ಸ್ವಯಂಸೇವಕ ಎಂಬ ಶಬ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೃಷ್ಟಿಯೇನಲ್ಲ. ಸಂಘ ಪ್ರಾರಂಭವಾಗುವುದಕ್ಕಿಂತ ಮುಂಚೆಯೇ ಆ ಶಬ್ದ ಪ್ರಚಲಿತವಾಗಿತ್ತು. ಆದರೆ ಸಂಘ ಸಂಸ್ಥಾಪಕ ಡಾ. ಕೇಶವ ಬಲಿರಾಮ್ ಹೆಡಗೇವಾರ್ ಅವರು ’ಸ್ವಯಂಸೇವಕ’ ಶಬ್ದಕ್ಕೆ ತನ್ನದೇ ಆದ ಹೊಸ ವ್ಯಾಖ್ಯೆ ನೀಡಿದರು. ಸಂಘ ಪ್ರಾರಂಭವಾದ ಬಳಿಕ ಸ್ವಯಂಸೇವಕ ಎಂಬ ಶಬ್ದಕ್ಕೆ ಹೊಸದೊಂದು ಅರ್ಥ ಸೃಷ್ಟಿಯಾಯಿತು.
ಸಂಘ ಪ್ರಾರಂಭವಾಗುವುದಕ್ಕೆ ಮುಂಚೆ ಸಂಘಸ್ಥಾಪಕರಾದ ಡಾ. ಹೆಡಗೇವಾರ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಿಗಾಗಿ ಪುಕ್ಕಟೆ ಕೆಲಸಮಾಡುವವರನ್ನು ಸ್ವಯಂಸೇವಕರೆಂದು ಹೇಳಲಾಗುತ್ತಿತ್ತು. ಜಮಖಾನ ಹಾಸುವುದು, ಕುರ್ಚಿಗಳನ್ನು ಜೋಡಿಸುವುದು, ಬ್ಯಾನರ್ ಕಟ್ಟುವುದು, ಊಟದ ಸಮಯದಲ್ಲಿ ಬಡಿಸುವ ವ್ಯವಸ್ಥೆ ಮಾಡುವುದು … ಇತ್ಯಾದಿ ಕೆಲಸ ಮಾಡುವವರನ್ನು ಸ್ವಯಂಸೇವಕರೆಂದು ಕರೆಯಲಾಗುತ್ತಿತ್ತು. ಮಹಾರಾಷ್ಟ್ರದಲ್ಲಿ ಆ ಸಂದರ್ಭದಲ್ಲಿ ಗಾದೆ ಮಾತೊಂದು ಪ್ರಚಲಿತದಲ್ಲಿತ್ತು : ’ನ ಬಾಪ್ ಕಾ ಡರ್, ನ ಮಾ ಕಾ ಡರ್, ಬೇಟಾ ನಿಕಲಾ ವಾಲಂಟಿಯರ್’ (ತಂದೆ, ತಾಯಿಯ ಭಯವೇ ಇಲ್ಲ, ಮಗ ಸ್ವಯಂಸೇವಕನಾಗಿ ಹೊರಟ). ಸ್ವಯಂಸೇವಕನೆಂದರೆ ಯಾರ ಭಯವೂ ಇಲ್ಲದ ಉಂಡಾಡಿ ಗುಂಡ ಎಂಬ ಕಲ್ಪನೆಯೇ ಆಗ ಎಲ್ಲರ ಮನಸ್ಸಿನಲ್ಲಿದ್ದುದು.
