ್ಥೆಯ ವಿರುದ್ಧ ನಿಷೇಧದ ಕೂಗು ಬಲವಾಗಿ ಕೇಳಿಬರುತ್ತಿದೆ.
ವರ್ಜಿನಿಯಾ ಮೂಲದ ಈ ಸಂಸ್ಥೆ ಪ್ರಾಣಿ ಸಂರಕ್ಷಣೆಯ ಹೆಸರಿನಲ್ಲಿ ಭಾರತೀಯ ಮೂಲ ಸಂಸ್ಕೃತಿಗೆ ಕೊಳ್ಳಿ ಇಡುವಲ್ಲಿ ನಿರತವಾಗಿರುವುದು ಬಹಿರಂಗ ಗುಟ್ಟು. ಪ್ರತಿಭಟನಾಕಾರರು ಈ ಕುರಿತು ಕೇಂದ್ರ ಪರಿಸರ ಖಾತೆ ಸಚಿವ ಅನಿಲ್ ದವೆ ಅವರ ಗಮನಕ್ಕೆ ತಂದಿದ್ದು, ಜಲ್ಲಿಕಟ್ಟು ಕ್ರೀಡೆಗೆ ನಿಷೇಧ ಹೇರುವಂತೆ ಪ್ರಯತ್ನಿಸುವಲ್ಲಿ ಪೆಟಾ ಪಾತ್ರವೇ ಪ್ರಮುಖವಾಗಿದೆ ಎಂದು ದೂರಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪರಿಶೀಲಿಸಿ, ನಿಷೇಧದ ಕುರಿತೂ ಯೋಚಿಸಲಾಗುವುದು ಎಂದು ಸಚಿವರು ಭರವಸೆಯನ್ನೂ ನೀಡಿರುವುದು ವರದಿಯಾಗಿದೆ.
ವಿದೇಶಿ ಬಂಡವಾಳದಿಂದ ನಡೆಯುತ್ತಿರುವ ಎನ್ಜಿಒ ಸಂಸ್ಥೆ ಪೆಟಾ. ಎಐಎಡಿಎಂಕೆ ಪಕ್ಷವೂ ಕೂಡಾ ಈ ಸಂಸ್ಥೆಯನ್ನು ನಿಷೇಧಿಸುವಂತೆ ಒತ್ತಾಯಿಸಿದೆ, ಡಿಎಂಕೆ ಪಕ್ಷವೂ ಇದಕ್ಕೆ ಸಮ್ಮತಿಸಿದೆ. ತಮಿಳು ನಾಡಿನ ಮೂಲ ಸಂಸ್ಕೃತಿಗೇ ಧಕ್ಕೆ ತರುವುದಲ್ಲದೇ, ದೇಶ ವಿರೋಧಿ ನಿಲುವುಗಳಲ್ಲಿ ಪೆಟಾ ನಿರತವಾಗಿದೆ ಎಂದು ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
ಪೆಟಾಕ್ಕೆ ನೀಡಲಾದ ಅನಾಥ 23000 ಸಾವಿರ ಪ್ರಾಣಿಗಳನ್ನು, ಕೇವಲ ಒಂದು ದಶಕದಲ್ಲಿ (2005-2015) ತನ್ನ ಮೂಲ ಸ್ಥಾನವಾದ ವರ್ಜಿನಿಯಾದಲ್ಲಿ ಕೊಂದು ಹಾಕಿದೆ. ತಾನು ಪಡೆಯುವ ಪ್ರಾಣಿಗಳಲ್ಲಿ ಶೇ.90 ರಷ್ಟನ್ನು ಸಾಯಿಸುತ್ತದೆ ಎಂದು ಮೂಲಗಳು ತಿಳಿಸುತ್ತಿವೆ. ವೈಜ್ಞಾನಿಕ ಸಂಶೋಧನೆ, ಕೈಗಾರಿಕೆ ಹಾಗೂ ಅನೇಕ ಸಂಸ್ಥೆಗಳನ್ನೇ ತನ್ನ ಗುರಿಯಾಗಿಸಿಕೊಂಡಿರುವ ಪೆಟಾ, ಪ್ರಾಣಿ ಸಲಹುವ ನೆಪದಲ್ಲಿ ದೇಶೀ ಸಂಸ್ಕೃತಿಗೆ ಮಾರಕವಾಗಿದೆ ಎನ್ನಬಹುದು.
