ಸಾಹಿತ್ಯ ಎಂದರೆ ಮನುಷ್ಯನ ಬದುಕಿನ ಅನುಭವ ಲೋಕದ ಸಂಕಥನ. ಸಾಹಿತ್ಯ ಪರಂಪರೆಗೆ ಅಸಾಧಾರಣ ಶಕ್ತಿಯಿದೆ. ಮಹಾಬಲಿಷ್ಟವಾಗಿ ಕಾಣುವ ಕೋಟೆ ಕೊತ್ತಲಗಳೂ, ಸ್ತೂಪ ಸೌಧಗಳೆಲ್ಲ ಕಾಲದ ಹೊಡೆತಕ್ಕೆ ನಿರ್ನಾಮವಾಗುತ್ತವೆ. ಅತ್ಯಂತ ದುರ್ಬಲ ಪದಪುಂಜಗಳು, ವಾಕ್ಯ ಸಮುಚ್ಛಾಯಗಳು ಸಹಸ್ರಾರು ವರ್ಷಗಳ ಹಿಂದೆ ಬದುಕಿದ್ದ ಕವಿಯ ಅತ್ಯಂತ ಕ್ಷಣಿಕ ಭಾವಸ್ಪಂದನವನ್ನು ಅಜರಾಮರವಾಗಿ ಉಳಿಸುತ್ತವೆ. ಇತರ ಶ್ರೀಮಂತ ಜೀವಂತ ಭಾಷೆಗಳಂತೆ ಕನ್ನಡ ಭಾಷೆಗೂ ಕಾಲ ದೇಶ ಪರಿಸರಕ್ಕನುಗುಣವಾಗಿ ರೂಪತಳೆದ ಸತ್ವಯುತ, ಶಕ್ತಿಯುತ ಸಾಹಿತ್ಯದ ಪರಂಪರೆಯಿದೆ.
ಕನ್ನಡ ಸಾಹಿತ್ಯ ಕನ್ನಡ ಭಾಷೆಯಷ್ಟೇ ಪ್ರಾಚೀನ. ಅಷ್ಟೇ ವೈಭವಯುತ. ಇಡೀ ಕನ್ನಡ ಸಾಹಿತ್ಯದಲ್ಲಿ ಕನ್ನಡ ನಾಡಿನ ಕಲೆ, ಸಂಸ್ಕೃತಿ, ಬದುಕು ಹೀಗೆ ಒಟ್ಟಾರೆ ಕನ್ನಡ ಸಾಂಸ್ಕೃತಿಕ ಜಗತ್ತೇ ಅಡಕಗೊಂಡಿದೆ. ಸುಮಾರು 2000 ವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯ ಆದಿಕವಿ ಪಂಪನಿಂದ ಆರಂಭವಾಗಿ ಕುವೆಂಪು, ಬೇಂದ್ರೆ ಮೊದಲಾದವರು ಕೊಂಡಿಯಾಗಿ ಇಂದಿನ ಯುವ ತಲೆಮಾರಿನ ಆಕರ್ಷಕ ಬರಹಗಾರರವರೆಗೂ ವಿಶಿಷ್ಟ ಪರಂಪರೆಯನ್ನೇ ನಿರ್ಮಿಸಿದೆ. ಅಂದಿನಿಂದ ಅನೇಕ ಮಜಲುಗಳನ್ನು ದಾಟಿಕೊಂಡು ಬಂದ ಕನ್ನಡ ಸಾಹಿತ್ಯ ಭಾಷೆ, ಸಂಸ್ಕೃತಿ, ಬದಕುಕನ್ನು ಶ್ರೀಮಂತವಾಗಿಸುವ ಜೊತೆಗೆ ವರ್ತಮಾನದ ಆಗುಹೋಗುಗಳಿಗೆ ಸ್ಪಂದಿಸುತ್ತಾ, ಸಾರ್ವಕಾಲಿಕ ಮೌಲ್ಯಗಳನ್ನು ಪ್ರತಿಪಾದಿಸುತ್ತಾ ಭೂತಕ್ಕೂ ಭವಿಷ್ಯಕ್ಕೂ ಅವಶ್ಯಕ ಮಾರ್ಗವನ್ನು ರೂಪಿಸಿದೆ.
