ದೆಹಲಿಯ ನಿರ್ಭಯ ಎಂಬ ಅಮಾಯಕಳ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಬಳಿಕ ಅಂತಹ ಹಲವಾರು ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಬೆಂಗಳೂರಿನಲ್ಲಿ ಡಿ. 31 ರ ರಾತ್ರಿ ಹೊಸವರ್ಷದ ಸ್ವಾಗತ ಸಂಭ್ರಮದ ವೇಳೆ ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ ಪ್ರಕರಣ ತಡವಾಗಿ ಬೆಳಕಿಗೆ ಬಂದು, ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಅನಂತರ ಮೊನ್ನೆ ಶುಕ್ರವಾರ ಕೂಡ ಬೆಂಗಳೂರಿನ ಕೆ.ಜಿ.ಹಳ್ಳಿ ಎಂಬಲ್ಲಿ ಅಂಥದ್ದೇ ಇನ್ನೊಂದು ಪ್ರಕರಣ ನಡೆದಿದೆ. ಬೆಳ್ಳಂಬೆಳಗ್ಗೆ 6.30ರ ವೇಳೆಗೆ ಕಚೇರಿಗೆ ಹೊರಟಿದ್ದ ಯುವತಿಯ ಮೇಲೆ ದುಷ್ಕರ್ಮಿಯೊಬ್ಬ ಲೈಂಗಿಕ ದೌರ್ಜನ್ಯ ನಡೆಸಿದ್ದ. ಈ ಎರಡು ಘಟನೆಗಳನ್ನು ಕೆಲವು ಟಿವಿ ವಾಹಿನಿಗಳು ದಿನವಿಡೀ ಬಿತ್ತರಿಸಿದ ಪರಿಣಾಮ ಇಡೀ ಬೆಂಗಳೂರಿನಲ್ಲಿ ಅಂತಹ ಕೆಟ್ಟ ವಾತಾವರಣವಿದೆ, ಬೆಂಗಳೂರು ಮಹಿಳೆಯರಿಗೆ ಸುರಕ್ಷಿತವಲ್ಲವೇನೋ ಎಂಬಷ್ಟರ ಮಟ್ಟಿಗೆ ಕೆಟ್ಟ ಸಂದೇಶಗಳು ರವಾನೆಯಾಗಿವೆ. ನಂತರ ಕೆ. ಜಿ. ಹಳ್ಳಿ ಘಟನೆ ತಿರುವು ಪಡೆದಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಆಗಿದ್ದು ಒಂದೆರಡು ಘಟನೆ. ಒಂದು ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ತನ್ನೊಡಲಲ್ಲಿ ಹುದುಗಿಸಿಕೊಂಡಿರುವ ಬೆಂಗಳೂರಿನಲ್ಲಿ ಇಂತಹ ಒಂದೆರಡು ಘಟನೆಗಳು ನಡೆಯುವುದು ಅಸಹಜವೇನಲ್ಲ ಎಂದು ವ್ಯಾಖ್ಯಾನಿಸಬಹುದಾದರೂ ಇಂತಹ ಘಟನೆಗಳು ಖಂಡಿತ ನಡೆಯಬಾರದೆಂಬುದು ಮಾತ್ರ ಪ್ರಜ್ಞಾವಂತರೆಲ್ಲರ ಹಂಬಲ.
ಸಿಲಿಕಾನ್ ಸಿಟಿ ಎಂಬ ಕಾರಣಕ್ಕೆ ಬೇರೆಲ್ಲ ಕಡೆಗಳಿಗಿಂತ ಹೆಚ್ಚು ಪ್ರಮಾಣದ ಮಹಿಳಾ ಉದ್ಯೋಗಿಗಳು ಬೆಂಗಳೂರಿನಲ್ಲಿರುವುದು ದೌರ್ಜನ್ಯ ಪ್ರಕರಣಗಳಿಗೆ ಮಹತ್ವ ಬಂದಿದೆ. ಒಂಟಿ ಮಹಿಳೆಯ ಮೇಲೆ ಈ ತರಹದ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದು ಹೊಸದೇನೂ ಅಲ್ಲ. ಪ್ರತಿನಿತ್ಯವೂ ಅಲ್ಲೊಂದು ಇಲ್ಲೊಂದು ಇಂತಹ ಪ್ರಕರಣಗಳು ಬೆಂಗಳೂರಿನಲ್ಲಿ ನಡೆಯುತ್ತಲೇ ಇರುತ್ತದೆ. ಆದರೆ ಮಾನಕ್ಕಂಜಿ ದೂರು ಕೊಡಲು ಸಾಧ್ಯವಾಗದೆ ಅದೆಷ್ಟೋ ಪ್ರಕರಣಗಳು ಕಣ್ಮುಚ್ಚಿವೆ.
