ಧಾರವಾಡ: ಕಾಗದ ಬಂದದ ಕಮಲಾಭನದು, ಈ ಕಾಗದವ ಓದಿಕೊಂಡು ಕಾಲ ಕಳೆಯಿರೋ ಎಂದು ದಾಸರು ಪದ್ಯ ಬರೆದಿದ್ದಾರೆ. ಕಾಗದ ಓದುವುದಿರಲಿ, ನಾವೀಗ ಆ ಕಾಲವನ್ನೇ ಕಳೆದುಕೊಂಡಿದ್ದೇವೆ ಎಂದು ಖೇದ ವ್ಯಕ್ತಪಡಿಸಿದವರು ಸಾಹಿತಿ, ಕವಿ ನಾ.ಡಿಸೋಜ.
ಧಾರವಾಡದಲ್ಲಿ ನಡೆಯುತ್ತಿರುವ ಸಾಹಿತ್ಯ ಸಂಭ್ರಮದ ’ನನಗೆ ಬಂದ ಸಾಹಿತಿಗಳ ಪತ್ರ’ ಎಂಬ 2 ನೇ ಗೋಷ್ಠಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಮಾನವ ಕಾದಂಬರಿ ಕುರಿತು ನಿರಂಜನ ಅವರು 1974 ರಲ್ಲಿ ಬರೆದ ಪತ್ರದ ಕುರಿತು ವಿವರಿಸಿದರು.
ದ್ವೀಪ ಕಾದಂಬರಿ ಕುರಿತು ಚಲನಚಿತ್ರ ನಿರ್ದೇಶಕ ಗಿರೀಶ ಕಾಸರವಳ್ಳಿ ಹಾಗೂ ಸುಬ್ಬಣ್ಣನವರು ಬರೆದ ಪತ್ರಗಳ ಕುರಿತು ಹೇಳಿದ ಅವರು, ಪತ್ರ ಸಂಸ್ಕೃತಿ ಪರಸ್ಪರ ಸಂಬಂಧ ವೃದ್ಧಿಗೂ ಹೇಗೆ ಸಹಕಾರಿ ಎಂಬುದನ್ನು ಮಾರ್ಮಿಕವಾಗಿ ಹೇಳಿದರು.
ಬಿ.ಆರ್.ಲಕ್ಷ್ಮಣರಾವ್
ಈ ಗೋಷ್ಠಿಯ ನಿರ್ದೇಶಕ ಕವಿ ಬಿ.ಆರ್.ಲಕ್ಷ್ಮಣ ರಾವ್ ಅವರು, ತಾವು ಮದುವೆಗೂ ಮುನ್ನ ತಮ್ಮ ಪತ್ನಿಗೆ ಪ್ರೇಮಪತ್ರ ಬರೆದಿದ್ದು, ಅದು ಪ್ರೊಬೆಷನರಿ ಅವಧಿ ಇದ್ದಾಗ ಬಿಡಿ ಎಂದಾಗ ಸಭೆಯಲ್ಲಿ ನಗೆಯ ಅಲೆ ಉಕ್ಕಿತು.
ಡಾ.ಯು.ಆರ್.ಅನಂತಮೂರ್ತಿ ಹಾಗೂ ಪು.ತಿ.ನ ಅವರಿಂದ ಬಂದ ಮೆಚ್ಚುಗೆಯ ಪತ್ರಗಳು ತಮ್ಮ ಮೇಲೆ ಸಾಕಷ್ಟು ಪ್ರಭಾವ ಬೀರಿವೆ. ಆಕಾಶವಾಣಿಯಲ್ಲಿ ಪ್ರಸಾರವಾದ ನನ್ನ ಮೊದಲ ಭಾವಗೀತೆ ಶೃತಿ ಮೀರಿದ ಹಾಡನ್ನು ಮೂರು ಬಾರಿ ಕೇಳಿರುವುದಾಗಿ ಪು.ತಿ.ನ ಬರೆದಿದ್ದರಂತೆ.