ಸಂಸ್ಕೃತ ಭೂವಿಷ್ಟ ಹಳೆಗನ್ನಡ ಸಾಹಿತ್ಯದಿಂದ ಆಧುನಿಕ ಕಾಲದ ಹೊಸಗನ್ನಡ ಸಾಹಿತ್ಯದವರೆಗೂ ‘ಕನ್ನಡ ಸಾಹಿತ್ಯ ಕಾವ್ಯದ ಮೂಲಕ ಒಳಧ್ವನಿಯ ಹೊರ ಅಭಿವ್ಯಕ್ತಿಯಾಗಿ, ಗದ್ಯದ ಮೂಲಕ ಹೊರಜಗತ್ತಿನ ಒಳ ಅಭಿವ್ಯಕ್ತಿಯಾಗಿ ಅಸಾದೃಶ್ಯ ಬದುಕನ್ನು ಸಾದೃಶ್ಯವಾಗಿಸುವ ಅದ್ಭುತ ಲೋಕ ಸೃಷ್ಟಿಸಿದೆ.’ ಕನ್ನಡ ಸಾಹಿತ್ಯದ ವೈಭವವಿರುವುದು ಪಂಪನ ತ್ಯಾಗ-ಭೋಗದ ಸಮನ್ವತೆ, ಕುವೆಂಪುರವರ ವಿಶ್ವಮಾನವ ತತ್ವದಲ್ಲಿ. ಕವಿ ಗೋಪಾಲಕೃಷ್ಣ ಅಡಿಗರ ವಾಸ್ತವತೆಯ ರಕ್ತದಾನ, ಮಣ್ಣಿನ ವಾಸನೆಯ ಸಾಹಿತ್ಯ ಕ್ರಾಂತಿಯ ಜೊತೆಗೆ ಚಂದ್ರಶೇಖರ ಕಂಬಾರರು ಸೃಜಿಸಿದ ದೇಸಿಯತೆಯಿಂದಲೇ ವಿಶ್ವವನ್ನು ಕಾಣಬೇಕೆಂಬ ವಿಶ್ವಾತ್ಮಕ ಪ್ರಜ್ಞೆಯಲ್ಲಿ. ಬಸವಣ್ಣ-ಅಲ್ಲಮಪ್ರಭು-ಅಕ್ಕಮಹಾದೇವಿಯರ ಮುಂದಾಳತ್ವದಲ್ಲಿ ನಡೆದ ಜಾತ್ಯಾತೀತ ವಚನ ಚಳುವಳಿಯ ಮಾನವತಾ ದರ್ಶನ ಕ್ರಾಂತಿಯಲ್ಲಿ. ಸರ್ವಜ್ಞ, ದಾಸವರೇಣ್ಯರ ನಿಷ್ಕಲ್ಮಷ ಭಕ್ತಿಯ ಕೀರ್ತನೆಗಳ ಅನುಭಾವದಲ್ಲಿ. ಹರಿಹರ, ರಾಘವಾಂಕ, ಕುಮಾರವ್ಯಾಸರು ಮಧ್ಯಕಾಲೀನ ಪಂಡಿತ ಪರಂಪರೆಯನ್ನು, ಸಾಹಿತ್ಯ ಸಾಧ್ಯತೆಯನ್ನು ರಗಳೆ, ಷಟ್ಪದಿ, ಕಂದ, ವೃತ್ತಗಳ ಮೂಲಕ ಕನ್ನಡ ಸಾಹಿತ್ಯದ ಸಾಧ್ಯತೆಯನ್ನು ವಿಸ್ತರಿಸಿದರು. ಮುದ್ದಣನ ರಾಮಾಶ್ವಮೇಧದ ಮುಖೇನ ಗದ್ಯ ಸಾಹಿತ್ಯದ ಅನುಷ್ಟಾನ ನಮ್ಮ ಕಾಲದ ಗದ್ಯದ ಈ ಪರಿಯ ಬೆಳವಣಿಗೆಗೆ ಹಾಕಿಕೊಟ್ಟ ಅಡಿಪಾಯ. ಬಿ.