ಅವರು ತಮ್ಮ ಜೀವನವನ್ನೆಲ್ಲ ಕಾದಂಬರಿ ರಚನೆ, ಪುಸ್ತಕ ಪ್ರಕಟಣೆ, ಶಿಕ್ಷಣ, ಪತ್ರಿಕೋದ್ಯಮಕ್ಕೇ ಮೀಸಲಿಟ್ಟಿದ್ದರು. ಕೊನೆಯ ಕಾಲದಲ್ಲಿ ಗ್ರಂಥ ಪ್ರಕಟಣೆಯ ಸಾಲದ ಹೊರೆಯಲ್ಲಿ ಸಿಲುಕಿ ಗ್ರಂಥ ಮಾರಾಟಕ್ಕಾಗಿ ಊರೂರು ಅಲೆಯಬೇಕಾಯಿತು. ಆದರೂ ಅವರು ಅಲುಗಾಡಲಿಲ್ಲ. ಕನ್ನಡ ಸಾಹಿತ್ಯದ ಪರಿಚಾರಿಕೆಯನ್ನು ಬಿಡದೇ, ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಅಪರೂಪದ ವ್ಯಕ್ತಿ ಗಳಗನಾಥರು.
ಗಳಗನಾಥ ಎಂಬುದು ಹಾವೇರಿ ಸಮೀಪದ ಒಂದು ಪುಟ್ಟ ಗ್ರಾಮ. ಚಾಲುಕ್ಯರು ಕಟ್ಟಿಸಿದ ಪ್ರಸಿದ್ಧ ಗಳಗೇಶ್ವರ ಶಿವನ ದೇವಾಲಯವಿದೆ. ಈ ಅಧಿದೇವತೆಯ ಹೆಸರೇ ಗ್ರಾಮಕ್ಕೆ ಗಳಗನಾಥ ಎಂದು ಬರಲು ಕಾರಣ. ಇಲ್ಲಿ 1869 ರ ಜ.5 ರಂದು ಗಳಗನಾಥರು ಜನಿಸಿದರು. ಇವರ ಮೂಲ ಹೆಸರು ವೆಂಕಟೇಶ ತಿರಕೋ ಕುಲಕರ್ಣಿ. ವೆಂಕಟೇಶರು ತಮ್ಮ ಸಾಹಿತ್ಯ ರಚನೆಯಲ್ಲಿ ತಮ್ಮ ಊರಿನ ಹೆಸರನ್ನೇ ಅನ್ವರ್ಥವಾಗಿ ಬಳಸಿಕೊಂಡು ಗಳಗನಾಥರೆಂದೇ ಪ್ರಸಿದ್ಧಿ ಹೊಂದಿದರು.
ಎರಡು ದಶಕಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಸಾಹಿತ್ಯದ ಕಡೆಗೆ ಹೆಚ್ಚಿದದ ಒಲವಿನಿಂದ 1907 ರಲ್ಲಿ ಸ್ವಯಂ ನಿವೃತ್ತಿ ಪಡೆದು ಹಾವೇರಿ ಸಮೀಪದ ಅಗಡಿಗಯಲ್ಲಿ ಭಿ.ಪ. ಕಾಳೆಯವರ ಸಹಕಾರದಿಂದ ಒಂದು ಮುದ್ರಣಾಲಯ ತೆರೆದರು. ಕೆಲವೇ ದಿನಗಳಲ್ಲಿ ಸದ್ಭೋಧ ಪತ್ರಿಕೆ ಎಂಬ ಮಾಸಪತ್ರಿಕೆ ಆರಂಭಿಸಿದ ಹಿರಿಮೆ ಅವರದು.
ನೀತಿ ಪ್ರಧಾನ ಕಥೆಗಳು, ಕುಟುಂಬ ಜೀವನ, ದಾಂಪತ್ಯ, ಯೋಗಾಭ್ಯಾಸ ಹೀಗೆ ವಿಶಿಷ್ಟ ಧನಾತ್ಮಕ ಅಂಶಗಳ ಕುರಿತು ಬೆಳಕು ಚೆಲ್ಲವುದು ಪತ್ರಿಕೆಯ ಧ್ಯೇಯವಾಗಿತ್ತು. ಆಗಿನ ಕಾಲದಲ್ಲಿಯೇ ಸಾವಿರಕ್ಕೂ ಹೆಚ್ಚು ಪ್ರಸಾರವಿತ್ತು ಎಂಬುದು ಅದರ ವೈಶಿಷ್ಟ್ಯತೆಗೆ ಸಾಕ್ಷಿ.