ವೀರಣ್ಣ ರಾಜೂರು
ಹಳ್ಳಿಯಿಂದ ಪ್ಯಾಟಿಗೆ ಓದಲು ಬಂದಾಗ ಮನೆಗೆ ಪತ್ರ ಬರೆಯುತ್ತಿದ್ದೆ. ನನ್ನಪ್ಪ ಅದನ್ನು ಮನೆಯವರನ್ನೆಲ್ಲ ಕೂಡಿಸಿಕೊಂಡು ಓದುತ್ತಿದ್ದರಂತೆ. ಪತ್ರದ ಶೈಲಿಯು ಅಷ್ಟೇ ಸಂಸ್ಕೃತಿ ಪೂರ್ಣವಾಗಿರುತ್ತಿತ್ತು ಎಂದು ವೀರಣ್ಣ ರಾಜೂರ ಸ್ಮರಿಸಿದರು.
ಮದುವೆ ನಂತರ ತಮ್ಮ ಪತ್ನಿಗೆ ಒಂದೆರಡು ಪತ್ರ ಬರೆದಿದ್ದು, ಅವು ಐದೈದು ಪುಟಗಳಷ್ಟಿದ್ದವು. ಆಗ ನಾನು ಪಿಎಚ್ಡಿ ಮಾಡುತ್ತಿದ್ದೆ. ಅವನ್ನೋದಿದ ಪತ್ನಿ ಇದೇ ಸಮಯವನ್ನು ಪಿಎಚ್ಡಿಗೆ ಮೀಸಲಿಟ್ಟಿದ್ದರೆ ಅದಾದರೂ ಬೇಗ ಮುಗಿಯುತ್ತಿತ್ತು. ನಾವು ಎಲ್ಲಿಯಾದರೂ ಜಾಲಿಯಾಗಿ ಇರಬಹುದಾಗಿತ್ರು ಎಂದಿದ್ದರಂತೆ. ಆಗ ನಗುವ ಸರದಿ ಎಲ್ಲರದು. ಮೈಸೂರು ವಿಶ್ವವಿದ್ಯಾಲಯ ಜಿ.ವರದರಾಜ ಹಾಗೂ ಜೋಳದ ರಾಶಿ ದೊಡ್ಡನಗೌಡರು ತಮಗೆ ಪತ್ರ ಬರೆದಿದ್ದನ್ನು ರಾಜೂರು ಪ್ರೀತಿಯಿಂದ ನೆನಪಿಸಿಕೊಂಡರು.
ವೀಣಾ ಶಾಂತೇಶ್ವರ ಅವರು, ೧೨ ವರ್ಷಗಳ ಹಿಂದೆ ಖ್ಯಾತ ವಿಮರ್ಶಕಿ ಎಂ.ಎಸ್.ಆಶಾದೇವಿ ಅವರು ತಮಗೆ ಬರೆದ ಪತ್ರವನ್ನು ವಾಚಿಸಿ, ಸ್ತ್ರೀಮನದ ಕುರಿತು ವಿವರಿಸಿದರು.
ಗೋಪಾಲಕೃಷ್ಣ ಅಡಿಗರು ಹಾಗೂ ಎಸ್.ದಿವಾಕರ ಅವರು ಬರೆದ ಪತ್ರಗಳ ಕುರಿತು ಮಲ್ಲಿಕಾರ್ಜುನ ಹಿರೇಮಠ ನೆನಪಿಸಿಕೊಂಡರು. ಮೀನಾ ಮೈಸೂರು ಅವರು ಮಾತನಾಡಿ, ಡಾ.ಯು.ಆರ್.ಅನಂತಮೂರ್ತಿ ಹಾಗೂ ಶಾಂತಿನಾಥ ದೇಸಾಯಿಯವರು ತಮಗೆ ಅನೇಕ ಸಂದರ್ಭಗಳಲ್ಲಿ ಬರೆದ ಅರ್ಥಪೂರ್ಣ ಹಾಗೂ ಬದುಕಿನ ಮಾರ್ಗದರ್ಶಿಯಾಗಿದ್ದ ಪತ್ರಗಳನ್ನು ಪ್ರಸ್ತುತಪಡಿಸಿದರು.
ಮೊಬೈಲ್ ಭರಾಟೆಯಲ್ಲಿ ಕಳೆದು ಹೋಗುತ್ತಿರುವ ಪತ್ರ ಸಂಸ್ಕೃತಿಯ ವೈಶಿಷ್ಟ್ಯತೆ ಕುರಿತು ಗೋಷ್ಠಿಯನ್ನು ಆಯೋಜಿಸಿದ್ದು ಸಾಹಿತ್ಯ ಸಂಭ್ರಮದ ವಿಶೇಷವಾಗಿತ್ತು.
ಸರಸ್ವತಿ ಎಂಬುದು ಬದುಕಿನ ಜ್ಞಾನಗಂಗೆ : ದೇವದತ್ತ ಪಟ್ಟನಾಯಕ
ಸರಸ್ವತಿ ಎಂಬುದು ಜ್ಞಾನ. ಕಲೆ, ಸಾಹಿತ್ಯಗಳು, ಕಾಳಿ, ಗೌರಿ, ಲಕ್ಷ್ಮೀ ಹಾಗೂ ದುರ್ಗಾ ಎಲ್ಲ ದೇವತೆಗಳೂ ಜ್ಞಾನದ ಸಂಕೇತ. ಸಂಸ್ಕೃತಿಯ ಪ್ರತಿಬಿಂಬ. ನಮ್ಮ ಬದುಕಿನ ಸರಳತೆಗೂ ಸರಸ್ವತಿ ಅತ್ಯವಶ್ಯ ಎಂದು ಖ್ಯಾತ ಬರಹಗಾರ ದೇವದತ್ತ ಪಟ್ಟನಾಯಕ ಅಭಿಪ್ರಾಯಪಟ್ಟರು.
ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದಿರುವ ಧಾರವಾಡ ಸಾಹಿತ್ಯ ಸಂಭ್ರಮ-2017ರ ಮೊದಲ ಗೋಷ್ಠಿ ’ವಿಶೇಷ ಉಪನ್ಯಾಸ’ದಲ್ಲಿ ಮಾತನಾಡಿದ ಅವರು, ಗುರುಲಿಂಗ ಕಾಪಸೆ ಅವರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
20 ವರ್ಷಗಳಿಂದ ಬರೆಯುತ್ತಿರುವ ನಾನು 30 ಪುಸ್ತಕಗಳನ್ನು ಬರೆದಿರುವೆ. ಇಂದಿನ ಚಿಕ್ಕ ಮಕ್ಕಳಿಗೆ ಸರಳ ಭಾಷೆಯಲ್ಲಿ ಪುರಾಣಗಳ ಕುರಿತು ಮನವರಿಕೆ ಮಾಡುವುದೇ ತಮ್ಮ ಉದ್ದೇಶ ಎಂದು ಪಟ್ಟನಾಯಕ ಹೇಳಿದರು.
ಇದೇ ಸಂದರ್ಭದಲ್ಲಿ ವಿಮರ್ಶಕ ಚಂದ್ರಶೇಖರ ಪಾಟೀಲ್ ಅವರು ಸನಾತನ ಧರ್ಮ ಹಾಗೂ ಹಿಂದು ಧರ್ಮ ಎಂದರೇನು? ರಾಷ್ಟ್ರೀಯತೆ, ಹಿಂದುತ್ವ ಎಂದೆಲ್ಲ ಮಾತನಾಡುವವರು ತಮ್ಮದು ಸನಾತನ ಧರ್ಮ ಎಂತಲೂ ಅನ್ನುತ್ತಾರೆ ಯಾಕೆ ? ಎಂದು ಪ್ರಶ್ನಿಸಿ, ನಾನಂತೂ ಎಡಪಂಥೀಯ ಬಿಡಿ ಎಂದು ಹೇಳಿದರು.
ಸನಾತನ ಎಂದರೆ ಅನಾದಿ, ಅನಂತ, ಸಾರ್ವಕಾಲಿಕ ಎಂದ ದೇವದತ್ತ ಪಟ್ಟನಾಯಕ ಅವರು, ಜೈನ, ಬುದ್ಧ ಹಾಗೂ ಹಿಂದು ಧರ್ಮಗಳು ಇದೇ ಪರಿಧಿಯಲ್ಲಿ ಬರುತ್ತವೆ. ಆದರೆ, ತಾತ್ವಿಕವಾಗಿ ಭಿನ್ನವಾಗಿವೆ. ಏಕೆಂದರೆ ಬೌದ್ಧ ಧರ್ಮದಲ್ಲಿ ಆತ್ಮ ನಂಬುವುದಿಲ್ಲ. ಜೈನ ಧiದಲ್ಲಿ ಆತ್ಮದ ನಂಬಿಕೆ ಇದೆ. ಹಿಂದುವಿನಲ್ಲಿ ಆತ್ಮ ಹಾಗೂ ಪರಮಾತ್ಮದ ಕಲ್ಪನೆ ಇದೆ ಎಂದರು.
