ನವದೆಹಲಿ: ಬಡವರ ಜೀವನದ ಗುಣಮಟ್ಟದ ಸುಧಾರಣೆಗೆ ನಾವು ಬದ್ಧರಾಗಿದ್ದೇವೆ. ಅದು ನಮ್ಮ ಆದ್ಯತೆಯಾಗಿದೆ. ನೋಟು ನಿಷೇಧ ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧದ ದೀರ್ಘಕಾಲೀನ ಪರಿಹಾರ ಕ್ರಮಗಳ ಭಾಗವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತೀಯ ಜನತಾ ಪಕ್ಷದ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಶನಿವಾರ ಮಾತನಾಡಿದ ಪ್ರಧಾನಿ ಮೋದಿ ಅವರು, 2016ರ ಸಾಲಿನಲ್ಲಿ ಆದ ಪಕ್ಷದ ಸಾಧನೆಗಳಿಗೆ ಕಾರ್ಯಕರ್ತರನ್ನು ಪ್ರಶಂಸಿಸಿದರು ಹಾಗೂ ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಸಂಪೂರ್ಣವಾಗಿ ಸಿದ್ಧರಾಗುವಂತೆ ಆಗ್ರಹಿಸಿದರು.
ಪಕ್ಷದ ಕಾರ್ಯಕರ್ತರು ತಮ್ಮ ಸಂಘಟನಾ ಶಕ್ತಿಯಿಂದ ಬಡವರ ಮನಸ್ಸನ್ನು ಗೆಲ್ಲಬೇಕು. ಜನರ ಸೇವೆ ಮಾಡುವುದು ದೇವರ ಸೇವೆ ಮಾಡಿದಂತೆ ಎಂದು ಅವರು ಹೇಳಿದ್ದಾರೆ.
ಪಕ್ಷದ ರಾಜಕೀಯ ನಿಧಿ ಬಳಕೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವಂತೆ ಕರೆ ನೀಡಿದ ಪ್ರಧಾನಿ ಮೋದಿ ಅವರು ಬಿಜೆಪಿ ಪಕ್ಷ ಪಾರದರ್ಶಕತೆಯನ್ನು ದೃಢವಾಗಿ ಬೆಂಬಲಿಸುತ್ತದೆ ಎಂದು ಹೇಳಿರುವುದಾಗಿ ಕಾರ್ಯಕಾರಿಣಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ರಾಜಕೀಯ ಪ್ರಕ್ರಿಯೆಗಳಲ್ಲಿ ವಿಶೇಷವಾಗಿ ರಾಜಕೀಯ ನಿಧಿ ಬಳಕೆಯಲ್ಲಿ ಗಮನಾರ್ಹವಾಗಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವಂತೆ ತಿಳಿಸಿದ್ದಾರೆ. ಕೆಲವು ವ್ಯಕ್ತಿಗಳು ಜೀವನಶೈಲಿ ಬಗ್ಗೆ ಚಿಂತಿಸುತ್ತಾರೆ. ಆದರೆ ಬಡ ಜನರು ಮತ್ತು ಕೆಳವರ್ಗದ ಜನರ ಜೀವನದ ಗುಣಮಟ್ಟವನ್ನು ಸುಧಾರಿಸಿ ಅವನ್ನು ಉತ್ತೇಜಿಸುವುದು ಪಕ್ಷದ ಪ್ರಮುಖ ಆದ್ಯತೆಯಾಗಿದೆ ಎಂದು ಪ್ರಧಾನಿ ಮೋದಿ ಅವರು ಹೇಳಿರುವುದಾಗಿ ರವಿಶಂಕರ್ ಪ್ರಸಾದ್ ಅವರು ತಿಳಿಸಿದ್ದಾರೆ.
ಹಲವಾರು ಸಮಸ್ಯೆಗಳನ್ನು ಎದುರಿಸಿದ ಹೊರತಾಗಿ ಕೇಂದ್ರ ಸರ್ಕಾರದ ಮನವಿಗೆ ಉತ್ತಮ ಪ್ರತಿಕ್ರಿಯೆ ನೀಡಿದ ಬಡವರ ಅಂತಃಸತ್ವ (ಆಂತರಿಕ ಶಕ್ತಿ)ಕ್ಕೆ ಮೋದಿ ಸೆಲ್ಯೂಟ್ ಮಾಡಿದ್ದಾರೆ ಎಂದು ಪ್ರಸಾದ್ ಹೇಳಿದ್ದಾರೆ.
ಇದೇ ವೇಳೆ ಸಭೆಯಲ್ಲಿ ಪಕ್ಷದ ಸದಸ್ಯರು ಪ್ರಧಾನಿ ಮೋದಿ ಅವರ ನೋಟು ನಿಷೇಧದ ನಡೆ ಹಾಗೂ ಪಾಕಿಸ್ಥಾನ ವಿರುದ್ಧದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮತ್ತು ಇದೊಂದು ದೊಡ್ಡ ಯಶಸ್ಸು ಎಂದು ಹೇಳಿದ್ದಾರೆ ಎಂದು ಪ್ರಸಾದ್ ತಿಳಿಸಿದ್ದಾರೆ.
ಉರಿ ದಾಳಿ ಬಳಿಕ ಭಾರತದ ನಿಲುವಿನ ಬಗ್ಗೆ ಪ್ರಧಾನಿ ಮೋದಿಯವರನ್ನು ಪ್ರಶಂಸಿಸಿದ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಮೋದಿ ಅವರ ನಾಯಕತ್ವ ಮತ್ತು ಮನೋಬಲದಿಂದಾಗಿ ಮೊದಲ ಬಾರಿ ಶತ್ರುಗಳಿಗೆ ತಿರುಗೇಟು ನೀಡಿದ್ದೇವೆ. ಇಂದು ವಿಶ್ವವು ಭಾರತವನ್ನು ನೋಡುವ ರೀತಿ ಬದಲಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.