ಹಿಂದು ಸಂಸ್ಕೃತಿ ಮತ್ತು ವೈದಿಕ ಸಾಹಿತ್ಯಗಳಲ್ಲಿ ಅವರು ವಿಶೇಷ ಆಸಕ್ತಿ ಹೊಂದಿದ್ದರು. ಸ್ವತಂತ್ರ ಕಾದಂಬರಿಯನ್ನು ರಚಿಸುವ ಜೊತೆಗೆ, ಮರಾಠಿಯ ಅನೇಕ ಕೃತಿಗಳನ್ನು ಕನ್ನಡೀಕರಣಗೊಳಿಸಿದ ಹೆಗ್ಗಳಿಕೆ ಅವರದು.
ಸಾಹಿತ್ಯ ಕ್ಷೇತ್ರದಲ್ಲಿ ಅವರ ಆಸಕ್ತಿ ಹೊಸ ತಲೆಮಾರಿನ ಲೇಖಕರಿಗೆ ಮಾದರಿ. ವಿಫುಲ ಹಾಗೂ ವೈವಿಧ್ಯಪೂರ್ಣ ಸಾಹಿತ್ಯ ಕೃತಿಗಳನ್ನು ಅವರು ರಚಿಸಿದರು. ಕಾದಂಬರಿಗಳು, ಚರಿತ್ರೆ, ಪೌರಾಣಿಕ ಕಥೆಗಳು ಹಾಗೂ ಪ್ರಬಂಧಗಳು ಇವರ ವಿಶಿಷ್ಟ ಸಾಹಿತ್ಯ ಪ್ರಾಕಾರ. ಇವರ ಸದ್ಭೋಧ ಪತ್ರಿಕೆಯಲ್ಲಿ ೧೩ ಕಾದಂಬರಿಗಳು ಧಾರಾವಾಹಿ ರೂಪದಲ್ಲಿ ಪ್ರಕಟವಾಗಿದ್ದು ಗಮನಾರ್ಹ.
ಪದ್ಮನಯನೆ, ಕುಮುದಿನಿ, ಮಾಧವ ಕರುಣಾ ವಿಲಾಸ, ಭಗವತೀ ಕಾತ್ಯಾಯಿನಿ, ದುರ್ಗದ ಬಿಚ್ಚುಗತ್ತಿ ಮುಂತಾದವು ಇವರ ಸ್ವತಂತ್ರ ಕಾದಂಬರಿಗಳು. ಭಗವತಾಮೃತ, ಶೈವಸುಧಾರ್ಣವ, ತುಳಸಿರಾಮಾಯಣ ಇತ್ಯಾದಿ ಪೌರಾಣಿಕ ಕಾದಂಬರಿಗಳನ್ನೂ ಅವರು ಬರೆದರು.
ಆಗಿನ ಕಾಲಕ್ಕೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದವರು ಕನ್ನಡ ಗ್ರಂಥಕರ್ತರಿಗೆ ಬಹುಮಾನ ಕೊಡುವ ಪರಿಪಾಠ ಹಾಕಿದರು. ಗಳಗನಾಥರ ಪ್ರಥಮ ಕಾದಂಬರಿ ಪದ್ಮನಯನೆಗೆ ಬಹುಮಾನವೂ ದೊರಕಿತು.
ಇವರ ಆತ್ಮೀಯರಾಗಿದ್ದ ಹೊಸಕೆರೆ ಚಿದಂಬರಯ್ಯ, ಡಿವಿಜಿ, ದೇವುಡು, ಬಿ.ಎಂ.ಶ್ರೀ ಹೀಗೆ ಅನೇಕರು ಇವರ ಗ್ರಂಥ ಪ್ರಕಟಣೆಗಾಗಿ ಮಾಡಿದ ಸಾಲವನ್ನು ತೀರಿಸುವಲ್ಲಿ ನೆರವಾದರು ಎಂಬುದು ಇಲ್ಲಿ ಉಲ್ಲೇಖನೀಯ.
ಕನ್ನಡದ ಹೊಸ ಹುಟ್ಟಿನ ಕಾಲದ ಪ್ರಾರಂಭದಲ್ಲಿ ವಿಶಿಷ್ಟ ಬರವಣಿಗೆಯಿಂದ ನಾಡಿನಲ್ಲಿ ಭಾಷಾ ಜಾಗೃತಿಯನ್ನುಂಟಮಾಡಿದ ಪ್ರಸಿದ್ಧ ಲೇಖಕರು ಇವರು. 1942 ರ ಏಪ್ರಿಲ್ನಲ್ಲಿ ಗಳಗನಾಥರು ಇಹ ಲೋಕವನ್ನು ತ್ಯಜಿಸಿದರು. ಇ- ಬುಕ್ಕಿನ ಯುಗವಾಗಿದ್ದರೇನು ಈಗ, ಕಾದಂಬರಿ ಪಿತಾಮಹನ ಬದುಕು ಇಂದಿಗೂ ಮಾದರಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.