ಕೊಪ್ಪಳ: ಕರ್ನಾಟಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಮಕ್ಕಳ ಚಿತ್ರ ಸಂಸ್ಥೆ ಚಿಕ್ಕಬಳ್ಳಾಪುರ ಇವರ ವತಿಯಿಂದ ಜಿಲ್ಲಾಡಳಿತದ ಸಹಯೋಗದಲ್ಲಿ ಶಾಲಾ ಮಕ್ಕಳ ಚಲನಚಿತ್ರೋತ್ಸವ ಜ. 27 ರಿಂದ ಫೆ. 9 ರವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಶಿಕ್ಷಣ ಇಲಾಖೆಯವರು ಶಾಲಾ ಮಕ್ಕಳಿಗೆ ಚಲನಚಿತ್ರ ವೀಕ್ಷಣೆಗೆ ಅಗತ್ಯ ವ್ಯವಸ್ಥೆ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ರುದ್ರೇಶ ಘಾಳಿ ಹೇಳಿದರು.
ಜಿಲ್ಲೆಯಲ್ಲಿ ಶಾಲಾ ಮಕ್ಕಳ ಚಲನಚಿತ್ರೋತ್ಸವ ಏರ್ಪಡಿಸುವ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಕುಷ್ಟಗಿಯಲ್ಲಿ ಬಸವರಾಜ, ಮಾರುತಿ ಚಿತ್ರ ಮಂದಿರಗಳನ್ನು ಆಯ್ಕೆ ಮಾಡಲಾಗಿದೆ. ಗಂಗಾವತಿ, ಕನಕಗಿರಿ, ಕಾರಟಗಿ, ಯಲಬುರ್ಗಾ, ಕುಕನೂರಿನ ವಿವಿಧ ಚಿತ್ರಮಂದಿರಗಳನ್ನು ಚಿತ್ರೋತ್ಸವಕ್ಕೆ ಆಯ್ಕೆ ಮಾಡಲಾಗಿದೆ ಎಂದರು.
ಮಕ್ಕಳ ಜನಪ್ರಿಯ ಚಲನಚಿತ್ರ ’ಮಾನಿತ’ ಎನ್ನುವ ಚಲನಚಿತ್ರವನ್ನು ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುವುದು. ಪ್ರತಿ ಮಕ್ಕಳಿಗೆ 10 ರೂ. ದರ ನಿಗದಿ ಮಾಡಲಾಗಿದೆ. ಚಲನಚಿತ್ರ ವೀಕ್ಷಣೆ ಮಕ್ಕಳ ಆಯ್ಕೆ ಆಗಿದ್ದು, ಯಾರಿಗೂ ಕಡ್ಡಾಯವಾಗಿ ವೀಕ್ಷಿಸಲು ಟಿಕೆಟ್ ಖರೀದಿಸುವಂತೆ ಒತ್ತಾಯಿಸುವಂತಿಲ್ಲ ಎಂದು ಹೇಳಿದರು.
ಸಭೆಯಲ್ಲಿ ಕರ್ನಾಟಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಮಕ್ಕಳ ಚಿತ್ರ ಸಂಸ್ಥೆಯ ಸಂಘಟಕ ಎಸ್. ರಮೇಶ್ ಜಿಲ್ಲಾ ವಾರ್ತಾಧಿಕಾರಿ ತುಕಾರಾಂ ರಾವ್ ಬಿ.ಬಿ. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಪೂಜಾರ್, ಉಮಾದೇವಿ ಸೊನ್ನೆ, ಗಣ್ಯರಾದ ಬಸವರಾಜ ಉಳ್ಳಾಗಡಿ ಸೇರಿದಂತೆ ವಿವಿಧ ಚಲನಚಿತ್ರ ಮಂದಿರಗಳ ವ್ಯವಸ್ಥಾಪಕರು ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.