ಡಾ. ಹೆಡಗೇವಾರ್ ಮಾತ್ರ ಸ್ವಯಂಸೇವಕ ಎಂಬ ಶಬ್ದಕ್ಕೆ ಹೊಸದೊಂದು ಭಾಷ್ಯವನ್ನೇ ಬರೆದರು. ಸಮಾಜಕ್ಕಾಗಿ, ದೇಶಕ್ಕಾಗಿ ಸ್ವಂತದ ಸುಖವನ್ನು ಕಡೆಗಣಿಸಿ ಬದುಕುವವನೇ ಸ್ವಯಂಸೇವಕ. ಸ್ವಾಭಿಮಾನಿಯಾಗಿ, ಎಲ್ಲರ ಹಿತಕ್ಕಾಗಿ ದುಡಿಯುವ ಸಮಾಜಮುಖಿ ಚಿಂತನೆಯ ವ್ಯಕ್ತಿ ಆತ-ಇದೇ ಸ್ವಯಂಸೇವಕ ಎಂಬ ಶಬ್ದಕ್ಕೆ ಡಾ.ಹೆಡಗೇವಾರ್ ನೀಡಿದ ವ್ಯಾಖ್ಯೆಯಾಗಿತ್ತು. ಆದಕಾರಣವೇ ಅನಂತರ ’ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ’ ಎಂಬ ನುಡಿಗಟ್ಟು ಸಂಘದ ಬೌದ್ಧಿಕ್ಗಳಲ್ಲಿ ಪದೇ ಪದೇ ಕೇಳಿಬಂತು. ಸಮಾಜದ ಹಿತವೇ ಮುಖ್ಯ, ಸ್ವಂತದ ಹಿತ ನಗಣ್ಯ ಎಂಬ ಭಾವನೆ ಸ್ವಯಂಸೇವಕರಲ್ಲಿರಬೇಕು ಎಂಬುದು ಸಂಘಸ್ಥಾಪಕರ ಆಶಯವಾಗಿತ್ತು. ಸಂಘದ ಆರಂಭದ ದಿನಗಳಲ್ಲಿ ಸಂಘಕಾರ್ಯ ಕಟ್ಟಿಬೆಳೆಸಿದ ಪ್ರತಿಯೊಬ್ಬ ಪ್ರಾತಃಸ್ಮರಣೀಯರೂ ಅದೇ ರೀತಿ ನಡೆದುಕೊಂಡರೆಂಬುದು ಈಗ ಇತಿಹಾಸ.
ಒಮ್ಮೆ ಡಾ. ಹೆಡಗೇವಾರ್ ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿರುವಾಗ ಎದುರುಗಡೆಯಿಂದ ಇಬ್ಬರು ಕಿಶೋರರು ಮುಗುಳ್ನಗುತ್ತಾ ಹಾದುಹೋದರು. ಡಾ. ಹೆಡಗೇವಾರ್ ಜೊತೆಯಲ್ಲಿದ್ದವರಿಗೆ ಆಶ್ಚರ್ಯ. ’ನಿಮಗೆ ಆ ಹುಡುಗರು ಪರಿಚಯವೇ? ಎಂದು ಪ್ರಶ್ನಿಸಿದರು. ’ಇಲ್ಲ, ಪರಿಚಯವಿಲ್ಲ. ಆದರೆ ಅವರಿಗೆ ನನ್ನ ಪರಿಚಯ ಇರಬಹುದು. ಆದರೆ ಅವರಿಬ್ಬರೂ ಸಂಘದ ಸ್ವಯಂಸೇವಕರು’ ಎಂದರು ಹೆಡಗೇವಾರ್. ’ಅದು ಹೇಗೆ ಹೇಳುತ್ತೀರಿ? ’ – ಇದು ಸ್ನೇಹಿತರ ಪ್ರಶ್ನೆ. ’ಅವರ ಹಾವಭಾವಗಳೇ ಅವರು ಸ್ವಯಂಸೇವಕರೆಂದು ಸಾರಿಹೇಳುತ್ತದೆ’ ಎಂದರು ಹೆಡಗೇವಾರ್. ವ್ಯಕ್ತಿಯೊಬ್ಬನ ನಡವಳಿಕೆಯಿಂದಲೇ ಆತನನ್ನು ಸ್ವಯಂಸೇವಕನೆಂದು ಗುರುತಿಸಬಹುದೆಂಬುದು ಡಾ. ಹೆಡಗೇವಾರ್ ಅವರ ನಂಬಿಕೆಯಾಗಿತ್ತು.
1967 ರ ಡಿಸೆಂಬರ್ನಲ್ಲಿ ಭಾರತೀಯ ಜನಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಪಂ. ದೀನದಯಾಳ ಉಪಾಧ್ಯಾಯರು ಕಲ್ಲಿಕೋಟೆಯಲ್ಲಿ ತಮ್ಮ ಅಭೂತಪೂರ್ವ ಮೆರವಣಿಗೆ ನಡೆಯುತ್ತಿದ್ದಾಗ ಮಾಡುತ್ತಿದ್ದ ಕೆಲಸವೇನು ಗೊತ್ತೆ? ಬೀದಿಯ ಇಕ್ಕೆಲಗಳಲ್ಲಿ ಹಾಕಿದ್ದ ಮಲೆಯಾಳಿ ಭಾಷೆಯ ಬೋರ್ಡುಗಳನ್ನು ಗಮನಿಸುತ್ತಾ, ಮಲೆಯಾಳಿ ಅಕ್ಷರ ಬೇರೆ ಭಾಷೆಯ ಅಕ್ಷರಕ್ಕಿಂತ ಹೇಗೆ ಭಿನ್ನವಾಗಿದೆ ಎಂಬುದನ್ನು ಯೋಚಿಸುತ್ತಿದ್ದರು. ತನಗೆ ಜೈಕಾರ ಹಾಕುತ್ತಿದ್ದ, ತನ್ನ ಮೇಲೆ ಪುಷ್ಪವೃಷ್ಟಿ ಸುರಿಸುತ್ತಿದ್ದ ಅಭಿಮಾನಿಗಳತ್ತ ಅವರ ಗಮನವೇ ಇರಲಿಲ್ಲ. ಅಖಿಲಭಾರತ ಮಟ್ಟದ ಪಕ್ಷವೊಂದಕ್ಕೆ ತಾನು ಅಧ್ಯಕ್ಷನಾಗಿರುವೆ ಎಂಬ ಅಹಂಕೂಡ ಅವರ ಬಳಿ ಕಿಂಚಿತ್ತೂ ಸುಳಿದಿರಲಿಲ್ಲ. ಕಲ್ಲಿಕೋಟೆಯ ಅಧಿವೇಶನ ಮುಗಿಸಿ ಅವರು ದೊಡ್ಡಬಳ್ಳಾಪುರದ ಶಿಬಿರದಲ್ಲಿದ್ದ ಸಂಘದ ಸರಸಂಘಚಾಲಕ ಶ್ರೀಗುರೂಜಿಯವರನ್ನು ನೋಡಲೆಂದು ಬಂದಿದ್ದರು. ಗುರೂಜಿಯವರ ಭಾಷಣದ ಕಾರ್ಯಕ್ರಮ ಅದಾಗಿತ್ತು. ಎಲ್ಲ ಸ್ವಯಂಸೇವಕರು ನೆಲದಮೇಲೆ ಸಾಲಾಗಿ ಕುಳಿತಿದ್ದರು. ದೀನದಯಾಳರೂ ಕೂಡ ನೆಲದಮೇಲೆಯೇ ಕುಳಿತಿದ್ದರು. ಆಗ ಗುರೂಜಿಯವರು ’ಇಂದು ನನ್ನ ಬದಲಿಗೆ ಜನಸಂಘದ ಅಧ್ಯಕ್ಷರಾಗಿರುವ ದೀನದಯಾಳ ಉಪಾಧ್ಯಾಯರು ಮಾತನಾಡಲಿದ್ದಾರೆ’ ಎಂದು ಹೇಳಿದಾಗ ಅಚ್ಚರಿಪಡುವ ಸರದಿ ದೀನದಯಾಳ್ಜಿಯವರದು. ಯಾವ ಮುನ್ಸೂಚನೆಯೂ ಅವರಿಗಿರಲಿಲ್ಲ. ಆದರೂ ಗುರೂಜಿಯವರ ಸೂಚನೆಯಂತೆ ಎದ್ದುನಿಂತು ಸ್ವಯಂಸೇವಕರನ್ನುzಶಿಸಿ, ಸಂಘ, ಸ್ವಯಂಸೇವಕ, ಸಮಾಜನಿರ್ಮಾಣದ ಕುರಿತು ಒಂದು ಗಂಟೆಗೂ ಹೆಚ್ಚುಕಾಲ ನಿರರ್ಗಳವಾಗಿ ಮಾತನಾಡಿ ಎಲ್ಲರ ಮನಸ್ಸನ್ನು ಗೆದ್ದರು. ದೀನದಯಾಳ್ಜಿ ಅಂತಹ ಆದರ್ಶ ಸ್ವಯಂಸೇವಕರಾಗಿದ್ದರು. ತಮ್ಮ ಭಾಷಣದಲ್ಲಿ ಅವರು ಅಪ್ಪಿತಪ್ಪಿಯೂ ಜನಸಂಘದ ವಿಷಯವನ್ನಾಗಲೀ, ರಾಜಕೀಯ ವಿದ್ಯಮಾನಗಳನ್ನಾಗಲೀ ಪ್ರಸ್ತಾಪಿಸಿರಲಿಲ್ಲ.