ಡಿ.31ರ ರಾತ್ರಿ ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ನಡೆದ ಪ್ರಕರಣವೂ ಇದೇ ರೀತಿ ಬೆಳಕಿಗೆ ಬಾರದೇ ಹೋಗುವ ಸಾಧ್ಯತೆಯಿತ್ತು. ಆದರೆ ಘಟನೆ ನಡೆದ ಸಮೀಪದಲ್ಲಿದ್ದ ಹೊಟೇಲ್ ಒಂದರ ಮಾಲೀಕನ ಮಹಿಳಾಪರ ಕಾಳಜಿ, ಧೈರ್ಯದಿಂದಾಗಿ ಪ್ರಕರಣ ಬಯಲಾಗಿದೆ. ಪೊಲೀಸರಿಗೆ ಈ ಪ್ರಕರಣ ಗೊತ್ತಾಗಿದ್ದು ಮಾಧ್ಯಮಗಳ ಮೂಲಕ. ರಾಜ್ಯ ಸರ್ಕಾರಕ್ಕೆ ಗೊತ್ತಾಗಿದ್ದೂ ಆವಾಗಲೇ. ಮಹಿಳಾ ದೌರ್ಜನ್ಯದ ಪ್ರತಿಯೊಂದು ಪ್ರಕರಣವೂ ಪೊಲೀಸರ ಗಮನಕ್ಕೆ ಬಂದೇ ಬರುತ್ತದೆ ಎಂದೇನಿಲ್ಲ. ಅದು ಸಾಧ್ಯವೂ ಇಲ್ಲ. ಬೆಂಗಳೂರಿನಲ್ಲಿರುವ ಪ್ರತಿಯೊಬ್ಬ ಯುವತಿಗೂ ಪೊಲೀಸ್ ರಕ್ಷಣೆ ಒದಗಿಸಲು ಸಾಧ್ಯವಿಲ್ಲ ಅಥವಾ ಅಹೋರಾತ್ರಿ ಬೆಂಗಳೂರಿನಂತಹ ಬೃಹತ್ ನಗರದ ಪ್ರತಿಯೊಂದು ರಸ್ತೆಯಲ್ಲೂ ಪೊಲೀಸರು ಕಾವಲು ಕಾಯೋದು ಕೂಡ ಸಾಧ್ಯವಾಗದ ಕೆಲಸ. ಮಹಿಳೆಯರ ರಕ್ಷಣೆ ಹಾಗಿರಲಿ, ಸಂಜೆ 7ರ ಬಳಿಕ ಹಲವು ಪ್ರದೇಶಗಳಲ್ಲಿ ಸುಗಮ ಸಂಚಾರ ವ್ಯವಸ್ಥೆ ನಿರ್ವಹಿಸುವುದಕ್ಕೂ ಪೊಲೀಸರ ಕೊರತೆ ಇದೆ.
ಮಹಿಳಾ ದೌರ್ಜನ್ಯ ಗಮನಕ್ಕೆ ಬಂದಾಗ ರಾಜ್ಯ ಗೃಹ ಸಚಿವ ಪರಮೇಶ್ವರ್ ಅವರು ಹಿಂದೆಮುಂದೆ ಯೋಚಿಸದೆ ನೀಡಿದ ಹೇಳಿಕೆ ಮಾತ್ರ ಅತ್ಯಂತ ಬಾಲಿಶ. ಮಹಿಳೆಯರು ಪಾಶ್ಚಾತ್ಯ ರೀತಿಯ ಉಡುಗೆ ತೊಡುವುದೇ ಅವರ ಮೇಲಿನ ಲೈಂಗಿಕ ದೌರ್ಜನ್ಯಗಳಿಗೆ ಕಾರಣ ಎಂದು ಗೃಹ ಸಚಿವರು ಹೇಳಿಕೆ ನೀಡಬಾರದಿತ್ತು. ಪುರುಷರ ಕಾಮುಕತೆಗೆ ಉಡುಗೆಯೊಂದೇ ಕಾರಣವಾಗುವುದಿಲ್ಲ. ಕುಡಿತ, ಮಾನಸಿಕ ವಿಕೃತಿ ಮತ್ತಿತರ ಸಂಗತಿಗಳೂ ಇದರ ಹಿನ್ನಲೆಯಲ್ಲಿರುತ್ತವೆ ಎಂಬುದನ್ನು ಮರೆತರೆ ಹೇಗೆ?
