ಧಾರವಾಡ: ಮಹಾದಾಯಿ ಹೋರಾಟಗಾರರ ಮೇಲಿನ ಪ್ರಕರಣ ವಾಪಸ್ ಪಡೆಯುವ ಕುರಿತು ಹಾಗೂ ಮುಂದಿನ ರೂಪರೇಷೆ ಸಿದ್ಧಪಡಿಸಲು ಜ.16ರಂದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಎಪಿಎಂಸಿ ಪ್ರಾಂಗಣದಲ್ಲಿ ಹೋರಾಟಗಾರರ ಪ್ರಮುಖರ ಸಭೆ ಕರೆಯಲಾಗಿದೆ ಎಂದು ರೈತ ಸೇನಾ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ಕಾನೂನು ತಜ್ಞರು ಕೂಡ ಭಾಗವಹಿಸಲಿದ್ದು, ರೈತರ ಮೇಲಿನ ಪ್ರಕರಣಗಳ ಬಗ್ಗೆ ನ್ಯಾಯಾಂಗ ಹೋರಾಟ ಮಾಡಲಾಗುವುದು. ಮಾರ್ಚ್ 15 ರೊಳಗೆ ಕೇಸ್ ವಾಪಾಸ್ ಪಡೆಯದಿದ್ದಲ್ಲಿ ದೆಹಲಿ ಚಲೋ ನಡೆಸಿ ಸಂಸತ್ ಭವನದ ಎದುರಿಗೆ ಧರಣಿ ನಡೆಸುವುದಾಗಿ ತಿಳಿಸಿದರು.
ಮಹಾದಾಯಿ-ಕಳಸಾ ಬಂಡೂರಿ ಹೋರಾಟ ನಿರಂತರವಾಗಿದೆ. ಹೋರಾಟ 545 ದಿನಗಳು ಕಳೆದರೂ, ಯೋಜನೆ ಅನುಷ್ಠಾನದಲ್ಲಿ ಮಾತ್ರ ಆಳುವಂತ ಸರ್ಕಾರಗಳು ಮೀನಾಮೇಷ ಎಣಿಸುವ ಮೂಲಕ ರಾಜಕೀಯ ಕೆಸರು ಎರೆಚಾಟದಲ್ಲಿ ತೊಡಗಿಕೊಂಡಿವೆ. ಇದೀಗ ಹೋರಾಟಗಾರರಿಗೆ ಗಡಿಪಾರು ಎಂಬ ಭಯದ ಹುನ್ನಾರು ನಡೆಸಿದ್ದಾರೆ ಎಂದರು.
ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ನಮ್ಮ ವೈರಿಗಳಲ್ಲ. ಆದರೆ, ವ್ಯವಸ್ಥೆಯಲ್ಲಿ ಈ ರಾಜಕೀಯ ಪಕ್ಷಗಳು ಹೋರಾಟದ ಲಾಭ ಪಡೆಯುತ್ತಿವೆ. ಇದು ತುಂಬಾ ನೋವು ತರಿಸಿದೆ. ಈ ವಿಷಯ ಜೀವಂತವಾಗಿರಿಸಿ ರಾಜಕೀಯ ಮಾಡುವ ಹುನ್ನಾರು ನಡೆಸಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಇದೀಗ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಗಡಿಪಾರು ಷಡ್ಯಂತ್ರ ಹೂಡಿವೆ. ಹೋರಾಟಕ್ಕೆ ಧುಮ್ಮುಕುವ ಯುವಕರಲ್ಲಿ ಭಯದ ವಾತಾವರಣ ಸೃಷ್ಠಿಸುತ್ತಿವೆ. ರಾಜ್ಯದ ಆಡಳಿತದ ವೈಫಲ್ಯದ ವಿರುದ್ಧ ಹೋರಾಟ, ಕೇಂದ್ರ-ರಾಜ್ಯ ಸರ್ಕಾರಗಳಿಗೆ ಬಿಸಿ ಮುಟ್ಟಿಸಲು ಯತ್ನಿಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸೇನಾ ರಾಜ್ಯ ಉಪಾಧ್ಯಕ್ಷ ಶಂಕರಪ್ಪ ಅಂಬಲಿ, ಮಹಾದಾಯಿ ಹೋರಾಟದ ಮುಖಂಡರಾದ ಸಲೀಂಸಂಗನ ಮುಲ್ಲಾ, ಬಶೀರ ಬ್ಯಾಹಟ್ಟಿ, ಬಾಲಚಂದ್ರ ಸುರಪೂರ ಅನೇಕರು ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.