1977 ರಲ್ಲಿ ತುರ್ತು ಪರಿಸ್ಥಿತಿ ಕಳೆದಬಳಿಕ ನಡೆದ ಚುನಾವಣೆಯಲ್ಲಿ ಜನತಾಪಕ್ಷ ಗೆದ್ದು ಗದ್ದುಗೆಗೇರಿತ್ತು. ಮುರಾರ್ಜಿ ದೇಸಾಯಿ ಸಂಪುಟದಲ್ಲಿ ಜನಸಂಘಕ್ಕೆ ಸೇರಿದ ವಾಜಪೇಯಿ, ಆಡ್ವಾಣಿ ಸಚಿವರಾಗಿ ನಿಯುಕ್ತಿಗೊಂಡಿದ್ದರು. ಜನಸಂಘದ ಇನ್ನೊಬ್ಬ ಹಿರಿಯ ನಾಯಕ ನಾನಾಜಿ ದೇಶ್ಮುಖ್ ಅವರಿಗೂ ಸಚಿವರಾಗುವಂತೆ ಆಹ್ವಾನವಿತ್ತು. ನಾನಾಜಿ ಮಾತ್ರ ಆ ಆಹ್ವಾನವನ್ನು ನಯವಾಗಿಯೇ ನಿರಾಕರಿಸಿದರು. ನಾನು ಮಾಡಬೇಕಾದ ಸಾಮಾಜಿಕ ಕೆಲಸಗಳೇ ಸಾಕಷ್ಟಿವೆ. ಮೊದಲು ಅದನ್ನು ಮಾಡಿಮುಗಿಸುವೆ ಎಂದು ಹೇಳಿದ್ದರು. ಸಚಿವರಾಗುವಂತೆ ಆಹ್ವಾನವಿದ್ದರೂ ಅದನ್ನು ನಿರಾಕರಿಸುವಂತಹ ವಿದ್ಯಮಾನಗಳನ್ನು ವರ್ತಮಾನದ ದಿನಮಾನಗಳಲ್ಲಿ ಕಾಣಲು ಸಾಧ್ಯವೇ ಇಲ್ಲ, ಬಿಡಿ.
’ಟೈಮ್ಸ್ ಆಫ್ ಇಂಡಿಯಾ’ ಪತ್ರಿಕಾ ಸಮೂಹದ ಹಿಂದಿ ಪತ್ರಿಕೆ ’ಧರ್ಮಯುಗ’ ದೇಶದ ಪ್ರಸಿದ್ಧ ರಾಜಕೀಯ, ಸಾಮಾಜಿಕ ಮುಖಂಡರನ್ನು ಸಂಪರ್ಕಿಸಿ, ನಿಮ್ಮ ಜೀವನದ ಉzಶದ ಕುರಿತು ಸಂಕ್ಷಿಪ್ತವಾಗಿ ತಿಳಿಸಿ ಎಂದು ವಿನಂತಿಸಿತ್ತು. ಪಂ. ಜವಹರ್ಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ ಮುಂತಾದ ದಿಗ್ಗಜರಿಂದ ಹಿಡಿದು ಆರೆಸ್ಸೆಸ್ನ ಸರಸಂಘಚಾಲಕರಾಗಿದ್ದ ಗುರೂಜಿಯವರೂ ಪತ್ರಿಕೆಯ ಈ ಪ್ರಶ್ನೆಗೆ ಉತ್ತರಿಸಿದ್ದರು. ’ಧರ್ಮಯುಗ’ ಎಲ್ಲ ಮಹನೀಯರ ಹೇಳಿಕೆಗಳನ್ನು ಪ್ರಕಟಿಸಿತ್ತು. ಕೆಲವರು ದೀರ್ಘ ಪ್ಯಾರಾಗಳನ್ನೇ ಬರೆದಿದ್ದರು. ಗುರೂಜಿಯವರು ಮಾತ್ರ ಕೇವಲ ಎರಡೇ ಶಬ್ದಗಳಲ್ಲಿ ತಮ್ಮ ಬದುಕಿನ ಉzಶವನ್ನು ಮಾರ್ಮಿಕವಾಗಿ ತಿಳಿಸಿದ್ದರು. ಅದೇನೆಂದರೆ ’ಮೈ ನಹೀ, ತೂ ಹೀ’(ನಾನಲ್ಲ, ನೀನೇ). ಗುರೂಜಿಯವರ ಈ ಅತ್ಯಂತ ಸಂಕ್ಷಿಪ್ತ, ಮಾರ್ಮಿಕ ಸಂದೇಶದ ಬಗ್ಗೆ ಆಗ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ಸ್ವಯಂಸೇವಕ ಸಂಸ್ಥೆಯೊಂದರ ಉನ್ನತ ಹುದ್ದೆಯಲ್ಲಿದ್ದರೂ ಗುರೂಜಿಯವರ ತಲೆ ತಿರುಗಿರಲಿಲ್ಲ. ಸಂಸ್ಥೆಗೆ ನಾನು ಏನೂ ಅಲ್ಲ, ಎಲ್ಲವೂ ನೀವೇ (ಕಾರ್ಯಕರ್ತರೇ) ಎಂಬುದು ಅವರ ಸಂದೇಶದ ತಾತ್ಪರ್ಯ.
ಸಂಘದ ಸ್ವಯಂಸೇವಕ ಹೇಗಿರಬೇಕು ಎಂಬುದಕ್ಕೆ ದೀನದಯಾಳ್ಜಿ, ನಾನಾಜಿ ದೇಶಮುಖ್, ಗುರೂಜಿ ಅವರ ಈ ನಿದರ್ಶನಗಳು ಎಲ್ಲ ಸ್ವಯಂಸೇವಕರಿಗೆ ಮೇಲ್ಪಂಕ್ತಿಯಾಗಬಲ್ಲದು. ಈ ಮಹನೀಯರ ಬದುಕಿನಲ್ಲಿ ಸ್ವಾರ್ಥದ ಲವಲೇಶವೂ ಇರಲಿಲ್ಲ. ತಮ್ಮ ಇಡೀ ಬದುಕನ್ನು ಸಮಾಜಕ್ಕಾಗಿಯೇ ಅರ್ಪಿಸಿಕೊಂಡಿದ್ದರು. ಕೀರ್ತಿ, ಅಧಿಕಾರ, ಅಂತಸ್ತು, ಹುದ್ದೆ… ಯಾವುದೂ ಅವರನ್ನು ವಿಚಲಿತಗೊಳಿಸಲಿಲ್ಲ. ನಡೆ ಮತ್ತು ನುಡಿಯಲ್ಲಿ ಯಾವುದೇ ಅಂತರವಿರಲಿಲ್ಲ. ಅಂತರಂಗ – ಬಹಿರಂಗ ಬೇರೆ ಬೇರೆಯಾಗಿರಲಿಲ್ಲ. ಸ್ವಯಂಸೇವಕತ್ವ ಅವರಲ್ಲಿ ಹೆಪ್ಪುಗಟ್ಟಿದ್ದರಿಂದಲೇ, ಸಂಘದ ಸಂಸ್ಕಾರವನ್ನು ಅವರು ಹೀರಿಕೊಂಡಿದ್ದರಿಂದಲೇ ಈ ಪರಿಯಲ್ಲಿ ಮೇಲ್ಪಂಕ್ತಿಯಾಗಿ ನಿಲ್ಲಲು ಅವರಿಗೆ ಸಾಧ್ಯವಾಗಿದ್ದು.
