ನಾಗ್ಪುರ : ಭಾರತದ ಸಹನೆಯನ್ನು ಪರೀಕ್ಷಿಸಬೇಡಿ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ 91 ನೇ ಸಂಸ್ಥಾಪನಾ ದಿನವಾದ ಇಂದು ನಾಗ್ಪುರದ ರೆಶಿಮ್ಭಾಗ್ ಮೈದಾನದಲ್ಲಿ ಏರ್ಪಡಿಸಲಾದ ವಿಜಯದಶಮಿ ಉತ್ಸವವನ್ನು ಉದ್ದೇಶಿಸಿ ಮಾತನಾಡಿದರು.
ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ ಅಶಾಂತಿಯನ್ನು ಹರಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಅಲ್ಲಿನ ಯುವಕರಲ್ಲಿ ದೇಶಭಕ್ತಿಯನ್ನು ಬೆಳೆಸಿ ರಾಷ್ಟ್ರೀಯತೆಯನ್ನು ಪ್ರಚಾರ ಮಾಡಬೇಕಾಗಿದೆ. ಪಾಕಿಸ್ಥಾನವು ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಇಚ್ಛಿಸುತ್ತಿದೆ. ಆದರೆ ಅದು ಎಂದಿಗೂ ಸಾಧ್ಯವಿಲ್ಲ. ಪಾಕ್ ಆಕ್ರಮಿತ ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ. ಗಿಲ್ಗೀಟ್- ಬಾಲ್ಟಿಸ್ಥಾನ ಸೇರಿದಂತೆ ಪಾಕ್ ಆಕ್ರಮಿತ ಕಾಶ್ಮೀರವು ಶೀಘ್ರದಲ್ಲೇ ಭಾರತಕ್ಕೆ ಸೇರ್ಪಡೆಗೊಳ್ಳುತ್ತದೆ. ಕಾಶ್ಮೀರವನ್ನು ಎಂದಿಗೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದರು.
ಭಾರತೀಯ ಸೇನೆಯ ಸರ್ಜಿಕಲ್ ದಾಳಿಯನ್ನು ಶ್ಲಾಘಿಸಿದ ಅವರು, ಸೇನೆಯ ದಾಳಿಯ ಕುರಿತು ಕೆಲವರು ಸಾಕ್ಷ್ಯಾಧಾರಗಳನ್ನು ಕೇಳಿ ಭಾರತೀಯರ ಸೈನಿಕರ ಧೃತಿಗೆಡಿಸುವ ಕೆಲಸ ಮಾಡುತ್ತಿದ್ದಾರೆ. ಭಾರತೀಯ ಸೇನೆಯ ಕಾರ್ಯ ಶ್ಲಾಘನೀಯವಾದುದು. ಸೀಮಿತ ದಾಳಿ ಹಿನ್ನಲೆಯಲ್ಲಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಗಳು ಮಹತ್ತರವಾದುದು, ಸೇನೆಯು ಗಡಿಯ ರಕ್ಷಣಾ ಕಾರ್ಯದಲ್ಲಿ ಸದಾ ನಿರತವಾಗಿದೆ. ಸರ್ಕಾರ ಮತ್ತು ಎಲ್ಲಾ ಸೈನಿಕರಿಗೂ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ದೇಶಾದ್ಯಂತ ಗೋವು ರಕ್ಷಕ ಕಾನೂನು ಜಾರಿಯಾಗಿದ್ದು, ಗೋ ರಕ್ಷಕ ದಳದವರು ಆಂದೋಲನದ ಮೂಲಕ ಗೋವುಗಳ ರಕ್ಷಣೆ ಮಾಡುತ್ತಿದ್ದಾರೆ. ಆದರೆ ಕೆಲವರು ಗೋರಕ್ಷಕರ ಹೆಸರಿನಲ್ಲಿ ಕಾನೂನಿನ ಚೌಕಟ್ಟನ್ನು ಮೀರುತ್ತಿದ್ದಾರೆ. ಅದು ಎಂದಿಗೂ ನಡೆಯಬಾರದು ಎಂದು ಎಚ್ಚರಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘವು ಸಮಾಜದಲ್ಲಿ ಮಾಡುತ್ತಿರುವ ಕೆಲ ಕಾರ್ಯಗಳಾದ ಸಮರಸತಾ, ಗೋಸಂವರ್ಧನ, ಕುಟುಂಬ ಪ್ರಬೋಧನ ಇನ್ನಿತರ ಕಾರ್ಯ ಚಟುವಟಿಕೆಗಳ ಕುರಿತು ಮಾತನಾಡಿದರು.
ಇಂದು ವಿಜಯದಶಮಿ, ವಿಜಯದ ಹಬ್ಬ. ಎಲ್ಲರಿಗೂ ವಿಜಯದಶಮಿ ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಹೆದ್ದಾರಿ ಮತ್ತು ಸಾರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಉಪಸ್ಥಿತರಿದ್ದರು.
1925 ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ಪ್ರಾರಂಭಗೊಂಡಿದ್ದು, ವಿಜಯದಶಮಿಯಂದು ಸಂಸ್ಥಾಪನಾ ದಿನವನ್ನಾಗಿ ಆಚರಿಸಿಕೊಂಡು ಬರುತ್ತಿದೆ. ಅಂದು ವಿಜಯದಶಮಿ ಉತ್ಸವದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರು ಎಲ್ಲ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡುತ್ತಾರೆ.
ಇಷ್ಟು ವರ್ಷಗಳಿಂದ ಆರ್ಎಸ್ಎಸ್ ಎಂದು ಗುರುತಿಸಿಕೊಂಡು ಬಂದಿದ್ದ ಸಂಘದ ನಿಕ್ಕರ್ ಈ ವರ್ಷದಿಂದ ಪ್ಯಾಂಟ್ ಆಗಿ ಬದಲಾವಣೆಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.