ಖ್ಯಾತ ಕವಿ ಎಚ್ಎಸ್.ವೆಂಕಟೇಶ ಮೂರ್ತಿ ಅವರು, ಪುರಾಣ ಎಂದರೆ ಹಳೆಯದು ಎಂದರ್ಥ. ಹಳೆಯದನ್ನು ನಾವು ಇಂದಿಗೂ ಯಾಕೆ ಓದಬೇಕು? ಹೊಸದು ನಮಗೆ ಬೇಡವೇ? ಹಾಗೂ ದೇವದತ್ತ ಪಟ್ಟನಾಯಕರ ಅನೇಕ ಪೌರಾಣಿಕ ಹಿನ್ನೆಲೆಯ ಕೃತಿಗಳಲ್ಲಿ, ತಮ್ಮ ವೈಯಕ್ತಿಕ ಅಭಿಪ್ರಾಯಗಳು, ಕಲ್ಪನೆಗಳನ್ನೂ ಸೇರಿಸುತ್ತಾರೆ ಇದು ಎಷ್ಟು ಸರಿ? ಪ್ರಶ್ನಿಸಿದರು.
ಶಬರಿಯ ಕಥೆಯು ಮೂಲ ವಾಲ್ಮೀಕಿ ರಾಮಾಯಣದಲ್ಲಿ ಇಲ್ಲವೇ ಇಲ್ಲ. ಹಾಗೇ ಲಕ್ಷ್ಮಣ ರೇಖೆಯ ಕುರಿತೂ ಅಲ್ಲಿ ಪ್ರಸ್ತಾಪವಿಲ್ಲ. ಹಾಗಿದ್ದರೆ ನಾವೆಲ್ಲ ನಂಬಿರುವ ಇವುಗಳನ್ನು ಕಲ್ಪನೆ ಎನ್ನೋಣವೆ ? ಅಥವಾ ಪುರಾಣ ಎನ್ನೋಣವೇ ? ಇವುಗಳ ವ್ಯತ್ಯಾಸವನ್ನು ಗುರುತಿಸುವವರು ಯಾರು ? ಎಂದು ದೇವದತ್ತರು ಮರು ಪ್ರಶ್ನಿಸುವ ಮೂಲಕ ಉತ್ತರಿಸಿದರು.
ಚಾತುರ್ವರ್ಣ, ಬ್ರಹ್ಮ ಮತ್ತು ಸರಸ್ವತಿಯ ಸಂಬಂಧ, ಕಾವ್ಯ ಹಾಗೂ ವಿಜ್ಞಾನ ಇವುಗಳಿಗೆ ಸಂಬಂಧಿಸಿದಂತೆ ರೂಪಾ ತಿಪಟೂರು, ಡಾ.ಚಂದ್ರಶೇಖರ ಹಾಗೂ ಇತರರು ಪ್ರಶ್ನಿಸಿದರು. ಈ ಕಾರ್ಯಕ್ರಮದ ನೇರ ಪ್ರಸಾರ ಅಂತರ್ಜಾಲದಲ್ಲಿ ಲಭ್ಯವಿದ್ದ ಕಾರಣ ಲಂಡನ್ನಿಂದಲೂ ಕೆಲವರು ಪ್ರಶ್ನಿಸಿದ್ದು ವಿಶೇಷವಾಗಿತ್ತು.
ಡಾ.ಜಿ.ಬಿ.ಹರೀಶ ಈ ಗೋಷ್ಠಿಯ ನಿರ್ದೇಶಕರಾಗಿದ್ದರು. ಡಾ.ಗಿರಡ್ಡಿ ಗೋವಿಂದರಾಜ, ಎಚ್.ಎಸ್.ವೆಂಕಟೇಶಮೂರ್ತಿ, ಹ.ವೆಂ.ಕಾಖಂಡಕಿ ಹಾಗೂ ಇತರರು ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.