ಜನಸಂಘದ ಉತ್ತರಾಶ್ರಮವಾಗಿರುವ ಬಿಜೆಪಿ ನಾಯಕರ ನಡೆ-ನುಡಿಗಳ ವೈಖರಿಯನ್ನು ಗಮನಿಸಿದಾಗ ದೀನದಯಾಳ್ಜಿ, ನಾನಾಜಿ, ಗುರೂಜಿ ಮುಂತಾದ ಮಹನೀಯರ ಆದರ್ಶಗಳು ಎಲ್ಲಿ ಹೋದವು ಎಂದು ಪ್ರಜ್ಞಾವಂತ ಸ್ವಯಂಸೇವಕರಿಗೆ ವ್ಯಥೆಯಾಗದೇ ಇರದು. ಹಿರಿಯರೊಬ್ಬರು ಹೇಳಿದ ಕಥೆ ಈ ಸಂದರ್ಭಕ್ಕೆ ಸೂಕ್ತವೆನಿಸುತ್ತದೆ. ತುಂಗಾನದಿಯ ಆಳದಲ್ಲಿರುವ ಕಲ್ಲುಗಳು ಎಷ್ಟು ನೀರು ಕುಡಿದಿರಬಹುದು ಎಂಬ ಕುತೂಹಲ ವ್ಯಕ್ತಿಯೊಬ್ಬನಿಗೆ ಕಾಡಿತಂತೆ. ನದಿಯ ಅಕ್ಕಪಕ್ಕದಲ್ಲಿರುವ ಗಿಡ, ಮರ, ಜನ ಜಾನುವಾರು ಎಲ್ಲರೂ ನದಿನೀರನ್ನು ಸಾಕಷ್ಟು ಹೀರಿಕೊಂಡೇ ಇರುತ್ತಾರೆ. ಅದರ ಉಪಯೋಗ ಪಡೆಯುತ್ತಾರೆ. ಹೀಗಿರುವಾಗ ನದಿಯ ಆಳದಲ್ಲಿರುವ ಕಲ್ಲುಗಳು ಅದೆಷ್ಟು ನೀರು ಕುಡಿದಿರಬಹುದು ಎಂಬ ಕುತೂಹಲ ಆ ವ್ಯಕ್ತಿಗೆ. ಅದಕ್ಕಾಗಿ ಆತ ಆಳದಲ್ಲಿದ್ದ ಕಲ್ಲೊಂದನ್ನು ಮೇಲೆತ್ತಿ ಅದನ್ನು ಒಡೆದು ನೋಡಿದಾಗ ಅವನಿಗಾದ ಆಶ್ಚರ್ಯ ಅಷ್ಟಿಷ್ಟಲ್ಲ. ಆ ಕಲ್ಲಿನ ಒಳಪದರ ತೇವರಹಿತವಾಗಿಯೇ ಇತ್ತು. ಆ ಕಲ್ಲು ಒಂದು ಹನಿ ನೀರನ್ನೂ ಕುಡಿದಿರಲಿಲ್ಲ. ಕಲ್ಲುಗಳು ಎಂದಾದರೂ ನೀರು ಹೀರಿಕೊಳ್ಳಲು ಸಾಧ್ಯವೇ? ಈ ಸತ್ಯ ಆ ವ್ಯಕ್ತಿಗೆ ಗೊತ್ತಿರಲಿಲ್ಲ. ’ಗೋರ್ಕಲ್ಲ ಮೇಲೆ ಮಳೆ ಕರೆದಂತೆ… ’ ಎಂಬ ಲೋಕೋಕ್ತಿ ಹುಟ್ಟಿದ್ದು ಇದೇ ಕಾರಣಕ್ಕಾಗಿ. ’ನೀರಿನ ಜೋರಿಗೆ ತೇಲದು ಬಂಡೆ, ಅಂತೆಯೇ ನಾವೀ ತರಗತಿಗೆ, ಪರೀಕ್ಷಯೆಂದರೆ ಹೂವಿನ ಚೆಂಡೆ ಚಿಂತಿಸಬಾರದು ದುರ್ಗತಿಗೆ’ ಎಂಬ ಕೆ.ಎಸ್. ನರಸಿಂಹ ಸ್ವಾಮಿಯವರ ಕವನದ ಸಾಲು ಪ್ರತಿಧ್ವನಿಸುವುದು ಇದೇ ಅರ್ಥವನ್ನೇ.
