ನವದೆಹಲಿ: ಈಗಾಗಲೇ ರಿಲಯನ್ಸ್ ಜಿಯೋ ಬಿಡುಗಡೆಯಾದ 3 ತಿಂಗಳುಗಳಲ್ಲಿ 50 ಮಿಲಿಯನ್ಗೂ ಹೆಚ್ಚು ಗ್ರಾಹಕರನ್ನು ಹೊಂದಿದ್ದು, ದೇಶದ ಅತಿ ದೊಡ್ಡ ಬ್ರಾಡ್ಬ್ಯಾಂಡ್ ನಿರ್ವಹಣೆ ಕಂಪೆನಿಯಾಗಿ ಹೊರಹೊಮ್ಮಿದೆ.
ಇದೀಗ ರಿಲಯನ್ಸ್ ಇಂಡಸ್ಟ್ರೀಸ್ನ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಇನ್ನಷ್ಟು ಗ್ರಾಹಕರನ್ನು ಆಕರ್ಷಿಸಲು ತಮ್ಮ ರಿಲಯನ್ಸ್ ಜಿಯೋನ ಉಚಿತ 4G ಡಾಟಾ ಮತ್ತು ವಾಯ್ಸ್ ಕರೆಗಳ ಅವಧಿಯನ್ನು ಮಾರ್ಚ್ 31, 2017ರ ವರೆಗೆ ವಿಸ್ತರಿಸುವುದಾಗಿ ಘೋಷಿಸಿದ್ದಾರೆ.
ಇದೇ ಡಿಸೆಂಬರ್ 4ರಿಂದ ಹೊಸ ಜಿಯೋ ಸಿಮ್ ಪಡೆಯುವ ಗ್ರಾಹಕರು ‘ಹ್ಯಾಪಿ ನ್ಯೂ ಇಯರ್’ ವೆಲ್ಕಮ್ ಆಫರ್ ಅಡಿಯಲ್ಲಿ ಮಾರ್ಚ್ 31, 2017ರ ವರೆಗೆ ಉಚಿತ ಡಾಟಾ ಮತ್ತು ವಾಯ್ಸ್ ಕರೆಗಳನ್ನು ಪಡೆಯಲಿದ್ದಾರೆ. ಈಗಾಗಲೇ ಅಸ್ತಿತ್ವದಲ್ಲಿರುವ ಜಿಯೋ ಸಿಮ್ ಹೊಂದಿದ ಗ್ರಾಹಕರು ‘ಹ್ಯಾಪಿ ನ್ಯೂ ಇಯರ್’ ಆಫರ್ಗೆ ವರ್ಗಾವಣೆ ಆಗಲಿದ್ದಾರೆ ಎಂದು ಅಂಬಾನಿ ಹೇಳಿದ್ದಾರೆ.
ಸೆಪ್ಟೆಂಬರ್ 1, 2016ರಂದು ರಿಲಯನ್ಸ್ ಜಿಯೋ ಅನಾವರಣಗೊಂಡ ನಂತರ ಪ್ರಾಯೋಗಿಕವಾಗಿ ಡಿ.31ರ ವರೆಗೆ ತನ್ನ ಗ್ರಾಹಕರಿಗೆ ಉಚಿತ 4G, ವಾಯ್ಸ್ ಕರೆಗಳು ಮತ್ತಿತರ ಸೇವೆಗಳನ್ನು ಘೋಷಿಸಿತ್ತು. ಇದೀಗ ಜಿಯೋ ತನ್ನ ಉಚಿತ ಸೇವೆಗಳನ್ನು ಮಾರ್ಚ್ 31ರ ವರೆಗೆ ವಿಸ್ತರಿಸಿದೆ.
ದೇಶದ ಅತ್ಯಧಿಕ ಆದಾಯ ಹೊಂದಿರುವ ಅತಿ ದೊಡ್ಡ ಟೆಲಿಕಾಂ ಕಂಪೆನಿ ಏರ್ಟೆಲ್ ಪ್ರಸ್ತುತ 31 ಮಿಲಿಯನ್ 3G ಮತ್ತು 4G ಗ್ರಾಹಕರನ್ನು ಹೊಂದಿದೆ.
ರಿಲಯನ್ಸ್ ಜಿಯೋ ಕಂಪೆನಿ ದೇಶದಲ್ಲಿ 20 ಮಿಲಿಯನ್ ಡಾಲರ್ ಹೂಡಿಕೆಯೊಂದಿಗೆ ತನ್ನ 4G ಸೇವೆ ಆರಂಭಿಸಿದ್ದು, 1 ವರ್ಷದಲ್ಲಿ 100 ಮಿಲಿಯನ್ ಬಳಕೆದಾರರನ್ನು ಹೊಂದುವ ಗುರಿ ಇದೆ ಎಂದು ಕಂಪೆನಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.