2011 ರಲ್ಲಿ ನಾಗರ ಪಂಚಮಿ ಆಚರಣೆಗೂ ಪೆಟಾ ತಕರಾರು ತೆಗೆದಿದ್ದು ಉಲ್ಲೇಖನೀಯ. ನಾಗ ಪಂಚಮಿ ಹೆಸರಿನಲ್ಲಿ ಹಾವಿಗೆ ಹಾಲೆರೆಯುವ ಮೂಲಕ ಹಿಂಸಿಸಬೇಡಿ. ಕೃತಕ ಮೂರ್ತಿಗಳನ್ನು ಪೂಜಿಸಿ ಎಂದು ಆಗ್ರಹಿಸಿತ್ತು. ಹಾವಾಡಿಗರು ಹಾವುಗಳನ್ನು ಆಡಿಸುವುದರಿಂದ ನಾಗರಪಂಚಮಿ ಹಬ್ಬವನ್ನು ಅಣಕಿಸದಂತಾಗುತ್ತದೆ ಎಂದು ಪೆಟಾ ಇಂಡಿಯಾದ ಸಂಚಾಲಕ ಚಾನಿ ಸಿಂಗ್ ಹೇಳಿದ್ದರು.
ಅಷ್ಟೇ ಏಕೆ ? ಮಾಂಸಾಹಾರ ವರ್ಜಿಸಿ, ಸಸ್ಯಾಹಾರಿಗಳಾಗಿ ಎಂಬ ಪ್ರಚಾರ ಮಾಡಲು ಮುಂದಾಗಿದ್ದ ಪೆಟಾ, ಕಾಮಪ್ರಚೋದಕ ಸೈಟ್ಗೂ ಮುಂದಾಗಿದ್ದು ಗಮನಾರ್ಹ. ಅನೇಕ ಮಾಡಲ್ಗಳನ್ನು ಬೆತ್ತಲಾಗಿಸಿ, ಮಾನ ಮುಚ್ಚುವಷ್ಟು ತರಕಾರಿ ಧಿರಿಸು ತೊಡಿಸಿ ಬೀದಿಗೆ ಇಳಿಯಲು ಮುಂದಾಗಿದ್ದೂ ಗಮನಾರ್ಹ. ಬಹುಶಃ ಸಸ್ಯಾಹಾರಿ ಹೆಸರಿನಲ್ಲಿ ಪರೋಕ್ಷವಾಗಿ ಆಶ್ಲೀಲ ಸೈಟ್ಗೆ ಪೆಟಾ ಅಡಿಯಿಟ್ಟಿದ್ದೂ ಅದರ ಅಪಾಯಕಾರಿ ನಡೆಗೆ ಸಾಕ್ಷಿ. ಹೀಗೆ ಒಂದಿಲ್ಲೊಂದು ಭಾರತೀಯ ಹಬ್ಬ, ಹರಿದಿನ, ಪಾರಂಪರಿಕ ಕ್ರೀಡೆಗಳನ್ನು ಪ್ರಾಣಿದಯೆಯ ಹೆಸರಿನಲ್ಲಿ ಪೆಟಾ ವಿರೋಧಿಸುತ್ತಲೇ ಬಂದಿದೆ. ಮುಂದೊಂದು ದಿನ ದೀಪಾವಳಿ, ಸಂಕ್ರಮಣದಂತಹ ಅನೇಕ ಸಾಂಸ್ಕೃತಿಕ ಸಂಭ್ರಮಗಳ ವಿರುದ್ಧವೂ ಕೋರ್ಟ್ ಮೆಟ್ಟಿಲೇರಿದರೂ ಆಶ್ಚರ್ಯವಿಲ್ಲ.
ನಮ್ಮ ದೇಶದಲ್ಲಿ ಪ್ರಾಣಿ ಸಂರಕ್ಷಣೆ ಕುರಿತು ಸಾಕಷ್ಟು ಕಾನೂನುಗಳು ಇವೆ. ಮೂಲತಃ ಸಂವಿಧಾನವೂ ಪ್ರಾಣಿಹಿತವನ್ನೇ ಬಯಸುತ್ತದೆ. ನಮ್ಮ ನೆಲದ ಸಂಘಟನೆಗಳೂ ಇವೆ. ನಮ್ಮಲ್ಲಿ ಘನತೆವೆತ್ತ, ವಿಶ್ವಾಸಾರ್ಹ, ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯೂ ಇದೆ. ಸಮಸ್ಯೆಗಳು ಬಂದಾಗ ನಾವೇ ಬಗೆಹರಿಸಿಕೊಳ್ಳಬಹುದಲ್ಲ. ಅದ್ಯಾವುದೋ ದೇಶದ ಸಂಸ್ಥೆಯಿಂದ ನಾವು ಪ್ರಾಣಿ ಪಾಲನೆಯ ಪಾಠ ಕಲಿಯಬೇಕೆ ? ಗಂಭೀರವಾಗಿ ಚಿಂತಿಸಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.