ಎಂ.ಶ್ರೀಕಂಠಯ್ಯನವರ ಇಂಗ್ಲೀಷ್ ಗೀತೆಗಳು ಕವನ ಸಂಕಲದಿಂದ ಪ್ರಾರಂಭವಾದ ನವೋದಯ ಕಾಲ ಕುವೆಂಪು, ಮಾಸ್ತಿ, ಬೇಂದ್ರೆ, ಕಾರಂತ, ಪಂಜೆ ಮಂಗೇಶರಾಯರಂತಹ ದಿಗ್ಗಜರಿಂದ ಅದ್ವಿತೀಯ ಸಾಹಿತ್ಯ ರಚನೆಗೆ ಸಾಕ್ಷಿಯಾಯಿತು. ಅದೇ ಮುಂದೆ ಗೋಪಾಲಕೃಷ್ಣ ಅಡಿಗ, ವಿ.ಕೃ. ಗೋಕಾಕರು ಹಾಕಿಕೊಟ್ಟ ನಾವೀನ್ಯತೆಯ ಪಠ್ಯ ನವ್ಯ ಸಾಹಿತ್ಯಕ್ಕೆ ಪ್ರೇರಣೆಯನ್ನೊದಗಿಸಿತು. ತೇಜಸ್ವಿ. ಚಿತ್ತಾಲ, ಶಾಂತಿನಾಥ ದೇಸಾಯಿ, ಅನಂತಮೂರ್ತಿ, ಭೈರಪ್ಪ, ಕಾರ್ನಾಡ್, ಲಂಕೇಶ್ರಂತಹ ಪ್ರತಿಭಾನ್ವಶಾಲಿಗಳು ಸಾಹಿತ್ಯದ ಭಿನ್ನ ಜಾಡಿಗೆ ನಾಂದಿಹಾಡಿದರು. ಅವರ ಶೋಧನೆ ಮುಂದೆ ಬರಗೂರು ರಾಮಚಂದ್ರಪ್ಪನವರಿಂದ ಬಂಡಾಯವಾಗಿ, ಸಿದ್ದಲಿಂಗಯ್ಯ, ದೇವನೂರು ಮಹಾದೇವರಿಂದ ದಲಿತ ಸಾಹಿತ್ಯವಾಗಿ ರೂಪುಗೊಂಡಿತು. ಸ್ತ್ರೀವಾದಿಗಳು ತಮ್ಮದೇ ಸಾಹಿತ್ಯದ ಆಯಾಮವನ್ನು ಸೃಷ್ಟಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಅದರ ಜೊತೆಗೆ ಹೊಸ ತರೆಮಾರಿನ ಈ ಆಯಾಮಗಳಿಂದ ಪ್ರೇರಣೆಪಡೆದು ಅವುಗಳಲ್ಲಿ ತಮ್ಮ ಸುಪ್ತ ಅಸ್ಮಿತೆಯ ಮೂಲಕ ಸ್ವತಂತ್ರ್ಯ ಸಾಹಿತ್ಯವನ್ನು ಮುಂದುವರೆಸಿದ್ದಾರೆ. ಈ ಬೃಹತ್ ಸಾಹಿತ್ಯ ಸಾಗರಕ್ಕೆ ಆಸರೆಯಾಗಿಯೇ ನಿಂತ ಮೌಖಿಕ ಜನಪದ ಸಾಹಿತ್ಯ ಕನ್ನಡ ಸಾಹಿತ್ಯದ ವೈಭವದ ಜೀವಧಾತು.
