ಕೊಪ್ಪಳ: ಈ ಬಾರಿಯ ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ತೋಟಗಾರಿಕೆ ಇಲಾಖೆಯು ಗವಿಮಠ ಜಾತ್ರಾ ಆವರಣದಲ್ಲಿ ಆಯೋಜಿಸಿರುವ ವಿಶೇಷ ಫಲ-ಪುಷ್ಪ ಪ್ರದರ್ಶನದಲ್ಲಿ ಗುಲಾಬಿ ಹೂ, ಚೆಂಡು ಹೂ ಸೇರಿದಂತೆ ಆಕರ್ಷಕ ವರ್ಣಮಯ ಹೂಗಳನ್ನು ಬಳಸಿ ನಿರ್ಮಿಸಲಾಗಿರುವ ಅಶೋಕ ಸ್ತಂಭ ಹೊಂದಿರುವ ವೃತ್ತ ಮಾದರಿ ಪ್ರಮುಖ ಆಕರ್ಷಣೆಯಾಗಿತ್ತು.
ತೋಟಗಾರಿಕೆ ಇಲಾಖೆಯು ಪ್ರತಿ ವರ್ಷ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ವಿಶೇಷ ಫಲ-ಪುಷ್ಪ ಪ್ರದರ್ಶನವನ್ನು ಗವಿಮಠದ ಜಾತ್ರಾ ಆವರಣದಲ್ಲಿ ಆಯೋಜಿಸುತ್ತಿದೆ. ಈ ವರ್ಷ ಆಯೋಜಿಸಿರುವ ಫಲ-ಪುಷ್ಪ ಪ್ರದರ್ಶನ ಸಾರ್ವಜನಿಕರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಸುಮಾರು 100ಅಡಿ ಅಗಲ, 70ಅಡಿ ಉದ್ದ ವಿಸ್ತೀರ್ಣದ ಪ್ರದೇಶದಲ್ಲಿ ಆಯೋಜಿಸಲಾಗಿರುವ ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಅಶೋಕ ಸ್ತಂಭದ ಮಾದರಿಯನ್ನು ಬಿಂಬಿಸಿರುವುದಕ್ಕೆ ವಿಶೇಷ ಅರ್ಥವಿದೆ. ಇಲ್ಲಿನ ಅಶೋಕ ಸ್ತಂಭವನ್ನು 1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿ ವೀರ ಮರಣ ಹೊಂದಿ ಹುತಾತ್ಮರಾದ ಮುಂಡರಗಿ ಭೀಮರಾಯರು, ನಾಡಗೌಡ ಹಮ್ಮಗಿ ಕೆಂಚನಗೌಡರ ದೇಸಾಯಿ ಅವರ ಸ್ಮರಣಾರ್ಥವಾಗಿ ನಿರ್ಮಿಸಿ, ಇಲ್ಲಿಗೆ 60 ವರ್ಷಗಳು ಪೂರ್ಣಗೊಂಡಿದ್ದು, ಅವರ ಗೌರವಾರ್ಥವಾಗಿ ತೋಟಗಾರಿಕೆ ಇಲಾಖೆಯಿಂದ ಅಶೋಕ ಸ್ತಂಭವನ್ನು ಪುಷ್ಪಗಳಿಂದ ಅಲಂಕರಿಸಲಾಗಿದೆ.
