ಮಡಿಕೇರಿ : ಭಾಗಮಂಡಲದಲ್ಲಿ ಶ್ರೀಮದ್ ಭುವನೇಂದ್ರ ಆಯುರ್ವೇದ ವೃಕ್ಷ ವಾಟಿಕಾ ಉದ್ಘಾಟಿಸುವ ಮೂಲಕ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಶ್ರೀ ಕಾಶೀಮಠಾಧೀಶರಾಗಿ ತಮ್ಮ ಮೊದಲ ಯೋಜನೆಯನ್ನು ಸಮಾಜಕ್ಕೆ ಅರ್ಪಿಸಿದ್ದಾರೆ.
ಅವರು ರವಿವಾರ ಬಾಗಮಂಡಲದಲ್ಲಿ ಶ್ರೀ ಕಾಶೀ ಮಠ ಸಂಸ್ಥಾನದ ವತಿಯಿಂದ ನಿರ್ಮಾಣಗೊಂಡ ಶ್ರೀಮದ್ ಭುವನೇಂದ್ರ ಆಯುರ್ವೇದ ವೃಕ್ಷ ವಾಟಿಕಾ ಉದ್ಘಾಟನೆ ನೆರವೇರಿಸಿ, ಆಯುರ್ವೇದ ಪದ್ಧತಿಯ ಅನುಷ್ಠಾನದ ಜತೆಗೆ ಸಂಬಂಧಿತ ಔಷದೀಯ ಸಸ್ಯ, ಮೂಲಿಕೆಗಳ ಹೆಚ್ಚಿನ ಅಧ್ಯಯನ, ಸಂಶೋಧನೆ ಹೀಗೆ ಸಮಾಜದಿಂದ ಜವಾಬ್ದಾರಿಯುತ ಚಟುವಟಿಕೆಗಳು ನಡೆದು ಆಯುರ್ವೇದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡುವಂತಾಗಬೇಕು ಎಂದು ಶ್ರೀ ಕಾಶೀಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಕಾಞಂಗಾಡು ಮೊಕ್ಕಾಂನಿಂದ ಭಾಗಮಂಡಲಕ್ಕೆ ಚಿತ್ತೈಸಿದ ಶ್ರೀಗಳವರು ವಾಟಿಕಾದ ಆವರಣದಲ್ಲಿ ಕಳೆದ ಮೂರು ದಿನಗಳಿಂದ ನಡೆದಿದ್ದ ಹವನಾದಿಗಳ ನಂತರದಲ್ಲಿನ ಧನ್ವಂತರಿ ಹವನದ ಪೂರ್ಣಾಹುತಿಯನ್ನು ನೆರವೇರಿಸಿದರು. ಬಳಿಕ ವಾಟಿಕಾದ ಆವರಣದಲ್ಲಿ ನಿರ್ಮಿಸಲಾಗಿರುವ ನೂತನ ಗೋಶಾಲೆಯಲ್ಲಿ ಗೋವುಗಳಿಗೆ ಗೋಗ್ರಾಸವನ್ನು ನೀಡಿದ ಶ್ರೀಗಳವರು ಆಡಳಿತ ಮಂಡಳಿಯ ಕಛೇರಿಯನ್ನೂ ಉದ್ಘಾಟಿಸಿದರು. ಆಯುರ್ವೇದ ವಾಟಿಕಾದ ಆವರಣದಲ್ಲಿರುವ ನೂತನ ಮಂಟಪದಲ್ಲಿ ಶ್ರೀಮದ್ ಭುವನೇಂದ್ರ ತೀರ್ಥ ಸ್ವಾಮೀಜಿಯವರ ಮೃಣ್ಮಯ ಮೂರ್ತಿಯನ್ನು ಪಾಮರಿ ಹೊದಿಸಿ ಅಲಂಕರಿಸಿ ಅಲ್ಲಿ ತಮ್ಮ ಗುರುಗಳಾದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪಾದುಕೆಗಳನ್ನಿರಿಸಿ ಮಂಗಳಾರತಿ ಬೆಳಗುವ ಮೂಲಕ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ವಾಟಿಕಾದ ಉದ್ಘಾಟನೆಯನ್ನು ವಿದ್ಯುಕ್ತವಾಗಿ ನೆರವೇರಿಸಿದರು.
