ಬೆಳ್ತಂಗಡಿ: ಭೂಕಂಪ ಪೀಡಿತ ನೆರೆಯ ನೇಪಾಳ ದೇಶಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ.1 ಕೋಟಿ ಮೌಲ್ಯದ ವಸ್ತು ರೂಪದ ಸಹಾಯವನ್ನು ನೀಡಲಾಗುವುದು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಪ್ರಕಟಿಸಿದ್ದಾರೆ.
ಅವರು ಗುರುವಾರ ಸಂಜೆ ಶ್ರೀ ಕ್ಷೇತ್ರದಲ್ಲಿ ಗೋಧೂಳಿ ಮುಹೂರ್ತದಲ್ಲಿ ನಡೆದ 44ನೇ ವರ್ಷದ ಸಾಮೂಹಿಕ ಉಚಿತ ವಿವಾಹ ಸಮಾರಂಭದಲ್ಲಿ ಮಾತನಾಡಿ ನೇಪಾಳಕ್ಕೆ ಸಹಾಯಹಸ್ತದ ಘೋಷಣೆ ಮಾಡಿದರು.
ನೇಪಾಳದಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಸಹಸ್ರಾರು ಮಂದಿ ಗಾಯಗೊಂಡಿದ್ದಾರೆ. ಹಲವರು ಆತ್ಮೀಯ ಬಂಧುಗಳನ್ನು ಕಳೆದುಕೊಂಡಿದ್ದಾರೆ. ಮುಂದಿನ ಭವಿಷ್ಯದ, ಬದುಕಿನ ಪ್ರಶ್ನೆ ಅಲ್ಲಿನವರಿಗೆ ಬೃಹದಾಕಾರವಾಗಿ ನಿಂತಿದೆ. ಪಕ್ಕದ ಮನೆಗೆ ಬೆಂಕಿ ಬಿದ್ದಲ್ಲಿ ನಮ್ಮ ಮನೆಗೂ ಬೆಂಕಿ ಬೀಳುತ್ತದೆ ಎಂಬ ಅರಿವಿರುವ ಸಂಸ್ಕೃತಿ ನಮ್ಮದು. ದೂರದ ನೇಪಾಳಕ್ಕೆ ಹತ್ತಿರದ ಮಾನವೀಯತೆ ನಮ್ಮದು. ನಾವೂ ದುಃಖದಲ್ಲಿ ಸಹಭಾಗಿಗಳಾಬೇಕು. ಇಂತಹ ಕಷ್ಟ ಎಂದೂ ಯಾರಿಗೂ ಬರಬಾರದು ಎಂದರು.
ಎರಡು ಸಂಘಟನೆಗಳು ಸೂಚಿಸಿದಂತೆ ಕ್ಷೇತ್ರದ ವತಿಯಿಂದರೂ.1 ಕೋಟಿಯ ನೆರವನ್ನು ನೀಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದರಲ್ಲಿ ರೂ.60 ಲಕ್ಷದಷ್ಟು ಅಕ್ಕಿಯ ರೂಪದಲ್ಲಿದ್ದು ಅದನ್ನು ಅಲ್ಲಿಗೆ ತಲುಪಿಸಲಾಗುತ್ತದೆ. ಅಲ್ಲಿನ ಗಾಯಾಳುಗಳ ಶಸ್ತ್ರಚಿಕಿತ್ಸೆಗಾಗಿ ಸಂಚಾರಿ ಶಸ್ತ್ರಚಿಕಿತ್ಸಾ ಘಟಕ ಅಗತ್ಯವಿದ್ದು ಅದರ ನಿರ್ವಹಣೆಗಾಗಿ ಉಳಿದ 40 ಲಕ್ಷ ರೂ.ಗಳನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.