ಕೇಂದ್ರ ನೋಟ್ ಬ್ಯಾನ್ ಮಾಡಿದ ಬೆನ್ನಲ್ಲೇ, ಪಶ್ಚಿಮ ಬಂಗಾಲದಲ್ಲಿ ಬ್ಯಾನ್ ರಾಜಕೀಯವೇ ಶುರುವಾಗಿದ್ದು, ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ’ಬ್ಯಾನ್’ ರ್ಜಿ ಎಂದು ಕರೆದರೂ ತಪ್ಪಿಲ್ಲ ಎನಿಸುತ್ತಿದೆ.
ಕಾಳಧನಿಕರು ಹಾಗೂ ಉಗ್ರರಿಗೊಂದು ಗತಿ ಕಾಣಿಸಲು ಪ್ರಧಾನಿ ಮೋದಿ ಕೈಗೊಂಡ ಕ್ರಮ ವಿಶ್ವದಾದ್ಯಂತವೇ ಪ್ರಶಂಸೆಗೊಳಗಾದರೂ, ಮಮತಾ ಬ್ಯಾನರ್ಜಿ ಮಾತ್ರ ಕೇಂದ್ರದ ನಿರ್ಣಯವನ್ನು ವಿರೋಧಿಸುತ್ತ ’ಬ್ಯಾನ್’ ರಾಜಕೀಯ ತಂತ್ರಕ್ಕೆ ಮೊರೆ ಹೋಗಿದ್ದಾರೆ.
ಕಳೆದ ವಾರ ಕೊಲ್ಕತ್ತಾ ಕ್ಲಬ್ನಿಂದ ನಡೆಯಬೇಕಿದ್ದ ಉಪನ್ಯಾಸ ಕಾರ್ಯಕ್ರಮಕ್ಕೆ ನಿರ್ಬಂಧ ಹೇರಿದ್ದೂ ಅಲ್ಲದೇ, ಮೊದಲು ಜಮ್ಮ ಮತ್ತು ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಕೂಡದೆಂದೂ ಭಾಷಣದ ವಿಷಯಕ್ಕೂ ’ಬ್ಯಾನ್’ ಭೂತ ಬಿಟ್ಟಿದ್ದು ಉಲ್ಲೇಖನೀಯ. ಈ ಕಾರ್ಯಕ್ರಮದಲ್ಲಿ ನಿವೃತ್ತ ಮೇ.ಜ. ಭಕ್ಷಿ ಹಾಗೂ ಇತರರು ಭಾಗವಹಿಸುವವರಿದ್ದರು.
ಇದೀಗ ಪ.ಬಂಗಾಲದಲ್ಲಿ ಆರ್ಎಸ್ಎಸ್ ಆಯೋಜಿಸಿದ್ದ ಸಾರ್ವಜನಿಕ ಸಭೆಗೂ ಅನುಮತಿ ನೀಡದ ಪೊಲೀಸ್ ಇಲಾಖೆಯ ನಿರ್ಣಯ ಪರೋಕ್ಷವಾಗಿ ’ಬ್ಯಾನ್’ ರಾಜಕೀಯದ ಮುಂದುವರಿದ ಭಾಗ ಎನ್ನಬಹುದು. ಜ.14 ರಂದು ನಿಗದಿಪಡಿಸಿದ ಬೃಹತ್ ರ್ಯಾಲಿಯಲ್ಲಿ ಆರ್ಎಸ್ಎಸ್ನ ಪ್ರಮುಖ ಮೋಹನ್ ಭಾಗ್ವತ್ಜಿ ಅವರು ಪಾಲ್ಗೊಳ್ಳುವವರಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಆರ್.ಎಸ್.ಎಸ್ ನ್ಯಾಯಾಲಯದ ಬಾಗಿಲು ಬಡಿಯುವದಾಗಿ ಹೇಳಿದ್ದು ಬೇರೆ ಮಾತು.
ಮಮತಾ ಅವರ ’ಬ್ಯಾನ್’ ರಾಜಕಾರಣ ಇಲ್ಲಿಗೇ ಮುಗಿಯುವುದಿಲ್ಲ. ಬಂಗಾಳಿ ಭಾಷೆಯ ಪಠ್ಯ ಪುಸ್ತಕದಲ್ಲಿನ ’ರಾಮಧೇನು’ (ರಾಮನ ಬಿಲ್ಲು) ಪದಕ್ಕೆ ಬದಲಿಗೆ ’ರೊಂಗಧೇನು’ (ಬಣ್ಣದ ಬಿಲ್ಲು) ಎಂದು ಪಶ್ಚಿಮ ಬಂಗಾಳ ಪ್ರೌಢ ಶಿಕ್ಷಣ ಮಂಡಳಿ ಬದಲಾಯಿಸಿದೆ. ಪಾಪ ’ರಾಮಧೇನು’ ಪದಕ್ಕೂ ಮಮತಾ ಸರ್ಕಾರದ ’ಬ್ಯಾನ್’ ಬಿಸಿ ತಟ್ಟಿದೆ ಎನ್ನಬಹುದು.
ಪ.ಬಂಗಾಳದಲ್ಲಿ ಬಿಜೆಪಿ, ಆರ್ಎಸ್ಎಸ್ ಕಾರ್ಯಕರ್ತರು ಹಾಗೂ ಹಿಂದುಗಳ ವಿರುದ್ಧ ಕತ್ತಿ ಮಸೆಯುತ್ತ ಕೀಳು ರಾಜಕೀಯದಲ್ಲಿ ತೊಡಗಿರುವ ಮಮತಾ ಅವರದ್ದು ಮತಬ್ಯಾಂಕ್ ರಾಜಕಾರಣ ಎನ್ನುವುದು ಪಕ್ಕಾ. ಆದರೆ, ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದಂತೆ ರಾಷ್ಟ್ರಪತಿ ಆಳ್ವಿಕೆಗೆ ಕೇಂದ್ರ ಮುಂದಾದರೆ ಬಹುಶಃ ಮಮತಾ ಸರ್ಕಾರವೇ ’ಬ್ಯಾನ್’ ಆಗಿ ತಿರುಗುಬಾಣವಾದರೂ ಆಶ್ಚರ್ಯವಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.