ಬೆಳ್ತಂಗಡಿ: ನ.ಪಂ.ಸದಸ್ಯರ ಮಾಸಿಕ ಸಭಾ ಭತ್ಯೆ ಏರಿಸದಿರುವ ಬಗ್ಗೆ ಸದಸ್ಯರು ಗಹನವಾದ ಚರ್ಚೆ ನಡೆಸಿದ ವಿದ್ಯಮಾನ ಮಂಗಳವಾರ ನ.ಪಂ.ಸಾಮಾನ್ಯ ಸಭೆಯಲ್ಲಿ ನಡೆಯಿತು.
ಸದಸ್ಯರಾದ ಜೇಮ್ಸ್ ಡಿಸೋಜಾ ಹಾಗೂ ಜಗದೀಶ್ ಡಿ. ಅವರು ವಿಷಯಕ್ಕೆ ನಾಂದಿ ಹಾಡಿದರು. ಶಾಸಕರ, ಸಂಸದರ ವೇತನ ಹೆಚ್ಚಳ ಆಗಿದೆ. ಆದರೆ ನಗರ ಪಂಚಾಯತ್ ಸದಸ್ಯರಿಗೆ ವೇತನವೇನೂ ಇಲ್ಲ. ಕನಿಷ್ಠ ಮಾಸಿಕ ಸಭಾ ಭತ್ಯೆ ಕೂಡಾ ಏರಿಕೆಯಾಗಿಲ್ಲ. ಇದನ್ನು ಏರಿಸಬೇಕು ಎಂಬ ಆಗ್ರಹ ಕೇಳಿಬಂತು. ಆದರೆ ಇದನ್ನು ನಿರ್ಧರಿಸುವ ಹಕ್ಕು ಸ್ಥಳೀಯ ಸಮಿತಿಗಿಲ್ಲ. ಆದ್ದರಿಂದ ಸರಕಾರಕ್ಕೆ ಬರೆದುಕೊಳ್ಳುವ ಕುರಿತು ತಿಳಿಸಲಾಯಿತು.
2009ರಿಂದ ಈವರೆಗೆ ನಗರ ಪಂಚಾಯತ್ ತನ್ನ ಕಟ್ಟಡಗಳಿಗೆ ವಸೂಲಿ ಮಾಡಿದ ಬಾಡಿಗೆ ಮೊತ್ತದ ಮೇಲೆ ಸರಕಾರಕ್ಕೆ ತೆರಿಗೆ ಪಾವತಿಸಬೇಕು ಎಂದು ಮಂಗಳೂರು ಸೆಂಟ್ರಲ್ ಎಕ್ಸೈಸ್ ಟ್ಯಾಕ್ಸ್ನ ಕಮಿಷನರ್ರಿಂದ ಶೋಕಾಸ್ ನೋಟಿಸ್ ಜಾರಿಯಾಗಿದೆ. ಆದ್ದರಿಂದ 8 ಲಕ್ಷ ರೂ.ಪಾವತಿಸಬೇಕು. ಆದರೆ ನಮ್ಮಲ್ಲಿ ಅಷ್ಟು ಮೊತ್ತ ಇಲ್ಲ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಮುಗುಳಿ ನಾರಾಯಣರಾವ್ ಹೇಳಿದರು. ಸರಕಾರದ ನಿಯಮವಿದ್ದರೂ ಬಾಡಿಗೆ ಜೊತೆಗೆ ಸರ್ವಿಸ್ ಟ್ಯಾಕ್ಸ್ ಪಾವತಿಸಲು ನಿರಾಕರಿಸುವ ಬಾಡಿಗೆದಾರರ ಮೇಲೆ ಕ್ರಮ ಕೈಗೊಳ್ಳಲು ಸಭೆ ನಿರ್ಣಯಿಸಿತು.
ಎಸ್ಎಫ್ಸಿ ಅನುದಾನ 73ಲಕ್ಷ ರೂ. ಬಂದಿದೆ. ಆದರ ಕೆಲಸಗಳ ಬಾಕಿ ಪಾವತಿಗೆ ಒಂದಷ್ಟು ಮೊತ್ತ ಬೇಕಾಗುತ್ತದೆ. ಇನ್ನುಳಿದಂತೆ ಸರಕಾರದ ಮಾರ್ಗಸೂಚಿಯಂತೆ ಅನುದಾನ ಮೀಸಲಿಡಬೇಕು. ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ತಲಾ 3 ಲಕ್ಷ ರೂ.ಗಳ ಕಾಮಗಾರಿಗೆ ಸೂಚಿಸಿ ಎಂದು ತಿಳಿಸಲಾಯಿತು.