ವರ್ತಮಾನದ ರಾಜ್ಯ ಬಿಜೆಪಿಯ ಅಪಸವ್ಯಗಳನ್ನು ಗಮನಿಸಿದಾಗ ತುಂಗೆಯ ಕಲ್ಲಿನ ಕಥೆ ನೆನಪಾಗದೇ ಇರದು. ಈ ಅಪಸವ್ಯಗಳ ಸೂತ್ರಧಾರರೆಲ್ಲ ಸಂಘದ ಗರಡಿಯಲ್ಲೇ ಪಳಗಿಬಂದವರು. ಸಂಘದ ಕಾರ್ಯಕ್ರಮಗಳಿದ್ದಾಗ ಸಮವಸ್ತ್ರ ತೊಟ್ಟು, ಲಾಠಿಹಿಡಿದು ’ನಮಸ್ತೇ ಸದಾ ವತ್ಸಲೇ ಮಾತೃಭೂಮೇ… ’ ಎಂದು ಶ್ರದ್ಧೆಯಿಂದ (!) ಗುಣುಗುಣಿಸಿದವರು. ಕೇಶವಕೃಪಾದ ಬೈಠಕ್ಗಳಲ್ಲಿ ನೆಲದಮೇಲೆ ಕುಳಿತು, ಊಟದ ಸಮಯದಲ್ಲಿ ಬಳಸಿದ ತಟ್ಟೆಗಳನ್ನು ತಾವೇ ತೊಳೆದಿಟ್ಟು ಅನುಶಾಸನ ಪಾಲಿಸಿದವರು. ಆದರೇನು? ಅವರ ಈ ವರ್ತನೆಗಳು ಕೇವಲ ಪ್ರದರ್ಶನಗಳಾದವೇ ಹೊರತು ನಿದರ್ಶನಗಳಾಗಲೇ ಇಲ್ಲ. ಸಮವಸ್ತ್ರ ಧರಿಸಿದ ಮಾತ್ರಕ್ಕೆ ಸ್ವಯಂಸೇವಕರಾಗುವುದಿಲ್ಲ. ಕಾವಿ ಧರಿಸಿದವರೆಲ್ಲ ಸಂನ್ಯಾಸಿಗಳಲ್ಲ. ಕಾವಿ ಧರಿಸಿ ಕಾಮಿನಿಯರ ಚಿಂತೆ ಹಚ್ಚಿಕೊಂಡ ರಸಿಕರೂ ನಮ್ಮ ನಡುವೆ ಇದ್ದಾರೆ ಎಂಬ ಸತ್ಯ ನಮಗೆ ತಿಳಿಯದ ಸಂಗತಿಯೇನಲ್ಲ. ಅದು ಹೇಗಾದರೂ ಇರಲಿ, ಆದರೆ ತಾನೊಬ್ಬ ಸಂಘದ ಸ್ವಯಂಸೇವಕ ಎಂದು ಹೇಳಿಕೊಳ್ಳುವ ರಾಜಕಾರಣಿಗಳು ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಾಗ ಸ್ವಯಂಸೇವಕತ್ವವನ್ನು ರೂಢಿಸಿಕೊಂಡಿರುವ ಮನಸ್ಸುಗಳು ಖಿನ್ನವಾಗುತ್ತವೆ. ಇವರೇಕೆ ಹೀಗೆ? ಎಂಬ ಪ್ರಶ್ನೆ ಕಾಡುತ್ತದೆ. ಇವರನ್ನು ಸರಿ ದಾರಿಗೆ ತರಲು ಸಾಧ್ಯವಿಲ್ಲವೆ ಎಂಬ ಇನ್ನೊಂದು ಪ್ರಶ್ನೆ ಮೂಡುತ್ತದೆ. ಇವರನ್ನು ಸರಿದಾರಿಗೆ ತರುವವರಾದರೂ ಯಾರು ಎಂಬ ಮತ್ತೊಂದು ಪ್ರಶ್ನೆಯೂ ಮೇಲೆದ್ದು ಬರುತ್ತದೆ.
ತುಂಗೆಯ ಕಲ್ಲುಗಳು ಎಂದಿಗೂ ನೀರನ್ನು ಹೀರಿಕೊಳ್ಳಲಾರವು ಎಂಬುದಂತೂ ನಿತ್ಯಸತ್ಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.