ಬೆಳ್ತಂಗಡಿ : ಪುರೋಹಿತರು ಸಮಾಜವೆಂಬ ಸಾಗರದಲ್ಲಿ ಮೀನಿದ್ದಂತೆ. ನೀರು ಪರಿಶುದ್ಧವಾಗಿರಲು ಮೀನು ಅಗತ್ಯವಾಗಿರುವಂತೆ ಸಮಾಜ ಬೆಳೆಯಲು ಪುರೋಹಿತರು ಅಗತ್ಯ. ಪುರೋಹಿತರು ಮಾರ್ಗದರ್ಶಕರಾಗಿ ಸಮಾಜವನ್ನು ಉತ್ಕರ್ಷಗೊಳಿಸಿ ತಾವೂ ಬೆಳೆಯಬೇಕು. ಸಮಾಜದಲ್ಲಿ ಧರ್ಮ ಶ್ರದ್ಧೆಯ ಕೆಲಸ ಮಾಡಿಸುವುದು ಪುರೋಹಿತರ ಕೆಲಸ ಹಾಗೂ ಕರ್ತವ್ಯ. ಸ್ಪಷ್ಟವಾದ ಪೌರೋಹಿತ್ಯ ಉಳಿದಿರುವುದೇ ಪರಶುರಾಮ ಸೃಷ್ಟಿಯಲ್ಲಿ ಎಂದು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಚಾರ್ಯ ಸತ್ಯನಾರಾಯಣಾಚಾರ್ ಹೇಳಿದರು.ಅವರು ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ ವತಿಯಿಂದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ನಡೆದ ಬೆಳ್ತಂಗಡಿ ತಾಲೂಕು ವೈದಿಕರ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡುತ್ತಿದ್ದರು.
ಸಮಾವೇಶವನ್ನು ಉದ್ಘಾಟಿಸಿದ ತುಳು ಶಿವಳ್ಳಿ ಸಭಾ ಗೌರವಾಧ್ಯಕ್ಷ, ಶ್ರೀ ಜನಾರ್ದನ ದೇವಾಲಯದ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ ಅವರು, ಸಮಾಜದ ಗೊಂದಲವನ್ನು ನಿವಾರಿಸಿ, ಸಂಸ್ಕಾರದ ಮೂಲಕ ಬ್ರಾಹ್ಮಣತ್ವವನ್ನು ಎತ್ತಿ ಹಿಡಯುವುದೇ ಸಮಾವೇಶದ ಮುಖ್ಯ ಉದ್ದೇಶ. ಕಾಲ ಬದಲಾದಂತೆ ಎಲ್ಲವನ್ನೂ ಬಗೆಹರಿಸಲು ಅಸಾಧ್ಯವಾದರೂ ಹೆಚ್ಚಿನ ಸಮಸ್ಯೆಗಳನ್ನು ಐಕ್ಯಮತ್ಯದ ತೀರ್ಮಾನದಿಂದ ಪರಿಹರಿಸಿ ಬ್ರಾಹ್ಮಣತ್ವದ ಸಂಸ್ಕೃತಿ ಉಳಿಸುವ ಪ್ರಯತ್ನ ನಡೆಸಲಾಗುವುದು ಎಂದರು.ಸುಬ್ರಹ್ಮಣ್ಯದ ಅರ್ಚಕರಾಗಿದ್ದ ಕೇಶವ ಜೋಗಿತ್ತಾಯ, ವೇದಮೂರ್ತಿ ಕೋಣಂದೂರು ಗೋಪಾಲಕೃಷ್ಣ ಆಚಾರ್ಯ ಸಂವಾದದಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಿದರು.
ಪಂಚಗವ್ಯ ಸಾಹಿತ್ಯ, ಏಕಾದಶಿ ವೃತಾಚರಣೆ, ಗೋಗ್ರಾಸ, ದಾನ ಮೊದಲಾದ ವಿಚಾರಗಳ ಬಗ್ಗೆ ಸುದೀರ್ಘ ಚರ್ಚೆ, ಸಂವಾದ ನಡೆದು ನಿರ್ಣಯವನ್ನು ತುಳು ಶಿವಳ್ಳಿ ಸಭಾ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯರು ಗೌರವಾಧ್ಯಕ್ಷ ವಿಜಯರಾಘವ ಪಡ್ವೆಟ್ನಾಯರಿಗೆ ಹಸ್ತಾಂತರಿಸಿದರು. ಅಂತರ್ಜಾತೀಯ ವಿವಾಹದ ಬಗೆಗೆ ಮುಂದಿನ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದೆಂದು ಕಾರ್ಯದರ್ಶಿ ರಾಜಪ್ರಸಾದ ಪೊಳ್ನಾಯ ತಿಳಿಸಿದರು.ವೇದಿಕೆಯಲ್ಲಿ ಉಜಿರೆ ವಲಯಾಧ್ಯಕ್ಷ ಡಾ| ಎಂ. ಎಂ. ದಯಾಕರ್, ನಾಗೇಶ ರಾವ್ ಮುಂಡ್ರುಪ್ಪಾಡಿ, ರಾಜಾರಾಮ ಶರ್ಮ, ಗಿರೀಶ್ ಕುದ್ರೆಂತ್ತಾಯ ಉಪಸ್ಥಿತರಿದ್ದರು.
ಸಮಾವೇಶದ ಸಂಚಾಲಕ ರಾಮಕೃಷ್ಣ ಕಲ್ಲೂರಾಯ ಸ್ವಾಗತಿಸಿ, ಪ್ರಸ್ತಾವಿಸಿದರು. ಹರ್ಷ ಆಚಾರ್ ಪ್ರಾರ್ಥಿಸಿ ಪರಾರಿ ವೆಂಕಟ್ರಮಣ ಹೆಬ್ಬಾರ್ ಮತ್ತು ಮುರಳಿಕೃಷ್ಣ ಆಚಾರ್ ಕಾರ್ಯಕ್ರಮ ನಿರೂಪಿಸಿ, ಸಹ ಸಂಚಾಲಕ ಶ್ರೀಪತಿ ಎಳಚಿತ್ತಾಯ ವಂದಿಸಿದರು. ಸಮಾವೇಶದಲ್ಲಿ ಬೆಳ್ತಂಗಡಿ ತಾಲೂಕಿನ ವಿವಿಧ ವಲಯಗಳಿಂದ ವೈದಿಕರು ಭಾಗವಹಿಸಿ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.