ರಸ್ತೆ ಬದಿ ಅಳವಡಿಸಿದ ಹೋಟೆಲ್ಗಳ ಫಲಕಕ್ಕೆ ತೆರಿಗೆ ವಿಧಿಸಬೇಕು. ಅದು ಜಾಹೀರಾತು. ಅದ್ದರಿಂದ ಅವರು ಗಳಿಕೆ ಮಾಡುತ್ತಾರೆ ಎಂದು ಜೇಮ್ಸ್ ಡಿಸೋಜಾ ಹೇಳಿದರು. ಕುಡಿಯುವ ನೀರಿನ ಕಾಮಗಾರಿಗೆ ಭೂಸ್ವಾಧೀನಕ್ಕೆ ರೂ. 50 ಲಕ್ಷ ಅನುದಾನ ಬಂದಿದೆ ಎಂದು ತಿಳಿಸಲಾಯಿತು. ಘನತ್ಯಾಜ್ಯ ನಿರ್ವಹಣೆ ಕೇಂದ್ರದ ರಸ್ತೆ ಕಾಮಗಾರಿಗೆ ರೂ. 16 ಲಕ್ಷ ಇರಿಸಲಾಯಿತು. ಎಲ್ಇಡಿ ಬಲ್ಬ್ಗಳ ಬಳಕೆಯಿಂದ ವಿದ್ಯುತ್ ಉಳಿತಾಯ ಆಗುತ್ತದೆ ಎಂದು ಜಗದೀಶ್, ಮಮತಾ ಶೆಟ್ಟಿ ಸಲಹೆ ನೀಡಿದರು. ಆದರೆ ಲೈಟ್ ಖರೀದಿ ಮೊತ್ತ ಅಧಿಕವಾಗಿದ್ದು, ಅಷ್ಟು ಅನುದಾನ ಲಭ್ಯವಿಲ್ಲ ಎಂದು ನಾರಾಯಣರಾವ್ ಹೇಳಿದರು.
ಕುಡಿಯುವ ನೀರಿನ ಕಾಮಗಾರಿ ನಡೆಸುತ್ತಿರುವವರು ಆಸ್ತಿ, ಪೈಪ್ಲೈನ್ ಹಾನಿ ಮಾಡುತ್ತಿದ್ದಾರೆ ಎಂದು ಮಮತಾ ಶೆಟ್ಟಿ, ಸಂತೋಷ್ ಕುಮಾರ್ ಜೈನ್, ನಾಮನಿರ್ದೇಶಿತ ಸದಸ್ಯ ಜನಾರ್ದನ ಬಂಗೇರ ಹೇಳಿದರು. ಆ ರೀತಿ ಮಾಡಲು ಅವಕಾಶ ಇಲ್ಲ. ಕಾಮಗಾರಿ ನಿರ್ವಹಿಸುವವರು ಸರಕಾರಿ ಹಾಗೂ ಖಾಸಗಿ ಆಸ್ತ್ತಿಗೆ ಹಾನಿ ಮಾಡಬಾರದು. ಮಾಡಿದರೆ ಅದನ್ನು ದುರಸ್ತಿ ಮಾಡಿ ಕೊಡುವ ಜವಾಬ್ದಾರಿ ಹೊಂದಿದ್ದಾರೆ ಎಂದು ಎಂಜಿನಿಯರ್ ಮಹಾವೀರ ಆರಿಗ ಹೇಳಿದರು.
ಅಧ್ಯಕ್ಷೆ ಮುಸ್ತರ್ಜಾನ್ ಮೆಹಬೂಬ್ ಅಧ್ಯಕ್ಷತೆ ವಹಿಸಿದ್ದರೂ ಎಂದಿನಂತೆ ಮೌನಂ ಸಮ್ಮತಿ ಲಕ್ಷಣಂ ಎಂಬ ಉಕ್ತಿಯನ್ನು ಅನುಸರಿಸಿದರು. ಮುಖ್ಯಾಧಿಕಾರಿ ಜೆಸಿಂತಾ ಲೂಯಿಸ್, ಅಧಿಕಾರಿಗಳಾದ ವೆಂಕಟ್ರಮಣ ಶರ್ಮ, ಮಂಜಪ್ಪ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.