ಹೀಗೆ ”ಶತಮಾನಗಳಿಂದ ಕನ್ನಡ ಸಾಹಿತ್ಯ ನಮ್ಮ ಕಿವಿ ತೆರೆಯಿಸಿ ಶ್ರುತಿವಂತರನ್ನಾಗಿಸಿ, ಕಣ್ದೆರೆಸಿ ಅನಿಮಿಷ ದೇವತೆಗಳನ್ನಾಗಿಸಿ, ಹೃದಯ ತೆರೆಯಿಸಿ ಪ್ರೇಮವನ್ನು ತುಂಬಿಸಿದೆ. ಬುದ್ಧಿಯನ್ನು ಸೂರ್ಯನಂತೆ ಪ್ರಕಾಶಮಾನವಾಗಿ ಮಾಡಿದೆ. ವಜ್ರ ಕಾಯಕಲ್ಪವು ರಸದಿಂದ ಸಿದ್ದಿಸಿದೆ. ಹೀಗೆ ರಸೋಹಂ ಎಂಬ ಸಂತಂತ ಪ್ರತೀತಿಯೇ ಕನ್ನಡ ಸಾಹಿತ್ಯದ ಜೀವಾಳವಾಗಿದೆ” ಎಂಬ ಕವಿ ದ.ರಾ.ಬೇಂದ್ರೆಯವರ ಮಾತು ಕನ್ನಡ ಸಾಹಿತ್ಯದ ವೈಭವವನ್ನು ವಿವರಿಸಿದೆ.
ಕೊನೆಯಲ್ಲಿ, ಕವಿ ಕುವೆಂಪುರವರು ವೈಭವಯುತ ಕನ್ನಡ ಸಾಹಿತ್ಯವನ್ನು ತಮ್ಮ ಇಕ್ಷುಗಂಗೋತ್ರಿ ಕವನಸಂಕಲನದಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ. ಅವರದ್ದೇ ಸಾಲುಗಳನ್ನು ಗಮನಿಸಬಹುದಾದರೆ ಕನ್ನಡ ಸಾಹಿತ್ಯ ಸಾಮ್ರಾಜ್ಯಕ್ಕೆ
“ನೃಪತುಂಗನೇ ಚಕ್ರವರ್ತಿ, ಪಂಪನಿಲ್ಲಿ ಮುಖ್ಯಮಂತ್ರಿ.
ರನ್ನ, ಜನ್ನ, ನಾಗವರ್ಮ, ರಾಘವಾಂಕ ಹರಿಹರ
ಬಸವೇಶ್ವರ ಷಡಕ್ಷರ: ಸರಸ್ವತಿಯೇ ರಚಿಸಿದೊಂದು
ನಿತ್ಯ ಸಚಿವ ಮಂಡಲ ತನಗೆ ರುಚಿರಕುಂಡಲ
ಸಿರಿಗನ್ನಡ ಸರಸ್ವತಿಯ ವಜ್ರ ಕರ್ಣಕುಂಡಲ”.
ಕನ್ನಡ ಸಾಹಿತ್ಯದ ವೈಭವವನ್ನು ನೆನೆಯುವುದೆಂದರೆ ಅದು ಬತ್ತದ ಚಿಲುಮೆಯ ಕನ್ನಡ ಜಗತ್ತಿನ, ನಮ್ಮದೇ ಬದುಕಿನ ಒಳನೋಟದ ಅನಾವರಣ.
ಕನ್ನಡವನ್ನು ಉಸಿರಾಡುತ್ತಿರುವ ಕನ್ನಡ ಲೋಕದ ಸಮಸ್ತರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಸವಿಯಾದ ಸಿಹಿಗನ್ನಡ ಹಾಗೂ ಸಿರಿವಂತ ‘ಸಿರಿಕನ್ನಡ’ ಗೆದ್ದು ಬಾಳಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.