ಬೆಳ್ತಂಗಡಿ: ಸರಳ ವಿವಾಹಕ್ಕೆ ಹೊಸ ಭಾಷ್ಯ ಬರೆದ ಶ್ರೀ ಕ್ಷೇತ್ರ ಧರ್ಮಸ್ಥಳದ ಉಚಿತ ಸಾಮೂಹಿಕ ವಿವಾಹ ಇಂದು ನಡೆಯಿತು. 44ನೇ ವರ್ಷದ ಸಾಮೂಹಿಕ ವಿವಾಹವು 5.58ರ ಗೋಧೋಳಿ ಲಗ್ನದಲ್ಲಿ ನಡೆಯಿತು. ಸುಮಾರು 150ಕ್ಕೂ ಹೆಚ್ಚು ಜೋಡಿಗಳು ಹಸೆಮಣೆಯೇರಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯೆಲ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್, ಬಿರ್ಲಾ ಸಮೂಹದ ಯುನಿವರ್ಸಲ್ ಕೇಬಲ್ನ ಉಪಾಧ್ಯಕ್ಷ ಮಧ್ಯಪ್ರದೇಶದ ಸಾತ್ನಾದ ಸುಧೀರ್ ಜೈನ್ ಮತ್ತು ಅವರ ಪತ್ನಿ ರಶ್ಮಿ ಜೈನ್ ಮುಖ್ಯ ಅತಿಥಿಗಳಾಗಿದ್ದು, ವಧೂವರರನ್ನು ಆಶೀರ್ವದಿಸಿದರು.
ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದು, ನೂತನ ದಂಪತಿಗಳನ್ನು ಹರಸಿದರು. ಮಾ.29, 1972ರಲ್ಲಿ ಮೊದಲ ಸಾಮೂಹಿಕ ವಿವಾಹ ಪ್ರಾರಂಭವಾಗಿತ್ತು. ಕಳೆದ 43 ವರ್ಷಗಳಲ್ಲಿ 11,657 ಜೋಡಿಗಳು ಇಲ್ಲಿ ಹಸೆಮಣೆಯೇರಿ ಸುಖಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.
ಧಾರ್ಮಿಕ ಕ್ಷೇತ್ರಗಳು ಧರ್ಮಜಾಗೃತಿಯೊಂದಿಗೆ ಸಾಮಾಜಿಕ ಮಾರ್ಗದರ್ಶನವನ್ನು ಕಾಲಕಾಲಕ್ಕೆ ಸಂದರ್ಭೋಚಿತವಾಗಿ ನೀಡುತ್ತಿರಬೇಕು. ಈ ದಿಸೆಯಲ್ಲಿ ಶ್ರೀ ಕ್ಷೇತ್ರವು ಪರಂಪರೆಯಿಂದಲೇ ಕಳೆದ 4 ದಶಕಗಳಿಂದ ಅತೀ ಸಹಜವಾಗಿ ಕಾರ್ಯಪ್ರವೃತ್ತವಾಗಿದೆ. ವಿವಾಹದ ವಿಧಾನವನ್ನು ಸರಳೀಕರಿಸುವ ಮಾರ್ಗದರ್ಶನದೊಂದಿಗೆ ಜನತೆಗೆ ಸಹಾಯ ಹಸ್ತವನ್ನು ನೀಡುವುದೇ ಈ ಸಾಮೂಹಿಕ ವಿವಾಹದ ಧ್ಯೆಯೋದ್ದೇಶವಾಗಿದೆ. ಹಿಂದೂ ಸಮಾಜದ ಎಲ್ಲಾ ವರ್ಗದ ವಧೂವರರು ಒಂದೇ ಛತ್ರದಡಿಯಲ್ಲಿ ಏಕತ್ರಗೊಂಡು ವಿವಾಹವಾಗುವುದು ಇಲ್ಲಿನ ಇನ್ನೊಂದು ವಿಶೇಷತೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.