ಫಲ-ಪುಷ್ಪ ಪ್ರದರ್ಶನದಲ್ಲಿ ವಿವಿಧ ತರಕಾರಿಗಳ ವಿಶೇಷ ಕೆತ್ತನೆ, ತರಕಾರಿಗಳನ್ನು ಬಳಸಿ ನಿರ್ಮಿಸಲಾಗಿರುವ ಸ್ವಚ್ಛ ಭಾರತ ಅಭಿಯಾನದ ಪ್ರೇರಣೆ, ವರ್ಟಿಕಲ್ ಗಾರ್ಡನ್, ಶಿವಮೊಗ್ಗ ಜಿಲ್ಲೆಯ ಕಲಾವಿದ ಹರೀಶ್ ಅವರ ಕೈಚಳಕದಲ್ಲಿ ರಂಗೋಲಿ ಕಲೆಯಲ್ಲಿ ಮೂಡಿ ಬಂದಿರುವ ಅಭಿನವ ಶ್ರೀ ಗವಿಸಿದ್ದೇಶ್ವರ ಅವರ ಚಿತ್ರ ನಿಜಕ್ಕೂ ಆಕರ್ಷಕವಾಗಿದೆ. ಜೊತೆಗೆ ಕಲ್ಲಂಗಡಿ, ಕುಂಬಳಕಾಯಿಯಲ್ಲಿ ವಿವಿಧ ಮಹನೀಯರ ಭಾವಚಿತ್ರದ ಕೆತ್ತನೆ, ಹೂಗಳನ್ನು ಬಳಸಿ ನಿರ್ಮಿಸಿರುವ ನವಿಲು, ಕೊಕ್ಕರೆ, ಈಶ್ವರ ಲಿಂಗದ ಮಾದರಿಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.
ದೇಶಿ, ವಿದೇಶಿ ಆಕರ್ಷಕ ಹೂಗಳನ್ನು ಪ್ರದರ್ಶನದಲ್ಲಿ ವ್ಯಾಪಕವಾಗಿ ಬಳಸಲಾಗಿದ್ದು, ಆರ್ಕಿಡ್ಸ್, ಪಾಲ್ಮೀಯಾ, ಸಿಲೋಷಿಯಾ, ಜೀರೇನಿಯಂ, ಪಾಂಡಾಸ್, ಫ್ಯಾನ್ಸಿ ಹೆಲಿಕೋನಿಯಾ, ಬರ್ಡ್ ಆಫ್ ಪ್ಯಾರಡೈಸ್, ಡಚ್ ರೋಸ್, ಗ್ಲೇಡಿಯಂ, ಆಂಥೋರಿಯಂ ಮುಂತಾದ ವಿದೇಶಿ ಹೂಗಳಲ್ಲದೆ, ಸುಗಂಧರಾಜ, ಚೆಂಡುಹೂ ನಂತಹ ಹಲವು ಬಗೆಯ ದೇಶೀಯ ಹೂಗಳನ್ನು ಅಲಂಕಾರಿಕ ಪುಷ್ಪ ಪ್ರದರ್ಶನದಲ್ಲಿ ಬಳಸಲಾಗಿದೆ.
ಸಿರಿಧಾನ್ಯ ಸಾವಯವ ಮೇಳ
ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ಧ ಹೊಂದಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಈ ಬಾರಿ ಕೃಷಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿರುವ ಸಿರಿಧಾನ್ಯ ಮೇಳ, ಸಾವಯವ ಮೇಳ ಹಾಗೂ ಜಲದೀಕ್ಷೆ ವಸ್ತು ಪ್ರದರ್ಶನ ರೈತ ಸಮುದಾಯದ ಜೊತೆಗೆ ಸಾರ್ವಜನಿಕರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ನೀರು ಮತ್ತು ಮಣ್ಣನ್ನು ಸಂರಕ್ಷಿಸಿಕೊಂಡು, ಜೀವನ ಉತ್ತಮವಾಗಿಸಿಕೊಳ್ಳುವ ಬಗೆಯನ್ನು ನೀವು ಕಲಿಯಬೇಕಿದ್ದಲ್ಲಿ, ಗವಿಸಿದ್ದೇಶ್ವರ ಜಾತ್ರೆಯ ಆವರಣದಲ್ಲಿ ಕೃಷಿ ಇಲಾಖೆಯು 120 ಅಡಿ ಉದ್ದ ಹಾಗೂ 80 ಅಡಿ ಅಗಲದ ವಿಶಾಲವಾದ ಮೈದಾನದಲ್ಲಿ ಆಯೋಜಿಸಿರುವ ವಿಶೇಷ ವಸ್ತುಪ್ರದರ್ಶನಕ್ಕೆ ಭೇಟಿ ನೀಡಬೇಕು. ವಸ್ತು ಪ್ರದರ್ಶನದ ಮಳಿಗೆಯ ಒಳಗೆ ಪ್ರವೇಶಿಸುತ್ತಿದ್ದಂತೆಯೇ, ನಮ್ಮನ್ನು ಆಕರ್ಷಿಸುವುದು, ಜಲಾನಯನ ಮಾದರಿ, ಇಲ್ಲಿ ಮಳೆ ನೀರನ್ನು ಸಂರಕ್ಷಿಸಿ, ಹೇಗೆ ಒಂದು ಸುಂದರ ನಗರವನ್ನು ನಿರ್ಮಿಸುವುದರ ಜೊತೆಗೆ ಕೃಷಿಗೂ ನೀರನ್ನು ಹಂಚಿಕೊಳ್ಳಲು ಸಾಧ್ಯವೆಂಬುದನ್ನು ಅತ್ಯಂತ ಸುಂದರವಾಗಿ ರೂಪಿಸಲಾಗಿದೆ. ಜಲಾನಯನ ಮಾದರಿಗೆ ನೀರಿನ ಹೊಂಡ, ಮಳೆಯಿಂದ ಬಿದ್ದ ನೀರು ವ್ಯರ್ಥವಾಗದೆ, ಹೇಗೆ ಸದುಪಯೋಗವಾಗುತ್ತದೆ ಎಂಬುದನ್ನು ಅತ್ಯಂತ ಅರ್ಥಗರ್ಭಿತವಾಗಿ ಇಲ್ಲಿ ಪ್ರಸ್ತುತಪಡಿಸಲಾಗಿದೆ.
ವಸ್ತು ಪ್ರದರ್ಶನದಲ್ಲಿ ಸಿರಿಧಾನ್ಯವೆಂದೇ ಪರಿಗಣಿಸಲಾಗಿರುವ ನವ ಧಾನ್ಯಗಳನ್ನು ರಾಶಿಯಾಗಿರಿಸಿ, ಅದರ ಮಧ್ಯದಲ್ಲಿ, ಹಿಂದಿನ ಕಾಲದಲ್ಲಿ ರೈತರು ಕೃಷಿಗಾಗಿ ಬಳಸುತ್ತಿದ್ದ ಪ್ರಾಚೀನ ಕೃಷಿ ಪರಿಕರಗಳನ್ನು ವಸ್ತು ಸಂಗ್ರಹ ರೂಪದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ.
ರಕ್ತದಾನ ಶಿಬಿರ
ನಗರದ ಶ್ರೀಗವಿಮಠದ ಜಾತ್ರಾ ಅಂಗವಾಗಿ ಭಾನುವಾರ ಬೆಳಿಗ್ಗೆ ಶ್ರೀಗವಿಸಿದ್ದೇಶ್ವರ ಆಯುರ್ವೆದ ಮಹಾವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರವು ಚಾಲನೆಗೊಂಡಿತು. ಶ್ರೀ ಹಿರೀಶಾಂತವೀರ ಮಹಸ್ವಾಮಿಗಳು ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು. ಹೆಬ್ಬಾಳ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಇತರರು ಭಾಗವಹಿಸಿದ್ದರು. ಒಂದೇ ದಿನದಲ್ಲಿ ೩೭೧ ಯೂನಿಟ್ ರಕ್ತ ಸಂಗ್ರಹ ವಾಗಿದ್ದು ಮುಂದಿನ ದಿನಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ರಕ್ತ ಸಂಗ್ರಹ ವಾಗುವ ನಿರೀಕ್ಷೆ ಇದೆ ಎಂದು ಎಂದು ರೆಡ್ ಕ್ರಾಸ್ನ ಪ್ರಮುಖರಾದ ಡಾ ಶ್ರೀನಿವಾಸ ಹ್ಯಾಟಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.