ಯಾವುದೇ ಅಡೆತಡೆಯಿಲ್ಲದೆ ಯದ್ವಾತದ್ವಾ ಬೆಳೆಯುತ್ತಿರುವ, ದಿನೇದಿನೇ ವಲಸಿಗರ ಸಂಖ್ಯೆ ಹೆಚ್ಚುತ್ತಿರುವ ಬೆಂಗಳೂರು ಈಗ ತನ್ನ ಮೂಲಗುಣ ಉಳಿಸಿಕೊಂಡಿಲ್ಲ. ಹಿರಿಯರಿಗೆ, ಮಹಿಳೆಯರಿಗೆ ಗೌರವ, ಎಲ್ಲರೊಡನೆ ಪ್ರೀತಿ ವಿಶ್ವಾಸ, ನಂಬಿಕೆ, ಅನ್ಯಾಯ ಮಾಡಬಾರದೆಂಬ ಕಾಳಜಿ ಇತ್ಯಾದಿ ಗುಣಗಳನ್ನು ಈಗ ಕಾಣಲು ಸಾಧ್ಯವೇ ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಾಗತೀಕರಣದ ಐಲುಗಳು ಒಂದಿಷ್ಟು ಸ್ವೇಚ್ಛಾಚಾರಗಳನ್ನು ಸೃಷ್ಟಿಸಿದ್ದು ಇಂತಹ ದೌರ್ಜನ್ಯಗಳಿಗೆ ಕಾರಣವೆಂಬುದು ಕೆಲವರ ವ್ಯಾಖ್ಯಾನ. ದುಷ್ಟತನಗಳಿಗೆ ಯಾವುದೇ ಗಡಿಯ ಹಂಗುಗಳಿರುವುದಿಲ್ಲ ಎಂಬುದೂ ಅಷ್ಟೇ ನಿಜ.
ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಕೂಡಲೇ ಮೊದಲು ಅದಕ್ಕೆ ಹೊಣೆಗಾರರಾಗುವುದು ಆ ಘಟನೆಯನ್ನು ತಡೆಯಲಾಗದ ಪೊಲೀಸರು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಾಮಾಜಿಕ ಸ್ವಾಸ್ಥ್ಯ, ಶಿಸ್ತು ಶಾಂತಿ ಕಾಪಾಡಬೇಕಾದ ಹೊಣೆಗಾರಿಕೆ ಪೊಲೀಸರz ಆಗಿರುವುದರಿಂದ ಇದು ಸಹಜವೇ. ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರದಂಥ ಪ್ರಕರಣಗಳು ಸಾಮಾಜಿಕ ಸ್ವಾಸ್ಥ್ಯ ಹದಗೆಡಿಸುವಂತಹ ಸೂಕ್ಷ್ಮ ವಿಚಾರಗಳು. ಹಾಗಾಗಿ ಅವು ನಿರ್ದಿಷ್ಟ ಪರಿಧಿಯೊಳಗೇ ವಿಶ್ಲೇಷಣೆಗೆ ಎಟಕುವುದಿಲ್ಲ. ಬೆಂಗಳೂರಿನಲ್ಲಿ ಪೊಲೀಸರಿದ್ದಾರೆ ಎಂಬ ಖಡಕ್ ಸಂದೇಶ ರವಾನೆಯಾದರೆ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಮುಕ್ತಿ ಸಿಗಬಹುದು. ಆದರೆ ಸದ್ಯ ಅದರz ಕೊರತೆ! ಪೊಲೀಸರಿದ್ದರೂ ಪೊಲೀಸರಿಲ್ಲದ ಸ್ಥಿತಿ ಬೆಂಗಳೂರಿನದು. ಪೊಲೀಸರ ಕಣ್ಮುಂದೆ ದೌರ್ಜನ್ಯ ಪ್ರಕರಣಗಳು ನಡೆದರೂ ಅದನ್ನು ತಡೆಯಬೇಕೆಂಬ ಇಚ್ಛಾಶಕ್ತಿ ಹಾಗೂ ಕರ್ತವ್ಯಪ್ರಜ್ಞೆ ಕೆಲವೊಮ್ಮೆ ಪೊಲೀಸರಲ್ಲಿ ಕಂಡುಬರುವುದಿಲ್ಲ. ಹಿಂದಿನಂತೆ ಈಗ ಜನರಿಗೆ ಭದ್ರತೆ ಒದಗಿಸುವುದು, ಕಾನೂನು ಸುವ್ಯವಸ್ಥೆ ಕಾಪಾಡುವುದು ಕಷ್ಟದ ಕೆಲಸವೇನಲ್ಲ. ಆಧುನಿಕ ತಂತ್ರಜ್ಞಾನಗಳು ಪೊಲೀಸರ ನೆರವಿಗಿದೆ. ಬಹುತೇಕ ಕಡೆ ಸಿಸಿ ಕ್ಯಾಮೆರಾಗಳಿವೆ. ಆರೋಪಿಗಳ ಚಲನವಲನಗಳ ಮೇಲೆ ನಿಗಾ ಇಡಲು ಮೊಬೈಲ್ ನೆಟ್ವರ್ಕ್ಗಳಿವೆ. ಘಟನೆ ನಡೆದ ಪ್ರದೇಶದ ಆಜುಬಾಜಿನಲ್ಲಿ ರಿಂಗ್ ಆದ ಮೊಬೈಲ್ಗಳ ನೆಟ್ವರ್ಕ್ ಎಳೆಹಿಡಿದು ಅಪರಾಧ ಪ್ರಕರಣಗಳನ್ನು ಸುಲಭವಾಗಿ ಈಗ ಪತ್ತೆ ಹಚ್ಚಬಹುದು. ಸಂಶಯದ ಮೇಲೆ ಬಂಧಿತರಾದ ಆರೋಪಿಗಳು ಬಾಯಿಬಿಡುವ ಮುನ್ನವೇ ಅವರ ಮೊಬೈಲ್ಗಳು ನಿಜ ಸಂಗತಿಗೆ ಸಂಬಂಧಿಸಿದ ದಾಖಲೆಗಳನ್ನು ಬಿಚ್ಚಿಟ್ಟಿರುತ್ತವೆ. ಕಮ್ಮನಹಳ್ಳಿಯಲ್ಲಿ ಆರೋಪಿಗಳನ್ನು ಪೊಲೀಸರು ಇಷ್ಟು ಶೀಘ್ರವಾಗಿ ಬಂಧಿಸಿದ್ದು ಇದೇ ಆಧುನಿಕ ತಂತ್ರಜ್ಞಾನದ ನೆರವಿನಿಂದ.
ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿದ ಬಳಿಕ, ಅವರಿಗೆ ಶಿಕ್ಷೆ ಆಗಿಯೇ ತೀರುತ್ತದೆ ಎಂಬುದಕ್ಕೆ ಖಾತ್ರಿಯೇನಿಲ್ಲ. ಏಕೆಂದರೆ ಇಂತಹ ಪ್ರಕರಣಗಳಲ್ಲಿ ಸಂತ್ರಸ್ತೆಯು ಠಾಣೆ ಹಾಗೂ ಕೋರ್ಟ್ ಮೆಟ್ಟಿಲು ಹತ್ತಿ ಆರೋಪಿಗಳನ್ನು ಗುರುತಿಸಬೇಕು. ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದವರು ಇದೇ ಖದೀಮರೇ ಎಂದು ಹೇಳುವ ಧೈರ್ಯವನ್ನು ತೋರಬೇಕು. ಅದೆಷ್ಟು ಮಂದಿ ಸಂತ್ರಸ್ತೆಯರು ಇಂತಹ ಧೈರ್ಯ ಪ್ರದರ್ಶಿಸುತ್ತಾರೆ ಎಂಬುದರ ಮೇಲೆ ಆರೋಪಿಗಳಿಗೆ ಶಿಕ್ಷೆ ನಿರ್ಧಾರವಾಗುತ್ತದೆ. ಆದರೆ ಬಹುತೇಕ ಪ್ರಕರಣಗಳಲ್ಲಿ ಸಂತ್ರಸ್ತೆಯರು ಮರ್ಯಾದೆ, ಮನೆತನದ ಮಾನಕ್ಕಂಜಿ ಠಾಣೆ ಹಾಗೂ ಕೋರ್ಟ್ ಮೆಟ್ಟಿಲು ಹತ್ತುವ ಧೈರ್ಯ ಮಾಡುತ್ತಿಲ್ಲ. ಡಿ.31ರ ರಾತ್ರಿ ಲೈಂಗಿಕ ದೌರ್ಜನ್ಯಕ್ಕೀಡಾದ ನಾಗಾಲ್ಯಾಂಡ್ ಮೂಲದ ಯುವತಿ ತನ್ನ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆಂದು ದೂರು ನೀಡುವುದಕ್ಕೆ ಹಿಂಜರಿದಿದ್ದಾಳೆ. ಮರಳಿ ಊರಿಗೆ ಹೋಗುವುದಾಗಿ ಹೇಳಿದ್ದಾಳೆ. ಇದರ ಪರಿಣಾಮವಾಗಿ ಆಕೆಯ ಮೇಲೆ ದೌರ್ಜನ್ಯ ಎಸಗಿದ ಆರೋಪಿಗಳಿಗೆ ಶಿಕ್ಷೆಯಾಗುವ ಸಾಧ್ಯತೆ ತೀರಾ ಕಡಿಮೆ.
ಲೈಂಗಿಕ ದೌರ್ಜನ್ಯಕ್ಕೆ ಬಹುದೊಡ್ಡ ಇತಿಹಾಸವೇ ಇದೆ. ಮಹಾಭಾರತ ನಡೆದ ದ್ವಾಪರಯುಗದಲ್ಲಿ ದ್ರೌಪದಿಯ ಮೇಲೆ ದುಶ್ಯಾಸನ ತುಂಬಿದ ಸಭೆಯಲ್ಲೇ ಲೈಂಗಿಕ ದೌರ್ಜನ್ಯ ನಡೆಸಲು ಮುಂದಾಗಿದ್ದ. ಜೂಜಿನಲ್ಲಿ ಸೋತ ಪಾಂಡವರು ಅಸಹಾಯಕರಾಗಿ ಕುಳಿತು ಆ ದೃಶ್ಯಕ್ಕೆ ಸಾಕ್ಷಿಯಾಗಿದ್ದರು. ಆಗ ಕೃಷ್ಣ ಪರಮಾತ್ಮನೇ ಅಕ್ಷಯ ವಸ್ತ್ರ ಕರುಣಿಸಿ ದ್ರೌಪದಿಯ ಮಾನವನ್ನು ಕಾಪಾಡಬೇಕಾಯಿತು. ಅದು ದ್ವಾಪರಯುಗ. ಕಲಿಯುಗದಲ್ಲಿ ಮಾತ್ರ ಯಾವ ಕೃಷ್ಣ ಪರಮಾತ್ಮನೂ ಮಹಿಳೆಯರನ್ನು ರಕ್ಷಿಸಲು ಧಾವಿಸಿ ಬರಲಾರ. ಪೊಲೀಸರೇ ಬರುವ ಸಾಧ್ಯತೆ ಇಲ್ಲದಿರುವಾಗ ಇನ್ನು ಕೃಷ್ಣ ಪರಮಾತ್ಮ ಎಲ್ಲಿಂದ ಬರಬೇಕು? ಹಾಗಿದ್ದರೆ ಮಹಿಳೆಯರನ್ನು ರಕ್ಷಿಸುವ ಹೊಣೆ ಯಾರದ್ದು? 2013 ರ ಮಾರ್ಚ್ ತಿಂಗಳಲ್ಲಿ ಕೇರಳದಲ್ಲಿ ನಡೆದ 2 ಘಟನೆಗಳು ಈ ಪ್ರಶ್ನೆಗೆ ಸೂಕ್ತ ಉತ್ತರ ನೀಡಿವೆ. ತಿರುವಂತನಪುರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಪೊಲೀಸ್ ರಾಜ್ಯ ತರಬೇತುದಾರ ಡಾ. ರಜಿತ್ ಕುಮಾರ್ ಅಂದು ಮಹಿಳಾ ಸಂಕುಲದ ಗೌರವಕ್ಕೆ ಹಾನಿ ತರುವಂತೆ ಅಸಭ್ಯವಾಗಿ ಮಾತನಾಡಿದ್ದರು. ಅದನ್ನು ಅದೇ ಸಭೆಯಲ್ಲಿದ್ದ ಆರ್ಯ ಎಂಬ ವಿದ್ಯಾರ್ಥಿನಿ ಬಲವಾಗಿ ಖಂಡಿಸಿದ್ದಳು. ಅಮೃತಾ ಮೋಹನ್ ಎಂಬ ವಿದ್ಯಾರ್ಥಿನಿ ರೆಸ್ಟೋರೆಂಟ್ನಲ್ಲಿ ಊಟ ಮಾಡುತ್ತಿರುವ ವೇಳೆ ಪಾನಮತ್ತರಾಗಿದ್ದ ಮೂವರು ಸರ್ಕಾರಿ ನೌಕರರು ಲೈಂಗಿಕ ಕಿರುಕುಳ ನೀಡಿದ್ದರು. ಆ ಪಾನಮತ್ತರ ಅಸಭ್ಯ ವರ್ತನೆ ಮಿತಿಮೀರಿದಾಗ ಅಮೃತಾಳ ಸಹನೆಯ ಕಟ್ಟೆಯೊಡೆದಿತ್ತು. ಕುಳಿತಲ್ಲಿಂದ ಎದ್ದವಳೇ ಆ ಮೂವರ ಕಪಾಳಕ್ಕೆ ಬಿಗಿದಿದ್ದಳು. ಈ ಎರಡು ಘಟನೆಗಳು ಕೇರಳದ ಟಿವಿ ವಾಹಿನಿಗಳಲ್ಲಿ ಭಾರಿ ಪ್ರಚಾರ ಪಡೆದು ಎಲ್ಲರೂ ಆರ್ಯ ಮತ್ತು ಅಮೃತಾಳ ದಿಟ್ಟತನವನ್ನು ಕೊಂಡಾಡಿದ್ದರು. ಕೇರಳದ ವಿದ್ಯಾರ್ಥಿನಿಯರಂತೂ ಆರ್ಯ ಮತ್ತು ಅಮೃತಾಳನ್ನು ತಮ್ಮ ರೋಲ್ ಮಾಡೆಲ್ ಎಂದೇ ಭಾವಿಸಿದ್ದರು.
ಮಹಿಳೆಯರು ತಾವು ಅಬಲೆಯರು ಎಂದು ಕೈಕಟ್ಟಿ ಕೂರುವ ಕಾಲ ಇದಲ್ಲ. ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದವರ ವಿರುದ್ಧ ಸೆಟೆದು ನಿಲ್ಲಬೇಕಾದ ಸನ್ನಿವೇಶ ಇದು. ಪೊಲೀಸರು, ಸರ್ಕಾರ ತಮ್ಮ ನೆರವಿಗೆ ಬರಬೇಕೆಂದು ನಿರೀಕ್ಷಿಸುತ್ತಿದ್ದರೆ ಇಂತಹ ಪ್ರಕರಣಗಳಿಗೆ ಅಂತ್ಯವೇ ಇರುವುದಿಲ್ಲ. ಕಾಮುಕರಿಗೆ ತಕ್ಕ ಪಾಠ ಕಲಿಸುವ ದಿಟ್ಟತನ ದೌರ್ಜನ್ಯಕ್ಕೀಡಾಗುವ ಪ್ರತಿ ಮಹಿಳೆಯಿಂದಲೂ ವ್ಯಕ್ತವಾಗಬೇಕು. ದೌರ್ಜನ್ಯಕ್ಕೀಡಾಗುವ ಮಹಿಳೆಯರಲ್ಲಿ ಝಾನ್ಸಿರಾಣಿ, ಕಿತ್ತೂರು ಚನ್ನಮ್ಮ, ಒನಕೆ ಓಬವ್ವರಂತಹ ಧೀರೆಯರು ಆವಾಹನೆಯಾಗಬೇಕು. ಆಗ ಮಾತ್ರ ಲೈಂಗಿಕ ದೌರ್ಜನ್ಯಗಳಿಗೊಂದು ತಾರ್ಕಿಕ ಅಂತ್ಯ ಹಾಡಬಹುದೇನೋ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.