ಇದಕ್ಕೂ ಮೊದಲು ಶ್ರೀಮದ್ ಭುವನೇಂದ್ರ ತೀರ್ಥ ಸ್ವಾಮೀಜಿ ಹಾಗೂ ಸಜೀವ ಸಮಾಧಿ ಹೊಂದಿದ ಶ್ರೀಮದ್ ಮಾಧವೇಂದ್ರ ತೀರ್ಥ ಸ್ವಾಮೀಜಿಯವರ ವೃಂದಾವನದಿಂದ ತಂದಿದ್ದ ಪ್ರಸಾದವನ್ನು ಮೂರ್ತಿ ಸ್ಥಾಪನೆಗೂ ಮೊದಲು ಶ್ರೀಗಳವರು ಪೀಠ ಸ್ಥಳಕ್ಕೆ ಸಮರ್ಪಿಸಿದರು. ಶ್ರೀ ಭುವನೇಂದ್ರ ತೀರ್ಥ ಸ್ವಾಮಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಪಿ.ದಯಾನಂದ ಪೈ ವಾಟಿಕಾದ ನಿರ್ಮಾಣಕ್ಕೆ ಅಗತ್ಯವಿರುವ ನಿವೇಶನವನ್ನು ಸೇವಾ ರೂಪದಲ್ಲಿ ಸಂಸ್ಥಾನಕ್ಕೆ ಸಮರ್ಪಿಸಿರುವುದನ್ನು ಪ್ರಕಟಿಸಿ ಮುಂದಿನ ದಿನಗಳಲ್ಲಿ ಇಲ್ಲಿ ಆಯುರ್ವೇದಕ್ಕೆ ಸಂಬಂಧಿಸಿ ಯೋಗ್ಯ ಅಧ್ಯಯನ ಕೇಂದ್ರ, ತಜ್ಞರುಗಳು ಉಳಿದುಕೊಳ್ಳಲು ವಸತಿಗೃಹಗಳು ಹೀಗೆ ಅಭಿವೃದ್ಧಿ ಕುರಿತು ತಮ್ಮ ಆಸಕ್ತಿಯನ್ನು ವಿವರಿಸಿ ಇದಕ್ಕೆ ತಗಲಬಹುದಾದ ಸುಮಾರು 8 ಕೋಟಿ ರೂ ವೆಚ್ಚವನ್ನು ಭರಿಸಿ ಯೋಜನೆಯನ್ನು ನನಸಾಗಿಸಲು ತಾವು ಸೇವಾ ಉತ್ಸುಕರಾಗಿರುವುದಾಗಿ ತಿಳಿಸಿದರು.
ರಾಧಾಕೃಷ್ಣ ಭಕ್ತ ಪ್ರಾಸ್ತಾವಿಕ ಮಾತುಗಳನ್ನಾಡಿ ಶ್ರೀ ಹರಿಗುರು ದಯೆಯಿಂದ ಎರಡು ತಿಂಗಳ ಅವಧಿಯಲ್ಲಿ ಶ್ರೀಮದ್ ಭುವನೇಂದ್ರ ಆಯುರ್ವೇದ ವೃಕ್ಷ ವಾಟಿಕಾ ಮೂಡಿ ಬಂದಿದೆ ಎಂದರು. ಯೋಜನೆಯ ಎಂಜಿನಿಯರ್ ಹೆಚ್. ಗಜಾನನ ಕಾಮತ್ ವಾಟಿಕಾದ ಗಿಡಮೂಲಿಕೆಗಳ ಕುರಿತು ವಿವರಿಸಿದರು.
ಬಾಗಮಂಡಲ ಶ್ರೀ ಕಾಶೀ ಮಠ ವ್ಯವಸ್ಥಾಪಕ ಸಮಿತಿ ಗೌರವಾಧ್ಯಕ್ಷ ಡಾ. ಜಗನ್ನಾಥ ಶೆಣೈ ಶ್ರೀಗಳವರನ್ನು ಪಾದಪೂಜೆಯೊಂದಿಗೆ ಗೌರವಿಸಿ ಸ್ವಾಗತಿಸಿದರು. ಕೋಟೇಶ್ವರ ದಿನೇಶ್ ಕಾಮತ್ ಕಾರ್ಯಕ್ರಮವನ್ನು ನಿರೂಪಿಸಿದರು.
ಚಿತ್ರ : ಮಂಜು ನೀರೇಶ್ವಾಲ್ಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.